Site icon Vistara News

Bangalore- Mysuru Express way : 1.5 ಕಿಮೀ ರೋಡ್‌ ಶೋಗೆ ಬಿಜೆಪಿ ರೆಡಿ, ಕ್ರೆಡಿಟ್‌ನಲ್ಲಿ ಪಾಲು ಕೇಳಿದ ಕಾಂಗ್ರೆಸ್‌

Modi Road show

#image_title

ಮಂಡ್ಯ: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯ (Bangalore- Mysuru Express way) ಲೋಕಾರ್ಪಣೆ ಕಾರ್ಯಕ್ರಮ ಮಾರ್ಚ್‌ 12ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ನಡೆಯಲಿದೆ. ಈ ನಡುವೆ, ದಶಪಥ ರಸ್ತೆ ನಿರ್ಮಾಣದ ವಿಚಾರದಲ್ಲಿ ಕಾಂಗ್ರೆಸ್‌ ತಾನೂ ಕ್ರೆಡಿಟ್‌ ಪಡೆಯಲು ಮುಂದಾಗಿದೆ.

ಮಂಡ್ಯದಲ್ಲಿ ಪ್ರಧಾನಿ ರೋಡ್‌ ಶೋ

ದಶಪಥ ರಸ್ತೆ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯದಲ್ಲಿ ಒಂದೂವರೆ ಕಿಲೋ ಮೀಟರ್‌ ರೋಡ್ ಶೋ ನಡೆಸುವ ಮೂಲಕ ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನೂ ನಡೆಸಲಿದ್ದಾರೆ. ಈ ನಿಟ್ಟಿನಲ್ಲಿ ರೋಡ್ ಶೋ ನಡೆಯಲಿರೊ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಎಡಿಜಿಪಿ ಅಲೋಕ್‌ ಕುಮಾರ್‌ ಸ್ಥಳ ಪರಿಶೀಲನೆ ನಡೆಸಿದರು. ಮಂಡ್ಯ ಜಿಲ್ಲಾಧಿಕಾರಿ ಗೋಪಾಲ ಕೃಷ್ಣ, ಎಸ್ಪಿ ಯತೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಜತೆಗಿದ್ದರು.
ಮಾರ್ಚ್‌ 12ರಂದು ಮಂಡ್ಯದ ಐಬಿ ಬಳಿಯಿಂದ ನಂದ ಥೀಯೇಟರ್ ವರೆಗೆ ರೋಡ್ ಶೋ ನಡೆಯಲಿದೆ. ಅವರು ಅಂದು ಪಿಇಎಸ್ ಹೆಲಿಪ್ಯಾಡ್‌ಗೆ ಬರಲಿದ್ದು, ಅಲ್ಲಿಂದ ಮಂಡ್ಯ ನಗರದಲ್ಲಿ ಒಂದುವರೆ ಕಿಮೀ. ರೋಡ್‌ ಶೋ ನಡೆಸಲಿದ್ದಾರೆ.

ರೋಡ್‌ ಶೋ ಬಳಿಕ ಗೆಜ್ಜಲಗೆರೆ ಬಳಿ ಹೆದ್ದಾರಿ ಉದ್ಘಾಟನೆ ನೆರವೇರಿಸಲಿದ್ದಾರೆ. ಅಲ್ಲಿಂದ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವೇದಿಕೆಯ ಸಮೀಪದಲ್ಲೇ ಹೆಲಿಪ್ಯಾಡ್ ನಿರ್ಮಾಣ ಮಾಡಲಿದ್ದು ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ರೋಡ್ ಶೋ ನಡೆಯಲಿರುವ ಒಂದೂವರೆ ಕಿ ಮೀ ದೂರದ ರಸ್ತೆ ಸೇರಿದಂತೆ ಕಾರ್ಯಕ್ರಮ ನಡೆಯುವ ಸ್ಥಳವನ್ನೂ ಎಡಿಜಿಪಿ ಅಲೋಕ್‌ ಕುಮಾರ್‌ ಪರಿಶೀಲಿಸಿದರು. ಪರಿಶೀಲನೆಯ ನಂತರ ಎಸ್ಪಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದರು.

