Site icon Vistara News

Bangalore-Mysore Expressway : ಅಪೂರ್ಣ ಹೆದ್ದಾರಿ ಉದ್ಘಾಟನೆ, 25000 ಕೋಟಿ ಟೋಲ್‌ ಸಂಗ್ರಹ ಗುರಿ ಎಂದ ಕಾಂಗ್ರೆಸ್‌

surjewala

#image_title

ಬೆಂಗಳೂರು: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ (Bangalore-Mysore Expressway) ಇನ್ನೂ ಅಪೂರ್ಣವಾಗಿದ್ದರೂ ಅದನ್ನು ಉದ್ಘಾಟನೆ ಮಾಡುವ ಮೂಲಕ ಬಿಜೆಪಿ ಸಾರ್ವಜನಿಕರ ಜೀವವನ್ನು ಪಣಕ್ಕಿಟ್ಟಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಕರ್ನಾಟಕದಲ್ಲಿ ಅವನತಿಯ ಹಾದಿಯಲ್ಲಿ ಸಾಗುತ್ತಿರುವ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಚಾರಕ್ಕೆ ಹೆದ್ದಾರಿಯನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆಪಾದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 12ರಂದು (ಭಾನುವಾರ) ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯನ್ನು ಉದ್ಘಾಟಿಸುತ್ತಿರುವ ಹಿನ್ನೆಲೆಯಲ್ಲಿ ಈ ಕಾಂಗ್ರೆಸ್‌ ಆರೋಪಗಳ ಸುರಿಮಳೆಯನ್ನು ಸುರಿಸಿದೆ. ಅದರಲ್ಲೂ ಮುಖ್ಯವಾಗಿ ಕೇಂದ್ರದ ಮೋದಿ ಸರ್ಕಾರವು 25,000 ಕೋಟಿ ರೂ. ಟೋಲ್‌ ಸಂಗ್ರಹದ ಗುರಿಯನ್ನು ಹೊಂದಿದೆ ಎಂದು ದೂರಿದರು.

ಪ್ರಯಾಣಿಕರ ಜೀವವನ್ನು ಅಪಾಯಕ್ಕೆ ತಳ್ಳಿ ಅಪೂರ್ಣಗೊಂಡಿರುವ ಹೆದ್ದಾರಿ ಉದ್ಘಾಟನೆ ಮಾಡುತ್ತಿದ್ದು, ಟೋಲ್ ಹೆಸರಲ್ಲಿ ಕನ್ನಡಿಗರಿಂದ ಹಣ ಸಂಗ್ರಹಿಸಲು ಮುಂದಾಗಿರುವ ಬಿಜೆಪಿ ಅವೈಜ್ಞಾನಿಕ ರಸ್ತೆ ವಿನ್ಯಾಸ, ನೀರು ಸುಗಮವಾಗಿ ಹರಿದುಹೋಗಲು ಅವಕಾಶ ಕಲ್ಪಿಸಿಲ್ಲ. ಪ್ರವಾಹ ನಿಯಂತ್ರಣ ಮಾರ್ಗಸೂಚಿ ಅನುಸರಿಸಿಲ್ಲ. ಇನ್ನು ರೈತರು ತಮ್ಮ ಊರಿನಿಂದ ಪಟ್ಟಣಕ್ಕೆ ಹೋಗಲು ಸರಿಯಾದ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಈ ಎಲ್ಲ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಬಿಜೆಪಿ ಸರ್ಕಾರವು ಪ್ರಮುಖ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ.

