Site icon Vistara News

Bangalore double murder : ಫಣೀಂದ್ರ ಸುಬ್ರಹ್ಮಣ್ಯ ಹತ್ಯೆ ಹಿಂದೆ ಹೆಣ್ಣಿಲ್ಲ, ಮಣ್ಣಿಲ್ಲ, ಬರೀ ಮತ್ಸರ ಮಾತ್ರ!

Phanindra murder

ಬೆಂಗಳೂರು: ಏರೋನಿಕ್ಸ್ ಮೀಡಿಯಾ ಪ್ರೈವೆಟ್‌ ಲಿಮಿಟೆಡ್‌ (Aironics Media pvt ltd) ಎಂಬ ಫೈಬರ್‌ನೆಟ್‌ ಕಂಪನಿಯ ಆಡಳಿತ ನಿರ್ದೇಶಕ (Managing Director-MD) ಫಣೀಂದ್ರ ಸುಬ್ರಹ್ಮಣ್ಯ (Phanindra subrahmanya) ಮತ್ತು ಸಿಇಒ ವಿನು ಕುಮಾರ್‌ ಅವರ ಬರ್ಬರ ಕೊಲೆಯ (Bangalore Double Murder) ನಡೆದಿರುವುದು ಹಣಕ್ಕಾಗಿಯೂ ಅಲ್ಲ, ಹೆಣ್ಣಿಗಾಗಿಯೂ ಅಲ್ಲ, ಬರೀ ಮತ್ಸರಕ್ಕಾಗಿ! ಅದಕ್ಕೆ ಬಳಕೆಯಾದದ್ದು ಸೈಕೋ ರೀತಿಯಲ್ಲಿ ವರ್ತಿಸುತ್ತಿರುವ ಒಬ್ಬ ಜೋಕರ್‌.

ಮಂಗಳವಾರ ಸಂಜೆ 3.30ರ ಹೊತ್ತಿಗೆ ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿರುವ ಏರೋನಿಕ್ಸ್‌ ಕಚೇರಿಗೆ (Aironics office) ನುಗ್ಗಿದ ಮೂವರು ಅಲ್ಲಿದ್ದ ಫಣೀಂದ್ರ ಸುಬ್ರಹ್ಮಣ್ಯ ಮತ್ತು ವಿನುಕುಮಾರ್‌ ಅವರನ್ನು ತಲವಾರಿನಿಂದ ಕಡಿದು ಕೊಲೆ ಮಾಡಿದ್ದರು. ಅಲ್ಲಿಗೆ ಬಂದ ಮೂವರೆಂದರೆ ಶಬರೀಶ ಅಲಿಯಾಸ್‌ ಫೆಲಿಕ್ಸ್‌, ವಿನಯ ರೆಡ್ಡಿ ಮತ್ತು ಸಂತೋಷ್‌ ಅಲಿಯಾಸ್‌ ಸಂತು.

ಫೆಲಿಕ್ಸ್‌ ಎಂಬಾತ ಒಬ್ಬ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯನಾಗಿರುವ ಸೈಕೋ ಮಾದರಿಯ ಜೋಕರ್‌ ಆಗಿದ್ದಾನೆ ಎನ್ನುವುದು ಕೊಲೆಯಾದ ಕೆಲವೇ ಗಂಟೆಗಳಲ್ಲಿ ಗೊತ್ತಾಗಿತ್ತು. ಯಾಕೆಂದರೆ, ಆತ ಅದೆಷ್ಟು ಕಿರಾತಕನೆಂದರೆ ತಾನೇ ಮಾಡಿದ ಕೊಲೆಯ ಸುದ್ದಿ ಟೀವಿಯಲ್ಲಿ ಬಿತ್ತರವಾಗುತ್ತಿದ್ದನ್ನು ತಾನೇ ಸ್ಕ್ರೀನ್‌ ಶಾಟ್‌ ಮಾಡಿ ತನ್ನದೇ ಮೀಡಿಯಾ ಹ್ಯಾಂಡಲ್‌ನಲ್ಲಿ ಹಾಕಿಕೊಂಡಿದ್ದ. ಇದನ್ನೇ ಬೆನ್ನಟ್ಟಿ ಹೋದ ಪೊಲೀಸರಿಗೆ ಆತ ಮತ್ತು ಮೂರು ಮಂದಿ ಕುಣಿಗಲ್‌ ಲಾಡ್ಜ್‌ ಒಂದರಲ್ಲಿ ಕಾಲು ಚಾಚಿ ಮಲಗಿದ್ದು ಕಂಡುಬಂದಿತ್ತು.

