Site icon Vistara News

Bangalore Water Crisis: ಬೆಂಗಳೂರಿನ ಜಲದಾಹ ನೀಗಿಸಲು ತ್ಯಾಜ್ಯ ನೀರಿನ ಮರುಬಳಕೆ: ಸಿದ್ದರಾಮಯ್ಯ

CM Siddaramaiah

If You give lead of 60 thousand votes in Varuna, will remain in the position of CM: Says Siddaramaiah

ಬೆಂಗಳೂರು: ಕೆ.ಸಿ.ವ್ಯಾಲಿ ಯೋಜನೆ ರೀತಿ ಸಂಸ್ಕರಿಸಿದ ತ್ಯಾಜ್ಯ ನೀರಿನಿಂದ ಬೆಂಗಳೂರಿನ‌ಲ್ಲಿ ಬತ್ತಿ ಹೋಗಿರುವ ಪ್ರಮುಖ 14 ಕೆರೆಗಳನ್ನು ತುಂಬಿಸಲು ಸೂಚಿಸಲಾಗಿದೆ. ಇದರಿಂದ ಅಂತರ್ಜಲಮಟ್ಟ ಹೆಚ್ಚಾಗಿ ಬೋರ್‌ವೆಲ್‌ಗಳಿಗೆ ಮರುಜೀವ ಬರುತ್ತದೆ. ಪ್ರತಿ ದಿನ ಅಧಿಕಾರಿಗಳು ಸಭೆ ನಡೆಸಿ ವಾರಕ್ಕೊಮ್ಮೆ ಕ್ರಿಯಾಯೋಜನೆ ಸಿದ್ದಪಡಿಸುತ್ತಾರೆ. ಭವಿಷ್ಯದಲ್ಲಿ ಎಂತಹದ್ದೇ ಸಂದರ್ಭದಲ್ಲೂ ನೀರಿನ ಕೊರತೆ (Bangalore Water Crisis) ಆಗದಂತೆ ತಜ್ಞರ ಸಮಿತಿಯನ್ನು ರಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ನಗರದ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಅವರು, ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ. ಬೇಕಾದಷ್ಟು ಹಣವನ್ನು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಒದಗಿಸುತ್ತಿದೆ. ನೀರಿನ ಸಮಸ್ಯೆ ಆಲಿಸಲು ಕಂಟ್ರೋಲ್ ರೂಮ್‌ಗಳ ಸಂಖ್ಯೆ ಹೆಚ್ಚಿಸುವ ಮೂಲಕ ದೂರು‌ಗಳು ಬಂದ ತಕ್ಷಣ ಸ್ಪಂದಿಸಿ, ನೀರು ಸರಬರಾಜು ಮಾಡಲು ಸೂಚಿಸಲಾಗಿದೆ. ಇನ್ನು ಭವಿಷ್ಯದಲ್ಲಿ ಎಂಥಹದ್ದೇ ಸಂದರ್ಭದಲ್ಲೂ ನೀರಿನ ಕೊರತೆ ಆಗದಂತೆ ತಜ್ಞರ ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಾವೇರಿ, ಕಬಿನಿ ಜಲಾಶಯದಲ್ಲಿ ಜೂನ್ ಅಂತ್ಯದವರೆಗೂ ಸಾಕಾಗುವಷ್ಟು ಕುಡಿಯುವ ನೀರನ್ನು ಸಂಗ್ರಹಿಸಿದ್ದೇವೆ. ಕೆಆರ್‌ಎಸ್‌ನಲ್ಲಿ 11.02, ಕಬಿನಿಯಲ್ಲಿ 9.02 ಟಿಎಂಸಿ ನೀರು ಸಂಗ್ರಹವಿದೆ ಎಂದ ಅವರು, 14000 ಸರ್ಕಾರಿ ಬೋರ್‌ವೆಲ್‌ಗಳಲ್ಲಿ 6900 ಬತ್ತಿವೆ. ಹೀಗಾಗಿ ನೀರಿನ ಸಮಸ್ಯೆ ಆಗಿದೆ. 110 ಹಳ್ಳಿಗಳಲ್ಲಿ 55 ಹಳ್ಳಿಗಳಿಗೆ ಸಮಸ್ಯೆ ಆಗಿದೆ. ಜೂನ್ ಅಂತ್ಯಕ್ಕೆ ಕಾವೇರಿ 5ನೇ ಹಂತದ ಕಾಮಗಾರಿ ಮುಕ್ತಾಯವಾಗಿ 775 MLD ಹೆಚ್ಚುವರಿ ನೀರು ಸಿಗತ್ತೆ. ಇದು 110 ಹಳ್ಳಿಗಳಿಗೆ ಸರಬರಾಜು ಆಗುತ್ತದೆ. 313 ಸ್ಥಳಗಳಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸುತ್ತಿದ್ದೇವೆ. 1200 ನಿಷ್ಕ್ರಿಯ ಬೋರ್‌ಗಳಿಗೆ ಮರುಜೀವ ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ | Water Crisis: ಈಜು ಕೊಳಕ್ಕೆ ನೀರು ಬಳಸಿದರೂ ಬೀಳುತ್ತೆ ಭಾರಿ ದಂಡ; ಜಲ ಮಂಡಳಿ ಎಚ್ಚರಿಕೆ