ಸುರ್ಜೇವಾಲಾ ಹೇಳಿದ ವಾಸ್ತವಾಂಶಗಳು

1. 2002ರಲ್ಲಿ ಕಾಂಗ್ರೆಸ್ ಸರ್ಕಾರ ಎರಡು ಪಥದ ರಾಜ್ಯ ಹೆದ್ದಾರಿಯನ್ನು ನಾಲ್ಕು ಪಥದ ಹೆದ್ದಾರಿಯನ್ನಾಗಿ ಮಾಡಿ, ಟೋಲ್ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು.
ಮಾ. 04, 2014: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಒತ್ತಾಯದ ಮೇರೆಗೆ ರಾಜ್ಯ ಹೆದ್ದಾರಿಯಾಗಿದ್ದ ಬೆಂಗಳೂರು-ಮೈಸೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 275 ಆಗಿ ಅಧಿಸೂಚನೆ ಹೊರಡಿಸಿದರು.
ಅಕ್ಟೋಬರ್ 4, 2016ರ ವೇಳೆಗೆ: ರಾಜ್ಯದಲ್ಲಿದ್ದ ಕಾಂಗ್ರೆಸ್ ಸರ್ಕಾರ 4,400 ಕೋಟಿ ವೆಚ್ಚ ಮಾಡಿ 2500 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿತು.
ಫೆಬ್ರವರಿ 13, 2018: ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಗೆ 6420 ಕೋಟಿ ಹಣವನ್ನು ಮಂಜೂರು ಮಾಡಿತ್ತು.
ಬೆಂಗಳೂರಿನಿಂದ ನಿಡಘಟ್ಟದ 56 ಕಿ.ಮೀ ಉದ್ದ ರಸ್ತೆಗೆ 3501 ಕೋಟಿ
ನಿಡಘಟ್ಟದಿಂದ ಮೈಸೂರಿನ 62 ಕಿ.ಮೀ ಉದ್ದದ ರಸ್ತೆಗೆ 2919 ಕೋಟಿ ನೀಡಿತ್ತು.
ಈಗ ಈ ರಸ್ತೆಯ ಒಟ್ಟು ವೆಚ್ಚ 10 ಸಾವಿರ ಕೋಟಿ ಅಂದಾಜು ಮಾಡಲಾಗಿದೆ.

ಮಾರ್ಚ್ 12, 2023ರಂದು: ಮೋದಿ ಹಾಗೂ ಬೊಮ್ಮಾಯಿ ಸರ್ಕಾರ ಅಪೂರ್ಣಗೊಂಡಿರುವ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಉದ್ಘಾಟನೆ ಮಾಡುತ್ತಿದೆ. ಆ ಮೂಲಕ ಮುಂಬರುವ ಚುನಾವಣೆಯಲ್ಲಿ 40% ಕಮಿಷನ್ ಭ್ರಷ್ಟಾಚಾರದ ಹೊರತಾಗಿ ತಮ್ಮ ಸಾಧನೆ ಏನೂ ಇಲ್ಲದ ಕಾರಣ ಈ ಯೋಜನೆಯ ಪ್ರಚಾರ ಪಡೆಯಲು ಮುಂದಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ.

ನರೇಂದ್ರ ಮೋದಿ ಮತ್ತು ಬೊಮ್ಮಾಯಿ ಸರಕಾರಕ್ಕೆ ಪ್ರಶ್ನೆಗಳು

1. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸುಮಾರು 21 ಕಿ.ಮೀ (118 ಕಿ.ಮೀ ಪೈಕಿ) ಉದ್ದದಷ್ಟು ರಸ್ತೆ ವಿವಿಧ ಭಾಗಗಳಲ್ಲಿ ಅಪೂರ್ಣಗೊಂಡಿದೆ. ಈ ಕುರಿತ ಚಿತ್ರಗಳನ್ನು ಸೇರಿಸಲಾಗಿದೆ. ಅಪೂರ್ಣಗೊಂಡಿರುವ ಹೆದ್ದಾರಿಯನ್ನು ಪ್ರಧಾನಮಂತ್ರಿಗಳು ಉದ್ಘಾಟನೆ ಮಾಡುತ್ತಿರುವುದು ಚುನಾವಣೆ ಗಿಮಿಕ್ ಅಲ್ಲವೇ?