ಅಷ್ಟು ಹೊತ್ತಿಗೆ ಫೆಲಿಕ್ಸ್‌ ಒಬ್ಬ ಕ್ರಿಶ್ಚಿಯನ್‌ ಎಂದೇ ಎಲ್ಲರೂ ತಿಳಿದಿದ್ದರು. ರಾಷ್ಟ್ರೀಯವಾದಿಯಾಗಿರುವ ಫಣೀಂದ್ರ ಸುಬ್ರಹ್ಮಣ್ಯ ಅವರ ಕೊಲೆಗೆ ಬೇರೆ ರೀತಿಯಲ್ಲಿ ತಳುಕು ಹಾಕಲು ಆರಂಭವಾಗಿತ್ತು. ಆದರೆ, ಆತ ಶಬರೀಶ ಅಲಿಯಾಸ್‌ ಫೆಲಿಕ್ಸ್‌ ಎನ್ನುವುದು ಗೊತ್ತಾಗಿದೆ. ಈ ನಡುವೆ ಫೆಲಿಕ್ಸ್‌ ಏರೋನಿಕ್ಸ್‌ ಕಂಪನಿಯಲ್ಲಿದ್ದ. ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕಾಗಿ ಈ ಕೊಲೆಯನ್ನು ಮಾಡಿದ್ದಾನೆ ಎಂಬ ಸುದ್ದಿಯೂ ಹರಡಿತ್ತು.

ಆದರೆ, ಈ ಕೊಲೆಯ ಅಸಲಿ ಬಣ್ಣ ಬಯಲಾಗಿದ್ದು ಪೊಲೀಸರು ಈ ಮೂವರನ್ನು ಹಿಡಿದು ತಮ್ಮ ಧಾಟಿಯಲ್ಲಿ ವಿಚಾರಣೆ ನಡೆಸಿದಾಗ. ಅವರು ಕೊಟ್ಟ ಮಾಹಿತಿಯ ಆಧಾರದಲ್ಲಿ ಪೊಲೀಸರು ಬುಧವಾರ ಮುಂಜಾನೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೋಗಿ ನಿಂತಿದ್ದರು. ಅಲ್ಲಿ ಅವರು ಕಾಯುತ್ತಿದ್ದದ್ದು ದಿಲ್ಲಿಯಿಂದ ವಿಮಾನ ನಿಲ್ದಾಣಕ್ಕೆ ಬಂದು ಇಳಿಯಲಿದ್ದ ಅರುಣ್‌ ಕುಮಾರ್‌ ಆಜಾದ್‌ ಎಂಬಾತನಿಗಾಗಿ!

ಅರುಣ್‌ ಕುಮಾರ್‌ ಆಜಾದ್‌ (Arun kumar Azad) ಯಾರೆಂದರೆ ಬನ್ನೇರುಘಟ್ಟದಲ್ಲಿ ಕಚೇರಿಯನ್ನು ಹೊಂದಿರುವ ಜಿ-ನೆಟ್‌ ಬ್ರಾಡ್‌ ಬ್ಯಾಂಡ್‌ ಕಂಪನಿಯ (Gnet Broadband Company) ಮಾಲೀಕ. ಪೊಲೀಸರು ಅವನನ್ನೇಕೆ ವಿಮಾನ ನಿಲ್ದಾಣಕ್ಕೆ ಹೋಗಿ ಹಿಡಿದಿದ್ದರೆಂದರೆ ಈ ಕೊಲೆಗೆ ಸುಪಾರಿ ಕೊಟ್ಟಿದ್ದು ಅವನೇ ಎಂಬ ಮಾಹಿತಿ ಬಂಧಿತ ಮೂವರಿಂದ ಸಿಕ್ಕಿತ್ತು!

ಹಾಗಿದ್ದರೆ ಅವನೇಕೆ ಫಣೀಂದ್ರ ಕೊಲೆಗೆ ಸುಪಾರಿ ಕೊಟ್ಟ?

