Site icon Vistara News

Bangalore Double Murder : ಏರೋನಿಕ್ಸ್‌ ಎಂಡಿ, ಸಿಇಒ ಕೊಲೆಗೆ ಹಳೆ ಕಂಪನಿ ಮಾಲೀಕ ಸುಪಾರಿ?

Bangalore double murder Phanindra and Felix

ಬೆಂಗಳೂರು: ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿರುವ ಏರೋನಿಕ್ಸ್ ಮೀಡಿಯಾ ಪ್ರೈವೆಟ್‌ ಲಿಮಿಟೆಡ್‌ ಎಂಬ ಕಂಪೆನಿಯ (Aironics Media pvt ltd) ಆಡಳಿತ ನಿರ್ದೇಶಕ (Managing Director-MD) ಫಣೀಂದ್ರ ಸುಬ್ರಹ್ಮಣ್ಯ (Phanindra subrahmanya) ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (Chief Executive officer -CEO) ವಿನು ಕುಮಾರ್‌ ಅವರನ್ನು ಮಂಗಳವಾರ ಸಂಜೆ ಮಾಜಿ ಉದ್ಯೋಗಿಯೊಬ್ಬ ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ (Bangalore Double Murder) ಪ್ರಕರಣದ ಹಿಂದೆ ಸುಪಾರಿ ನೆರಳು ಕಾಣಿಸಿಕೊಂಡಿದೆ.

ಮಾಜಿ ಉದ್ಯೋಗಿ ಶಬರೀಶ್‌ ಅಲಿಯಾಸ್‌ ಫೆಲಿಕ್ಸ್‌ ಎಂಬಾತ ವಿನಯ್‌ ರೆಡ್ಡಿ ಮತ್ತು ಸಂತೋಷ್‌ ಎಂಬ ಇಬ್ಬರ ಜತೆಗೆ ಬಂದು ಫಣೀಂದ್ರ ಸುಬ್ರಹ್ಮಣ್ಯ ಮತ್ತು ವಿನುಕುಮಾರ್‌ ಅವರನ್ನು ತಲವಾರಿನಿಂದ ಕಡಿದು ಕೊಲೆ ಮಾಡಿದ್ದ. ತನ್ನನ್ನು ಉದ್ಯೋಗದಿಂದ ತೆಗೆದ ಸಿಟ್ಟಿಗೆ ಮತ್ತು ತನ್ನ ಉದ್ಯಮಕ್ಕೆ ಅಡ್ಡವಾಗಿರುವ ಕಾರಣಕ್ಕೆ ಕೊಲೆ ಮಾಡಿದ್ದಾಗಿ ಫೆಲಿಕ್ಸ್‌ ಹೇಳಿಕೊಂಡಿದ್ದ. ಆದರೆ, ಇದು ಉದ್ಯಮದ ಮೇಲಾಟದಿಂದ ನಡೆದ ಕೊಲೆ ಎನ್ನುವುದು ಈಗ ನಿಧಾನವಾಗಿ ಹೊರಬರುತ್ತಿದೆ. ಈ ಕಾರಣದಿಂದಲೇ ಪೊಲೀಸರು ಇನ್ನೊಬ್ಬ ವ್ಯಕ್ತಿಯನ್ನು ಆರೋಪಿ ನಂಬರ್‌ 4 ಆಗಿ ಗುರುತಿಸಿದ್ದಾರೆ. ಅವನೇ ಅರುಣ್‌.

ಈ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಾಲ್ಕನೇ ಆರೋಪಿ ಅರುಣ್‌ ಬ್ರಾಡ್‌ಬ್ಯಾಂಡ್‌ ಕಂಪನಿಯೊಂದರ ಮಾಲೀಕ. ಫಣೀಂದ್ರ ಸುಬ್ರಹ್ಮಣ್ಯ ಮತ್ತು ವಿನುಕುಮಾರ್‌ ಅವರು ಈ ಹಿಂದೆ ಅರುಣ್‌ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ಸಮಯದ ಹಿಂದಷ್ಟೇ ಇವರಿಬ್ಬರೂ ಅರುಣ್‌ನ ಕಂಪನಿಯನ್ನು ಬಿಟ್ಟು ಏರೋನಿಕ್ಸ್‌ ಇಂಟರ್‌ನೆಟ್‌ ಎಂಬ ಹೊಸ ಕಂಪನಿಯನ್ನು ಕಟ್ಟಿದ್ದರು. ಸುಮಾರು 12 ಮಂದಿ ಆಂತರಿಕ ಉದ್ಯೋಗಿಗಳು ಮತ್ತು ಇತರ ನೆಟ್‌ವರ್ಕ್‌ ಉದ್ಯೋಗಿಗಳೊಂದಿಗೆ ಅವರ ಕಂಪನಿ ಕಡಿಮೆ ಅವಧಿಯಲ್ಲಿ ದೊಡ್ಡದಾಗಿ ಬೆಳೆದಿತ್ತು.

