Site icon Vistara News

Bangalore Mysore Expressway : ಏನ್ರೀ ಇದು ಗೋಳು-ಸಿಕ್ಕಾಪಟ್ಟೆ ಟೋಲು; ಟ್ಯಾಕ್ಸಿ ಪಯಣವೀಗ ದುಬಾರಿ!

Bangalore Mysore Expressway toll and taxi

ಮೈಸೂರು: ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯಲ್ಲಿ (Bangalore Mysore Expressway) ದುಬಾರಿ ಟೋಲ್ ವಿಧಿಸಿರುವುದರಿಂದ ಟ್ಯಾಕ್ಸಿ ಪ್ರಯಾಣ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಪ್ರಯಾಣ ದರದಲ್ಲಿ ಬರೋಬ್ಬರಿ ಶೇ.20ರಿಂದ 25ರಷ್ಟು ಏರಿಕೆ ಕಂಡಿದೆ. ಟೋಲ್ ಕಾರಣಕ್ಕೆ ಗ್ರಾಹಕನಿಗೆ ಈ ಬರೆ ಬಿದ್ದಂತಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಾಗಂತ ಟ್ಯಾಕ್ಸಿ ದರವನ್ನೇನು ಹೆಚ್ಚಳ ಮಾಡಿಲ್ಲ, ಬದಲಾಗಿ ಟೋಲ್‌ ಶುಲ್ಕವನ್ನು ಗ್ರಾಹಕರಿಂದಲೇ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ಇರುವ ದರಕ್ಕಿಂತ ಈಗ ಹೆಚ್ಚಳವಾದಂತೆ ಆಗಿದೆ.

ಮೈಸೂರಿನಿಂದ ಬೆಂಗಳೂರಿಗೆ ಹೋಗಿ ಬರಲು 320 ಕಿ.ಮೀ. ಆಗುತ್ತದೆ. ಇಷ್ಟಕ್ಕೆ ಈ ಹಿಂದೆ 3500 ರೂಪಾಯಿಯನ್ನು ಪಡೆಯಲಾಗುತ್ತಿತ್ತು. ಈಗ ಟೋಲ್‌ ಶುಲ್ಕವೂ ಸೇರಿಸಿ 4000 ರೂಪಾಯಿಗೂ ಹೆಚ್ಚ ಖರ್ಚಾಗುತ್ತಿದೆ. ಟೋಲ್ ಕಟ್ಟಲು ಗ್ರಾಹಕರಿಂದ ಹೆಚ್ಚು ಹಣವನ್ನು ಟ್ಯಾಕ್ಸಿ ಚಾಲಕರು, ಮಾಲೀಕರು ಪಡೆಯುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ಈ ಬಗ್ಗೆ ಟ್ಯಾಕ್ಸಿ ಮಾಲೀಕರ ಸಂಘದಿಂದ ಸ್ಪಷ್ಟನೆಯನ್ನೂ ನೀಡಲಾಗಿದೆ. ಮೈಸೂರಿನಿಂದ ಬೆಂಗಳೂರಿಗೆ ಹೋಗಿ ಬರಲು 485 ರೂಪಾಯಿ ಟೋಲ್ ಕಟ್ಟಬೇಕು. ಅದೇ ಬೆಂಗಳೂರಿನಲ್ಲಿ ಏರ್‌ಪೋರ್ಟ್‌ಗೆ ಹೋಗಿ ಬಂದರೆ 680 ರೂ. ಆಗುತ್ತದೆ. ನೈಸ್ ರೋಡ್‌ನಲ್ಲಿ ಪ್ರಯಾಣ ಮಾಡಿದರೆ 725 ರೂ.ವರೆಗೂ ಟೋಲ್ ಕಟ್ಟಬೇಕಾಗಲಿದೆ ಎಂದು ಹೇಳಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಜಯಕುಮಾರ್, ನಾವು ಟ್ಯಾಕ್ಸಿ ದರವನ್ನು ಜಾಸ್ತಿ ಮಾಡಿಲ್ಲ. ಆದರೆ, ಗ್ರಾಹಕರಿಂದ ಟೋಲ್ ಸೇರಿಸಿ ಬಾಡಿಗೆ ಪಡೆಯುವುದರಿಂದ ಅವರಿಗೆ ಪ್ರಯಾಣ ದುಬಾರಿ ಆಗುತ್ತಿದೆ. ಹಂತ ಹಂತವಾಗಿ ಟೋಲ್ ಜಾರಿ ಮಾಡಬೇಕಿತ್ತು. ಆ ಕೆಲಸ ಇಲ್ಲಾಗಿಲ್ಲ. ಈ ಕಾರಣಕ್ಕಾಗಿ ಗ್ರಾಹಕರಿಂದ ಟೋಲ್‌ ಹಣವನ್ನು ಪಡೆಯುವುದು ನಮಗೆ ಅನಿವಾರ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: Rain News : ವರ್ಷಧಾರೆಗೆ ಕರಾವಳಿ ತತ್ತರ; ಬುಧವಾರ ಒಂದೇ ದಿನ ಉ.ಕ.ದಲ್ಲಿ 18, ದ.ಕ.ದಲ್ಲಿ 17 ಸೆಂ.ಮೀ. ಮಳೆ!

ಟೋಲ್ ದರದ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು. ಆ ಮೂಲಕ ಗ್ರಾಹಕರಿಗೆ ಆಗುತ್ತಿರುವ ನಷ್ಟ ಹಾಗೂ ಹೊರೆಯನ್ನು ತಗ್ಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Exit mobile version