ಬೆಂಗಳೂರು: ಬೆಂಗಳೂರನ್ನೇ ನಡುಗಿಸಬಹುದಾಗಿದ್ದ ಬೃಹತ್ ಸ್ಫೋಟ (Bangalore Blast) ಸಂಚೊಂದನ್ನು ವಿಫಲಗೊಳಿಸಲಾಗಿದೆ (Bangalore Terror). ಬೆಂಗಳೂರಿನ ಸಿಸಿಬಿ ಪೊಲೀಸರು (Bangalore CCB Police) ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಐವರು ಶಂಕಿತ ಉಗ್ರರನ್ನು (Five suspected terrorists) ಬಂಧಿಸಲಾಗಿದ್ದು, ಅವರಿಂದ ವಶಪಡಿಸಿಕೊಂಡ ಒಂದೊಂದು ವಸ್ತುಗಳು ಕೂಡಾ ಭಯ ಹುಟ್ಟಿಸುವಂತಿವೆ.
ಬೆಂಗಳೂರಿನ ಕನಕ ನಗರದ ಸುಲ್ತಾನಾ ಪಾಳ್ಯದ ಮಸೀದಿ (Sultanapalya Mosque) ಬಳಿ ಟೆರರ್ ಮೀಟಿಂಗ್ (Terror Meeting) ನಡೆಯುತ್ತಿದ್ದ ಸಂದರ್ಭದಲ್ಲೇ ಸಿಸಿಬಿ ಪೊಲೀಸರು ದಾಳಿ ದಾಳಿ ನಡೆಸಿ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್ ಮತ್ತು ರಬ್ಬಾನಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. 2017ರಲ್ಲಿ ಆರ್ ಟಿ ನಗರದಲ್ಲಿ ನಡೆದ ನೂರ್ ಕೊಲೆ ಪ್ರಕರಣದಲ್ಲಿ ಭಾಗಿಗಳಾಗಿದ್ದ ಈ ಐವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಜಾಮೀನು ಪಡೆದು ಬಿಡುಗಡೆ ಹೊಂದಿದ್ದರು. ಇವರೊಂದಿಗೇ ಜೈಲು ಸೇರಿದ್ದ ಜುನೈದ್ ಎಂಬಾತನಿಗೆ ಜೈಲಿನಲ್ಲಿ 2008ರ ಬೆಂಗಳೂರು ಸರಣಿ ಸ್ಫೋಟದ ರೂವಾರಿ ಟಿ. ನಜೀರ್ ಎಂಬಾತನ ಜತೆ ಸಂಪರ್ಕ ಬೆಳೆದಿತ್ತು. ಆತ ಜುನೈದ್‌ನನ್ನು ಬಳಸಿಕೊಂಡು ದೊಡ್ಡದೊಂದು ಷಡ್ಯಂತ್ರಕ್ಕೆ ಮುಂದಾಗಿದ್ದ.
ಜುನೈದ್ ಈ ಐವರು ಶಂಕಿತ ಉಗ್ರರನ್ನು ಬಳಸಿಕೊಂಡು ಬೆಂಗಳೂರಿನಲ್ಲಿ ದೊಡ್ಡದೊಂದು ಸ್ಫೋಟ ನಡೆಸಲು ಸಂಚು ನಡೆಸುತ್ತಿದ್ದರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಬಂಧಿತ ಶಂಕಿತ ಉಗ್ರರನ್ನು ಇದೀಗ ಅಜ್ಞಾತ ಸ್ಥಳದಲ್ಲಿಟ್ಟು ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ.
ಬಂಧನದ ವೇಳೆ ಸಿಸಿಬಿಗೆ ಸಿಕ್ಕಿದ್ದೇನು?
ಬೆಂಗಳೂರಿನ ಕನಕ ನಗರದ ಸುಲ್ತಾನಾ ಪಾಳ್ಯದ ಮಸೀದಿ ಬಳಿ ನಡೆಸಿದ ದಾಳಿಯಲ್ಲಿ 7 ನಾಡ ಪಿಸ್ತೂಲ್, 42 ಜೀವಂತ ಗುಂಡುಗಳು, 2 ಸ್ಯಾಟಲೈಟ್ ಫೋನ್ ಮಾದರಿಯ ವಾಕಿಟಾಕಿ, ಮೊಬೈಲ್ ಫೋನ್, ವಿವಿಧ ಕಂಪನಿ ಸಿಮ್‌ಗಳು, ಲ್ಯಾಪ್ ಟಾಪ್ ಲಭ್ಯವಾಗಿದೆ. ಇವುಗಳನ್ನು ಬಳಸಿಕೊಂಡು ಈ ಶಂಕಿತರು ಏನು ಮಾಡಲು ಬಯಸಿದ್ದರು ಎಂಬ ಬಗ್ಗೆ ತನಿಖೆ ನಡೆಯಬೇಕಾಗಿದೆ.
