Site icon Vistara News

Film Festival: ಭಾರತದ ಸಹಕಾರದೊಂದಿಗೆ ಶ್ರೀಲಂಕಾದಲ್ಲಿ ಚಲನಚಿತ್ರ ಅಕಾಡೆಮಿ: ಡಾ. ಬಂದುಲ ಗುಣವರ್ಧನೆ

Bandula Gunawardane says Film Academy in Sri Lanka in collaboration with India

Bandula Gunawardane says Film Academy in Sri Lanka in collaboration with India

ಕೊಲಂಬೊ: ಭಾರತ ಸರ್ಕಾರದ ಸಹಕಾರದೊಂದಿಗೆ ಶ್ರೀಲಂಕಾದಲ್ಲಿ ಚಲನಚಿತ್ರ ಅಕಾಡೆಮಿಯನ್ನು (Film Festival) ಆರಂಭಿಸಲು ಯೋಜಿಸಲಾಗಿದೆ ಎಂದು ಶ್ರೀಲಂಕಾದ ವಾರ್ತಾ ಮತ್ತು ಸಾರಿಗೆ ಸಚಿವ ಡಾ. ಬಂದುಲ ಗುಣವರ್ಧನೆ ತಿಳಿಸಿದರು.

ಶ್ರೀಲಂಕಾದ ಕೊಲಂಬೊ ನಗರದಲ್ಲಿ ಆಯೋಜಿಸಿದ್ದ ನಾಗತಿಹಳ್ಳಿ ಚಂದ್ರಶೇಖರ್ ಕನ್ನಡ ಚಲನಚಿತ್ರೋತ್ಸವ ಉದ್ಘಾಟಿಸಿ ಅವರು ಮಾತನಾಡಿ, ಭಾರತದ ಚಲನಚಿತ್ರ ಉದ್ಯಮಿಗಳ ಅಪಾರ ಅನುಭವವನ್ನು ಒಳಗೊಂಡಲ್ಲಿ ಈ ಚಲನಚಿತ್ರ ಅಕಾಡೆಮಿ ಸತ್ವಯುತವಾಗಲಿದೆ. ಶ್ರೀಲಂಕಾದ ಆರ್ಥಿಕ ಅಭಿವೃದ್ಧಿಗೆ ಚಲನಚಿತ್ರ ಉದ್ಯಮ ಮಹತ್ವದ ಸೇತುವೆಯಾಗಲಿದೆ ಎಂದು ತಿಳಿಸಿದರು.

ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಕನ್ನಡ ಚಲನಚಿತ್ರ ರಂಗವು ಈಗ ವಿಶ್ವವ್ಯಾಪಿ ಜನಪ್ರಿಯತೆಯನ್ನು ಗಳಿಸಿದೆ. ಕನ್ನಡ ಚಲನಚಿತ್ರಗಳು ದೃಶ್ಯ ಮಾಧ್ಯಮದ ಮಹತ್ವವನ್ನು ಹೆಚ್ಚಿಸಿದ್ದು, ಕನ್ನಡ ಚಲನಚಿತ್ರಗಳ ಗುಣಮಟ್ಟ ಜಾಗತಿಕವಾಗಿ ಪ್ರಶಂಸೆಗೆ ಒಳಪಟ್ಟಿದೆ ಎಂದು ಹೇಳಿದರು.

ಇದನ್ನೂ ಓದಿ | The Kerala Story Review : ಲವ್‌ ಜಿಹಾದ್‌, ಭಯೋತ್ಪಾದನೆಯ ಕ್ರೂರ ಮುಖದ ಮನಮುಟ್ಟುವ ಚಿತ್ರಣ

