ಬೆಂಗಳೂರು: ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ರಾಜ್ಯದಲ್ಲಿ ನಡೆದಿರುವ ವಿಧಾನ ಪರಿಷತ್‍ನ (MLC Election) ಬೆಂಗಳೂರು ಶಿಕ್ಷಕರ ಕ್ಷೇತ್ರದ (Bangalore Teachers Constituency) ಉಪ ಚುನಾವಣೆಯ ಫಲಿತಾಂಶ (By election results) ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ (Congress candidate Puttanna) ಜಯಶಾಲಿಯಾಗಿದ್ದಾರೆ. ಈ ಮೂಲಕ ಬಿಜೆಪಿ – ಜೆಡಿಎಸ್ ಮೈತ್ರಿ (BJP JDS Alliance) ಅಭ್ಯರ್ಥಿಗೆ ಸೋಲಾಗಿದೆ. 1507 ಅಂತರದಲ್ಲಿ ಪುಟ್ಟಣ್ಣ ಗೆಲುವು ಕಂಡಿದ್ದಾರೆ.
ಬೆಂಗಳೂರಿನ ಸರ್ಕಾರಿ ಆರ್ಟ್ಸ್ ಕಾಲೇಜ್‌ನಲ್ಲಿ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಫಲಿತಾಂಶವನ್ನು ಘೋಷಣೆ ಮಾಡಲಾಗಿದೆ. ಹೀಗಾಗಿ ಕಾಂಗ್ರೆಸ್ ಬೆಂಬಲಿಗರು ಕಾಲೇಜಿನ ಮುಂಭಾಗದಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ. ಡೋಲು ಬಡಿದು ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: Ramanagara Lawyers: ರಾಮನಗರದಲ್ಲಿ ಬಿಜೆಪಿ ಪ್ರೇರಿತ ಪ್ರತಿಭಟನೆ; ರಾಜಕೀಯ ಬಿಟ್ಟರೆ ವಕೀಲರ ಜತೆ ಚರ್ಚೆ: ಡಿಕೆಶಿ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯು ಫೆ. 17ರಂದು ನಡೆದಿತ್ತು. ಒಟ್ಟಾರೆ ಸುಮಾರು ಶೇ. 86.38ರಷ್ಟು ಮತದಾನವಾಗಿತ್ತು. ಬೆಂಗಳೂರು ನಗರ ಬಿಬಿಎಂಪಿ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಈ ಉಪ ಚುನಾವಣೆಗೆ ಮತದಾನ ನಡೆದಿತ್ತು. ಅಲ್ಲದೆ, ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಮತದಾನವಾಗಿತ್ತು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.83.97, ಬಿಬಿಎಂಪಿ ಕೇಂದ್ರದಲ್ಲಿ ಶೇ.83.19, ಬಿಬಿಎಂಪಿ ಉತ್ತರದಲ್ಲಿ ಶೇ.82.43, ಬಿಬಿಎಂಪಿ ದಕ್ಷಿಣದಲ್ಲಿ 82.51ರಷ್ಟು ಮತದಾನವಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ.96.02ರಷ್ಟು ಮತದಾನವಾಗಿದ್ದರೆ, ರಾಮನಗರ ಜಿಲ್ಲೆಯಲ್ಲಿ ಶೇ.95.77ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ, ಜೆಡಿಎಸ್ – ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎ.ಪಿ. ರಂಗನಾಥ ಸೇರಿದಂತೆ ಚುನಾವಣೆಯಲ್ಲಿ 9 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.
ಪುಟ್ಟಣ್ಣ ಅವಧಿ ಎಲ್ಲಿಯವರೆಗೆ?
ಈಗ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಉಪ ಚುನಾವಣೆಯಾಗಿದೆ. ಈ ಹಿಂದೆ ಸಹ ಪುಟ್ಟಣ್ಣ ಅವರು ಬಿಜೆಪಿಯಿಂದ ಜಯಗಳಿಸಿದ್ದರು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ರಾಜಾಜಿನಗರದಲ್ಲಿ ಸ್ಪರ್ಧೆ ಮಾಡಿದ್ದರು. ಆದರೆ, ಅವರು ಅಲ್ಲಿ ಸೋಲು ಕಂಡಿದ್ದರು. ಹೀಗಾಗಿ ಮತ್ತೆ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಈಗ ಜಯ ಕಂಡಿದ್ದಾರೆ. ಇವರ ವಿಧಾನ ಪರಿಷತ್‍ನ ಸದಸ್ಯತ್ವದ ಅವಧಿ 2026ರ ನವೆಂಬರ್ 11ರವರೆಗೆ ಇರಲಿದೆ.
ಇದನ್ನೂ ಓದಿ: Karnataka Budget Session 2024: ಕೇಂದ್ರದಿಂದ ಅನ್ಯಾಯ ಆಗಿದೆಯೇ? ಬಹಿರಂಗ ಚರ್ಚೆಗೆ ಬನ್ನಿ: ಸಿಎಂಗೆ ಎಚ್‌ಡಿಕೆ ಸವಾಲು
ಕಳೆದ ಬಾರಿ ನಡೆದಿದ್ದ ಚುನಾವಣೆಯಲ್ಲಿಯೂ ಇದೇ ರಂಗನಾಥ್ ಮತ್ತು ಪುಟ್ಟಣ್ಣ ಅವರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಕೊನೆಗೆ ಪುಟ್ಟಣ್ಣ ಜಯಗಳಿಸಿದ್ದರು. ಈಗ ಅದೇ ಪುಟ್ಟಣ್ಣ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಗೆದ್ದು ಬಂದಂತಾಗಿದೆ.
ಒಟ್ಟು ಮತಗಳ ವಿವರ:
- ಪುಟ್ಟಣ್ಣ- 8260
- ಎ.ಪಿ. ರಂಗನಾಥ್- 6753
- ತಿರಸ್ಕೃತ ಮತಗಳು- 1239
- ಗೆಲುವಿನ ಅಂತರ- 1507