2. ರಾಷ್ಟ್ರೀಯ ಹೆದ್ದಾರಿ 275 ಬೆಂಗಳೂರು- ಮೈಸೂರು ರಸ್ತೆ ಅಪೂರ್ಣಗೊಂಡಿದ್ದು, ಈ ರಸ್ತೆಯ ಅನೇಕ ಕಾಮಗಾರಿಗಳು ಪೂರ್ಣಗೊಂಡಿಲ್ಲ.

ಅಪೂರ್ಣಗೊಂಡಿರುವ, ಛಿದ್ರವಾಗಿರುವ ಹಾಗೂ ತೇಪೆಯಿಂದ ಕೂಡಿರುವ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನ ಮಂತ್ರಿಗಳು ಉದ್ಘಾಟನೆ ಮಾಡುತ್ತಿರುವುದೇಕೆ?

3. 118 ಕಿ.ಮೀ ಉದ್ದದ ಹೆದ್ದಾರಿಯ ಎರಡೂ ಭಾಗಗಳಲ್ಲಿ ಸರ್ವೀಸ್ ರಸ್ತೆ ಅಪೂರ್ಣಗೊಂಡಿದೆ. ಪರಿಣಾಮ ಈ ಹೆದ್ದಾರಿಯ ಭಾಗದ ರೈತರಿಗೆ, ನಿವಾಸಿಗಳಿಗೆ ತೊಂದರೆಯಾಗಿದ್ದು, ಜನಜೀವನ ಹಾಗೂ ದಿನನಿತ್ಯದ ಚಟುವಟಿಕೆಗೆ ತೊಡಕಾಗಿದೆ. ಪ್ರಧಾನಮಂತ್ರಿಗಳು ಸರ್ವೀಸ್ ರಸ್ತೆ ಪೂರ್ಣಗೊಳಿಸದೇ ರೈತರು, ಜನಸಾಮಾನ್ಯರ ರಕ್ಷಣೆ ಪಣಕ್ಕಿಟ್ಟಿರುವುದೇಕೆ?

4. ಬೆಂಗಳೂರು ಮೈಸೂರು ಹೆದ್ದಾರಿಯನ್ನು ಇಂಡಿಯನ್ ರೋಡ್ ಕಾಂಗ್ರೆಸ್ (IRC) ಗುಣಮಟ್ಟದಲ್ಲಿ ನಿರ್ಮಾಣ ಮಾಡಿಲ್ಲ. ಹಲವೆಡೆಗಳಲ್ಲಿ ಈ ಹೆದ್ದಾರಿ ನಿರ್ಮಾಣ ಅವೈಜ್ಞಾನಿಕವಾಗಿದೆ. ಅಲ್ಲದೆ ಕಳಪೆ ಗುಣಮಟ್ಟದ ಸಾಮಗ್ರಿ ಬಳಸಿದ್ದು, ಒಟ್ಟಾರೆ ರಸ್ತೆಯ ನಿರ್ಮಾಣ ಯೋಜನೆ ಕಳಪೆಯಾಗಿದೆ.

5. 2022ರ ಅಕ್ಟೋಬರ್‌ನಿಂದ ಇಲ್ಲಿಯವರೆಗೆ 300ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 90 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 122 ಜನರಿಗೆ ಗಂಭೀರ ಗಾಯಗಳಾಗಿವೆ. ಆದರೂ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಅಗತ್ಯ ಕ್ರಮ ಕೈಗೊಂಡಿಲ್ಲ. ಪ್ರಧಾನಮಂತ್ರಿಗಳಿಗೆ ಸಾರ್ವಜನಿಕರ ರಕ್ಷಣೆಯನ್ನು ಅಪಾಯಕ್ಕೆ ಸಿಲುಕಿರುವ ಹಾಗೂ ಅಮಾಯಕ ಜೀವಗಳನ್ನು ಬಲಿಯಾಗುತ್ತಿರುವ ಬಗ್ಗೆ ಅರಿವಿಲ್ಲವೇಕೆ?

