ಬೆಂಗಳೂರು: ರಾಜಧಾನಿಯ ಅವ್ಯವಸ್ಥೆಗೆ, ಈಗಿನ ಪರಿಸ್ಥಿತಿಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರೇ ಕಾರಣ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಕುಮಾರಸ್ವಾಮಿ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಅದರಲ್ಲೂ ಕುಮಾರಸ್ವಾಮಿ ಅವರಿಂದ ಭೂಗಳ್ಳರಿಗೆ ಅನುಕೂಲವಾಗಿದೆ ಎಂಬ ಹೇಳಿಕೆಯಿಂದ ಇನ್ನಷ್ಟು ಸಿಟ್ಟಾಗಿದ್ದಾರೆ.
ʻʻಭೂಗಳ್ಳರಿಗೆ ಒಳ್ಳೆಯದಾಗುವ ಒಂದು ತೀರ್ಮಾನ ನಾನು ತೆಗೆದುಕೊಂಡಿರುವುದನ್ನು ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆʼʼ ಎಂದು ಕುಮಾರಸ್ವಾಮಿ ಅವರು ಬೊಮ್ಮಾಯಿ ಅವರಿಗೆ ಸವಾಲು ಹಾಕಿದರು.
ʻʻಕಾಂಗ್ರೆಸ್ ಬಗ್ಗೆ ಸಿಎಂ ಏನು ಬೇಕಾದ್ರೂ ಮಾತಾಡಲಿ. ಆದರೆ, ನನ್ನ ಬಗ್ಗೆ ಮಾತಾಡುವಾಗ ನೋಡಿಕೊಂಡು ಮಾತಾಡಲಿʼʼ ಎಂದು ಹೇಳಿದ್ದಾರೆ ಕುಮಾರಸ್ವಾಮಿ.
ʻʻಫೆರಿಫೆರಲ್ ರಿಂಗ್ ರೋಡ್ ಗೆ 6 ಸಾವಿರ ಕೋಟಿ ಯೋಜನೆ ರೂಪಿಸಿದ್ದೆ. ಇಂದು 22 ಸಾವಿರ ಕೋಟಿ ಆಗಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿಯ ಸಾಧನೆ. ರಾಜಕಾಲುವೆ ಅಭಿವೃದ್ಧಿಗೆ ಸಾವಿರಾರು ಕೋಟಿ ರಿಲೀಸ್ ಮಾಡಿದ್ದೇನೆ ಅಂತ ಸಿಎಂ ಹೇಳ್ತಾರೆ. ಹಾಗಾದರೆ ಆ ಹಣ ಯಾರ ಮನೆಗೆ ಹೋಯಿತು? ಬಿಬಿಎಂಪಿ ಆಡಳಿತ ಅವರ ಕೈಯಲ್ಲಿ ಇತ್ತು. ಏನು ಮಾಡಿದ್ರು ಹಾಗಿದ್ರೆ?ʼʼ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ʻʻನನ್ನ ಎರಡು ಅವಧಿಯಲ್ಲಿ ಅಕ್ರಮಕ್ಕೆ ಪೋಷಣೆ ಮಾಡಿರೋ ದಾಖಲೆ ಬಿಡುಗಡೆ ಮಾಡಲಿ. ಸರ್ಕಾರಿ ಜಮೀನು ಭೂಮಿ ಲೂಟಿ ಹೊಡೆಯೋ ಬಗ್ಗೆ ಸದನ ಸಮಿತಿ ಮಾಡಿದ್ದೇ ನಾನು. ಹಾಗಿದ್ದರೆ ಯಾರ ಕಾಲದಲ್ಲಿ ಏನೇನು ಆಗಿದೆ ಎಂದು ಸಿಎಂ ಶ್ವೇತ ಪತ್ರ ಹೊರಡಿಸಲಿʼʼ ಎಂದು ಸವಾಲು ಹಾಕಿದರು ಎಚ್‌ಡಿಕೆ.
ʻʻಈಗೇನೋ ಕೆಂಪೇಗೌಡ ಏರ್ ಫೊರ್ಟ್ ನಲ್ಲಿ ಮಣ್ಣು ಸಂಗ್ರಹ ಮಾಡಿ ಥೀಮ್ ಪಾರ್ಕ್ ಮಾಡ್ತೀನಿ ಅಂತಿದ್ದಾರೆ. ಅಮರಾವತಿ ಕಟ್ಟಲು ಮೋದಿ ಮಣ್ಣು ತಂದರು ಮೋದಿ… ಅದು ಏನಾಯ್ತು? ಈಗ ರಾಜ್ಯದಲ್ಲಿ ಮಣ್ಣಿನ ಸಂಗ್ರಹ ಮಾಡ್ತಾರಂತೆ. ಮೊದಲು ಮಳೆಯಿಂದ ಆಗಿರೋ ಸಮಸ್ಯೆಯ ಜನರಿಗೆ, ರೈತರಿಗೆ ಅನುಕೂಲ ಮಾಡಿಕೊಡ್ರಪ್ಪʼʼ ಎಂದು ನುಡಿದರು ಎಚ್.ಡಿ.ಕೆ.
ಸಿಎಂ ಅವರ ಬೆಂಗಳೂರು ಪ್ರದಕ್ಷಿಣೆ ಬರೀ ಪ್ರಚಾರ ಅಷ್ಟೆ. ಕಳೆದ ಬಾರಿಯೂ ಮಾಡಿದ್ರಲ್ಲ.. ಏನಾಯ್ತು.. ಏನು ಬದಲಾವಣೆ ಆಯಿತು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | ಬೆಂಗಳೂರಿನ ಸಮಸ್ಯೆಗೆ ಹಿಂದಿನ ಸರ್ಕಾರಗಳೇ ಕಾರಣ: ಸಿಟಿ ರೌಂಡ್ಸ್ ನಂತರ ಸಿಎಂ ಬೊಮ್ಮಾಯಿ ಆರೋಪ