ಕೊಲೆ ಆರೋಪಿಗಳಾದ ಫೆಲಿಕ್ಸ್‌, ವಿನಯ ರೆಡ್ಡಿ ಮತ್ತು ಸಂತೋಷ್‌

ತನ್ನ ಕಂಪನಿ ಬಿಟ್ಟು ಹೋದ ಇವರಿಬ್ಬರು ತನಗೇ ಟಕ್ಕರ್‌ ಕೊಡುವಂತೆ ಬೆಳೆಯುತ್ತಿದ್ದುದು ಅರುಣ್‌ಗೆ ಸಿಟ್ಟು ತರಿಸಿತ್ತು ಎನ್ನಲಾಗಿದೆ. ಅದಲ್ಲದೆ ಈ ಹಿಂದೆ ಅರುಣ್‌ ಜತೆಗೆ ಇದ್ದ ನೆಟ್‌ವರ್ಕ್‌ನ್ನೇ ಇವರಿಬ್ಬರೂ ಬಳಸಿಕೊಂಡಿದ್ದರಿಂದ ಸಹಜವಾಗಿ ಅರುಣ್‌ನ ಉದ್ಯಮಕ್ಕೆ ಹೊಡೆತ ಬಿದ್ದಿತ್ತು. ಜತೆಗೆ ಫಣೀಂದ್ರ ಸುಬ್ರಹ್ಮಣ್ಯ ಅವರಿಗೆ ಒಳ್ಳೆಯ ಸಂವಹನ ಮತ್ತು ಸಂಪರ್ಕವಿದ್ದು ವೇಗವಾಗಿ ಬೆಳವಣಿಗೆ ನಡೆದಿತ್ತು.

ನನ್ನ ಕಂಪನಿಯನ್ನು ಮುಳುಗಿಸಿ ಫಣೀಂದ್ರ ಹೊಸ ಸಾಮ್ರಾಜ್ಯ ಕಟ್ಟುತ್ತಿದ್ದಾರೆ ಎಂಬ ಸಿಟ್ಟಿನಲ್ಲಿ ಅರುಣ್‌ ಕೊಲೆಗೆ ಸುಪಾರಿ ನೀಡಿದರಾ ಎನ್ನುವುದು ಈಗ ತನಿಖೆಯಲ್ಲಿರುವ ಪ್ರಧಾನ ಅಂಶ.

ಫೆಲಿಕ್ಸ್‌ನನ್ನು ಬಳಸಿಕೊಂಡರಾ ಅರುಣ್‌?

ಇಲ್ಲಿರುವ ಮತ್ತೊಂದು ಪ್ರಮುಖ ಸಂಶಯವೆಂದರೆ ಫೆಲಿಕ್ಸ್‌ ನನ್ನು ಇತ್ತೀಚೆಗೆ ಫಣೀಂದ್ರ ಅವರು ಕೆಲಸದಿಂದ ತೆಗೆದಿದ್ದರು. ಅವನೊಬ್ಬ ಸೈಕೋ ತರ ವರ್ತನೆ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವನ್ನು ಕೆಲಸದಿಂದ ತೆರವು ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಶಬರೀಶ ಅಲಿಯಾಸ್‌ ಫೆಲಿಕ್ಸ್‌ಗೆ ಫಣೀಂದ್ರ ಮೇಲೆ ಸಿಟ್ಟಿತ್ತು. ಈ ಸಿಟ್ಟನ್ನು ಅರುಣ್‌ ಚೆನ್ನಾಗಿ ಬಳಸಿಕೊಂಡರಾ ಎನ್ನುವುದು ಪೊಲೀಸರ ತನಿಖೆಯಲ್ಲಿರುವ ಪ್ರಶ್ನೆ.

