ಮೈಸೂರು: ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ (Bangalore-Mysore Expressway) ಕಾಮಗಾರಿ ಇನ್ನು ಒಂದು ತಿಂಗಳಲ್ಲಿ ಪೂರ್ಣವಾಗಲಿದ್ದು, ಮಾರ್ಚ್ ಎರಡು ಇಲ್ಲವೇ ಮೂರನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡುವ ಸಾಧ್ಯತೆಗಳಿವೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಎರಡು ನಗರಗಳ ನಡುವಿನ ಟೋಲ್ ಶುಲ್ಕ ಎಷ್ಟಿರಬಹುದು ಎಂಬ ಬಗ್ಗೆ ಹಲವು ಗೊಂದಲಮಯ ಅಭಿಪ್ರಾಯಗಳು ಕೇಳಿಬಂದಿದ್ದವು. ಅದಕ್ಕೆ ಸ್ಪಷ್ಟನೆ ನೀಡಿರುವ ಅವರು ಟೋಲ್ ದರ ಸುಮಾರು ೨೫೦ ರೂ. ಇರಬಹುದು ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು – ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಬಹುತೇಕ ಪೂರ್ಣವಾಗುವ ಸ್ಥಿತಿಯಲ್ಲಿದೆ. ಮಾರ್ಚ್ ಎರಡು ಅಥವಾ ಮೂರನೇ ವಾರದಲ್ಲಿ ರಸ್ತೆ ಲೋಕಾರ್ಪಣೆ ಆಗಲಿದೆ ಎಂದರು. ಮಂಡ್ಯದಲ್ಲಿ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ ಎನ್ನಲಾಗಿದೆ.
ಬೆಂಗಳೂರು – ಮೈಸೂರು ಹೈವೇ ಲೋಕಾರ್ಪಣೆ ಸಂದರ್ಭದಲ್ಲೇ ಪ್ರಧಾನಿ ಮೋದಿ ಅವರು ಕುಶಾಲನಗರ – ಮೈಸೂರು ನಡುವಿನ ಹೆದ್ದಾರಿಗೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಇದು 3,500 ಕೋಟಿ ವೆಚ್ಚದ ಯೋಜನೆಯಾಗಿದ್ದು, 115 ಕಿ.ಮೀ. ಹೈವೇ ನಿರ್ಮಾಣವಾಗಲಿದೆ ಎಂದು ಹೇಳಿದರು. ಈ ರಸ್ತೆಯ ಕಾಮಗಾರಿ 24 ತಿಂಗಳಲ್ಲಿ ಪೂರ್ಣವಾಗಲಿದೆ ಎಂದು ಹೇಳಿದರು.
ಬೆಂಗಳೂರು- ಮೈಸೂರು ಟೋಲ್ ಎಷ್ಟು?
ʻʻರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಾನುಸಾರ ಕಿಮೀಗೆ ಇಂತಿಷ್ಟು ಅಂತ ಟೋಲ್ ಅಂದಾಜು ಮಾಡುತ್ತಾರೆ. ಮೇಲ್ಸೇತುವೆಗಳಿಗೆ ಟೋಲ್ ಜಾಸ್ತಿ ಇರುತ್ತದೆ. ಕುಂಬಳಗೋಡು, ಮದ್ದೂರಿನಲ್ಲಿ ಫೈ ಓವರ್ ಇದೆ. ಮೊದಲ ಹಂತದಲ್ಲಿ ಬೆಂಗಳೂರು- ನಿಡಘಟ್ಟ ನಡುವೆ ಟೋಲ್ ಶುರುವಾಗಿದೆ. 135 ರೂ. ಟೋಲ್ ವಿಧಿಸಬೇಕೆಂದು ಶಿಫಾರಸು ಮಾಡಲಾಗಿದೆ. ಅಷ್ಟನ್ನು ಸಂಗ್ರಹ ಮಾಡಲಾಗುತ್ತಿದೆ. ಒಂದು ತಿಂಗಳಲ್ಲಿ ಹೆದ್ದಾರಿ ಕಾಮಗಾರಿ ಮುಗಿದ ಬಳಿಕ ಎರಡೂ ಕಡೆ ಸೇರಿ ಬೆಂಗಳೂರಿನಿಂದ ಮೈಸೂರಿಗೆ ೨೫೦ ರೂ. ಟೋಲ್ ಹಾಕಬಹುದು ಎಂದು ಅಭಿಪ್ರಾಯಪಟ್ಟರು.