ಈ ಫಣೀಂದ್ರ, ವಿನುಕುಮಾರ್‌, ಅರುಣ್‌ ಕುಮಾರ್‌ ಮತ್ತು ಫೆಲಿಕ್ಸ್‌ ಇವರೆಲ್ಲರೂ ಮೊದಲು ಒಂದೇ ಕಂಪನಿಯಲ್ಲಿದ್ದವರು. ಅದುವೇ ಅರುಣ್‌ ಕುಮಾರ್‌ ಮಾಲೀಕತ್ವದ ಜಿ-ನೆಟ್‌ ಬ್ರಾಡ್‌ ಬ್ಯಾಂಡ್‌ ಕಂಪನಿ. ಈ ಕಂಪನಿಯಲ್ಲಿ ಬೆಳೆದ ಮತ್ತು ಕಂಪನಿಯನ್ನು ಬೆಳೆಸಿದ ಫಣೀಂದ್ರ ಸುಬ್ರಹ್ಮಣ್ಯ ಮತ್ತು ವಿನು ಕುಮಾರ್‌ ವರ್ಷದ ಹಿಂದೆ ಜಿ-ನೆಟ್‌ ಕಂಪನಿಯನ್ನು ಬಿಟ್ಟು ತಮ್ಮದೇ ಆದ ಏರೋನಿಕ್ಸ್‌ ಮೀಡಿಯಾ ಸಂಸ್ಥೆಯನ್ನು ಕಟ್ಟಿದ್ದರು.

ತಾವು ಜಿ-ನೆಟ್‌ನಲ್ಲಿದ್ದಾಗ ಮಾಡಿಕೊಂಡ ಸಂಪರ್ಕಗಳನ್ನು ಬಳಸಿಕೊಂಡ ಫಣೀಂದ್ರ ಮತ್ತು ವಿನು ಕುಮಾರ್‌ ತಮ್ಮ ಸಂಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದರು. ಆದರೆ, ಅವರು ಬೆಳೆಯಲು ಬಳಸಿದ್ದು ಹಳೆ ಜಿ-ನೆಟ್‌ ಸಂಸ್ಥೆಯ ಗ್ರಾಹಕರನ್ನೆ ಆಗಿತ್ತು. ಹೀಗಾಗಿ ಒಂದು ಕಡೆ ಏರೋನಿಕ್ಸ್‌ ಏರೋಪ್ಲೇನ್‌ ವೇಗದಲ್ಲಿ ಆಕಾಶಕ್ಕೆ ಬೆಳೆಯುತ್ತಿದ್ದರೆ ಇತ್ತ ಜಿ-ನೆಟ್‌ ಬ್ರಾಡ್‌ ಬ್ಯಾಂಡ್‌ ಕಂಪನಿ ನಿಧಾನಕ್ಕೆ ಪಾತಾಳಕ್ಕೆ ಕುಸಿಯುತ್ತಿತ್ತು. ಆಗಲೇ ಅರುಣ್‌ ಕುಮಾರ್‌ ಮನಸ್ಸಿನಲ್ಲಿ ದ್ವೇಷದ ಜ್ವಾಲೆ ಹೊತ್ತಿಕೊಂಡಿತ್ತು. ಹೀಗಾಗಿ ಅವನೇ ಫೆಲಿಕ್ಸ್‌ಗೆ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಿದ್ದಾನೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಹೋಗಿತ್ತು.

ಹಾಗಿದ್ದರೆ ಅರುಣ್‌ ಕುಮಾರ್‌ ಫೆಲಿಕ್ಸ್‌ಗೆ ಸುಪಾರಿ ಕೊಟ್ಟಿದ್ದು ಯಾಕೆ?

ಏರೋನಿಕ್ಸ್‌ ಸಂಸ್ಥೆ ಬೆಳೆಯುತ್ತಿರುವುದನ್ನು ನೋಡಿ ಹೊಟ್ಟೆಯ ಕಿಚ್ಚೆದ್ದ ಅರುಣ್‌ ಕುಮಾರ್‌ ಹಲವು ಬಾರಿ ಫಣೀಂದ್ರ ಮತ್ತು ಟೀಮ್‌ಗೆ ಎಚ್ಚರಿಕೆ ಕೊಟ್ಟಿದ್ದ ಎನ್ನಲಾಗಿದೆ. ನನ್ನ ಕಸ್ಟಮರ್ಸನ್ನು ಕಸಿದುಕೊಂಡು ಮೆರೆಯುತ್ತಿದ್ದೀಯಾ ಬಿಡುವುದಿಲ್ಲ ಎಂದಿದ್ದ.