ಬೆಂಗಳೂರು ಸಿಟಿಯನ್ನು ಟಾರ್ಗೆಟ್ ಮಾಡಿದ್ದ ಶಂಕಿತ ಉಗ್ರರು
ಪೊಲೀಸರ ಮಾಹಿತಿ ಪ್ರಕಾರ ವಶಕ್ಕೆ ಪಡೆದ ಎಲ್ಲಾ ಶಂಕಿತರು ಬೆಂಗಳೂರು ಮೂಲದವರೇ. ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದ ಇವರು ವಿದ್ವಂಸಕ ಕೃತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದರು ಎನ್ನಲಾಗಿದೆ.
ಬಾಂಬ್ ಸ್ಫೋಟಗಳನ್ನು ನಡೆಸುವುದು ಹೇಗೆ ಎನ್ನುವುದರ ಬಗ್ಗೆ ತರಬೇತಿ ಪಡೆದಿದ್ದ ಇವರು, ಬೆಂಗಳೂರಿನಲ್ಲಿ ಎಲ್ಲೆಲ್ಲಿ ಬ್ಲಾಸ್ಟ್ ಮಾಡಬಹುದು, ಅದರಿಂದ ಏನೇನು ಸಮಸ್ಯೆ ಆಗುತ್ತದೆ, ಯಾರ್ಯಾರಿಗೆ ಏನೇನು ಸಂದೇಶ ರವಾನೆಯಾಗಲಿದೆ ಎಂಬ ವಿಚಾರಗಳ ಬಗ್ಗೆ ಸ್ಪಷ್ಟ ಮಾಹಿತಿ ಶೇಖರಿಸಿದ್ದರು ಎಂದು ತಿಳಿದುಬಂದಿದೆ.
ಎಲ್ಲರೂ ರೌಡಿ ಶೀಟರ್‌ಗಳು, ಜೈಲಿನಲ್ಲಿ ಆಯ್ತು ಉಗ್ರ ಸಂಪರ್ಕ
ಸಿಸಿಬಿ ವಶದಲ್ಲಿರುವ ಐವರು ಶಂಕಿತರು ಕೂಡ ರೌಡಿಶೀಟರ್‌ಗಳಾಗಿದ್ದಾರೆ. ಆರ್ ಟಿ ನಗರ ಪ್ರದೇಶದಲ್ಲಿ ಇವರು ದುಷ್ಕೃತ್ಯಗಳನ್ನು ನಡೆಸುತ್ತಿದ್ದರು. ಕೊರೊನಾ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯನ್ನು ಅಪಹರಣ ಮಾಡಿ ಕೊಲೆ ಮಾಡಿದ್ದ ಈ ದುಷ್ಟರು ಜೈಲು ಸೇರಿದ್ದರು. ಅಲ್ಲಿ ಈ ಐವರಿಗೂ ಉಗ್ರರ ಪರಿಚಯ ಆಗಿತ್ತು.
ಅಲ್ಲಿಂದ ಹೊರಗೆ ಬಂದ ಬಳಿಕ ಸಂಪರ್ಕ ಮುಂದುವರಿಸಿಕೊಂಡು ಉಗ್ರ ತರಬೇತಿಯನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ. ಜೈಲಿನಿಂದ ಹೊರಬಂದ ಬಳಿಕ ಅವರು ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು, ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್ ಹಾಕಿದ್ದರು ಎಂದು ತಿಳಿದುಬಂದಿದೆ.
ಬಾಂಬ್‌ಗೆ ಬೇಕಾದ ಪರಿಕರಗಳು ಸಿದ್ಧ
ಈ ಐವರು ಶಂಕಿತ ಉಗ್ರರು ಬಾಂಬ್ ತಯಾರಿಗೆ ಬೇಕಾದ ಎಲ್ಲ ಕಚ್ಚಾ ವಸ್ತುಗಳನ್ನು ಸಿದ್ಧಪಡಿಸಿಕೊಂಡಿದ್ದರು. ಇನ್ನೂ ಕೆಲವರನ್ನು ಸೇರಿಸಿಕೊಂಡು ಸ್ಪೋಟಕ್ಕೆ ಪ್ಲ್ಯಾನ್ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದೀಗ ಅವರು ಯಾರನ್ನು ಸೇರಿಸಿಕೊಳ್ಳಬೇಕು ಎಂದು ಪ್ಲ್ಯಾನ್ ಮಾಡಿದ್ದರು ಎಂಬ ಮಾಹಿತಿಯನ್ನು ಸಿಸಿಬಿ ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ಒಟ್ಟಿನಲ್ಲಿ ಐವರು ಉಗ್ರರನ್ನು ಬಂಧಿಸುವ ಮೂಲಕ ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ದೊಡ್ಡ ಸ್ಫೋಟವನ್ನು ತಡೆದಂತಾಗಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಐವರು ಶಂಕಿತ ಉಗ್ರರ ಬಂಧನ; ಭಾರಿ ವಿಧ್ವಂಸಕ ಕೃತ್ಯಕ್ಕೆ ನಡೆದಿತ್ತು ಪ್ಲ್ಯಾನ್!