Site icon Vistara News

Bangalore Bandh : ಬೆಂಗಳೂರು ಬಂದ್‌ ಸಕ್ಸಸ್‌; ಕಾವೇರಿ ಹೋರಾಟಕ್ಕೆ ಜನತೆ ಸ್ವಯಂಪ್ರೇರಿತ ಬೆಂಬಲ

Bangalore Bandh KG Road

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ ತಮಿಳುನಾಡಿಗೆ ನೀರು ಬಿಡುಗಡೆ (Cauvery Water Dispute) ಮಾಡಲೇಬೇಕು ಎಂದು ಆದೇಶ ನೀಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management authority) ಮತ್ತು ಅದು ಹೇಳಿದಂತೆ ನೀರು ಬಿಡುಗಡ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮಗಳನ್ನು ಖಂಡಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala samrakshana samiti) ಕರೆ ನೀಡಿದ್ದ ಮಂಗಳವಾರದ (ಸೆ. 26) ಬೆಂಗಳೂರು ಬಂದ್‌ (Bangalore bandh) ಯಶಸ್ವಿಯಾಗಿದೆ. ಯಾವುದೇ ಗೊಂದಲ, ಗಲಾಟೆ, ಹಿಂಸಾತ್ಮಕ ಘಟನೆಗಳಿಲ್ಲದೆ ಅದು ಸಫಲತೆಯನ್ನು ಕಂಡಿದೆ. ಆದರೆ, ಇದು ಸರ್ಕಾರದ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತದೆಯೇ ಕಾದು ನೋಡಬೇಕು.

ಈ ಬಂದ್‌ ನೂರಾರು ಸಾಮಾಜಿಕ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ವ್ಯಾಪಾರಿಗಳು, ವಾಹನ ಮಾಲೀಕರೇ ಆದರೂ ಅಂತಿಮವಾಗಿ ಇದನ್ನು ಯಶಸ್ವಿಗೊಳಿಸಿದ್ದು ಜನ ಬೆಂಬಲ. ಯಾಕೆಂದರೆ, ಸೆಪ್ಟೆಂಬರ್‌ 29ರಂದು ಕರ್ನಾಟಕ ಬಂದ್‌ ಇರುವುದರಿಂದ ಬೆಂಬಲ ನೀಡುವ ಸಂಘಟನೆಗಳಲ್ಲಿ ವಿಭಜನೆಯಾಗಿತ್ತು. ಕೆಲವರು ತಾವು ಈ ಬಂದ್‌ಗೆ ಬೆಂಬಲ ಕೊಡುವುದಿಲ್ಲ, ಸೆ. 29ರ ಬಂದ್‌ಗೆ ಬೆಂಬ ಕೊಡುವುದಾಗಿ ಪ್ರಕಟಿಸಿದ್ದರು. ಆದರೂ ಒಟ್ಟಾರೆ ಪರಿಣಾಮದಲ್ಲಿ ವ್ಯತ್ಯಾಸವಾಗಲಿಲ್ಲ. ಯಾಕೆಂದರೆ ಸಂಘಟನೆಗಳ ಹಂಗನ್ನು ಮೀರಿ ಜನರು ಈ ಬಂದ್‌ಗೆ ಮೌನ ಬೆಂಬಲವನ್ನು ಸೂಚಿಸಿದ್ದರು.

ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

ಮುಂಜಾನೆಯಿಂದಲೇ ರಾಜಧಾನಿಯಲ್ಲಿ ಬಂದ್‌ನ ವಾತಾವರಣ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅಲ್ಲಲ್ಲಿ ಪ್ರತಿಭಟನೆಗಳು ನಡೆದವು. ಪ್ರತಿಭಟನೆಗೆ ಕರೆ ನೀಡಿದ ಸಂಘಟನೆಯ ಮುಖ್ಯಸ್ಥರಲ್ಲಿ ಒಬ್ಬರಾದ ಕುರುಬೂರು ಶಾಂತ ಕುಮಾರ್‌ ಅವರನ್ನೂ ಪೊಲೀಸರು ವಶಕ್ಕೆ ಪಡೆದರು. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ಸಭೆ ನಡೆಯಿತು. ಅಲ್ಲಿ ಸರ್ಕಾರದ ಮುಂದೆ ಬೇಡಿಕೆಗಳನ್ನು ಮಂಡಿಸಲಾಯಿತು. ಸರ್ಕಾರದ ಪರವಾಗಿ ಸಚಿವ ರಾಮಲಿಂಗಾ ರೆಡ್ಡಿ ಅವರು ಮನವಿ ಸ್ವೀಕರಿಸಿದರು. ಈ ಭರವಸೆಗಳ ಈಡೇರಿಕೆಗೆ ಮೂರು ದಿನಗಳ ಗಡುವನ್ನು ವಿಧಿಸಲಾಗಿದೆ.

ಮೆಟ್ರೋ ರೈಲಿಗೆ ಜನರೇ ಇಲ್ಲ

ಎಲ್ಲ ವ್ಯವಸ್ಥೆಗಳಿದ್ದರೂ ಜನರೇ ರಸ್ತೆಗೆ ಬಂದಿಲ್ಲ

ನಿಜವೆಂದರೆ, ರಾಜಧಾನಿಯಲ್ಲಿ ಬಂದ್‌ ಘೋಷಣೆಯಾಗಿದ್ದರೂ ಬಸ್‌, ಮೆಟ್ರೋ ರೈಲು, ಆಟೊಗಳು, ಓಲಾ, ಊಬರ್‌ ಟ್ಯಾಕ್ಸಿಗಳು, ಹೋಟೆಲ್‌ಗಳು ತೆರೆದಿದ್ದವು. ಆದರೆ, ಅದನ್ನು ಬಳಸುವ ಜನರೇ ಇರಲಿಲ್ಲ.

ಬಿಎಂಟಿಸಿ ಬಸ್‌ಗಳು ಓಡಾಡಿದರೂ ಖಾಲಿಯಾಗಿದ್ದವು. ಮೆಟ್ರೋ ರೈಲು ಬಹುಭಾಗ ಖಾಲಿಯಾಗಿಯೇ ಓಡಾಡಿತು. ಆಟೊಗಳಲ್ಲಿ ಹೋಗುವವರು ಕಡಿಮೆ ಇದ್ದರು. ರೆಸ್ಟೋರೆಂಟ್‌ಗಳಲ್ಲಿ ಜನ ಸಂದಣಿ ಇರಲಿಲ್ಲ. ಅಂದರೆ ಇಷ್ಟೆಲ್ಲ ವ್ಯವಸ್ಥೆ ಇದ್ದರೂ ಜನರೇ ಮಂಗಳವಾರ ಕಾವೇರಿಗಾಗಿ ಒಂದು ದಿನ ಬಂದ್‌ ಎಂಬ ತೀರ್ಮಾನಕ್ಕೆ ಬಂದಿದ್ದರು. ಹೀಗಾಗಿ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸರ್ಕಾರಿ ಕಚೇರಿಗಳಲ್ಲಿ ಜನ ಇರಲಿಲ್ಲ.

ಇದನ್ನೂ ಓದಿ: Bangalore Bandh : 13 ವಿಮಾನ ಸಂಚಾರ ಕ್ಯಾನ್ಸಲ್‌, ಮೆಟ್ರೋ ಫುಲ್‌ ಖಾಲಿ, ಬಿಎಂಟಿಸಿ ಬಸ್‌ಗಳಿವೆ, ಜನರೇ ಇಲ್ಲ

ವಿಶೇಷವೆಂದರೆ ಬೆಂಗಳೂರಿನಲ್ಲಿ ಮಂಗಳವಾರ ಬಂದ್‌ ನಡೆದೇ ನಡೆಯುತ್ತದೆ. ಅಲ್ಲಿ ಹೋಗಿ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುವುದು ಬೇಡ ಎಂದು ವಿಮಾನ ಪ್ರಯಾಣಿಕರು ನಿರ್ಧಾರ ಮಾಡಿದ ಪರಿಣಾಮವಾಗಿ ಬೆಂಗಳೂರಿಗೆ ಮಂಗಳವಾರ ಬರಬೇಕಾಗಿದ್ದ 13 ವಿಮಾನಗಳ ಸಂಚಾರವೇ ರದ್ದಾಗಿತ್ತು.

