ಬೆಂಗಳೂರು: ಏರೋನಿಕ್ಸ್ ಮೀಡಿಯಾ ಪ್ರೈವೆಟ್ ಲಿಮಿಟೆಡ್ (Aironics Media pvt ltd) ಎಂಬ ಫೈಬರ್‌ನೆಟ್ ಕಂಪನಿಯ ಆಡಳಿತ ನಿರ್ದೇಶಕ (Managing Director-MD) ಫಣೀಂದ್ರ ಸುಬ್ರಹ್ಮಣ್ಯ (Phanindra subrahmanya) ಮತ್ತು ಸಿಇಒ ವಿನು ಕುಮಾರ್ ಅವರ ಬರ್ಬರ ಕೊಲೆಯ (Bangalore Double Murder) ತನಿಖೆ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಒಂದು ಕಡೆ ಈ ಕೊಲೆಗೆ ಜಿ-ನೆಟ್ ಬ್ರಾಡ್ ಬ್ಯಾಂಡ್ ಕಂಪನಿಯ (Gnet Broadband Company) ಮಾಲೀಕ ಅರುಣ್ ಕುಮಾರ್ ಆಜಾದ್ (Arun kumar Azad) ಸುಪಾರಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದರೆ ಇನ್ನೊಂದು ಕಡೆ ಹೆಣ್ಣಿನ ನೆರಳು ಕಾಣಿಸಿಕೊಂಡಿದೆ.
ಏರೋನಿಕ್ಸ್ ಸಂಸ್ಥೆಯಲ್ಲಿ ಈ ಹಿಂದೆ ಉದ್ಯೋಗಿಯಾಗಿದ್ದ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್, ಜೋಕರ್ ಎಂದು ಕರೆಸಿಕೊಳ್ಳುವ ಶಬರೀಷ ಅಲಿಯಾಸ್ ಫೆಲಿಕ್ಸ್ (joker Felix) ಮಂಗಳವಾರ ಸಂಜೆ 3.35ರ ಹೊತ್ತಿಗೆ ವಿನಯ ರೆಡ್ಡಿ ಮತ್ತು ಸಂತೋಷ್ ಎಂಬಿಬ್ಬರ ಜತೆಗೆ ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿರುವ ಕಚೇರಿಗೆ ನುಗ್ಗಿ ಫಣೀಂದ್ರ ಸುಬ್ರಹ್ಮಣ್ಯ ಮತ್ತು ವಿನುಕುಮಾರ್ ಅವರನ್ನು ತಲವಾರಿನಿಂದ ಕಡಿದು ಕೊಲೆ ಮಾಡಿದ್ದ. ಈ ಮೂವರು ಕೊಲೆ ಮಾಡಿದ ಬಳಿಕ ಕಾರಿನಲ್ಲಿ ಮೆಜೆಸ್ಟಿಕ್‌ಗೆ ಬಂದು ರೈಲು ಹತ್ತಿ ಹೋಗುತ್ತಿದ್ದಾಗ ಕುಣಿಗಲ್‌ನಲ್ಲಿ ಬಂಧಿಸಲಾಗಿದೆ.
ಅವರ ವಿಚಾರಣೆಯ ಸಂದರ್ಭದಲ್ಲಿ ಸಿಕ್ಕಿದ ಕೆಲವು ಸುಳಿವುಗಳನ್ನು ಆಧರಿಸಿ ಪೊಲೀಸರು ಜಿ-ನೆಟ್ ಬ್ರಾಡ್‌ಬ್ಯಾಂಡ್ ಕಂಪನಿಯ ಮಾಲೀಕ ಅರುಣ್ ಕುಮಾರ್ ಆಜಾದ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದರು. ಅರುಣ್ ಕುಮಾರ್ ಆಜಾದ್ ದಿಲ್ಲಿಯಿಂದ ವಿಮಾನದಲ್ಲಿ ಮರಳಿ ಬರುತ್ತಿದ್ದ ವೇಳೆ ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.
