Site icon Vistara News

Bangalore Mysore Expressway : ಬೆಂಗಳೂರು ರಸ್ತೆಯಿಂದ ಮೈಸೂರು ರಸ್ತೆಗೆ ಹಾರಿ ಗದ್ದೆಗೆ ನುಗ್ಗಿದ ಬಸ್‌!

Bangalore Mysore Expressway Accident

ರಾಮನಗರ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ (Bangalore Mysore Expressway) ಅಪಘಾತಗಳು ಸಂಭವಿಸುತ್ತಲೇ ಇವೆ. ಇದರಿಂದಾಗಿ ಸಾಕಷ್ಟು ಸಾವು-ನೋವುಗಳು ಆಗುತ್ತಿವೆ. ಅಲ್ಲದೆ, ಮಂಗಳವಾರವಷ್ಟೇ ಎಡಿಜಿಪಿ ಅಲೋಕ್‌ ಕುಮಾರ್‌ ನೇತೃತ್ವದ ಹಿರಿಯ ಪೊಲೀಸ್‌ ಅಧಿಕಾರಿಗಳ ತಂಡವು ಭೇಟಿ ನೀಡಿ ಹೆದ್ದಾರಿ ಪ್ರಾಧಿಕಾರಕ್ಕೆ ಕೆಲವು ಸೂಚನೆಗಳನ್ನು ನೀಡಿತ್ತು. ಈಗ ಮತ್ತೊಂದು ಭೀಕರ ಅಪಘಾತ (Road Accident) ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ಹಾಗೂ ಬೊಲೆರೊ ನಡುವೆ ಅಪಘಾತವಾಗಿದೆ. ಇದರ ಭೀಕರತೆ ಎಷ್ಟಿತ್ತೆಂದರೆ, ಬೊಲೆರೊಕ್ಕೆ ಡಿಕ್ಕಿ ಹೊಡೆದ ಬಸ್‌ ಪಕ್ಕದ ರಸ್ತೆ ದಾಟಿ ಗದ್ದೆಗೆ ನುಗ್ಗಿದೆ! ಸ್ಥಳದಲ್ಲೇ ಬಸ್ ನಿರ್ವಾಹಕ ಮೃತಪಟ್ಟಿದ್ದು, ಚಾಲಕ ಸೇರಿ‌ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ.‌

ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿಯ ಪವರ್‌ ಪ್ಲಸ್‌ ಬಸ್‌ ಇದಾಗಿದೆ. ಈ ವೇಳೆ ಅತಿಯಾದ ವೇಗವಿದ್ದರಿಂದ ಬೊಲೆರೊಗೆ ಡಿಕ್ಕಿ ಹೊಡೆಯುತ್ತಿದ್ದಂತೆ ವಿರುದ್ಧ ಮುಖದ ರಸ್ತೆಗೆ ಅಂದರೆ, ಮೈಸೂರು ಕಡೆಗೆ ಹೋಗುವ ರಸ್ತೆಗೆ ನುಗ್ಗಿದೆ. ಅಲ್ಲಿಂದ ಸೀದಾ ಪಕ್ಕದ ಗದ್ದೆಯನ್ನು ದಾಟಿದೆ.

ಇದನ್ನೂ ಓದಿ: ZP TP Elections: 10 ವಾರದೊಳಗೆ ಜಿಪಂ, ತಾಪಂ ಮೀಸಲಾತಿ ಫೈನಲ್: ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಚಾಲಕ ಸೇರಿ‌ ಗಾಯಗೊಂಡ 15ಕ್ಕೂ ಹೆಚ್ಚು ಪ್ರಯಾಣಿಕರನ್ನು ರಾಮನಗರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ರಾಮನಗರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪಘಾತಕ್ಕೊಳಗಾಗಿ ಪಲ್ಟಿಯಾಗಿರುವ ಬುಲೆರೊ ವಾಹನ

ಅಪಘಾತ ಕಂಟ್ರೋಲ್‌ ಆಗಲಿದೆಯೇ?

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಅಪಘಾತಗಳು ನಿಯಂತ್ರಣಕ್ಕೆ ಬರಲಿವೆಯೇ? ಎಂಬ ಪ್ರಶ್ನೆ ಸದ್ಯ ತಲೆದೋರಿದೆ. ಆದರೆ, ಎಡಿಜಿಪಿ ಅಲೋಕ್ ಕುಮಾರ್ ಅವರು ಈ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ಒಟ್ಟಾರೆಯಾಗಿ ಕನಿಷ್ಠ ಶೇ.25 ರಷ್ಟು ಅಪಘಾತ ಕಡಿಮೆ ಮಾಡುವ ಗುರಿಯನ್ನು ಹೊಂದಿರುವುದಾಗಿ ಮಂಗಳವಾರ ಹೇಳಿದ್ದಾರೆ.

ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಮಂಗಳವಾರ (ಜೂನ್‌ 27) ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಪರಿಶೀಲನೆ ನಡೆಸಲಾಯಿತು. ಬಳಿಕ ಮಾತನಾಡಿದ ಅವರು, ನಾನು ಈ ರಸ್ತೆಯಲ್ಲಿ ಬಹಳ ಭಾರಿ ಸಂಚರಿಸಿದ್ದೇನೆ. ಕಳೆದ ಐದಾರು ತಿಂಗಳಿನಿಂದ 58ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅಪಘಾತಗಳೂ ಹೆಚ್ಚಾಗಿವೆ. ಮಂಡ್ಯ ಸೇರಿದಂತೆ ಎಲ್ಲೆಲ್ಲಿ ಅಪಘಾತಗಳು ನಡೆದಿವೆಯೋ? ಆ ಎಲ್ಲ ಕಡೆಗಳಲ್ಲಿ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದ್ದೇವೆ ಎಂದು ತಿಳಿಸಿದ್ದರು.

