ಬೆಂಗಳೂರು: ಕಾವರಿ ನೀರಿನ ವಿಚಾರದಲ್ಲಿ (Cauvery protest) ಕನ್ನಡಿಗರಿಗೆ ಆಗಿರುವ ಅನ್ಯಾಯ ಹಾಗೂ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ಭುಗಿಲೆದ್ದಿದ್ದು, ಬೆಂಗಳೂರು ಬಂದ್ (Bangalore Bandh) ಇಂದು ಮುಂಜಾನೆಯಿಂದ ಆರಂಭವಾಗಿದೆ.
ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮತ್ತು ಇತರ ಸಂಘಟನೆಗಳು ಇಂದು (ಸೆ.26) ಬೆಂಗಳೂರು ಬಂದ್ (Bangalore Bandh) ಆಚರಿಸುತ್ತಿದೆ. ಈ ಬಂದ್‌ಗೆ 100ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಬಿಜೆಪಿ ಹಾಗೂ ಜೆಡಿಎಸ್ ಬಂದ್‌ಗೆ ಬೆಂಬಲ ಸೂಚಿಸಿರುವುದರಿಂದ ಪ್ರತಿಭಟನೆಯ ಕಾವು ಜೋರಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಬೆಂಗಳೂರು ಬಂದ್ ಆಚರಿಸಲಾಗುತ್ತಿದ್ದು, ಸಂಜೆ 6 ಗಂಟೆಯವರೆಗೂ ಬಂದ್ ಮುಂದುವರಿಯಲಿದೆ.
ಮೆಟ್ರೋ ಎಂದಿನಂತೆ ಕಾರ್ಯಾಚರಿಸಿತು. ಮೆಟ್ರೋದ ಎಲ್ಲ ಲೈನ್‌ಗಳೂ ಪೂರ್ಣವಾಗಿ ಕಾರ್ಯಾಚರಿಸಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರು. ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ ಖಾಲಿಯಾಗಿತ್ತು. ಬಸ್‌ಗಳು ಎಂದಿನಂತೆ ಸಂಚಾರಕ್ಕೆ ಸಿದ್ಧಚಾಗಿದ್ದರೂ ಜನ ಬೀದಿಗಿಳಿಯಲಿಲ್ಲ. ಸದ್ಯ ಬಸ್‌ಗಳ ಸಂಖ್ಯೆ ಇಳಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅತ್ತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನಸಂದಣಿ ತುಂಬಿ ತುಳುಕಿತು. ಮಧ್ಯಾಹ್ನ ಹಾಗೂ ಸಂಜೆ ವಿಮಾನ ಪ್ರಯಾಣದ ಸಮಯ ಹೊಂದಿದ್ದವರು ಕೂಡ, ಬಂದ್ ಜೋರಾದರೆ ಎಂಬ ಆತಂಕದಿಂದ ಮುಂಜಾನೆ ಆರು ಗಂಟೆಗೇ ನಿಲ್ದಾಣಕ್ಕೆ ಧಾವಿಸಿ ಬೀಡುಬಿಟ್ಟರು. ಯಾವುದೇ ವಿಮಾನ ಹಾರಾಟ ವ್ಯತ್ಯಯವಾಗಿಲ್ಲ. ಟ್ಯಾಕ್ಸಿ ಹಾಗೂ ಕ್ಯಾಬ್‌ಗಳು ಕಾರ್ಯಾಚರಿಸುತ್ತಿವೆ.
ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಕೆಆರ್ ಮಾರ್ಕೆಟ್ ಇಂದು ಬಿಕೋ ಎನ್ನುತ್ತಿದೆ. ವಿರಳ ಸಂಖ್ಯೆಯಲ್ಲಿ ವಾಹನಗಳ ಓಡಾಟ ಇದೆ. ಬೀದಿ ಬದಿ ವ್ಯಾಪಾರಿಗಳಿಗೆ ಬಂದ್ ಬಿಸಿ ತಟ್ಟಿದ್ದು, ಬಹುತೇಕ ಅಂಗಡಿ, ಮುಂಗಟ್ಟುಗಳು ಬಂದ್ ಆಗಿವೆ. ಬೀದಿಬದಿ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಇಳಿಕೆಯಾಗಿದೆ. ಹೂ, ಸೊಪ್ಪು, ತರಕಾರಿ ವ್ಯಾಪಾರ ಕೂಡ ಡಲ್ ಆಗಿದೆ.
ಫ್ರೀಡಂ ಪಾರ್ಕ್‌ನಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಆಯೋಜನೆಯಾಗಿದ್ದು, ಅವರನ್ನು ಪೊಲೀಸರು ತಡೆದು ನಿಲ್ಲಿಸಿದರು. ಪ್ರತಿಭಟನಾಕಾರರಿಂದ ಅರೆ ಬೆತ್ತಲೆ ಪ್ರತಿಭಟನೆ ನಡೆಯಿತು. ಫ್ರೀಡಂ ಪಾರ್ಕ್‌ಗೆ ಖಾಲಿ ಬಿಂದಿಗೆ ಹಿಡಿದು ಬಂದ ಪ್ರತಿಭಟನಾಕಾರರು ಅರೆ ಬೆತ್ತಲೆಯಾಗಿ ಪ್ರತಿಭಟಿಸಿದರು. ಫ್ರೀಡಂ ಪಾರ್ಕ್ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾವೇರಿ ಹೋರಾಟ ಒಕ್ಕೂಟದಿಂದ ಟೌನ್ ಹಾಲ್‌ಗೆ ರ್ಯಾಲಿ ಏರ್ಪಡಿಸಲಾಗಿದ್ದು, ಅಲ್ಲಿಯೂ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವ ಹೋರಾಟಗಾರರು ಬಾಪೂಜಿನಗರ ಮುಖ್ಯದ್ವಾರದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜಧಾನಿಯ ಬಹುತೇಕ ಶಾಲೆಗಳು ಇಂದು ರಜೆ ಘೋಷಿಸಿವೆ. ಮಲ್ಲೇಶ್ವರಂ, ರಾಜಾಜಿನಗರ, ಕೆಂಗೇರಿ ಮುಂತಾದ ಕಡೆಗಳಲ್ಲಿ ಖಾಸಗಿ ಶಾಲೆಗಳು ರಜೆ ಘೋಷಿಸಿದವು.
ಇದನ್ನೂ ಓದಿ: Bangalore Bandh Live: ಬೆಂಗಳೂರು ಬಂದ್ ಆರಂಭ; ಎಲ್ಲೆಲ್ಲಿ ಏನೇನಾಗ್ತಿದೆ?