ನಿಜವೆಂದರೆ ಈ ರೀತಿಯ ಎಚ್ಚರಿಕೆಯನ್ನು ಆತ ನೀಡಿದ್ದು ಫಣೀಂದ್ರ ಅವರಿಗೆ ಮಾತ್ರವಲ್ಲ. ಫಣೀಂದ್ರ ಅವರ ಅಣ್ಣನಿಗೂ ಕರೆ ಮಾಡಿ ತಮ್ಮನಿಗೆ ಬುದ್ಧಿ ಹೇಳಿ ಇಲ್ಲವಾದರೆ ಡೇಂಜರ್‌ ಇದೆ ಎಂದಿದ್ದ. ʻʻನನ್ನ ಬಳಿ ಗಾಂಜಾ ಹುಡುಗರಿದ್ದಾರೆ. ಏನಾದ್ರೂ ಆದ್ರೆ ನನಗೆ ಗೊತ್ತಿಲ್ಲʼʼ ಎಂದಿದ್ದ ಅರುಣ್‌. ಅಣ್ಣ ಫಣೀಂದ್ರ ಅವರಿಗೆ ಈ ವಿಷಯ ಕಿವಿಗೆ ಹಾಕಿದ್ದರು. ಆದರೆ, ಬಿಸಿನೆಸ್‌ನಲ್ಲಿ ಇದೆಲ್ಲ ಕಾಮನ್ ಎಂದು ಸುಮ್ಮನಾಗಿದ್ದರು ಫಣೀಂದ್ರ.

ಆದರೆ, ಅರುಣ್‌ ಕುಮಾರ್‌ ಎದೆಯಲ್ಲಿ ದ್ವೇಷ ಹೊತ್ತಿ ಉರಿಯುತ್ತಲೇ ಇತ್ತು. ಅದಕ್ಕೆ ತುಪ್ಪ ಸುರಿದವನು ಫೆಲಿಕ್ಸ್‌!

ಇದನ್ನೂ ಓದಿ: DJ Halli Double Murder: ಡಬಲ್‌ ಮರ್ಡರ್‌ ಆರೋಪಿಯ ಸೈಕೋ ಅವತಾರ ಹೀಗಿದೆ ನೋಡಿ! ಈತನನ್ನು ಹಿಡಿದದ್ದು ಹೇಗೆ?

ಅರುಣ್‌ ಕುಮಾರ್‌ ಫಣೀಂದ್ರ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾನೆ ಎಂಬ ಸಂಗತಿ ಜಿ-ನೆಟ್‌ನಲ್ಲೇ ಆತನ ಜತೆ ಕೆಲಸ ಮಾಡುತ್ತಿದ್ದ ಫೆಲಿಕ್ಸ್‌ಗೆ ಗೊತ್ತಾಗಿತ್ತು. ಫೆಲಿಕ್ಸ್‌ ಒಂದು ರೀತಿಯ ಸೈಕೋ. ಹುಚ್ಚು ಹುಚ್ಚು ವಿಡಿಯೊಗಳನ್ನು ಮಾಡಿ ಇನ್‌ಸ್ಟಾ ಗ್ರಾಂನಲ್ಲಿ ಹಾಕಿ ಸಾವಿರಾರು ಮಂದಿ ಫಾಲೋವರ್ಸ್‌ನ್ನು ಪಡೆದಿದ್ದ. ಬಾಯಿಗೆ ಬಂದಂತೆ ಮಾತನಾಡುವ, ಹುಚ್ಚು ಸಾಹಸಗಳನ್ನು ಮಾಡುವ ಫೆಲಿಕ್ಸ್‌ ಮೈ ತುಂಬ ಹಚ್ಚೆ ಹಾಕಿಸಿಕೊಂಡು ಅಲೆಯುತ್ತಿದ್ದ.

