Site icon Vistara News

Bangalore horror : 19ರ ಯುವತಿಯನ್ನು ಎಳೆದೊಯ್ದು ಚಲಿಸುವ ಕಾರಿನಲ್ಲೇ ನಾಲ್ಕು ಗಂಟೆ ಕಾಲ ನಿರಂತರ ಅತ್ಯಾಚಾರ

harrassment

#image_title

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಯ ಹುಟ್ಟಿಸುವ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದು (Bangalore horror) ನಡೆದಿದೆ. 19 ವರ್ಷದ ಯುವತಿಯೊಬ್ಬಳನ್ನು ಅಪಹರಿಸಿದ ನಾಲ್ವರು ಯುವಕರು ಚಲಿಸುವ ಕಾರಿನಲ್ಲಿ ಆಕೆಯ ಮೇಲೆ ನಾಲ್ಕು ಗಂಟೆಗಳ ಹೊತ್ತು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ತನ್ನ ಗೆಳೆಯನ ಜತೆ ಪಾರ್ಕ್‌ನಲ್ಲಿ ಕುಳಿತಿದ್ದ ಯುವತಿಯನ್ನು ಎಳೆದುಕೊಂಡು ಹೋದ ಈ ದುಷ್ಟರು ಕಾರಿನೊಳಗೆ ಕೂಡಿ ಹಾಕಿ ರಾತ್ರಿ ಇಡೀ ಸುತ್ತಾಡಿಸಿ ದೌರ್ಜನ್ಯ ನಡೆಸಿ ರಾತ್ರಿ 3.30ರ ಹೊತ್ತಿಗೆ ರಸ್ತೆಯಲ್ಲಿ ಬಿಟ್ಟುಹೋಗಿದ್ದಾರೆ.

ಈ ಘಟನೆ ನಡೆದಿರುವುದು ಮಾರ್ಚ್‌ 25ರಂದು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಯುವತಿ ಆವತ್ತು ರಾತ್ರಿ 9.30ರ ಹೊತ್ತಿಗೆ ಕೋರಮಂಗಲದ ನ್ಯಾಷನಲ್‌ ಗೇಮ್ಸ್‌ ವಿಲೇಜ್‌ ಪಾರ್ಕ್‌ನಲ್ಲಿ ತನ್ನ ಗೆಳೆಯನ ಜತೆ ಕುಳಿತಿದ್ದರು. ಆಗ ಅಲ್ಲಿಗೆ ಬಂದ ಯುವಕನೊಬ್ಬ ಅವರಿಬ್ಬರ ಬಗ್ಗೆ ಆಕ್ಷೇಪ ಎತ್ತಿದ್ದಾನೆ. ಅದಕ್ಕೆ ಈ ಯವಕ ಮತ್ತು ಯುವತಿ ತೀವ್ರ ತಿರುಗೇಟು ನೀಡಿದ್ದರು. ಆಗ ಯುವಕ ಅಲ್ಲಿಂದ ತೆರಳಿದ್ದ. ಅಷ್ಟು ಹೊತ್ತಿಗೆ ಯುವತಿ ಜತೆಗಿದ್ದ ಯುವಕನೂ ತನ್ನ ಮನೆಗೆ ತೆರಳಿದ್ದ. ರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ಹಿಂದೆ ಜಗಳ ಮಾಡಿ ಹೋಗಿದ್ದ ಯುವಕ ಮರಳಿ ಬಂದಿದ್ದ. ಆಗ ಅವನ ಜತೆಗೆ ಇನ್ನೂ ಇಬ್ಬರು ಯುವಕರಿದ್ದರು. ಮೂವರು ಸೇರಿ ಯುವತಿಯ ಜತೆಗೆ ಜಗಳಕ್ಕಿಳಿದಿದ್ದರು. ಅಷ್ಟು ಹೊತ್ತಿಗೆ ನಾಲ್ಕನೇ ಯುವಕ ಕಾರಿನಲ್ಲಿ ಬಂದಿದ್ದ. ಮೂವರು ಯುವಕರು ಯುವತಿಯನ್ನು ಎತ್ತಿಕೊಂಡು ಹೋಗಿ ಕಾರಿಗೆ ಹಾಕಿದ್ದಾರೆ.