ಈ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಆಗಮನ – ನಿರ್ಗಮನ ಪ್ರವೇಶದ್ವಾರ ಸಮಸ್ಯೆ ಇದೆ. ರಸ್ತೆ ಸಹ ಸಮರ್ಪಕವಾಗಿಲ್ಲ. ಇದು ಅಂಕುಡೊಂಕಾಗಿದೆ. ಇದರಿಂದ ವೇಗವಾಗಿ ವಾಹನಗಳು ಡಿವೈಡರ್‌ಗೆ ಡಿಕ್ಕಿ ಹೊಡೆಯುತ್ತಿವೆ. ಇದಕ್ಕಾಗಿ ನಾವು ಲೇನ್ ಡಿಸಿಪ್ಲಿನ್ ಅನ್ನು ಬಳಸಬೇಕು ಎಂದು ಅಲೋಕ್‌ ಕುಮಾರ್‌ ಹೇಳಿದ್ದರು.

ಸ್ಪೀಡ್‌ ರಾಡಾರ್‌ ಅಳವಡಿಸುತ್ತೇವೆ

ಈಗ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ನಾವು ನಾಲ್ಕು ಹೈವೇ ಪೆಟ್ರೊಲಿಂಗ್‌ ವ್ಯವಸ್ಥೆ ಮಾಡಿದ್ದೇವೆ. ಇನ್ನು ವೇಗದ ಮಿತಿಯನ್ನು ಕಡಿಮೆ ಮಾಡಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಹೈ ಸ್ಪೀಡ್‌ ಲಿಮಿಟ್ ತರಲು ಚಿಂತನೆ ನಡೆಸಿದ್ದು, ಸ್ಪೀಡ್ ರಾಡಾರ್ ಅನ್ನು ಅಳವಡಿಕೆ ಮಾಡುತ್ತೇವೆ. ಮೊಬೈಲ್ ಬಳಕೆ, ಡ್ರಂಕ್ ಆ್ಯಂಡ್ ಡ್ರೈವ್ ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ. ಲೈಸೆನ್ಸ್ ರದ್ದುಗೊಳಿಸುವ ಕೆಲಸ ಮಾಡುತ್ತೇವೆ ಎಂದು ಅಲೋಕ್‌ ಕುಮಾರ್‌ ಎಚ್ಚರಿಕೆ ನೀಡಿದ್ದರು.

ಒಟ್ಟಾರೆಯಾಗಿ ಕನಿಷ್ಠ ಶೇ.25 ರಷ್ಟು ಅಪಘಾತ ಕಡಿಮೆ ಮಾಡುವ ಗುರಿ ಇದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರಕ್ಕೆ ಸಲಹೆ, ಸೂಚನೆ ನೀಡಿದ್ದೇವೆ. ಇಲ್ಲಿ ಸಾರ್ವಜನಿಕರ ಜವಾಬ್ದಾರಿಯೂ ಮುಖ್ಯವಾಗುತ್ತದೆ. ಅಮೂಲ್ಯವಾದ ಜೀವಕ್ಕಾಗಿ ನಿಧಾನವಾಗಿ ಚಲಿಸಬೇಕಿದೆ. ನಮ್ಮ ಕುಟುಂಬಕ್ಕೆ ನಾವುಗಳೇ ಮುಖ್ಯವಾಗುತ್ತೇವೆ. ಸುಗಮ ಸಂಚಾರಕ್ಕೆ ಸೀಟ್ ಬೆಲ್ಟ್, ಇಂಡಿಕೇಟರ್ ಬಳಕೆ, ಸ್ಪೀಡ್ ಲಿಮಿಟ್‌ನಲ್ಲಿಯೇ ವಾಹನ ಚಲಾಯಿಸಬೇಕಿದೆ. ಗರಿಷ್ಠ ಮಿತಿ 100 ಕಿ.ಮೀ ಇದೆ. ತಿರುವುಗಳಲ್ಲಿ 60- 80 ವೇಗಕ್ಕೆ ಮಿತಿಗೊಳಿಸಿಕೊಳ್ಳಬೇಕು. ನಮ್ಮ ಸೂಚನೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಾಲಿಸದಿದ್ದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ: Rain News : ಕಾರವಾರ ಬಳಿ ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿತ; ಆತಂಕದಲ್ಲೇ ಸಂಚಾರ!

ಈ ಎಲ್ಲ ಸೂಚನೆಗಳನ್ನು ಪಾಲಿಸಲು ನಾವು ಗಡುವು ನೀಡಿದ್ದೇವೆ. ನಾವು ನೀಡಿರುವ ಕಾಲಾವಕಾಶವನ್ನು ಮೀರಿದರೆ ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಾಧಿಕಾರವು ಆಂಬ್ಯುಲೆನ್ಸ್, ಹೈವೇ ಪೆಟ್ರೋಲಿಂಗ್ ವ್ಯವಸ್ಥೆ ಮಾಡಬೇಕು.‌ ತುರ್ತು ಗೇಟ್‌ಗಳು, ಸ್ಕೈವಾಕ್‌ಗಳ ನಿರ್ಮಾಣಕ್ಕೆ ಹೇಳಿದ್ದೇವೆ ಎಂದು ಅಲೋಕ್‌ ಕುಮಾರ್‌ ಹೇಳಿದ್ದರು.

Exit mobile version