ಆವತ್ತೊಂದು ದಿನ ಅವನು ಅರುಣ್‌ ಕುಮಾರ್‌ ಮುಂದೆ ಕುಳಿತು ನಾನು ಫಣೀಂದ್ರನನ್ನು ಮುಗಿಸೋ ಬಗ್ಗೆ ಯೋಚಿಸುತ್ತಿದ್ದೇನೆ ಅಂದಿದ್ದ. ಆಗ ಚಿಗಿತುಕೊಂಡ ಅರುಣ್‌ ಕುಮಾರ್‌ ಅವರ ಯೋಜನೆಗೆ ತನ್ನ ದ್ವೇಷವನ್ನೂ ಸೇರಿಸಿದ. ನೀನು ಕೊಲೆ ಮಾಡು, ನಾನು ಏನು ಬೇಕಾದ್ರೂ ಸಪೋರ್ಟ್‌ ಮಾಡುತ್ತೇನೆ ಎಂದು ಭರವಸೆ ಕೊಟ್ಟ.

ಅಲ್ಲಿಂದ ಮುಂದೆ ಕೊಲೆಯ ಸಂಚು ರೂಪುಗೊಳ್ಳುತ್ತಾ ಹೋಯಿತು. ಫೆಲಿಕ್ಸ್‌ನ ಈ ಹುಚ್ಚಾಟಕ್ಕೆ ಬೆಂಬಲ ನೀಡಿದ ಮತ್ತೊಬ್ಬನೆಂದರೆ ಸಂತೋಷ್‌. ಅವನು ಕೂಡಾ ಜಿ-ನೆಟ್‌ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಫಣೀಂದ್ರ ಅವರ ಮೇಲೆ ಅವನಿಗೂ ಆಕ್ರೋಶವಿತ್ತು. ಈ ಕೊಲೆಗೆ ಅವನೊಬ್ಬನಿದ್ದರೆ ಸೂಕ್ತ ಎಂದು ಫೆಲಿಕ್ಸ್‌ ಯೋಚಿಸಿ ಕರೆಸಿಕೊಂಡ. ಹಾಗೆ ಬಂದು ಸೇರಿಕೊಂಡವನು ಸದಾ ಗಾಂಜಾ ನಶೆಯಲ್ಲೇ ಇರುವ, ಫೆಲಿಕ್ಸ್‌ ಸ್ನೇಹಿತ ವಿನಯ್‌ ರೆಡ್ಡಿ!

ಹೀಗೆ ಅವರು ಮೂವರೂ ಕೊಲೆ ಮಾಡಲು ನಿರ್ಧರಿಸಿದರು. ಹಾಗಂತ ಇವರೆಲ್ಲರೂ ತಮ್ಮ ಬಗ್ಗೆ ಅಪಪ್ರಚಾರ ಮಾಡುವವರು ಎನ್ನುವುದು ಫಣೀಂದ್ರ ಅವರಿಗೂ ಗೊತ್ತಿರುವಾಗ ಕಚೇರಿಯ ಒಳಗೆ ಹೋಗುವುದು ಹೇಗೆ ಎಂದು ಯೋಜಿಸಿದಾಗ ಅವರಿಗೆ ಒಂದು ಪ್ಲ್ಯಾನ್‌ ಹೊಳೆದಿತ್ತು. ಅದುವೇ ಕಚೇರಿ ಕೆಲಸದ ಪ್ಲ್ಯಾನ್‌.

ಹಂತಕರಾದ ಫೆಲಿಕ್ಸ್‌, ವಿನಯ್‌ ಮತ್ತು ಸಂತೋಷ್‌

ಈ ನಡುವೆ ಫೆಲಿಕ್ಸ್‌ ಫಣೀಂದ್ರ ಅವರಿಗೆ ಫೋನ್‌ ಮಾಡಿ ತಾನು ಜಿ-ನೆಟ್‌ ಬಿಡುತ್ತಿದ್ದೇನೆ. ನಿಮ್ಮ ಟೀಂ ಜತೆ ಸೇರಿಕೊಳ್ಳುತ್ತೇನೆ ಎಂದು ಹೇಳಿದ್ದ. ಅವನನ್ನು ಸೇರಿಸಿಕೊಳ್ಳುವ ವಿಚಾರದಲ್ಲಿ ಫಣೀಂದ್ರ ಅಭಿಪ್ರಾಯ ಏನಿತ್ತೋ ಗೊತ್ತಿಲ್ಲ. ಆದರೆ, ಕಚೇರಿಗೆ ಬರಬೇಡ ಎಂದು ಹೇಳುವುದು ಸಾಧ್ಯವಾಗಲಿಲ್ಲ ಅನಿಸುತ್ತದೆ. ಬಾ ಎಂದು ಕರೆದಿದ್ದಾನೆ.