ಅಲ್ಲಿಂದ ಕಾರು ಹೊಸೂರು ರೋಡ್‌ ಮತ್ತು ನೈಸ್‌ ರೋಡ್‌ ಕಡೆಗೆ ಓಡಿದೆ. ಹೀಗಿ ಚಲಿಸುತ್ತಿದ್ದ ಕಾರಿನಲ್ಲೇ ಒಬ್ಬರಾದ ಮೇಲೊಬ್ಬರಂತೆ ನಾಲ್ವರು ಯುವಕರು ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾರೆ. ರಾತ್ರಿ ಇಡೀ ಮೃಗಗಳಂತೆ ಆಕೆಯ ಮೇಲೆ ಎರಗಿದ ದುಷ್ಟರು ಬೆಳಗ್ಗೆ 3.30ರ ಹೊತ್ತಿಗೆ ಆಕೆಯನ್ನು ಈಜಿಪುರದ ಬಳಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ.

ಹೇಗೋ ಮನೆಯನ್ನು ತಲುಪಿದ ಯುವತಿಯನ್ನು ಆಕೆಯ ತಾಯಿ ಮತ್ತು ಗೆಳೆಯರು ಸೇರಿ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಆಕೆ ಕೋರಮಂಗಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕೆಎ 01 ಎಂಬಿ 6169 ನಂಬರ್‌ನ ಮಾರುತಿ ಸುಜುಕಿ 800 ಕಾರು ನಡೆದಿರುವ ಭೀಕರ ಘಟನೆಗೆ ಸಾಕ್ಷಿಯಾಗಿದೆ. ಹರಿದಿರುವ ಕಾರಿನ ಸೀಟ್‌ಗಳು ಅತ್ಯಾಚಾರದ ಭಯಾನಕತೆ ಬಿಚ್ಚಿಡುತ್ತಿವೆ.

ಯಾರಿವರು ದುಷ್ಟರು?

ನಿಜವೆಂದರೆ, ಯುವತಿಯ ಮನೆಯ ಪರಿಸರದ ಯುವಕರೇ ಈ ಕೃತ್ಯವನ್ನು ನಡೆಸಿದವರು. ಸತೀಶ್‌, ವಿಜಯ್‌, ಶ್ರೀಧರ್‌ ಮತ್ತು ಕಿರಣ್‌ ಎಂಬ 22ರಿಂದ 26 ವರ್ಷದ ಯುವಕರು ಇವರಾಗಿದ್ದಾರೆ. ಈಜಿಪುರ ಮತ್ತು ಪರಿಸರದದವರಾದ ಇವರಿಗೆ ಹುಡುಗಿಯ ಗೆಳೆಯನ ಪರಿಚಯವೂ ಇದೆ ಎನ್ನಲಾಗಿದೆ. ಒಂದು ಹಂತದಲ್ಲಿ ಯುವಕನೂ ಇದರಲ್ಲಿ ಶಾಮೀಲಾಗಿರಬಹುದೇ ಎಂಬ ಸಂಶಯ ಬಂದಿತ್ತಾದರೂ ಪೊಲೀಸರು ವಿಚಾರಣೆಯ ಬಳಿಕ ಅದನ್ನು ತಳ್ಳಿ ಹಾಕಿದರು.

ಇದನ್ನೂ ಓದಿ : Pocso case : ನಿವೃತ್ತಿ ಹೊತ್ತಲ್ಲಿ ಪ್ರಿನ್ಸಿಪಾಲ್‌ ಕಾಮ ಪುರಾಣ, 10ನೇ ಕ್ಲಾಸ್‌ ವಿದ್ಯಾರ್ಥಿನಿಗೆ ಮೆಸೇಜ್‌, ವಿಡಿಯೊ ಕಾಲ್‌ ಕಿರುಕುಳ!

Exit mobile version