ಫಣೀಂದ್ರ ಸುಬ್ರಹ್ಮಣ್ಯ ಮತ್ತು ವಿನುಕುಮಾರ್ ಅವರಿಬ್ಬರೂ ಈ ಹಿಂದೆ ಜಿ-ನೆಟ್ ಬ್ರಾಡ್ ಬ್ಯಾಂಡ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಅದನ್ನು ಬಿಟ್ಟು ಏರೋನಿಕ್ಸ್ ಸಂಸ್ಥೆಯನ್ನು ಕಟ್ಟಿದ್ದರು. ಈ ಉದ್ಯಮ ದ್ವೇಷದಿಂದ ಅರುಣ್ ಕುಮಾರ್ ಆಜಾದ್ ಇವರಿಬ್ಬರ ಕೊಲೆಗೆ ಜೋಕರ್ ಫೆಲಿಕ್ಸ್‌ಗೆ ಸುಪಾರಿ ಕೊಟ್ಟಿದ್ದರು ಎಂಬ ನೆಲೆಯಲ್ಲಿ ತನಿಖೆ ಸಾಗುತ್ತಿದೆ.
ಅರೋಪಿ ಸಂತೋಷ್ ಕೂಡಾ ಜಿ ನೆಟ್‌ನಲ್ಲಿದ್ದ
ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎರಡನೇ ಆರೋಪಿ ಸಂತೋಷ್ ಕೂಡಾ ಜಿನೆಟ್ ಕಂಪನಿಯಲ್ಲಿ ಕೆಲಸಕ್ಕಿದ್ದ. ಫೆಲಿಕ್ಸ್ ಮತ್ತು ಸಂತೋಷ್ ಜಿ ನೆಟ್ ಇಂದ ನಿಮ್ಮ ಟೀಂಗೆ ಶಿಫ್ಟ್ ಆಗುತ್ತೇವೆ ಎಂಬ ವಿಚಾರದಲ್ಲಿ ಮಾತನಾಡಲು ಬಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಅವರನ್ನು ಏರೋನಿಕ್ಸ್ ಕಚೇರಿಗೆ ಬಿಟ್ಟುಕೊಳ್ಳಲಾಗಿತ್ತು ಎನ್ನಲಾಗಿದೆ.
ಇದರ ನಡುವೆಯೇ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಬಲ್ಲ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಅದುವೇ ಹೆಣ್ಣಿನ ನೆರಳು.
ಹೆಣ್ಣಿನ ವಿಷಯದಲ್ಲಿ ನಡೆಯಿತಾ ಅಮೃತಹಳ್ಳಿಯ ಡಬಲ್ ಮರ್ಡರ್?
ಈ ಅವಳಿ ಕೊಲೆ ನಡೆದಿರುವುದು ದುಡ್ಡಿಗಲ್ಲ, ವ್ಯವಹಾರಕ್ಕಲ್ಲ, ಬೇರೆ ದ್ವೇಷಕ್ಕೂ ಅಲ್ಲ. ಇದು ಹುಡುಗಿ ವಿಚಾರಕ್ಕೆ ಎನ್ನುವ ಅಂಶವೊಂದು ತನಿಖೆಯ ನಡುವೆ ಎದ್ದು ನಿಂತಿದೆ.
ಫಣೀಂದ್ರ, ವಿನು ಕುಮಾರ್ ಮತ್ತು ಫೆಲಿಕ್ಸ್ ಈ ಮೂವರೂ ಈ ಹಿಂದೆ ಬನ್ನೇರುಘಟ್ಟದಲ್ಲಿರುವ ಜಿ-ನೆಟ್ ಬ್ರಾಡ್ ಬ್ಯಾಂಡ್ ಕಂಪನಿಯಲ್ಲಿ ಜತೆಯಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಫಣೀಂದ್ರ ಮತ್ತು ವಿನು ಕುಮಾರ್ ಅಲ್ಲಿಂದ ಹೊರಬಿದ್ದು ಏರೋನಿಕ್ಸ್ ಸಂಸ್ಥೆ ಕಟ್ಟಿದ್ದರು. ಫೆಲಿಕ್ಸ್ ಕೂಡಾ ಅವರ ಜತೆಗೆ ಬಂದಿದ್ದ ಎನ್ನಲಾಗಿದೆ.
ಆರೋಪಿ ಶಬರೀಶ್ ಅಲಿಯಾಸ್ ಜೋಕರ್ ಫೆಲಿಕ್ಸ್ ಜಿ ನೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗಿ ಜೊತೆ ಸಲುಗೆಯಿಂದಿದ್ದ. ಅದೇ ಹುಡುಗಿಯ ಜತೆಗೆ ಫಣೀಂದ್ರ ಅವರು ಕೂಡಾ ಸಲುಗೆ ಹೊಂದಿದ್ದರು ಎನ್ನಲಾಗಿದೆ.