6. ಸಂಚಾರಿ ಸಮೀಕ್ಷೆ ಪ್ರಕಾರ 2018ರಲ್ಲಿ ಈ ರಸ್ತೆಯಲ್ಲಿ 53 ಸಾವಿರ ಪ್ಯಾಸೆಂಜರ್ ಕಾರ್ ಯುನಿಟ್ (PCU) ನಷ್ಟಿದ್ದು ಇದು 2023ಕ್ಕೆ 90 ಸಾವಿರ ತಲುಪುವ ನಿರೀಕ್ಷೆ ಇದೆ. ಇದರ ಜತೆಗೆ ವಾಣಿಜ್ಯ ಉದ್ದೇಶಿತ ವಾಹನಗಳು ಸೇರ್ಪಡೆಯಾಗಲಿವೆ.

25,000 ಕೋಟಿ ರೂ. ಟೋಲ್‌ ಸಂಗ್ರಹದ ಉದ್ದೇಶ!

7. 118 ಕಿ.ಮೀ ರಸ್ತೆಯ ಟೋಲ್ (56 ಕಿ.ಮೀ.ಗೆ 135 ಹಾಗೂ 62 ಕಿ.ಮೀ.ಗೆ 165) ಒಂದು ಕಡೆಗೆ ಸಾಗಲು 300 ರೂ. ನಿಗದಿ ಮಾಡಿದ್ದು, ಎರಡೂ ಕಡೆ ಓಡಾಡಲು ಕಾರಿಗೆ 600 ರೂ. ನಿಗದಿ ಮಾಡಲಾಗಿದೆ. ಇನ್ನು ಭಾರಿ ವಾಹನ ಹಾಗೂ ವಾಣಿಜ್ಯ ವಾಹನಗಳಿಗೆ ಒಂದು ಕಡೆಗೆ 2 ಸಾವಿರದಂತೆ ಎರಡೂ ಕಡೆ ಸಾಗಲು 4 ಸಾವಿರ ನಿಗದಿ ಮಾಡಲಾಗಿದೆ.
ಈ ಲೆಕ್ಕಾಚಾರದಲ್ಲಿ 90 ಸಾವಿರ ಕಾರುಗಳಿಗೆ 600 ರೂ.ನಂತೆ ಪ್ರತಿನಿತ್ಯ 5,40,00,000 (5.40 ಕೋಟಿ) ರೂ. ಸಂಗ್ರಹವಾಗಲಿದೆ. ಆಮೂಲಕ ವರ್ಷದ 365 ದಿನಕ್ಕೆ 1971 ಕೋಟಿಯಿಂದ 2 ಸಾವಿರ ಕೋಟಿಯಷ್ಟು ಸಂಗ್ರಹವಾಗಲಿದೆ.

8. 10 ವರ್ಷ ಟೋಲ್ ಸಂಗ್ರಹಿಸಿದರೆ 20 ಸಾವಿರ ಕೋಟಿ ಸಂಗ್ರಹವಾಗಲಿದ್ದು, ಪ್ರತಿ ಎರಡು ವರ್ಷಕ್ಕೊಮ್ಮೆ ಟೋಲ್ ದರ ಹೆಚ್ಚಳ ಮಾಡಿದಾಗ 110 ವರ್ಷಗಳಲ್ಲಿ ಸುಮಾರು 25 ಸಾವಿರ ಕೋಟಿ ಹಣವನ್ನು ಟೋಲ್ ಮೂಲಕ ಸಂಗ್ರಹವಾಗಲಿದೆ. ಬೆಂಗಳೂರು- ಮೈಸೂರು ಹೆದ್ದಾರಿಯಿಂದ ಮೋದಿ ಸರ್ಕಾರ 15 ಸಾವಿರ ಕೋಟಿ ಲಾಭ ಮಾಡಲು ಮುಂದಾಗಿರುವುದೇಕೆ?

9. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೆಚ್ಚ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 6420 ಕೋಟಿಯಷ್ಟಿತ್ತು. ಬಿಜೆಪಿ ಅವಧಿಯಲ್ಲಿ ಇದು 10 ಸಾವಿರ ಕೋಟಿಗೆ ಹೆಚ್ಚಾಗಿದೆ. ಈ ಹೆದ್ದಾರಿಯ ನಿರ್ಮಾಣದ ವೆಚ್ಚ ದುಪ್ಪಟ್ಟಾಗಲು ಕಾರಣವೇನು ಎಂದು ಪ್ರಧಾನಮಂತ್ರಿಗಳು ಉತ್ತರಿಸುವರೇ?

10. 2022ರ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಬೆಂಗಳೂರು ಮೈಸೂರು ಹೆದ್ದಾರಿ ಬಳಿ ನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸದ ಕಾರಣ ಕುಂಬಳಗೋಡು, ಇನೋರು ಪಾಳ್ಯ ಟೋಲ್ ಹಗೇಟೆ, ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಪ್ರವಾಹ ಉಂಟಾಗಿತ್ತು. ಇನ್ನು ಹೆದ್ದಾರಿಯ ಎರಡೂ ಬದಿಯಲ್ಲಿರುವ ರೈತರ ಕೃಷಿ ಭೂಮಿಗೆ ನೀರಾವರಿ ನೀರು ಹರಿಯಲು ಅಡ್ಡಿಯುಂಟಾಗಿದೆ. ಪರಿಣಾಮ ಪ್ರತಿ ಮಳೆಗಾಲದಲ್ಲೂ ಪ್ರವಾಹ ಪರಿಸ್ಥಿತಿ ಉದ್ಭವವಾಗಲಿದೆ. ಪ್ರವಾಹ ನಿಯಂತ್ರಣ ಮಾರ್ಗಸೂಚಿ ಅನುಸರಿಸದೇ, ಹೆದ್ದಾರಿಯ ಎರಡೂ ಬದಿಯ ರೈತರಿಗೆ ಸರಿಯಾದ ನೀರಾವರಿ ವ್ಯವಸ್ಥೆ ಕಲ್ಪಿಸದೇ ಪ್ರಧಾನಮಂತ್ರಿಗಳು ಈ ಹೆದ್ದಾರಿ ಉದ್ಘಾಟನೆ ಮಾಡುತ್ತಿರುವುದೇಕೆ?

11. ಬಿಜೆಪಿ ಸರ್ಕಾರದ ಈ ಮಾನವ ನಿರ್ಮಿತ ಪ್ರವಾಹ ಪರಿಸ್ಥಿತಿಯನ್ನು ಕಂಡರೂ ಕಾಣದಂತೆ ಮಂಡ್ಯ ಹಾಗೂ ಮೈಸೂರು ಭಾಗದ ಸಂಸದರು ವರ್ತಿಸುತ್ತಿದ್ದಾರೆ. ಪ್ರಧಾನಮಂತ್ರಿಗಳು ಹಾಗೂ ಮಂಡ್ಯ ಮತ್ತು ಮೈಸೂರಿನ ಸಂಸದರು ಪ್ರಯಾಣಿಕರು ಹಾಗೂ ರೈತರ ದುರಾವಸ್ಥೆಯನ್ನು ಕಂಡರೂ ಈ ಬಗ್ಗೆ ಅಸಡ್ಡೆ ತೋರುತ್ತಿರುವುದೇಕೆ?

ಇದನ್ನೂ ಓದಿ : Bangalore- Mysuru Express way : 1.5 ಕಿಮೀ ರೋಡ್‌ ಶೋಗೆ ಬಿಜೆಪಿ ರೆಡಿ, ಕ್ರೆಡಿಟ್‌ನಲ್ಲಿ ಪಾಲು ಕೇಳಿದ ಕಾಂಗ್ರೆಸ್‌

Exit mobile version