೩೦ ಎಕರೆಯಲ್ಲಿ ರೆಸ್ಟ್ ಏರಿಯಾ
ಬೆಂಗಳೂರು – ಮೈಸೂರು ನಡುವೆ ಚನ್ನಪಟ್ಟಣದ ಬಳಿ 30 ಎಕರೆಯಲ್ಲಿ ಐಲ್ಯಾಂಡ್ ರೂಪದಲ್ಲಿ ರೆಸ್ಟ್ ಏರಿಯಾ ನಿರ್ಮಾಣ ಮಾಡಲಾಗುವುದು. ಇಲ್ಲಿ ಎಲ್ಲ ಬಗೆಯ ಆಹಾರ ಒದಗಿಸುವ ಹೋಟೆಲ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ನಾಡಿನ ಹಲವಾರು ಬ್ರಾಂಡ್‌ಗಳ ವಸ್ತುಗಳ ಮಾರಾಟ ಇಲ್ಲಿರುತ್ತದೆ. ಆರು ತಿಂಗಲ್ಲಿ ರೆಸ್ಟ್ ಏರಿಯಾ ನಿರ್ಮಾಣವಾಗಲಿದೆ ಎಂದರು.
ಹೈವೇಗೆ ಕಾವೇರಿ ಹೆಸರು ಇರಲಿ ಅನಗತ್ಯ ಹೆಸರು ಬೇಡ ಎಂದ ಪ್ರತಾಪ್
ದಶಪಥ ಹೆದ್ದಾರಿಗೆ ಹೆಸರಿಡುವ ವಿಚಾರದಲ್ಲಿ ಗೊಂದಲ ಮಾಡದಂತೆ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ಪ್ರತಾಪ್ ಸಿಂಹ ಅವರು ಕಾವೇರಿ ಹೆಸರು ಪ್ರಸ್ತಾಪಿಸುತ್ತಿದ್ದಂತೆಯೇ ಬೇರೆ ಹಲವು ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಹಲವು ಹೆಸರುಗಳನ್ನು ಪ್ರಸ್ತಾಪಿಸುತ್ತಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ʻʻತಾಯಿ ದೊಡ್ಡವಳೋ, ಮಗ ದೊಡ್ಡವನೋ ಎಂಬ ಅನಗತ್ಯ ಗೊಂದಲ ತರಬೇಡಿ. ಮೈಸೂರು, ಮಂಡ್ಯ, ಬೆಂಗಳೂರಿಗೆ ಕಾವೇರಿ ತಾಯಿ ಇದ್ದಂತೆ. ತಾಯಿ ಕಾವೇರಿ ಹರಿದ ಕಾರಣಕ್ಕಾಗಿಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅಣೆಕಟ್ಟೆ ಕಟ್ಟಿದರು. ಮಗನಿಗಿಂತ ತಾಯಿಯೇ ಶ್ರೇಷ್ಠ. ಈ ವಿಚಾರದಲ್ಲಿ ರಸ್ತೆಯ ಹೆಸರು ವಿವಾದ ಮಾಡಬೇಡಿʼʼ ಎಂದು ಮನವಿ ಮಾಡಿದರು.
ʻʻದೇಶದ ಯಾವುದೇ ಎಕ್ಸ್‌ಪ್ರೆಸ್ ಹೈವೆಗೆ ವ್ಯಕ್ತಿಯ ಹೆಸರು ಇಡುವ ಪದ್ಧತಿ ಇಲ್ಲ. ಕೇವಲ ನಗರದೊಳಗೆ ರಸ್ತೆಗಳಿಗೆ ಹೆಸರಿಡಲಾಗಿದೆ. ನಾವು ಈಗಾಗಲೇ ರಾಜಮನೆತನಕ್ಕೆ ಎಷ್ಟು ಗೌರವ ಕೊಡಬೇಕೋ ಅಷ್ಟನ್ನೂ ಕೊಟ್ಟಿದ್ದೇವೆ. ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಒಡೆಯರ್ ಹೆಸರು ಇಟ್ಟಿದ್ದೇವೆ. ಮೈಸೂರು ರೈಲ್ವೆ ನಿಲ್ದಾಣಕ್ಕೆ ಚಾಮರಾಜ ಒಡೆಯರ್ ಹೆಸರನ್ನು ಇಡಲು ನಾನು ಮತ್ತು ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ತೀರ್ಮಾನ ಮಾಡಿದ್ದೆವು. ನಾನು ಎಕ್ಸ್‌ಪ್ರೆಸ್ ಹೈವೆಗೆ ಕಾವೇರಿ ಮಾತೆಯ ಹೆಸರು ಪ್ರಸ್ತಾಪಿಸುತ್ತಿದ್ದಂತೆಯೇ ಒಬ್ಜೊಬ್ಬರು ಒಂದೊಂದು ಹೆಸರು ಹೇಳುತ್ತಿದ್ದಾರೆ ಎಂದರು.
ಇದನ್ನೂ ಓದಿ : Lehar Singh | ದೆಹಲಿ ಹಾಟ್ ಮಾದರಿಯಲ್ಲಿ ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ವೇಯಲ್ಲಿ ‘ಕರಕುಶಲ ಗ್ರಾಮ’ ಅಭಿವೃದ್ಧಿ ಆಗಲಿ