ಅದರಂತೆ ಕೆಲಸ ಕೇಳುವ ನೆಪದಲ್ಲಿ ಮಂಗಳವಾರ ಸಂಜೆ 3.35ಕ್ಕೆ ಏರೋನಿಕ್ಸ್‌ ಕಚೇರಿಗೆ ಬಂದಿದ್ದಾನೆ. ನಂತರ ಅಲ್ಲಿ ನಡೆದದ್ದು ನರಮೇಧ. ಫೆಲಿಕ್ಸ್‌, ವಿನಯ್‌ ಮತ್ತು ಸಂತೋಷ್‌ ಕಚೇರಿ ಪ್ರವೇಶಿಸಿ ಫಣೀಂದ್ರ ಸುಬ್ರಹ್ಮಣ್ಯ ಜತೆ ಮಾತನಾಡಲು ತೊಡಗಿದರು. ಅದರ ನಡುವೆಯೇ ತಲವಾರು ಎತ್ತಿ ಹೊಡೆದೇ ಬಿಟ್ಟಿದ್ದರು. ಈ ನಡುವೆ ಅಲ್ಲೇ ಇದ್ದ ಸಿಇಒ ವಿನು ಕುಮಾರ್‌ ಇವರನ್ನು ತಡೆಯಲೆಂದು ಕುರ್ಚಿ ಮತ್ತಿತರ ವಸ್ತುಗಳನ್ನು ಎಸೆಯಲು ಆರಂಭಿಸಿದ್ದರು. ಹೀಗಾಗಿ ಫಣೀಂದ್ರ ಅವರನ್ನು ಕೊಲೆ ಮಾಡಲು ಹೋದ ದುಷ್ಟರು ವಿನು ಕುಮಾರ್‌ ಅವರನ್ನೂ ಕೊಲೆ ಮಾಡಿಯೇ ಬಿಟ್ಟರು. ತಲವಾರನ್ನು ಝಳಪಿಸುತ್ತಲೆ ಕಚೇರಿಯಿಂದ ಹೊರಬಿದ್ದ ಕಿರಾತಕರು ಅಲ್ಲಿಂದ ಮೆಜೆಸ್ಟಿಕ್‌ಗೆ ಬಂದು ಕುಣಿಗಲ್‌ಗೆ ಹೋಗಿ ಆರಾಮದಲ್ಲಿದ್ದರು!

ಮರುದಿನ ಕೋರ್ಟ್‌ಗೆ ಸರಂಡರ್‌ ಆಗುವ ಪ್ಲ್ಯಾನ್‌ ಇತ್ತು!

ಈ ಹಂತಕರು ಎಷ್ಟೊಂದು ಖತರ್ನಾಕ್‌ ಆಗಿದ್ದರೆಂದರೆ ಪೊಲೀಸರು ತಮ್ಮನ್ನು ಬೆನ್ನಟ್ಟಲು ಸಾಧ್ಯವೇ ಇಲ್ಲ ಎಂದು ಅವರು ತಿಳಿದಿದ್ದರು. ಹೀಗಾಗಿ ಅವರು ರಾತ್ರಿ ಕುಣಿಗಲ್‌ನಲ್ಲಿ ವಿಶ್ರಾಂತಿ ಪಡೆದು ಬೆಳಗ್ಗೆ ಬಂದು ಕೋರ್ಟ್‌ಗೆ ಶರಣಾಗುವ ಪ್ಲ್ಯಾನ್‌ ಮಾಡಿದ್ದರು. ಅದರ ಜತೆಗೆ ಜಾಮೀನಿಗೂ ಸಿದ್ಧತೆ ನಡೆದಿತ್ತು. ಇದೆಲ್ಲವನ್ನೂ ಮೊದಲೇ ಪ್ಲ್ಯಾನ್‌ ಮಾಡಿದ್ದವನು ಅರುಣ್‌ ಕುಮಾರ್‌ ಆಜಾದ್‌! ಅವನು ಇದಕ್ಕಾಗಿ ವಕೀಲರನ್ನು ಗೊತ್ತು ಮಾಡಿದ್ದ.

ಹಾಗಿದ್ದರೆ ಪೊಲೀಸರು ಬಂದು ಹಿಡಿದುಬಿಟ್ಟರೆ ಏನು ಮಾಡುವುದು?

