ಉಡುಪಿ: ಇನ್ನೂ ಅನೇಕ ವರ್ಷ ಬಾಳಿ ಬದುಕಬೇಕಿದ್ದ ಪ್ರೇಮಿಗಳು ನೂರಾರು ಕಿಲೋಮೀಟರ್ ದೂರಕ್ಕೆ ಸಾಗಿ ನಿರ್ಜನ ಪ್ರದೇಶದಲ್ಲಿ ಜೀವನ ಮುಕ್ತಾಯಗೊಳಿಸಿದ ಘಟನೆ ಇದು. ಭಾನುವಾರ ಬೆಳಗಿನ ಜಾವ ಉಡುಪಿಯ ಮಂದಾರ್ತಿ ಬಳಿ ಕಾರಿನಲ್ಲಿ ಸುಟ್ಟು ಕರಕಲಾದ ಯಶವಂತ ಯಾದವ್ ಹಾಗೂ ಜ್ಯೋತಿ ಪ್ರಕರಣಕ್ಕೆ ಜಾತಿಯೇ ಮುಖ್ಯ ಕಾರಣ ಎನ್ನುವುದು ಇಲ್ಲಿವರೆಗಿನ ಮಾಹಿದೆ. ಇಷ್ಟೆ ಅಲ್ಲದೆ, ಮೇಲ್ನೋಟಕ್ಕೆ ಆತ್ಮಹತ್ಯೆ ಎಂದೇ ಕಾಣುವ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಮಂದಾರ್ತಿ ಸಮೀಪ ಹೆಗ್ಗುಂಜೆ ಬಳಿಯಲ್ಲಿ ಒಂದು ಕಾರು ಧಗಧಗನೆ ಉರಿಯುತ್ತಿರುವುದನ್ನು ಭಾನುವಾರ ಬೆಳಗ್ಗೆ ಸ್ಥಳೀಯರು ಗಮನಿಸಿದ್ದರು. ಪೊಲೀಸರು ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸುವಷ್ಟರಲ್ಲಿ 23 ವರ್ಷದ ಇಬ್ಬರ ದೇಹಗಳೂ ಸುಟ್ಟುಕರಕಲಾಗಿದ್ದವು. ಯಶವಂತ ಯಾದವ್ ಮರಾಠ ಸಮುದಾಯಕ್ಕೆ ಸೇರಿದ್ದು, ಜ್ಯೋತಿ ಪರಿಶಿಷ್ಟ ಜಾತಿ ಎನ್ನಲಾಗಿದೆ. ಹುಡುಗನ ಮನೆಯವರಿಗೆ ಈ ಮದುವೆ ಇಷ್ಟವಿರದ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ಮನೆಯಿಂದ ಓಡಿಹೋಗಿ ಜೀವನ ಮಾಡುವ ನಿರ್ಧಾರ ಮಾಡಿದ್ದರು. ಆದರೂ ಅಂತಿಮವಾಗಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾದರೂ ಏಕೆ ಎಂಬ ಅನೇಕ ಪ್ರಶ್ನೆಗಳಿವೆ.