ಅನುಮೋದನೆ ನೀಡಿದ್ದು ಕಾಂಗ್ರೆಸ್‌ ಅಂದ ಮಹದೇವಪ್ಪ

ಈ ನಡುವೆ ದಶಪಥ ನಿರ್ಮಾಣದ ಕ್ರೆಡಿಟ್‌ ಪಡೆದುಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್‌ ತಾನೂ ಕ್ರೆಡಿಟ್‌ ಪಡೆದುಕೊಳ್ಳಲು ಮುಂದಾಗಿದೆ. ʻʻಮೈಸೂರು- ಬೆಂಗಳೂರು ದಶಪಥ ಹೈವೇ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ. ಇದರ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕುʼʼ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮೈಸೂರಿನಲ್ಲಿ ಹೇಳಿದರು.
ʻʻಯುಪಿಎ ಸರ್ಕಾರದ ಅವಧಿಯಲ್ಲಿ 2 ಸಾವಿರ ಕಿ.ಮೀ. ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು 2014 ರಲ್ಲಿ ಅನುಮೋದನೆ ನೀಡಲಾಯಿತು. ರಾಜ್ಯದಲ್ಲಿಯೂ ಆಗ ಕಾಂಗ್ರೆಸ್ ಪಕ್ಷದ ಸರ್ಕಾರವಿತ್ತು. ನಾನು ಸಹ ಲೋಕೋಪಯೋಗಿ ಸಚಿವನಾಗಿದ್ದುಕೊಂಡು ಯೋಜನೆಯ ಅನುಷ್ಠಾನಕ್ಕೆ ಶ್ರಮಿಸಿದ್ದೇನೆ. ಆ ಬಳಿಕ ಬಂದ ಎನ್ ಡಿ ಎ ಸರ್ಕಾರ ಇದನ್ನು ಕಾರ್ಯಗತಗಳಿಸಿದೆ ಅಷ್ಟೆ. ಹಾಗಾಗಿ ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೇ ಸಲ್ಲಬೇಕುʼʼ ಎಂದು ಹೇಳಿದರು.

ಇತ್ತ ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ʻʻತರಾತುರಿಯಲ್ಲಿ ಪ್ರಧಾ‌ನಿ ಮೋದಿ ಅವರನ್ನು ಕರೆಸಿ ಬೆಂಗಳೂರು- ಮೈಸೂರು ಹೆದ್ದಾರಿ ಉದ್ಘಾಟಿಸಲು ಹೊರಟಿದ್ದಾರೆ. ಅವರು ಮೊದಲು ಸರ್ವೀಸ್ ರಸ್ತೆಯನ್ನು ನಿರ್ಮಿಸಲಿ. ಆ ಬಳಿಕ ಟೋಲ್ ಸಂಗ್ರಹಕ್ಕೆ ಮುಂದಾಗಲಿ. ಅದು ಬಿಟ್ಟು ಜನರಿಗೆ ತೊಂದರೆ ಕೊಡೋದು ಬೇಡʼʼ ಎಂದು ಹೇಳಿದರು.

ʻʻನಮ್ಮ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಂತಾ ಘೋಷಿಸಲಾಯಿತು. ಕೇಂದ್ರದಲ್ಲಿ ಸಚಿವರಾಗಿದ್ದ ಆಸ್ಕರ್‌ ಫರ್ನಾಂಡಿಸ್ ಅವರು ಇದಕ್ಕೆ ಸಾಕಷ್ಟು ಶ್ರಮಿಸಿದ್ದಾರೆʼʼ ಎಂದು ಹೇಳಿದ ಡಿ.ಕೆ.ಶಿ, ಈಗ ರಸ್ತೆ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಂಡಿಲ್ಲ. ನಮ್ಮ ಕಾರುಗಳೇ ರಸ್ತೆಯಲ್ಲಿ ಸಂಚರಿಸುವಾಗ ಅಲುಗಾಡುತ್ತೆ. ಅಷ್ಟರಮಟ್ಟಿಗೆ ಗುಣಮಟ್ಟ ಕಳಪೆಯಾಗಿದೆ. ಹೆದ್ದಾರಿ ಉದ್ದಕ್ಕೂ ಶೌಚಾಲಯವನ್ನೇ ನಿರ್ಮಿಸಿಲ್ಲʼʼ ಎಂದರು.

ಇದನ್ನೂ ಓದಿ : Bangalore–Mysore Expressway: ಬೆಂ-ಮೈ ದಶಪಥ ಹೆದ್ದಾರಿಗೆ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹೆಸರಿಡಲು ಕೇಂದ್ರಕ್ಕೆ ಒತ್ತಾಯ

Exit mobile version