ಕೊಳೆಗೇರಿ, ಎತ್ತರದ ಪ್ರದೇಶದಲ್ಲಿ ಹಾಗೂ ಬೋರ್‌ವೆಲ್ ಮೇಲೆ ಅವಲಂಬಿತ ಪ್ರದೇಶಗಳಲ್ಲಿ ಕೆಎಂಎಫ್‌ ಸೇರಿ ಎಲ್ಲಾ ಖಾಸಗಿ ಟ್ಯಾಂಕರ್‌ಗಳನ್ನು ಬಳಸಲು ಹೇಳಿದ್ದೇನೆ. ಕಂಟ್ರೋಲ್ ರೂಮ್‌, ಟಾಸ್ಕ್ ಫೋರ್ಸ್ ಸಂಖ್ಯೆ ಹೆಚ್ವಿಸಿ ದೂರುಗಳಿಗೆ ತಕ್ಷಣ ಸ್ಪಂದಿಸಲು ಹೇಳಲಾಗಿದೆ. ಪಾರ್ಕ್‌ಗಳಲ್ಲಿ ಕುಡಿಯುವ ನೀರು ಬಳಸದಂತೆ, ಶುದ್ಧೀಕರಿಸಿದ ನೀರು ಬಳಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ದೂರು ಬಂದರೆ ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿಯವರೇ ಹೊಣೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಬೆಂಗಳೂರಿಗೆ 500 MLD ನೀರು ಕೊರತೆ ಇದೆ. ಈ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಬೋರ್‌ವೆಲ್‌ಗಳ ಮೇಲೆ ಅವಲಂಬಿತ ಜನರಿಗೆ ನೀರಿನ ತೊಂದರೆ ಆಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಇನ್ನು 1700 ನೀರಿನ ಟ್ಯಾಂಕರ್ ನೋಂದಣಿ ಆಗಿದ್ದು, ಮಾಲ್‌ಗಳು ಸೇರಿ ಖಾಸಗಿಯಾಗಿ ಇರುವ ಬೋರ್ ವೆಲ್‌ಗಳಿಂದ ಟ್ಯಾಂಕರ್ ತುಂಬಿಸಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಎಲ್ಲೂ ನೀರಿಗೆ ತೊಂದರೆ ಆಗದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಕುಡಿಯುವ ನೀರಿನ ದುಂದುವೆಚ್ಚ ಮಾಡಬಾರದು. ಗಾರ್ಡನ್‌ಗಳಿಗೆ ಕುಡಿಯುವ ನೀರು ಬಳಸದಂತೆ ಎಚ್ಚರಿಕೆ ನೀಡಲಾಗಿದೆ. ಮಳೆನೀರು ಕೊಯ್ಲು, ಬಳಸಿದ ನೀರಿನ ಶುದ್ಧೀಕರಿಸಿ ಹೆಚ್ಚಿನ ಪ್ರಮಾಣದಲ್ಲಿ ಮರು ಬಳಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಕುಡಿಯಲು ಮತ್ತು ಕೈಗಾರಿಕೆಗಳಿಗೆ ಒಟ್ಟು 2600 ಎಂ.ಎಲ್. ಡಿ. ನೀರು ಅಗತ್ಯವಿದೆ. ಇದರಲ್ಲಿ 1450 ಎಂ.ಎಲ್. ಡಿ. ನೀರು ಕಾವೇರಿ ನದಿಯಿಂದ ದೊರೆಯುತ್ತಿದೆ. 650 ಎಂಎಲ್‌ಡಿ ನೀರು ಕೊಳವೆ ಬಾವಿಯಿಂದ ದೊರೆಯುತ್ತಿದ್ದು, 500 ಎಂಎಲ್‌ಡಿ ನೀರಿನ ಕೊರತೆ ಇದೆ. ಮುಖ್ಯವಾಗಿ ಕೊಳೆಗೆರಿಗಳು, ಎತ್ತರದ ಪ್ರದೇಶಗಳು ಹಾಗೂ ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಸಮಸ್ಯೆ ಆಗದಂತೆ ಸೂಚಿಸಲಾಗಿದೆ