ಶಾಲೆ, ಕಾಲೇಜು ಬಂದ್‌; ಮಾಲ್‌, ಥಿಯೇಟರ್‌ಗಳ ಬೆಂಬಲ

ಈ ನಡುವೆ, ಬಂದ್‌ ನಿಮಿತ್ತ ಬೆಂಗಳೂರಿನ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಹೀಗಾಗಿ ಮಕ್ಕಳು ಮತ್ತು ಮನೆಯವರು ನಿರಾಳರಾಗಿದ್ದರು. ಇತ್ತ ದೊಡ್ಡ ದೊಡ್ಡ ಮಾಲ್‌ಗಳು ಬಂದ್‌ಗೆ ಬೆಂಬಲ ನೀಡಿದ್ದರು. ಚಿತ್ರೋದ್ಯಮದ ಬೆಂಬಲ ಇದ್ದಿದ್ದರಿಂದ ಸಿನಿಮಾ ಥಿಯೇಟರ್‌ಗಳು ಸಂಜೆವರೆಗೆ ಓಪನ್‌ ಆಗಲಿಲ್ಲ.

ಪೊಲೀಸ್‌ ಬಲ ಪ್ರಯೋಗದ ಆರೋಪ

ಇದರ ನಡುವೆ ಬಂದ್‌ನ್ನು ವಿಫಲಗೊಳಿಸಲು ಪೊಲೀಸ್‌ ಬಲ ಪ್ರಯೋಗ ಮಾಡಿದ ಆರೋಪ ಎದುರಾಗಿದೆ. ಬಲವಂತದ ಬಂದ್‌ಗೆ ಅವಕಾಶವಿಲ್ಲ, ಮೆರವಣಿಗೆ ನಡೆಸುವಂತಿಲ್ಲ, ಬಹಿರಂಗ ಪ್ರತಿಭಟನೆಗೆ ಅವಕಾಶವಿಲ್ಲ ಎಂಬ ನಿರ್ಬಂಧಗಳನ್ನು ಹಾಕಿದ ಪೊಲೀಸರು ಬಂದ್‌ನ ಮುನ್ನಾ ದಿನವೇ 1000ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದರು. ಇಷ್ಟೆಲ್ಲ ಮಾಡಿದರೂ ಬಂದ್‌ ಸಫಲವಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್‌ಗಳು ಸಂಘಟನೆಗಳನ್ನು ಅಭಿನಂದಿಸಿವೆ.

ಇನ್ನು ಸೆ. 29ರ ಬಂದ್‌. ಈಗ ಈ ಬಂದ್‌ ಮುಕ್ತಾಯವಾಗಿರುವಂತೆಯೇ ಸೆಪ್ಟೆಂಬರ್‌ 29ರ ಕರ್ನಾಟಕ ಬಂದ್‌ಗೆ ವೇದಿಕೆ ಸಿದ್ಧವಾಗಿದೆ. ಅಂದು ಪೂರ್ಣವಾಗಿ ಕರ್ನಾಟಕ ಬಂದ್‌ ಆಗಲಿದೆ ಎಂದಿದ್ದಾರೆ ವಾಟಾಳ್‌ ನಾಗರಾಜ್‌.

ಇದನ್ನೂ ಓದಿ: Bangalore Bandh: ಬೆಂಗಳೂರು ಬಂದ್‌ ಹತ್ತಿಕ್ಕಲು ಪೊಲೀಸ್‌ ಬಲ ಪ್ರಯೋಗ ನಡೆಯಿತೇ? ಕಮಿಷನರ್‌ ಹೇಳಿದ್ದೇನು?

Exit mobile version