ಚಲನಚಿತ್ರ ನನ್ನ ಪಾಲಿಗೆ ಮನರಂಜನೆಯ ಜತೆಗೆ ಸಮಾಜದ ಬಿಕ್ಕಟ್ಟುಗಳನ್ನು ನೋಡುಗರ ಮುಂದಿಡುವ ಮಾಧ್ಯಮ. ನನ್ನ ಚಲನಚಿತ್ರಗಳು ನನ್ನ ಒಳತೋಟಿಗಳ ಜತೆಗೆ ಸಾಮಾಜಿಕ ಅರಿವು ಮೂಡಿಸಲು ಪ್ರಯತ್ನಿಸಿವೆ. ಶ್ರೀಲಂಕಾದ ಪ್ರಕೃತಿ ಸಿರಿ ಭಾರತದ ಚಿತ್ರ ಉದ್ಯಮವನ್ನು ಸೆಳೆಯುವಂತಿದ್ದು, ಚಲನಚಿತ್ರೋದ್ಯಮ ಉದ್ಯಮ ಇಲ್ಲಿನ ಚಲನಚಿತ್ರ ತಾಣಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಚಲನಚಿತ್ರ ನಟರಾದ ನಿರೂಪ್ ಭಂಡಾರಿ, ಕಾವ್ಯಾ ಶೆಟ್ಟಿ, ಚಲನಚಿತ್ರ ತಂತ್ರಜ್ಞ ಎಸ್.ಕೆ. ರಾವ್, ನಿರ್ಮಾಪಕ ಶಂಕರೇಗೌಡ, ಹಿರಿಯ ಪತ್ರಕರ್ತರಾದ ಜಿ.ಎನ್. ಮೋಹನ್ ಹಾಗೂ ಎಚ್.ಬಿ. ಮದನ ಗೌಡ ಮಾತನಾಡಿದರು.

ಚಲನ ಚಿತ್ರೋತ್ಸವದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಅಮೆರಿಕ ಅಮೆರಿಕ, ಇಷ್ಟಕಾಮ್ಯ, ಮಾತಾಡ್ ಮಾತಾಡ್ ಮಲ್ಲಿಗೆ ಹಾಗೂ ಕೊಟ್ರೇಶಿ ಕನಸು ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು.

ಶ್ರೀಲಂಕಾದಲ್ಲಿನ ಭಾರತದ ರಾಯಭಾರಿ ಗೋಪಾಲ ಭಾಗ್ಲೆ, ಭಾರತದ ವಿವೇಕಾನಂದ ಸಾಂಸ್ಕೃತಿಕ ಸಂಸ್ಥೆ ನಿರ್ದೇಶಕರಾದ ಪ್ರೊ. ಅಂಕುರನ್ ದತ್ತ, ಶ್ರೀಲಂಕಾ ಚಲನಚಿತ್ರ ಮಂಡಳಿ ಅಧ್ಯಕ್ಷ ದೀಪಲ್ ಚಂದ್ರರತ್ನೆ, ಪ್ರವಾಸೋದ್ಯಮ ಪ್ರಚಾರ ಬ್ಯೂರೋ ಉಪ ನಿರ್ದೇಶಕ ಚಮಿಂದ ಮುನಿಸಿಂಘೆ ಉಪಸ್ಥಿತರಿದ್ದರು.

ಇದನ್ನೂ ಓದಿ | Daredevil Mustafa: ಮಜವಾಗಿದೆ `ಡೇರ್‌ಡೆವಿಲ್ ಮುಸ್ತಫಾʼ ಟ್ರೈಲರ್‌: ಡಾಕ್ಟರ್‌ ಬ್ರೋ ಸಾಥ್‌!

ಇದೇ ಮೊದಲ ಬಾರಿಗೆ ಭಾರತೀಯ ಚಲನಚಿತ್ರಗಳ ಮೇಲೆ ಬೆಳಕು ಚೆಲ್ಲುವ ಚಲನಚಿತ್ರೋತ್ಸವ ಹಾಗೂ ಕಾರ್ಯಾಗಾರವನ್ನು ಶ್ರೀಲಂಕಾದಲ್ಲಿ (ಮೇ 2 ಮತ್ತು 3) ಹಮ್ಮಿಕೊಳ್ಳಲಾಗಿತ್ತು. ಶ್ರೀಲಂಕಾ ಪ್ರವಾಸೋದ್ಯಮ ಉತ್ತೇಜನ ಮಂಡಳಿ (ಎಸ್.ಎಲ್.ಟಿ.ಪಿ.ಬಿ), ಏಷಿಯಾ ಮಾಧ್ಯಮ ಮತ್ತು ಸಾಂಸ್ಕೃತಿಕ ಸಂಸ್ಥೆ (ಎ.ಎಮ್.ಸಿ.ಎ), ಶ್ರೀಲಂಕಾ ಚಲನಚಿತ್ರ ಮಂಡಳಿ (ಎನ್.ಎಫ್.ಸಿ), ಭಾರತ ರಾಯಭಾರ ಕಚೇರಿ ಹಾಗೂ ವಿವೇಕಾನಂದ ಸಾಂಸ್ಕೃತಿಕ ಸಂಸ್ಥೆ (ಐಸಿಸಿಆರ್) ಸಹಯೋಗದಲ್ಲಿ ಕನ್ನಡ ಚಲನಚಿತ್ರೋತ್ಸವ ನಡೆದಿದೆ.

Exit mobile version