ಇದನ್ನೂ ಓದಿ | Udupi Suicide | ‘ಕೆಟ್ಟ ನಿರ್ಧಾರ ತೆದುಕೊಂಡಿದ್ದೇವೆ’ ಎಂದಿದ್ದೇ ಪ್ರೇಮಿಗಳ ಕೊನೆ ಮೆಸೇಜ್
ಯಶವಂತ್ ಯಾದವ್ ಮತ್ತು ಜ್ಯೋತಿ ಅಂತ್ಯಸಂಸ್ಕಾರ(funeral) ನಗರದ ಇಂದ್ರಾಳಿಯ ಸ್ಮಶಾನದಲ್ಲಿ ಸೋಮವಾರ ನೆರವೇರಿಸಲಾಗಿದೆ. ಬದುಕಿದ್ದಾಗ ಇಬ್ಬರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದ ಎರಡೂ ಕುಟುಂಬಗಳು ಸತ್ತ ಮೇಲೆ ಅಂತ್ಯಸಂಸ್ಕಾರವನ್ನು ಒಟ್ಟಾಗಿ ಮಾಡಿದ್ದಾರೆ. ಇವರ ಮದುವೆಗೆ ಮೊದಲೇ ಪಾಲಕರ ಒಪ್ಪಿಗೆ ಸಿಕ್ಕಿದ್ದಿದ್ದರೆ ಯುವ ಜೋಡಿಯ ಪ್ರಾಣ ಉಳಿಯುತ್ತಿತ್ತು ಎಂಬ ಮಾತು ಸಾರ್ವಜನಿಕವಲಯದಲ್ಲಿ ಕೇಳಿಬರುತ್ತಿದೆ.
ಕೊಲೆ ಶಂಕೆ?
ಪ್ರಕರಣದ ಕುರಿತು ಉಡುಪಿ ಎಎಸ್‌ಪಿ ಸಿದ್ದಲಿಂಗಪ್ಪ ಸುದ್ದಿಗೋಷ್ಠಿಯಲ್ಲಿ ಅನೇಕ ಮಾಹಿತಿಗಳನ್ನು ನೀಡಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಈ ಪ್ರಕರಣ ಕಂಡುಬಂದಿದೆ. ಇದೇ ಕಾರಣಕ್ಕೆ ಅಸಹಜ ಸಾವು (UDR) ಎಂದು ದಾಖಲಿಸಿಕೊಳ್ಳಲಾಗಿದೆ. ಆದರೂ ಪ್ರಕರಣದಲ್ಲಿ ಅನೇಕ ಅನುಮಾನಗಳಿವೆ. ಕೊಲೆಯಾಗಿರಬಹುದೆ ಎಂಬ ಕೋನದಲ್ಲೂ ತನಿಖೆ ನಡೆಸಲಾಗುತ್ತದೆ. ಈ ಬಗ್ಗೆ ಮೃತರ ಪಾಲಕರಿಗೆ ಅನುಮಾನ ಇತ್ತು, ಆದರೆ ವೀಡಿಯೋ ಸಾಕ್ಷ್ಯ ನೋಡಿದ ಮೇಲೆ ಅಂತ್ಯಸಂಸ್ಕಾರ ನಡೆಸಲಾಯಿತು. ಟ್ರಾವೆಲ್ಸ್‌ನವರು ಕಾರನ್ನು ಬಾಡಿಗೆಗೆ ನೀಡುವಾಗ ವಿಡಿಯೋ ಮಾಡಿಕೊಂಡಿದ್ದಾರೆ. ಇಬ್ಬರೂ ಕಾರಿಗೆ ಹತ್ತುತ್ತಿರುವುದು ದಾಖಲಾಗಿದೆ ಹಾಗಾಗಿ ಕುಟುಂಬದವರು ಯಾವುದೇ ಅನುಮಾನಗಳಿಲ್ಲ ಎಂದು ತೆರಳಿದ್ದಾರೆ.
