ವಿಜಯನಗರ: ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ದಂಪತಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ (Independence Day 2023) ಭಾಗಿಯಾಗಲು ಆಹ್ವಾನ ನೀಡಿದ್ದು, ದಂಪತಿ ವಿಸ್ತಾರ ನ್ಯೂಸ್ ಜತೆ ಖುಷಿಯನ್ನು ಹಂಚಿಕೊಂಡಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಜಿ.ಗಿರೀಶ್ ಮತ್ತು ಅಂಬಿಕಾ ದಂಪತಿಯನ್ನು ಆಗಸ್ಟ್ 15ರಂದು ದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನ ನೀಡಲಾಗಿದೆ. ಇವರು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಭಾಗಿಯಾಗಲಿದ್ದಾರೆ.
ಈ ಬಾರಿ ಕೆಂಪು ಕೋಟೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ದೇಶದ ವಿವಿಧ ಕ್ಷೇತ್ರಗಳ ಸುಮಾರು 1800 ಜನರು ವಿಶೇಷ ಆಹ್ವಾನಿತರಾಗಿದ್ದು, ಕರ್ನಾಟಕದ 31 ಮಂದಿಗೆ ಆಹ್ವಾನ ನೀಡಲಾಗಿದೆ. ಕರ್ನಾಟಕದಿಂದ ಆಯ್ದ ಶಿಕ್ಷಕರು, ಮೀನುಗಾರರು, ಕುಶಲಕರ್ಮಿಗಳು ಮತ್ತು ಹಲವಾರು ಕಲ್ಯಾಣ ಯೋಜನೆಗಳ ಫಲಾನುಭವಿಗಳು ಸೇರಿ ಒಟ್ಟು 31 ವ್ಯಕ್ತಿಗಳು ನವದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯನ್ನು ವೀಕ್ಷಿಸಲು ವಿಶೇಷ ಅವಕಾಶವನ್ನು ಪಡೆದಿದ್ದಾರೆ. ಅವರಲ್ಲಿ ಬಣವಿಕಲ್ಲು ಗ್ರಾಮದ ಗಿರೀಶ್ ದಂಪತಿ ಸಹ ಸೇರಿದ್ದಾರೆ. ಇವರು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರು ಆಹ್ವಾನ ನೀಡಿದ್ದಾರೆ. 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿ ಆಗುತ್ತಿರುವುದು ಬಹಳ ಸಂತೋಷ ತಂದಿದೆ. ಪ್ರಧಾನಿ ಮೋದಿ ಕಚೇರಿಯಿಂದ ಫೋನ್ ಮೂಲಕ ಕರೆ ಮಾಡಿ ತಿಳಿಸಿದ್ದಾರೆ. ಮೋದಿಜಿ ಜತೆಗೆ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡುತ್ತಿರುವುದು ಹೆಮ್ಮೆ ತರುವ ವಿಷಯ ಆಗಿದೆ.
| ಅಂಬಿಕಾ, ಗಿರೀಶ್ ಪತ್ನಿ, ಕೂಡ್ಲಿಗಿ ನಿವಾಸಿ
77ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಹ್ವಾನ ನೀಡಿದ್ದಾರೆ. ಎಫ್.ಪಿ.ಸಿ ಸಂಘದ ಷೇರುದಾರರ ಪರವಾಗಿ ಧನ್ಯವಾದ ಹೇಳುತ್ತೇನೆ. ಕೇಂದ್ರದ 10 ಸಾವಿರ FPC ಬಲವರ್ದನೆ ಯೋಜನೆ ಹಾಕಿಕೊಳ್ಳಲಾಗಿದೆ. ಅದನ್ನು ನಾವು ಕೂಡ್ಲಿಗಿಯಲ್ಲಿ ಸ್ಥಾಪನೆ ಮಾಡಿದ್ದೇವೆ. FPC ವತಿಯಿಂದ 300 ಜನರಿಗೆ ಬೀಜ, ಗೊಬ್ಬರ ವಿತರಣೆ ಮಾಡಿದ್ದೇವೆ. ಹೀಗಾಗಿ ಮೋದಿಜಿಯವರು ನಮ್ಮನ್ನು ಗುರುತಿಸಿ ಫೋನ್ ಮೂಲಕ ಕರೆ ಮಾಡಿ ಬರುವಂತೆ ಹೇಳಿದ್ದಾರೆ. ಸ್ವಾತಂತ್ರ್ಯೋತ್ಸವದಲ್ಲಿ ಭಾಗಿ ಆಗಲು ಅನುವು ಮಾಡಿಕೊಟ್ಟಿದ್ದಕ್ಕೆ ಅವರಿಗೆ ನಾವು ಧನ್ಯವಾದವನ್ನು ಹೇಳುತ್ತೇವೆ.
| ಗಿರೀಶ್, ಕೃಷಿಕ
‘ಜನ ಭಾಗೀದಾರಿ’ ದೃಷ್ಟಿಕೋನ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡುವ ಭಾಷಣವನ್ನು ಕೇಳಲು ಆಹ್ವಾನಿತರು ಮತ್ತು ಯೋಜನೆಗಳ ಫಲಾನುಭವಿಗಳನ್ನು ಅವರ ಕುಟುಂಬದೊಂದಿಗೆ ಆಹ್ವಾನಿಸಲಾಗಿದೆ. ದೇಶಾದ್ಯಂತ, ಎಲ್ಲ ವರ್ಗದ ಜನರನ್ನು ಆಹ್ವಾನಿಸುವ ಮತ್ತು ಆಚರಣೆಯ ಭಾಗವಾಗಿಸುವ ತನ್ನ ‘ಜನ ಭಾಗೀದಾರಿ’ ದೃಷ್ಟಿಕೋನಕ್ಕೆ ಅನುಗುಣವಾಗಿ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಇದನ್ನೂ ಓದಿ: Weather Report : ಬೆಂಗಳೂರಲ್ಲಿ ಗುಡುಗು, ಮಳೆ; ಫ್ಲವರ್ ಶೋಗೆ ವರುಣ ಅಡ್ಡಿ?
ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವಾಗ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಸುಮಾರು 1,800 ವಿಶೇಷ ಆಹ್ವಾನಿತರು ಸ್ವಾತಂತ್ರ್ಯೋತ್ಸವವನ್ನು ವೀಕ್ಷಿಸಲಿದ್ದಾರೆ.