ನೀರಿನ ದುರುಪಯೋಗ ತಡೆಗಟ್ಟಲು ಸೂಚಿಸಲಾಗಿದ್ದು, ಈ ಬಗ್ಗೆ 143 ಟಾಸ್ಕ್ ಫೋರ್ಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪ್ರಮಾಣ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಕೇಂದ್ರೀಯ ಸಹಾಯವಾಣಿ ಸಂಖ್ಯೆ 1916 ಹಾಗೂ ವಾಟ್ಸಾಪ್ ಮೂಲಕ ದೂರು ದಾಖಲಿಸಬಹುದು. ಈ ದೂರುಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಮೋದಿ ಸರ್ಕಾರದಿಂದ ರಾಜ್ಯಕ್ಕೆ ಒಂದೇ ಒಂದು ಪೈಸೆ ಬರ ಪರಿಹಾರ ಕೊಟ್ಟಿಲ್ಲ

ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಬರಗಾಲ ಬಂದು ಐದು ತಿಂಗಳಾಯ್ತು. ಮೋದಿಯವರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಒಂದೇ ಒಂದು ಪೈಸೆ ಹಣ ಕೊಟ್ಟಿಲ್ಲ. ಏಕೆ? 18171 ಕೋಟಿ ಬರ ಪರಿಹಾರ ಹಣ ಕೇಳಿದ್ವಿ. ಒಂದು ರೂಪಾಯಿಯನ್ನೂ ಕೊಡಲಿಲ್ಲ, 48 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಆಗಿದೆ. ಬರ ಪರಿಹಾರ ಕೊಡಿ ಅಂದ್ವಿ ಕೊಡಲಿಲ್ಲ. ಮತ್ತೆ ಮೋದಿಯವರಿಗೆ “ನಮ್ಮಲ್ಲಿ ಹಣ ಇಲ್ಲ” ಎಂದು ಆರೋಪಿಸುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಕೇಂದ್ರದಿಂದ ನಯಾಪೈಸೆ ಬರದಿದ್ದರೂ ನಾವು ರಾಜ್ಯ ಬೊಕ್ಕಸದಿಂದಲೇ ರೈತರ ಖಾತೆಗೆ ಬರ ಪರಿಹಾರ ಹಾಕಿದ್ದೇವೆ. ಬರಗಾಲದಲ್ಲಿ ನರೇಗಾ ದಿನಗಳನ್ನು ಹೆಚ್ಚಿಸಿ ಎಂದು ಕೇಳಿದ್ವಿ. ಇವತ್ತಿನವರೆಗೂ ಮಾಡಿಲ್ಲ. ಕೇಂದ್ರ ಸರ್ಕಾರ ಅಂದರೆ ಕೇವಲ GST ತಗೊಳೋಕೆ, ತೆರಿಗೆ ಸಂಗ್ರಹಿಸಿ ತಮ್ಮಲ್ಲಿ ಇಟ್ಟುಕೊಂಡು ರಾಜ್ಯಗಳಿಗೆ ಅನ್ಯಾಯ ಮಾಡೋಕೆ ಮಾತ್ರ ಇರೋದಾ? ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಇದೆ, ಅವರು ನಮ್ಮ ಮೇಲೆ ಆರೋಪಿಸುತ್ತಿದ್ದಾರೆ. ನುಡಿದಂತೆ ನಡೆದಿದ್ದೇವೆ. ಜನರ ಕೆಲಸ ಮಾಡಿದ್ದೇವೆ. ಜನರ ಭಾವನೆಗಳನ್ನು ಕೆರಳಿಸಿ ಅವರಿಗೆ ದ್ರೋಹ ಆಗಿಲ್ಲ. ಹೀಗಾಗಿ ನಾವು ಕನಿಷ್ಠ 20 ಲೋಕಸಭಾ ಸ್ಥಾನ ಗೆಲ್ತೀವಿ ಎಂದರು.

ಇದನ್ನೂ ಓದಿ | Bangalore Water Crisis: ಜಲಬಿಕ್ಕಟ್ಟಿನ ನಡುವೆಯೂ‌, ಬಳಸಿದ ನೀರಿನ ನಿರ್ವಹಣೆಯಲ್ಲಿ ಬೆಂಗಳೂರು ‌2ನೇ ರ್‍ಯಾಂಕ್!

ರಾಮ ಮತ್ತು ಮೋದಿ ಹೆಸರಲ್ಲಿ ಚುನಾವಣೆಗೆ ಹೋಗ್ತೀವಿ ಎನ್ನುವ ಬಿಜೆಪಿ ನಾಯಕರ ಮಾತಿಗೆ ಪ್ರತಿಕ್ರಿಯಿಸಿದ ಸಿಎಂ, ವಿಧಾನಸಭಾ ಚುನಾವಣೆಯಲ್ಲಿ ಮೋದಿಯವರು ಪ್ರಚಾರ ಮಾಡಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಮೋದಿ ಪ್ರಚಾರದ ಫಲ ಇಷ್ಟೆ ಎಂದು ಹೇಳಿದರು.

Exit mobile version