ಮಂಗಳೂರಿನ ಬಾಡಿಗೆ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಯುವಕ ಸಾಯುವ ಮುನ್ನ ಸಹೋದರನಿಗೆ ಮೆಸೇಜ್ ಕಳುಹಿಸಿದ್ದು, ನಾನು ನಿಮ್ಮ ಬಿಟ್ಟು ಬದುಕಲು ಸಾಧ್ಯವಾಗುತ್ತಿಲ್ಲ, ಕೆಟ್ಟ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಕ್ಷಮಿಸಿ ಎಂದು ತಿಳಿಸಿದ್ದ. ಯಶವಂತ್ ಯಾದವ್ ಮರಾಠ ಸಮುದಾಯದ ಯುವಕ, ಯುವತಿ ಜ್ಯೋತಿ ಪರಿಶಿಷ್ಟ ಜಾತಿಯಾಗಿದ್ದರಿಂದ ಈ ಕಾರಣಕ್ಕಾಗಿ ಅವರಿಬ್ಬರ ಮದುವೆಗೆ ತೊಂದರೆ ಇದ್ದಿರಬಹುದು. ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದದ್ದು ಎರಡೂ ಕುಟುಂಬಗಳಿಗೆ ಗೊತ್ತಿತ್ತು. ಇವರಿಬ್ಬರಿಗೂ ಮದುವೆಯಾಗಿರಲಿಲ್ಲ, ಆದರೆ ಬಾಡಿಗೆ ಮನೆ ಮತ್ತು ಬಾಡಿಗೆ ಕಾರು ಪಡೆದುಕೊಳ್ಳುವಾಗ ತಾವಿಬ್ಬರು ಗಂಡ-ಹೆಂಡತಿ ಎಂಬ ಮಾಹಿತಿ ನೀಡಿದ್ದಾರೆ.
ಈ ಪ್ರೇಮಿಗಳ ವಿವಾಹಕ್ಕೆ ಕುಟುಂಬಸ್ಥರು ಒಪ್ಪದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಎರಡು ಕುಟುಂಬಗಳಿಂದ ಹೆಬ್ಬಾಳ ಮತ್ತು ಆರ್‌ಟಿ ನಗರದಲಿ ಪ್ರತ್ಯೇಕ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದ ಇಬ್ಬರೂ, ಬಾಡಿಗೆ ಕಾರು ಪಡೆದುಕೊಂಡು ಉಡುಪಿಗೆ ಬಂದಿದ್ದರು.
ಪೊಲೀಸರ ಸ್ಥಳ ಪರಿಶೀಲನೆ ನಂತರ ಮಣಿಪಾಲದ ಕೆಂಎಂಸಿ ಆಸ್ಪತ್ರಯಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆದಿದೆ. ಮೃತದೇಹಗಳು ಸುಟ್ಟುಕರಕಲಾಗಿದ್ದ ಬೆಂಗಳೂರಿಗೆ ಸಾಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದ್ರಾಳಿಯ ಸ್ಮಶಾನದಲ್ಲಿ ಮೃತರ ಕುಂಟುಂಬಸ್ಥರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಮನೆಯನ್ನು ಬಾಡಿಗೆ ಪಡೆದಿರುವುದೇಕೆ? ಸಹೋದರನಿಗೆ ಯಶವಂತ್ ಮೊಬೈಲ್‌ನಿಂದ ಸಂದೇಶ ಹೋಗಿರುವುದು ನಿಜವಾದರೂ ಅದನ್ನೂ ಅವನೇ ಮಾಡಿದ್ದಾನೆಯೇ ಅಥವಾ ಬೇರೆಯವರು ಮಾಡಿದ್ದಾರೆಯೇ ನೋಡಬೇಕು. ಘಟನೆ ನಡೆದಿರುವ ರಸ್ತೆ ಸ್ವಲ್ಪ ದೂರದಲ್ಲಿಯೇ ಮುಕ್ತಾಯವಾಗುತ್ತದೆ. ಅಲ್ಲಿಂದ ಮುಂದಕ್ಕೆ ಕಾಡು ದಾರಿಯಿದೆ. ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತೂ ಅನುಮಾನವಿದೆ. ಈ ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುತ್ತದೆ ಎಂದು ಸಿದ್ದಲಿಂಗಪ್ಪ ಹೇಳಿದ್ದಾರೆ.
ಇದನ್ನೂ ಓದಿ | ಉಡುಪಿಯಲ್ಲಿ ಪೊಲೀಸ್ ಆತ್ಮಹತ್ಯೆ: ಗುಂಡಿಕ್ಕಿಕೊಂಡ ಕಾನ್ಸ್‌ಟೇಬಲ್