ಈ ಹುಡುಗಿಯ ವಿಚಾರದಲ್ಲಿ ಫಣೀಂದ್ರ ಹಾಗೂ ಫೆಲಿಕ್ಸ್ ಮಧ್ಯೆ ಜಗಳ ನಡೆದಿತ್ತು ಎನ್ನಲಾಗಿದೆ. ಆಗ ʻʻನಮ್ಮ ಹುಡುಗಿ ವಿಚಾರಕ್ಕೆ ಬಂದ್ರೆ ನಿನ್ನ ಮುಗಿಸಿಬಿಡ್ತೀನಿʼʼ ಅಂತ ಆವಾಜ್ ಹಾಕಿದ್ದನಂತೆ ಫೆಲಿಕ್ಸ್. ಹಾಗಿದ್ದರೆ ಈ ಹುಡುಗಿಯ ವಿಚಾರವೇ ದೊಡ್ಡದಾಗಿ ಕೊಲೆಯ ಹಂತದವರೆಗೂ ಹೋಯಿತಾ ಎನ್ನುವ ಒಂದು ಅಂಶ ಪೊಲೀಸರನ್ನು ಕಾಡುತ್ತಿದೆ. ಸದ್ಯ ಈ ಆಯಾಮದಲ್ಲಿ ತನಿಖೆ ಮುಂದುವರಿಸಿದ್ದಾರೆ ಅಮೃತಹಳ್ಳಿ ಪೊಲೀಸರು.
ಹೆಣ್ಣಿನ ಆಯಾಮವೇ ಪ್ರಧಾನವಾಗಲು ಇನ್ನೊಂದು ಕಾರಣವೂ ಇದೆ. ಅದೇನೆಂದರೆ ಹಂತಕರು ಪ್ರಧಾನವಾಗಿ ದಾಳಿ ಮಾಡಿದ್ದು ಫಣೀಂದ್ರ ಅವರ ಮೇಲೆಯೇ. ಫಣೀಂದ್ರ ಅವರ ಮೇಲೆ ದಾಳಿ ನಡೆಯುತ್ತಿದ್ದಾಗ ಆರೋಪಿಗಳನ್ನು ತಡೆಯಲು ವಿನುಕುಮಾರ್ ಕುರ್ಚಿ ಮತ್ತಿತರ ವಸ್ತುಗಳನ್ನು ಎಸೆಯುತ್ತಿದ್ದರು. ಹೀಗಾಗಿ ಅವರನ್ನೂ ಮಾರಕಾಸ್ತ್ರದಿಂದ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಹಾಗಂತ, ಈ ಕೊಲೆಯನ್ನು ಹೆಣ್ಣಿಗಾಗಿಯೇ ಮಾಡಲಾಗಿದೆ ಎಂದು ಯಾವ ಕಾರಣಕ್ಕೂ ಷರಾ ಬರೆಯಲಾಗದು. ಯಾಕೆಂದರೆ ಫಣೀಂದ್ರ ಅವರು ಸಂಸ್ಕಾರವಂತ ಜೀವನ ನಡೆಸುವವರೆಂದು ಅವರ ಮಿತ್ರರು ಹೇಳುತ್ತಾರೆ. ಇಂಥ ವಿಷಯದಲ್ಲಿ ಅವರು ತೀರಾ ವೈಷಮ್ಯ ಬೆಳೆಸಿಕೊಳ್ಳುವ ಮಟ್ಟಕ್ಕೆ ಹೋಗಿರಲಾರರು ಎಂಬ ಅಭಿಪ್ರಾಯವಿದೆ. ಆದರೆ, ಫೆಲಿಕ್ಸ್ ಸೈಕೋ ರೀತಿಯಲ್ಲಿ ವರ್ತಿಸುತ್ತಿರುವುದರಿಂದ ಯಾವ ಕಾರಣಕ್ಕಾಗಿ ಕೊಲೆ ಎನ್ನುವುದೇ ಈಗ ಸುಲಭದಲ್ಲಿ ಸ್ಪಷ್ಟವಾಗುತ್ತಿಲ್ಲ.
ಇದನ್ನೂ ಓದಿ: Bangalore Double Murder : ಏರೋನಿಕ್ಸ್ ಎಂಡಿ, ಸಿಇಒ ಕೊಲೆಗೆ ಹಳೆ ಕಂಪನಿ ಮಾಲೀಕ ಸುಪಾರಿ?