ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ (Modi In Karnataka) ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಾಲು ಸಾಲು ಚುನಾವಣೆ ರ‍್ಯಾಲಿ, ರೋಡ್ ಶೋಗಳ ಮೂಲಕ ಮತ ಬೇಟೆ ಆರಂಭಿಸಿದ್ದಾರೆ. ಇನ್ನು ಏಪ್ರಿಲ್ 30ರಂದು ನರೇಂದ್ರ ಮೋದಿ ಅವರು ಚನ್ನಪಟ್ಟಣದಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಕಾರಣ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಚನ್ನಪಟ್ಟಣ-ಮದ್ದೂರು ನಡುವೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಚನ್ನಪಟ್ಟಣ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಮೋದಿ ಅವರು ಪ್ರಚಾರ ಕೈಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳಲಿದ್ದು, ಈಗಾಗಲೇ ವೇದಿಕೆ ನಿರ್ಮಾಣವಾಗಿದೆ. ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಹೆಚ್ಚಿನ ವಾಹನ ದಟ್ಟಣೆ ಇರಲಿದೆ. ಹಾಗೆಯೇ, ನರೇಂದ್ರ ಮೋದಿ ಅವರ ಭದ್ರತಾ ದೃಷ್ಟಿಯಿಂದಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 4ರವರೆಗೆ ಸಂಚಾರವನ್ನು ನಿರ್ಬಂಧಿಸಿ ರಾಮನಗರ ಹಾಗೂ ಮಂಡ್ಯ ಜಿಲ್ಲಾಡಳಿತಗಳು ಆದೇಶ ಹೊರಡಿಸಿವೆ.
ಬದಲಿ ಮಾರ್ಗಗಳ ಸೂಚನೆ
ನಿರ್ಬಂಧದ ಜತೆಗೆ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ಪೊಲೀಸ್ ಇಲಾಖೆಯು ಬದಲಿ ಮಾರ್ಗವನ್ನು ಸೂಚಿಸಿದೆ. ಬೆಂಗಳೂರಿನಿಂದ ಮೈಸೂರಿಗೆ ಹೋಗಬೇಕಾದರೆ, ವಾಹನಗಳು ಬಿಡದಿ-ಹಾರೋಹಳ್ಳಿ-ಕನಕಪುರ-ಮಳವಳ್ಳಿ ಮಾರ್ಗವಾಗಿ ತೆರಳಬಹುದಾಗಿದೆ. ಇನ್ನು ಮೈಸೂರಿನಿಂದ ಬೆಂಗಳೂರಿಗೆ ಆಗಮಿಸುವ ವಾಹನಗಳು ಮದ್ದೂರು-ಕುಣಿಗಲ್-ನೆಲಮಂಗಲ ಮೂಲಕ ರಾಜ್ಯ ರಾಜಧಾನಿಯನ್ನು ತಲುಪಬಹುದು.
ಇದನ್ನೂ ಓದಿ: Modi In Karnataka: ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ಅಬ್ಬರ; ಇಲ್ಲಿವೆ ಫೋಟೊಗಳು
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಎರಡು ದಿನ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ ಸೇರಿ ಹಲವೆಡೆ ಭಾರಿ ಪ್ರಚಾರ ನಡೆಸಿದ್ದಾರೆ. ಹಾಗೆಯೇ, ಭಾನುವಾರ ಕೋಲಾರ, ಚನ್ನಪಟ್ಟಣ ಹಾಗೂ ಬೇಲೂರಿನಲ್ಲಿ ನಡೆಯುವ ರ‍್ಯಾಲಿಗಳಲ್ಲಿ ಪಾಲ್ಗೊಳ್ಳುವ ಜತೆಗೆ ಮೈಸೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.