Site icon Vistara News

Bangalore Pot hole| ಎಲ್ಲರದ್ದೂ ಒಂದೇ ಬೇಡಿಕೆ, ಮೋದಿ ಜಿ ನಮ್ಮ ಏರಿಯಾಗೆ ಒಮ್ಮೆ ಬಂದು ಹೋಗಿ ಪ್ಲೀಸ್‌!

Bangalore Pothole

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿಗರದ್ದು ಈಗ ಒಂದೇ ಬೇಡಿಕೆ! ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಏರಿಯಾಗೆ ಒಮ್ಮೆ ಬಂದು ಹೋಗಲಿ! ವಾಹನ ಸವಾರರಂತೂ ಮೋದಿ‌‌‌ ಆಗಮನಕ್ಕೆ ದೇವರಿಗೆ ಪ್ರಾರ್ಥನೆಯನ್ನೇ ಸಲ್ಲಿಸುತ್ತಿದ್ದಾರೆ. ಅರೇ ಮೋದಿ ಮೇಲೆ ಯಾಕಿಷ್ಟು ಪ್ರೀತಿ ಬಂದಿದೆ ಎಂದು ತಲೆ ಕೆರೆದುಕೊಳ್ಳಬೇಡಿ. ಇದರಲ್ಲಿ ಪ್ರೀತಿಗಿಂತ ಸಣ್ಣ ಸ್ವಾರ್ಥವೇ ಹೆಚ್ಚಿದೆ. ಮೋದಿ ಒಮ್ಮೆ ಬಂದರೆ ವರ್ಷಗಳ ಕಾಲ ಹದಗೆಟ್ಟಿಗಿರುವ ರಸ್ತೆಗಳು (Bangalore Pot hole) ಸರಿಯಾಗುತ್ತದೆ ಎಂಬುದು ಅವರಿಗೆ ಇರುವ ಆಶಾವಾದ!

ನಿಜವೆಂದರೆ, ಬೆಂಗಳೂರಿನ ಪ್ರಧಾನ ಭಾಗವಾಗಿರುವ ಮೆಜೆಸ್ಟಿಕ್‌ ಪರಿಸರದಲ್ಲಿ ರಸ್ತೆ ಯಾವ ಪರಿ ಹದಗೆಟ್ಟಿದೆ ಎಂದರೆ ಇಲ್ಲಿ ರಸ್ತೆಯೇ ಇಲ್ಲ. ಇರುವುದು ಬರೀ ಗುಂಡಿಗಳಷ್ಟೆ! ರಸ್ತೆ ಗುಂಡಿ ಬಿದ್ದು ಎಷ್ಟೇ ತಿಂಗಳಾದರೂ ಬಿಬಿಎಂಪಿ ಅಧಿಕಾರಿಗಳು ಈ ಕಡೆ ಕಾಲಿಟ್ಟಿರಲಿಲ್ಲ. ಜನರು, ವಾಹನ ಸವಾರರು ರಸ್ತೆಗೆ ಡಾಂಬರು ಹಾಕಿ ಎಂದು ಮನವಿ ಮಾಡಿದರೆ ಇದು ಬಿಬಿಎಂಪಿ ವ್ಯಾಪ್ತಿಗೆ ಬರುವುದಿಲ್ಲ ಎಂದೆಲ್ಲ ಹೇಳಿಕೊಂಡು ಓಡಾಡುತ್ತಿದ್ದರು. ರಸ್ತೆ ಗುಂಡಿ ಕಂಡರೆ ತೇಪೆ ಹಾಕಿ ಸುಮ್ಮನಾಗುತ್ತಿದ್ದರು. ಆದರೆ ಈಗ ಎಸಿ ರೂಮಿನಿಂದ ಹೊರ ಬಂದಿರುವ ಬಿಬಿಎಂಪಿ ಅಧಿಕಾರಿಗಳು ಬಿಸಿಲು, ಮಳೆ ಗಾಳಿ ಎಂದು ಲೆಕ್ಕಹಾಕದೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಸ್ತೆ ಡಾಂಬರೀಕರಣ ಮಾಡುವ ಕಾರ್ಮಿಕರು ಎದ್ದೂಬಿದ್ದೂ ಕೆಲಸ ಮಾಡುತ್ತಿದ್ದಾರೆ. ಒಂದು ಸಣ್ಣ ಗುಂಡಿ ಕಾಣಿಸಿದರೂ ಹೊಸ ರಸ್ತೆಯನ್ನೇ ನಿರ್ಮಾಣ ಮಾಡಲು ಮುಂದಾಗುತ್ತಿದ್ದಾರೆ.