ಇಡೀ ರಾತ್ರಿ ಪೊಲೀಸರಿಗೆ ತಮ್ಮ ಠಾವು ಗೊತ್ತಾಗದೆ ಇದ್ದರೆ ಕೋರ್ಟ್‌ಗೆ ಹೋಗಿ ಶರಣಾಗತರಾಗಿ ಜಾಮೀನು ಪಡೆಯಲು ಯತ್ನಿಸುವುದು ಒಂದು ಭಾಗ. ಆದರೆ, ಒಂದು ವೇಳೆ ಮೊದಲೇ ಸಿಕ್ಕಿಬಿದ್ದರೆ? ಅರುಣ್‌ ಕುಮಾರ್‌ ಮತ್ತು ಫೆಲಿಕ್ಸ್‌ ಅದಕ್ಕೂ ಒಂದು ದಿಕ್ಕು ತಪ್ಪಿಸುವ ತಂತ್ರವನ್ನು ಸಿದ್ಧಪಡಿಸಿದ್ದರು. ಅದುವೇ ಹೆಣ್ಣಿನ ಮಾಯಾಜಾಲ!

ಇದನ್ನೂ ಓದಿ : Bangalore Double Murder : ಫಣೀಂದ್ರ ಸುಬ್ರಹ್ಮಣ್ಯ ಕೊಲೆ ಹಿಂದೆ ಹೆಣ್ಣಿನ ನೆರಳು? ಯಾರವಳು?

ಕೊಲೆಯ ಹಿಂದೆ ಹೆಣ್ಣಿನ ಕರಿನೆರಳು ಎಂಬ ಕಥೆ ಹುಟ್ಟಲು ಇದುವೇ ಕಾರಣ!

ಬುಧವಾರ ಬೆಳಗ್ಗೆ ಫಣೀಂದ್ರ ಸುಬ್ರಹ್ಮಣ್ಯ ಕೊಲೆಯ ಹಿಂದೆ ಹೆಣ್ಣಿನ ಕರಿನೆರಳು ಇದೆ ಎಂಬ ಸುದ್ದಿಯೊಂದು ಹರಿದಾಡಿತ್ತು. ತಾನೇಕೆ ಕೊಲೆ ಮಾಡಿದೆ ಎಂದು ಫೆಲಿಕ್ಸ್‌ ಪೊಲೀಸರಿಗೆ ಹೇಳಿದ ಸ್ಟೋರಿಯೇ ಇದರು. ಈ ಹೆಣ್ಣಿನ ಕಥೆ ಯಾಕೆಂದರೆ, ಯಾರೇ ಆದರೂ ಯಾವುದೇ ಅಪರಾಧದ ಹಿಂದೆ ಒಂದು ಹೆಣ್ಣಿನ ಲಿಂಕ್‌ ಸಿಕ್ಕಿಬಿಟ್ಟರೆ ಅದೇ ಇರಬಹುದು ಎಂಬ ದೃಢ ನಿರ್ಧಾರಕ್ಕೆ ಬರುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಮೊದಲೇ ಹೆಣ್ಣಿನ ಲಿಂಕ್‌ ಸಿಕ್ಕಿಬಿಟ್ಟರೆ ತನಿಖೆ ಮುಂದೆ ಸಾಗುವುದಿಲ್ಲ ಎನ್ನುವ ಯೋಚನೆ ಅವರದಾಗಿತ್ತು. ಅದರಲ್ಲೂ ಮುಖ್ಯವಾಗಿ ಈ ಯೋಚನೆ ಮಾಡಿದ್ದು ಜಿ-ನೆಟ್‌ ಬ್ರಾಡ್‌ ಬ್ಯಾಂಡ್‌ ಮಾಲೀಕ ಅರುಣ್‌ ಕುಮಾರ್!‌

