Site icon Vistara News

Bike taxi service : ಬೈಕ್‌ ಟ್ಯಾಕ್ಸಿ ಡ್ರೈವರ್‌ನ ಮೇಲೆ ಏರಿ ಹೋದ ಆಟೋ ಚಾಲಕ, ಫೋನ್‌ ಎಸೆದು ಹಾನಿ: ವಿಡಿಯೊ ವೈರಲ್‌

City Taxi

#image_title

ಬೆಂಗಳೂರು: ರಾಜಧಾನಿಯಲ್ಲಿ ಬೈಕ್‌ ಟ್ಯಾಕ್ಸಿ (Bike taxi Service) ರೈಡರ್‌ಗಳ ಮೇಲೆ ಆಟೋ ಚಾಲಕರ ಆಟಾಟೋಪ ಮೇರೆ ಮೀರಿದೆ. ಬೈಕ್‌ ಟ್ಯಾಕ್ಸಿ ಸೇವೆಗೆ ನಗರದಲ್ಲಿ ಅನುಮತಿ ನೀಡಲಾಗಿದೆಯಾದರೂ ಹಲವು ಚಾಲಕರು ಇದು ಅಕ್ರಮ ಎಂದು ಆಪಾದಿಸಿ ಹಲ್ಲೆ ನಡೆಸುವ, ದೌರ್ಜನ್ಯ ನಡೆಸುವ ಘಟನೆಗಳು ನಡೆಯುತ್ತಿವೆ. ಅಂಥಹುದೇ ಒಂದು ವಿಡಿಯೋ ಇದೀಗ ವೈರಲ್‌ ಆಗಿದ್ದು, ಕಿರುಕುಳ ನೀಡಿದ ಆಟೋ ಚಾಲಕನಿಗಾಗಿ ಹುಡುಕುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆಟೊ ಚಾಲಕನೊಬ್ಬ ಬೈಕ್‌ ರೈಡರ್‌ ಮೇಲೆ ಏರಿ ಹೋಗುವ ಒಂದು ವಿಡಿಯೊ ಈಗ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಓಡಾಡುತ್ತಿದೆ. ಇದು ಇಂದಿರಾ ನಗರದಲ್ಲಿ ನಡೆದ ಘಟನೆ ಎಂದು ಹೇಳಲಾಗುತ್ತಿದ್ದು, ಪರಿಶೀಲನೆಯಲ್ಲಿದೆ.

ಈ ವಿಡಿಯೊದಲ್ಲಿ ಆಟೊ ಚಾಲಕನೊಬ್ಬ ದ್ವಿಚಕ್ರ ವಾಹನವೊಂದರ ಮುಂದೆ ನಿಂತು ಬಾಯಿಗೆ ಬಂದಂತೆ ಬಯ್ಯುತ್ತಾನೆ. ಜತೆಗೆ ಬೈಕ್‌ ಟ್ಯಾಕ್ಸಿ ರೈಡರ್‌ನ ಮೊಬೈಲ್‌ ಫೋನನ್ನು ಕಿತ್ತುಕೊಳ್ಳುತ್ತಾನೆ ಮಾತ್ರವಲ್ಲ ಅದನ್ನು ನೆಲಕ್ಕೆ ಎಸೆಯುತ್ತಾನೆ. ಜತೆಗೆ ರೈಡರ್‌ನ ಕಪಾಳಕ್ಕೆ ಹೊಡೆಯಲು ಮುಂದಾಗುತ್ತಾನೆ.

ಆತನ ಆಟಾಟೋಪಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿರುವುದನ್ನು ಗಮನಿಸುತ್ತಿದ್ದಂತೆಯೇ ಆತನ ವರಸೆಯೇ ಬದಲಾಗುತ್ತದೆ. ಆತ ರ‍್ಯಾಪಿಡೋ ಬೈಕ್‌ ಸೇವೆಯಲ್ಲಿ ಭಾರಿ ಅಕ್ರಮ ನಡೆಯತ್ತಿದೆ ಎಂದು ಸ್ವಗತ ಎಂಬಂತೆ ಆಡಿಕೊಳ್ಳುತ್ತಾನೆ. ನಂತರ ವಿಡಿಯೊ ಮಾಡುತ್ತಿರುವ ಮೊಬೈಲ್‌ನ ಕ್ಯಾಮೆರಾಕ್ಕೆ ಮುಖ ಕೊಟ್ಟು ʻʻಸ್ನೇಹಿತರೇ, ನಮ್ಮ ರಸ್ತೆಗಳಲ್ಲಿ ಎಷ್ಟೊಂದು ರ‍್ಯಾಪಿಡೋ ಬೈಕ್‌ಗಳು ಅಕ್ರಮವಾಗಿ ಓಡಾಡುತ್ತವೆ ಎಂಬುದನ್ನು ಇದು ತೋರಿಸುತ್ತದೆʼʼ ಎಂದು ಹೇಳಿ ರೈಡರ್‌ ಕಡೆಗೆ ಕೈ ತೋರುಸತ್ತಾನೆ.

ಅಷ್ಟಕ್ಕೇ ನಿಲ್ಲದ ಆತನ ಮಾತು

ಬಳಿಕ ಆತ ಈ ರೀತಿ ರೈಡಿಂಗ್‌ ಸೇವೆ ನೀಡುವ ವ್ಯಕ್ತಿ ಯಾವುದೇ ಪರದೇಶದವನು, ಇಲ್ಲಿ ಹೇಗೆ ರೇಡ್‌ ಹೊಡೀತಾನೆ ನೋಡಿ ಎಂದು ಹೇಳುತ್ತಾರೆ. ಸಾರಿಗೆ ಇಲಾಖೆ ಎಷ್ಟೊಂದು ಭ್ರಷ್ಟವಾಗಿದೆ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ ಎಂದು ಚಾಲಕ ಹೇಳುತ್ತಾನೆ.

ಈ ರೈಡರ್‌ ಬಿಳಿ ಬೋರ್ಡ್‌ ಹಾಕಿಕೊಂಡು ಟ್ಯಾಕ್ಸಿ ಸೇವೆ ಕೊಡುತ್ತಾನೆ ಎಂದು ಆಕ್ರೋಶದಿಂದ ಹೇಳುತ್ತಾನೆ ಚಾಲಕ. ʻʻಇವನು ಈಗಷ್ಟೇ ಒಬ್ಬ ಮಹಿಳಾ ಪ್ರಯಾಣಿಕರನ್ನು ಅಕ್ರಮವಾದ ಬೈಕ್‌ ಟ್ಯಾಕ್ಸಿ ಸೇವೆ ಮೂಲಕ ಬಿಟ್ಟು ಹೋಗುತ್ತಿದ್ದಾನೆ. ಇವನೊಬ್ಬ ಪರದೇಶಿʼʼ ಎನ್ನುತ್ತಾನೆ.

ಈ ವಿಡಿಯೊ ಮಾಡಿದವರು ಅದನ್ನು ಬೆಂಗಳೂರು ಸಿಟಿ ಪೊಲೀಸರ ಅಧಿಕೃತ ಟ್ವಿಟರ್‌ ಖಾತೆಗೆ ಟ್ಯಾಗ್‌ ಮಾಡಿದ್ದಾರೆ. ಇಂದಿರಾ ನಗರದ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಈ ನಡುವೆ ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆಯಾಗಲೀ, ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿದ್ದವನಾಗಲೀ ಚಾಲಕನ ವಿರುದ್ಧ ದೂರು ನೀಡಲು ಬಯಸಿಲ್ಲ ಎನ್ನಲಾಗಿದೆ. ಆದರೆ, ಇಷ್ಟೇ ಮಾಹಿತಿಯ ಆಧಾರದಲ್ಲಿ ಆರೋಪಿ ಆಟೋ ಚಾಲಕನನ್ನು ಬಂಧಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ : Video Viral: ರಸ್ತೆ ಮಧ್ಯೆಯೇ ಯುವತಿಯರ ಕಾಳಗ; ಜುಟ್ಟು ಹಿಡಿದು ಬಡಿದಾಡಿಕೊಂಡ ವಿಡಿಯೊ ವೈರಲ್‌

Exit mobile version