ಇಷ್ಟಕ್ಕೆಲ್ಲ ಕಾರಣ ನರೇಂದ್ರ ಮೋದಿ ಅವರು ಇದೇ ನವೆಂಬರ್ 11ರಂದು ಪಿಎಂ ಬೆಂಗಳೂರಿಗೆ ಬೇರೆ ಬೇರೆ ಯೋಜನೆಗಳನ್ನು ಉದ್ಘಾಟನೆ ಮಾಡಲು ಬರುತ್ತಿದ್ದಾರೆ. ಹೀಗಾಗಿ ಮೋದಿ ಓಡಾಡುವ ರಸ್ತೆಗಳನ್ನೆಲ್ಲ ಫಳಫಳ ಹೊಳೆಯುವಂತೆ ರೆಡಿ ಮಾಡುತ್ತಿದ್ದಾರೆ. ರಸ್ತೆ ಗುಂಡಿಯಿಂದ ಜನರು ಪ್ರಾಣ ಕಳೆದರು ಕೊಂಡರು ಕೈಕಟ್ಟಿ ಬಾಯಿ ಮುಚ್ಚಿ ಕುಳಿತಿದ್ದ ಅಧಿಕಾರಿಗಳು ಈಗ ನಾ ಮುಂದು ತಾ ಮುಂದು ಎಂದು ರಸ್ತೆಗಿಳಿದು ಕೆಲಸ ಮಾಡಿಸುತ್ತಿದ್ದಾರೆ.

ಬೆಂಗಳೂರಿನ ಹೃದಯ ಭಾಗದಲ್ಲಿರುವ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದ ಮುಖ್ಯರಸ್ತೆಯು ಅಕ್ಷರಶಃ ಗುಂಡಿಯಿಂದ ಕೂಡಿದ ರಸ್ತೆಯಾಗಿ ಮಾರ್ಪಟಿತ್ತು. ಸ್ವತಃ ಟ್ರಾಫಿಕ್ ಪೊಲೀಸರೇ ರಸ್ತೆ ಗುಂಡಿ ಮುಚ್ಚಲು ಮನವಿ ಮಾಡಿಕೊಂಡಿದ್ದರು. ಆಗ ಸಂಬಂಧ ಪಟ್ಟವರು ತಿರುಗಿಯೂ ನೋಡಿರಲಿಲ್ಲ. ಆದರೆ, ಪಿಎಂ ನರೇಂದ್ರ ಮೋದಿ ಅವರು, ವಂದೇ ಮಾತರಂ ರೈಲಿಗೆ ಹಸಿರು ನಿಶಾನೆ ತೋರಿಸಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳು ಇಡೀ ರಸ್ತೆಯನ್ನೇ ಡಾಂಬರೀಕರಣ ಮಾಡುತ್ತಿದ್ದಾರೆ.

ಹಿಂದಿನ ತಪ್ಪು ಮರುಕಳಿಸದಂತೆ ಎಚ್ಚರಿಕೆ
ಕಳೆದ ಬಾರಿ ಪಿಎಂ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಹೋದ ಬಳಿಕ ಕಳಪೆ ರಸ್ತೆ ಕಾಮಗಾರಿಯು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿ ಸುದ್ದಿಯಾಗಿತ್ತು. ಹೀಗಾಗಿ ಈ ಬಾರಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌, ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಮೆಜೆಸ್ಟಿಕ್‌ನ ಒಂದು ಭಾಗದಲ್ಲಿ ಈಗಾಗಲೇ ವೈಟ್ ಟಾಪಿಂಗ್‌ ಮಾಡಲಾಗಿದೆ. ಮತ್ತೊಂದು ಭಾಗದಲ್ಲಿ ಟಾಪಿಂಗ್‌ ಮಾಡಲು ಸಾಧ್ಯವಾಗಿರಲಿಲ್ಲ. ಹೆಚ್ಚು ವಾಹನ ಸಂಚಾರ ಇರುವುದರಿಂದ ಸಂಚಾರಿ ಪೊಲೀಸರ ಅನುಮತಿ ಸಿಗುತ್ತಿರಲಿಲ್ಲ ಎಂದಿದ್ದಾರೆ.

ಸದ್ಯ ರಸ್ತೆ ಕಾಮಗಾರಿಗಾಗಿ ಸಂಚಾರಿ ಪೊಲೀಸರಿಗೆ 20 ದಿನ ಕಾಲಾವಕಾಶ ಕೇಳಲಾಗಿತ್ತು. 7 ದಿನ ಹಗಲು, 8 ದಿನ ರಾತ್ರಿ ಆದರೂ ಸಮಯಾವಕಾಶ ಬೇಕೆಂದು ಕೇಳಿದ್ದೇವೆ. ವೈಟ್ ಟ್ಯಾಪಿಂಗ್ ಕಾಮಗಾರಿ ಅಪೂರ್ಣ ಆಗಿರುವುದರಿಂದ ರಸ್ತೆಗೆ ಡಾಂಬರೀಕರಣ ಮಾಡಿರಲಿಲ್ಲ ಎಂದು ಮುಖ್ಯ ಆಯುಕ್ತರು ಮಾಹಿತಿ ನೀಡಿದ್ದಾರೆ. ಇತ್ತ, ಬಿಬಿಎಂಪಿ ಅಧಿಕಾರಿಗಳಿಗೆ ಪಿಎಂ ಮೋದಿ ಬಂದಾಗ ಅಷ್ಟೇ ಹೊಸ ರಸ್ತೆ ನಿರ್ಮಾಣ ಮಾಡುವುದೆಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನೂ ಓದಿ | Pothole | ಯಮಸ್ವರೂಪಿ ರಸ್ತೆ ಗುಂಡಿಯಿಂದಾಗಿ ಕೋಮಾಗೆ ಹೋದ ಬೈಕ್‌ ಸವಾರ

Exit mobile version