ಮೈಸೂರು: ಸುಮಾರು 8000 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bangalore–Mysore Expressway) ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಫೆ.27ರಿಂದ ಮೊದಲ ಹಂತದ ಟೋಲ್ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಬೆಂಗಳೂರು-ನಿಡಘಟ್ಟವರೆಗಿನ ಹೆದ್ದಾರಿಯಲ್ಲಿ ಸಾಗಲು ವಾಹನಗಳಿಗೆ ನಿಗದಿತ ಸುಂಕ ನೀಡಬೇಕಾಗಿದೆ.
ಫೆ.೨7ರಂದು ಬೆಳಗ್ಗೆ ೮ರಿಂದ ಟೋಲ್ ವಸೂಲಾತಿ ಆರಂಭವಾಗಲಿದೆ. ಈ ಸಂಬಂಧ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಭಾನುವಾರ ಆದೇಶ ಹೊರಡಿಸಿದೆ. ಒಟ್ಟು 118 ಕಿ.ಮೀ ಉದ್ದದ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ನಿರ್ಮಾಣವಾಗುತ್ತಿದ್ದು, ಈ ಪೈಕಿ ಬೆಂಗಳೂರು-ನಿಡಘಟ್ಟ ನಡುವಿನ ಮೊದಲ ಹಂತದ 55.63 ಕಿ.ಮೀ. ಕಾಮಗಾರಿ ಪೂರ್ಣವಾಗಿದೆ. ಮಾರ್ಚ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಉದ್ಘಾಟಿಸಲಿದ್ದಾರೆ. ಹೀಗಾಗಿ ಮಾಸಾಂತ್ಯದಿಂದಲೇ ಟೋಲ್ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಆರು ಪಥಗಳ ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸುವವರಿಗೆ ಮಾತ್ರ ಟೋಲ್ ಅನ್ವಯ ಆಗಲಿದ್ದು, ಸರ್ವಿಸ್ ರಸ್ತೆಯಲ್ಲಿ ಸಂಚಾರಕ್ಕೆ ಯಾವುದೇ ಟೋಲ್ ಇರುವುದಿಲ್ಲ. ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದ್ದು, ನಿಯಮಿತವಾಗಿ ಪ್ರಯಾಣಿಸುವವರಿಗೆ ತಿಂಗಳ ಪಾಸ್ ಸೌಲಭ್ಯವೂ ಇದೆ.
ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವವರಿಂದ ಟೋಲ್ ಸಂಗ್ರಹಕ್ಕೆ ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ ಗ್ರಾಮದ ಬಳಿ ಟೋಲ್ ಕೇಂದ್ರ ನಿರ್ಮಾಣವಾಗಿದೆ. ಇನ್ನು ಮೈಸೂರು ಕಡೆಯಿಂದ ಪ್ರಯಾಣಿಸುವವರಿಗಾಗಿ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಬಳಿ ಟೋಲ್ ಪ್ಲಾಜಾ ನಿರ್ಮಾಣವಾಗಿದೆ. ಈ ಕೇಂದ್ರಗಳು ತಲಾ 11 ಗೇಟ್‌ಗಳನ್ನು ಒಳಗೊಂಡಿವೆ.
ಇದನ್ನೂ ಓದಿ: PM Modi: ನಾಳೆ ಕುಂದಾನಗರಿಯಲ್ಲಿ ಮೋದಿ ಮೇನಿಯಾ; ಪೌರ ಕಾರ್ಮಿಕ ಮಹಿಳೆ ಸೇರಿ ಐವರು ಸಾಮಾನ್ಯ ಕಾರ್ಮಿಕರಿಂದ ಪ್ರಧಾನಿಗೆ ಸ್ವಾಗತ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ವಿವರ
ಟೋಲ್ ದರ ಪಟ್ಟಿ
ಕಾರು, ಜೀಪ್, ವ್ಯಾನ್‌ಗಳಿಗೆ
- ಏಕಮುಖ ಸಂಚಾರ: 135 ರೂ.
- ಅದೇ ದಿನ ಮರು ಸಂಚಾರ: 205 ರೂ.
- ಸ್ಥಳೀಯ ವಾಹನಗಳು: 70 ರೂ.
- ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್: 4525 ರೂ.
- ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು, ಮಿನಿ ಬಸ್ಗಳು
- ಏಕಮುಖ ಸಂಚಾರ: 220 ರೂ.
- ಅದೇ ದಿನ ಮರು ಸಂಚಾರ: 320 ರೂ.
- ಸ್ಥಳೀಯ ವಾಹನಗಳು: 110 ರೂ.
- ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್: 7315 ರೂ.
ಬಸ್ ಅಥವಾ ಟ್ರಕ್ (ಎರಡು ಆ್ಯಕ್ಸೆಲ್)
- ಏಕಮುಖ ಸಂಚಾರ: 460 ರೂ.
- ಅದೇ ದಿನ ಮರು ಸಂಚಾರ: 690 ರೂ.
- ಸ್ಥಳೀಯ ವಾಹನಗಳಿಗೆ 230 ರೂ.
- ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್: 15,325 ರೂ.
ವಾಣಿಜ್ಯ ವಾಹನಗಳು (ಮೂರು ಆ್ಯಕ್ಸೆಲ್)
- ಏಕಮುಖ ಸಂಚಾರ: 500ರೂ.
- ಅದೇ ದಿನ ಮರು ಸಂಚಾರ: 750 ರೂ.
- ಸ್ಥಳೀಯ ವಾಹನಗಳಿಗೆ 250 ರೂ.
- ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್ : 16,715 ರೂ.
ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ, ಬಹು ಆ್ಯಕ್ಸೆಲ್ ವಾಹನ (6ರಿಂದ 8 ಆ್ಯಕ್ಸೆಲ್)
- ಏಕಮುಖ ಸಂಚಾರಕ್ಕೆ 720 ರೂ.
- ಅದೇ ದಿನ ಮರು ಸಂಚಾರ: 1080 ರೂ.
- ಸ್ಥಳೀಯ ವಾಹನಗಳಿಗೆ 360 ರೂ.
- ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್: 24,030 ರೂ.
ಅತಿ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್)
- ಏಕಮುಖ ಸಂಚಾರ: 880 ರೂ.
- ಅದೇ ದಿನ ಮರು ಸಂಚಾರ: 1315 ರೂ.
- ಸ್ಥಳೀಯ ವಾಹನಗಳಿಗೆ 440 ರೂ.
- ಒಂದು ತಿಂಗಳ 50 ಏಕಮುಖ ಸಂಚಾರದ ಪಾಸ್: 29,255 ರೂ.