ಫೆಲಿಕ್ಸ್‌ ಹೇಗೂ ಅರೆ ಹುಚ್ಚನಂತೆ ಆಡುತ್ತಿದ್ದಾನೆ. ಫಣೀಂದ್ರ ಸುಬ್ರಹ್ಮಣ್ಯ ಮೇಲೆ ಅತೀವವಾದ ಆಕ್ರೋಶವಿದೆ ಎನ್ನುವುದನ್ನು ತಿಳಿದ ಬ್ರಾಡ್‌ಬ್ಯಾಂಡ್‌ ಕಂಪನಿಯ ಎಂ.ಡಿ. ಅರುಣ್‌ ಅವನಿಗೆ ಕೊಲೆ ಸುಪಾರಿ ನೀಡಿದನಾ? ಆತನನ್ನು ಬಳಸಿಕೊಂಡರೆ ಉಪಯೋಗವಾಗುತ್ತದೆ ಎಂಬ ಉದ್ದೇಶದಿಂದ ಸುಪಾರಿ ನೀಡಿ ಕೊಲೆ ಮಾಡಿಸಿದನಾ? ಎನ್ನುವುದು ವಿಚಾರಣೆಯಲ್ಲಿದೆ.

ಮೂವರು ಆರೋಪಿಗಳು ಯಾರು?

ಈಗ ಬಂಧನದಲ್ಲಿರುವ ಮೂವರು ಆರೋಪಿಗಳೆಂದರೆ
1. ಶಬರೀಶ ಅಲಿಯಾಸ್‌ ಫೆಲಿಕ್ಸ್‌, ವಯಸ್ಸು 27, ಪೆಂಚಿಲಯ್ಯ ಎಂಬವರ ಮಗ, ದೇವರಚಿಕ್ಕನಹಳ್ಳಿ, ಬನ್ನೇರುಘಟ್ಟ, ಬೆಂಗಳೂರು
2. ವಿನಯ ರೆಡ್ಡಿ, ವಯಸ್ಸು 23, ವೆಂಕಟೇಶ ರೆಡ್ಡಿ ಎಂಬವರ ಮಗ, ರೂಪೇನ ಅಗ್ರಹಾರ, ಬೆಂಗಳೂರು
3. ಸಂತೋಷ್‌ ಅಲಿಯಾಸ್‌ ಸಂತು, ವಯಸ್ಸು 26, ಶ್ರೀನಿವಾಸ ಎಂಬವರ ಮಗ, ಮಾರೇನಹಳ್ಳಿ, ಬೆಂಗಳೂರು
4. ಅರುಣ್‌ ಎಂಬಾತನ ವಿಚಾರಣೆ ನಡೆಯುತ್ತಿದೆ.

ಅಮೃತಹಳ್ಳಿಯ ಕಚೇರಿಯಲ್ಲಿ ಕೊಲೆ ಮಾಡಿದ ಆರೋಪಿಗಳು ಬಳಿಕ ಕಂಪೌಂಡ್ ಹಾರಿ ಪರಾರಿಯಾಗಿದ್ದರು. ಅಲ್ಲಿಂದ ಮೆಜೆಸ್ಟಿಕ್ ಗೆ ಕ್ಯಾಬ್ ಬುಕ್ ಮಾಡಿಕೊಂಡು ಪರಾರಿಯಾಗಿದ್ದರು. ಮೆಜೆಸ್ಟಿಕ್‌ನಲ್ಲಿ ರೈಲು ಹತ್ತಿ ಕುಣಿಗಲ್ ಕಡೆ ತೆರಳುತ್ತಿದ್ದರು. ಈ ನಡುವೆ, ತಾನೇ ಕೊಲೆ ಮಾಡಿ ನಂತರ ಅದು ಮಾಧ್ಯಮದಲ್ಲಿ ಸುದ್ದಿಯಾದ ನಂತರ ಅದನ್ನು ಸಹ ಫೆಲಿಕ್ಸ್‌ ಸ್ಟೇಟಸ್‌ ಹಾಕಿದ್ದರಿಂದ ಅದರ ಬೆನ್ನು ಹತ್ತಿ ಹೋಗಿ ಪೊಲೀಸರು ಅವರನ್ನು ಬಂಧಿಸಿದರು.

ಕೊಲೆಗಾರರಲ್ಲಿ ಫೆಲಿಕ್ಸ್‌ ಹಳೆ ಉದ್ಯೋಗಿಯಾಗಿದ್ದರೆ, ಉಳಿದ ಇಬ್ಬರನ್ನು ಅವನು ಜತೆಗೆ ಕೊಲೆ ಮಾಡಲು ಕರೆದುಕೊಂಡು ಬಂದಿದ್ದ ಎನ್ನುವುದು ಪ್ರಾಥಮಿಕ ಮಾಹಿತಿ.

ಇದನ್ನು ಓದಿ: DJ Halli Double Murder: ಡಬಲ್‌ ಮರ್ಡರ್‌ ಆರೋಪಿಯ ಸೈಕೋ ಅವತಾರ ಹೀಗಿದೆ ನೋಡಿ! ಈತನನ್ನು ಹಿಡಿದದ್ದು ಹೇಗೆ?

Exit mobile version