ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ (Bangalore Mysore Expressway) ಸಂಚಾರ ಮತ್ತಷ್ಟು ದುಬಾರಿಯಾಗಿದೆ. ಸದ್ದಿಲ್ಲದೆ ಎಕ್ಸ್‌ಪ್ರೆಸ್ ಟೋಲ್ ದರವನ್ನು ಹೆಚ್ಚಳ ಮಾಡಲಾಗಿದೆ. ಹೆದ್ದಾರಿ ಪ್ರಾಧಿಕಾರವು ಶೇ.22ರಷ್ಟು ಟೋಲ್ ದರವನ್ನು ಏರಿಕೆ ಮಾಡಿದ್ದು, ಜೂನ್ 1ರಿಂದಲೇ ದುಬಾರಿ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಈ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಾಗಿದೆ. ಬರೋಬ್ಬರಿ ಎರಡು ವಾರಗಳ ಬಳಿಕ ಈ ಹಗಲು ದರೋಡೆ ಗಮನಕ್ಕೆ ಬಂದಿದೆ.
ಫಾಸ್ಟ್ ಟ್ಯಾಗ್ ಇರುವ ಕಾರಣ ಟೋಲ್ ದರ ಏರಿಕೆ ವಿಚಾರವು ವಾಹನ ಸವಾರರ ಗಮನಕ್ಕೆ ಬಂದಿರಲಿಲ್ಲ. ಹೇಗೂ ಮಾಮೂಲಿಯಂತೆ ಟೋಲ್ ದರವನ್ನು ಕಡಿತ ಮಾಡಿಕೊಳ್ಳಲಾಗಿರುತ್ತದೆ ಎಂದು ಯಾರೂ ಸಹ ಗಮನಿಸಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: Lok Sabha Election 2024: ಲೋಕಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ; ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ
ಕಾರು, ವ್ಯಾನ್, ಜೀಪ್‌ಗಳಿಗೆ 30 ರೂಪಾಯಿ ಏರಿಕೆ
ಕಾರು, ವ್ಯಾನ್, ಜೀಪ್‌ಗಳ ಏಕಮುಖ ಸಂಚಾರಕ್ಕೆ 135 ರೂಪಾಯಿಯಿಂದ ₹165 ರೂಪಾಯಿಗೆ ಏರಿಕೆ ಮಾಡಲಾಗಿದೆ. ಅಂದರೆ, ಬರೋಬ್ಬರಿ 30 ರೂಪಾಯಿ ಹೆಚ್ಚಳ ಮಾಡಲಾಗಿದೆ. ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್ 220 ರೂಪಾಯಿಯಿಂದ ₹270 ರೂಪಾಯಿಗೆ ಏರಿಕೆ ಮಾಡಲಾಗಿದೆ. ಹೀಗಾಗಿ ಇದನ್ನು 50 ರೂಪಾಯಿ ಹೆಚ್ಚಳ ಮಾಡಿದಂತೆ ಆಗಿದೆ.
ಇವುಗಳಿಗೆ ಭಾರಿ ದುಬಾರಿ
ಟ್ರಕ್, ಬಸ್, 2 ಆಕ್ಸೆಲ್ ವಾಹನಗಳ ಏಕಮುಖ ಸಂಚಾರಕ್ಕೆ 460 ರೂಪಾಯಿಯಿಂದ 565ಕ್ಕೆ ಏರಿಕೆ ಮಾಡಲಾಗಿದ್ದು, ಬರೋಬ್ಬರಿ 105 ರೂಪಾಯಿಯನ್ನು ಹೆಚ್ಚಳ ಮಾಡಲಾಗಿದೆ. 3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರವನ್ನು 500ರಿಂದ 615 ರೂಪಾಯಿಗೆ ಏರಿಕೆ ಮಾಡಲಾಗಿದೆ. ಒಟ್ಟಾರೆಯಾಗಿ ಇದಕ್ಕೆ 115 ರೂಪಾಯಿ ಹೆಚ್ಚಳ ಮಾಡಿದಂತೆ ಆಗಿದೆ.
ಭಾರಿ ವಾಹನಗಳ ಏಕಮುಖ ಸಂಚಾರಕ್ಕೆ ಈ ಹಿಂದೆ 720 ರೂಪಾಯಿ ದರವನ್ನು ನಿಗದಿ ಮಾಡಲಾಗಿತ್ತು. ಇದನ್ನು ಈಗ 165 ರೂಪಾಯಿ ಹೆಚ್ಚಳ ಮಾಡುವ ಮೂಲಕ ಒಟ್ಟಾರೆಯಾಗಿ 885 ರೂಪಾಯಿಗೆ ಹೆದ್ದಾರಿ ಪ್ರಾಧಿಕಾರವು ಏರಿಕೆ ಮಾಡಿದೆ. 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳ ಏಕಮುಖ ಸಂಚಾರ ದರವು ಈ ಹಿಂದೆ 880 ರೂಪಾಯಿ ಇತ್ತು. ಈಗ ಅದನ್ನು 1,080 ರೂಪಾಯಿಗೆ ಏರಿಕೆ ಮಾಡಲಾಗಿದೆ. ಅಂದರೆ ಏಕಮುಖ ಸಂಚಾರಕ್ಕೆ 200 ರೂಪಾಯಿ ಹೆಚ್ಚಳ ಮಾಡಿದಂತೆ ಆಗಿದೆ. ಅದೇ ದ್ವಿಮುಖ ಸಂಚಾರಕ್ಕೆ ದುಪ್ಪಟ್ಟು ಆಗಲಿದೆ.
ಇದನ್ನೂ ಓದಿ: DK Shivakumar: ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ತಾತ್ಕಾಲಿಕ ರಿಲೀಫ್; ಸಿಬಿಐಗೆ ಹೈಕೋರ್ಟ್ ನೋಟಿಸ್
ಸಾರ್ವಜನಿಕರಿಂದ ತೀವ್ರ ಆಕ್ರೋಶ
ಈ ಹಿಂದೆ ಸಹ ಇದೇ ಪರಿಷ್ಕೃತ ದರವನ್ನು ಏ.1ರಂದೇ ಜಾರಿ ಮಾಡಿ ಹೆದ್ದಾರಿ ಪ್ರಾಧಿಕಾರವು ಆದೇಶವನ್ನು ಹೊರಡಿಸಿತ್ತು. ಆದರೆ, ಇದರ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ದರ ಹೆಚ್ಚಳ ಆದೇಶವನ್ನು ವಾಪಸ್ ಪಡೆಯಲಾಗಿತ್ತು. ಆದರೆ, ಈಗ ಹೇಳದೆ, ಕೇಳದೆ ಜೂನ್ 1ರಿಂದಲೇ ದರ ಹೆಚ್ಚಳ ಮಾಡಲಾಗಿದ್ದು, 12 ದಿನಗಳ ಕಾಲ ಯಾರ ಅರಿವಿಗೂ ಬಾರದಂತೆ ಹಣವನ್ನು ಸಂಗ್ರಹಿಸಿದೆ. ಈಗ ಈ ವಿಚಾರ ಸಾರ್ವಜನಿಕವಾಗಿ ಗೊತ್ತಾಗಿದ್ದು, ತೀವ್ರ ಆಕ್ರೋಶಗಳು ವ್ಯಕ್ತವಾಗಿವೆ. ಅಲ್ಲದೆ, ಸೋಷಿಯಲ್ ಮೀಡಿಯಾ ಮೂಲಕವೂ ಖಂಡನೆ ವ್ಯಕ್ತವಾಗಿದೆ.