ಮೈಸೂರು: ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ (Bangalore Mysore Expressway) ವಾಹನ ಚಲಾಯಿಸುವವರು ವೇಗ ಮಿತಿಯನ್ನು ನೋಡಿಕೊಂಡು ಡ್ರೈವ್ ಮಾಡಿ. ಇದು ಹೆದ್ದಾರಿ, ರೇಸಿಂಗ್ ಟ್ರ್ಯಾಕ್ ಅಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ಸಂಬಂಧ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ, ರೋಡ್ ಚೆನ್ನಾಗಿದೆ ಎಂಬ ಕಾರಣಕ್ಕೆ ಯಾರೂ ರೇಸ್ ಮಾಡಬೇಡಿ. ಓವರ್ ಸ್ಪೀಡ್‌ನಿಂದ ಅಪಘಾತಗಳು ಆಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ: Hottest June: 122 ವರ್ಷಗಳಲ್ಲೇ ಈ ವರ್ಷದ ಜೂನ್ ಅತ್ಯಂತ ಬಿಸಿ, ಅತೀ ಕಡಿಮೆ ಮಳೆ!
ಕಿಯಾ, ನಿಸ್ಸಾನ್ ಕಾರುಗಳಲ್ಲಿ ಬರೀ ಪ್ಲ್ಯಾಸ್ಟಿಕ್ ಇದೆ. ಯದ್ವಾತದ್ವಾ ಸ್ಪೀಡ್‌ನಲ್ಲಿ ಹೋದರೆ ಅಪಘಾತ ಆಗದೇ ಇರುತ್ತದೆಯೇ? ಗೂಡ್ಸ್ ಗಾಡಿಯವರು ಸೈಡ್‌ನಲ್ಲಿ ಹೋದರೆ ಉತ್ತಮ. ಆದರೆ, ಹೆಚ್ಚಿನವರು ಮಧ್ಯ ರೋಡ್‌ನಲ್ಲಿ ಹೋಗಿತ್ತಿದ್ದಾರೆ. ಹಿಂದಿನ ಗಾಡಿ ಬಂದು ಹೊಡೆದರೆ ಉಳೀತೀರಾ? ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದರು.
ರಸ್ತೆ ವಿಭಜಕ ಎತ್ತರಿಸುವುದು, ಸ್ಪೀಡ್ ಲಿಮಿಟ್, ಆ್ಯಂಬುಲೆನ್ಸ್ ಸೇವೆ ಎಲ್ಲವನ್ನೂ 6 ತಿಂಗಳ ಒಳಗೆ ಮಾಡುತ್ತೇವೆ. ಅಲ್ಲಿವರೆಗೂ ನಮಗೆ ಸಹಕಾರ ಕೊಡಿ ಎಂದು ಪ್ರತಾಪ್ ಸಿಂಹ ಕೋರಿದ್ದಾರೆ.
ಎಕ್ಸ್‌ಪ್ರೆಸ್ ವೇಯಲ್ಲಿ ಅಪಘಾತ ತಡೆಯಲು ಸ್ಪೀಡ್ ರೇಡಾರ್ ಗನ್
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ವೇಗಕ್ಕೆ ಮಿತಿ ಹಾಕಲು ಸ್ಪೀಡ್ ರೇಡಾರ್ ಗನ್ ಅಳವಡಿಸಲಾಗುತ್ತಿದೆ. ಈ ಬಗ್ಗೆ ರಾಜ್ಯ ಸಂಚಾರ ವಿಭಾಗದ ಆಯುಕ್ತ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಇತ್ತೀಚಿಗೆ ಎಕ್ಸ್‌ಪ್ರೆಸ್ ವೇ ಹೆದ್ದಾರಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳುವ ಅಗತ್ಯವನ್ನು ಟ್ರಾಫಿಕ್ ಪೊಲೀಸರು ಕಂಡುಕೊಂಡಿದ್ದಾರೆ.
ಈಗಾಗಲೇ ಹೆದ್ದಾರಿಯಲ್ಲಿ ಪ್ರತಿ ಗಂಟೆಗೆ 100 ಕಿ.ಮೀ ವೇಗ, ಕೆಲವೆಡೆ 80 ಕಿ.ಮೀ ವೇಗದ ಮಿತಿ ವಿಧಿಸಲಾಗಿದ್ದು, ಆ ಬಗ್ಗೆ ಫಲಕಗಳನ್ನು ಹಾಕಲಾಗಿದೆ. ಆದರೆ ಗಂಟೆಗೆ 120 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ವಾಹನಗಳು ಸಂಚರಿಸುತ್ತಿವೆ. ಇದರಿಂದಾಗಿ ಎಂಟ್ರಿ ಹಾಗೂ ಎಕ್ಸಿಟ್ ತಾಣಗಳಲ್ಲಿ ಅಪಘಾತಗಳು ಆಗುತ್ತಿವೆ.
ಇದನ್ನೂ ಓದಿ: Weather Report : ನಾಳೆ ಬೆಂಗಳೂರಲ್ಲಿ ವರುಣಾರ್ಭಟ; ದಕ್ಷಿಣ-ಉತ್ತರ ಒಳನಾಡು, ಕರಾವಳಿಯಲ್ಲಿ ಮಳೆ ಹಾವಳಿ
ಅಪಘಾತಗಳನ್ನು ತಡೆಯಲು ಗಂಟೆಗೆ 100 ಕಿ.ಮೀ ವೇಗ ಮಿತಿಯನ್ನು ಶಿಸ್ತಾಗಿ ಪಾಲಿಸಲು, ಹೆದ್ದಾರಿಯಲ್ಲಿ ಸ್ಪೀಡ್ ರೇಡಾರ್ ಗನ್ ಮತ್ತು ವಾಹನದ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳ ಅಳವಡಿಕೆ ಮಾಡಲಾಗುತ್ತಿದೆ. 100 ಕಿ.ಮೀ.ಗಿಂತಲೂ ಅಧಿಕ ವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಪ್ರಕರಣ ಬುಕ್ ಮಾಡಲಾಗುತ್ತಿದೆ.