ಫೆಲಿಕ್ಸ್‌ ಪೊಲೀಸರ ಮುಂದೆ ಹೇಳಿದ ಕಥೆಯ ಪ್ರಕಾರ, ತಾನು ಜಿ ನೆಟ್ ಕಂಪನಿಯ ಒಬ್ಬ ಹುಡುಗಿ ಜೊತೆ ಸಲುಗೆಯಿಂದಿದ್ದೆ. ಅದೇ ಹುಡುಗಿಯ ಜತೆಗೆ ಫಣೀಂದ್ರ ಅವರು ಕೂಡಾ ಸಲುಗೆ ಹೊಂದಿದ್ದರು. ನಮ್ಮ ಮಧ್ಯೆ ಈ ಹಿಂದೆ ಹಲವು ಬಾರಿ ವಿಚಾರದಲ್ಲಿ ಜಗಳ ಆಗಿತ್ತು. ʻʻನಮ್ಮ ಹುಡುಗಿ ವಿಚಾರಕ್ಕೆ ಬಂದ್ರೆ ನಿನ್ನ ಮುಗಿಸಿಬಿಡ್ತೀನಿʼʼ ಅಂತ ಆವಾಜ್ ಕೂಡಾ ಹಾಕಿದ್ದೆ. ಆದರೆ, ಫಣೀಂದ್ರ ಮತ್ತೆ ಮತ್ತೆ ಅವಳ ಹಿಂದೆಯೇ ಸುತ್ತುತ್ತಿದ್ದಾರೆ. ಇದರಿಂದ ಅವರ ಸಂಸಾರದಲ್ಲೂ ಬಿರುಕು ಬಿಟ್ಟಿದೆ. ನನ್ನ ಹುಡುಗಿಯ ಜತೆ ಸರಸವಾಡಲು ಬಂದಿದ್ದಕ್ಕೆ ನಾನು ಅವರನ್ನು ಮುಗಿಸಿದ್ದೇನೆ ಎಂದು ಹೇಳಿದ್ದ ಫೆಲಿಕ್ಸ್‌. ಹೀಗಾಗಿ ಈ ವಿಚಾರದಲ್ಲಿ ಏನಾದರೂ ಸತ್ಯ ಇರಬಹುದಾ ಎನ್ನುವ ಬಗ್ಗೆ ಅಮೃತಹಳ್ಳಿ ಪೊಲೀಸರು ತನಿಖೆ ನಡೆಸಿದರು. ಆದರೆ, ಆ ಹುಡುಗಿ ವಿಚಾರದಲ್ಲಿ ಇಂಥ ದೊಡ್ಡ ಘಟನೆಗಳು ನಡೆದೇ ಇಲ್ಲ ಎನ್ನುವುದು ತಿಳಿಯುತ್ತಿದ್ದಂತೆಯೇ ಅವರ ಕಣ್ಣು ಮತ್ತೆ ಅರುಣ್‌ ಕುಮಾರ್‌ನತ್ತಲೇ ತಿರುಗಿತು.

ಅಂತಿಮವಾಗಿ ಈಗ ಅರುಣ್‌ ಕುಮಾರ್‌ ಆಜಾದ್‌ ಈಗ ಈ ಕೊಲೆ ಪ್ರಕರಣದ ನಾಲ್ಕನೇ ಆರೋಪಿಯಾಗಿ, ಪ್ರಧಾನ ಸಂಚುಕೋರನಾಗಿ ನಿಂತಿದ್ದಾನೆ. ತನ್ನೊಂದಿಗೆ ಇದ್ದವರು ತನಗಿಂತ ಎತ್ತರಕ್ಕೆ ಬೆಳೆಯುತ್ತಿರುವುದನ್ನು ಸಹಿಸಲಾಗದೆ ಮಾಡಿದ ಈ ಕೊಲೆಯ ತನಿಖೆ ಈಗ ಒಂದು ಹಂತಕ್ಕೆ ಬಂದು ತಲುಪಿದೆ. ನಾಲ್ವರೂ ಈಗ ಕಂಬಿ ಎಣಿಸುತ್ತಿದ್ದಾರೆ. ಇತ್ತ ಫಣೀಂದ್ರ ಸುಬ್ರಹ್ಮಣ್ಯ ಮತ್ತು ವಿನುಕುಮಾರ್‌ ಅವರ ಮನೆ ದೀಪವಾರಿದೆ. ಫೆಲಿಕ್ಸ್‌, ವಿನಯ ರೆಡ್ಡಿ ಮತ್ತು ಸಂತೋಷನ ಮನೆಯಲ್ಲೂ ನೆಮ್ಮದಿ ಕಳೆದುಹೋಗಿದೆ. ಅರುಣ್‌ ಕುಮಾರ್‌ ಆಜಾದ್‌ನ ದ್ವೇಷದ ಬೆಂಕಿ ಅವರ ಮನೆಯನ್ನೂ ಸುಡುತ್ತಲಿದೆ.

Exit mobile version