Site icon Vistara News

Bangle Ban : ಬಿಸಿಯೂಟ ಸಿಬ್ಬಂದಿ ಬಳೆ ಹಾಕುವಂತಿಲ್ಲ; ಇಲಾಖೆ ಆದೇಶಕ್ಕೆ ಹಿಂದು ಸಂಘಟನೆಗಳು ಕೆಂಡಾಮಂಡಲ

Woman wearing Bangles

Bangles are banned for Bisiyoota employees

ಬೆಂಗಳೂರು: ಒಂದು ಕಡೆ ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಕೊಲೆ, ಕೊಲೆಯತ್ನ, ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆಕ್ರೋಶ ಜೋರಾಗಿದೆ. ಅದರ ನಡುವೆ ಶಿಕ್ಷಣ ಇಲಾಖೆ (Education department circular) ಹೊರಡಿಸಿದ ಒಂದು ಆದೇಶವು ಕಾಂಗ್ರೆಸ್‌ ಸರ್ಕಾರ (Congress Government) ಹಿಂದುಗಳ ಭಾವನೆಗಳ ಮೇಲೆ ಸವಾರಿ ಮಾಡುತ್ತಿದೆ (Anti hindu sentiment) ಎಂಬ ಸಿಟ್ಟೂ ಭುಗಿಲೆದ್ದಿದೆ. ಶಿಕ್ಷಣ ಇಲಾಖೆ ಇತ್ತೀಚೆಗೆ ಹೊರಡಿಸಿದ ಆದೇಶವೊಂದರಲ್ಲಿ, ರಾಜ್ಯದ ಶಾಲೆಗಳಲ್ಲಿ ಬಿಸಿಯೂಟ (Midday meal programme) ಸಿದ್ಧಪಡಿಸುವ ಸಿಬ್ಬಂದಿ ಕೈಗಳಿಗೆ ಬಳೆಗಳನ್ನು ತೊಡುವಂತಿಲ್ಲ (Bangle Ban) ಎಂದು ತಿಳಿಸಿತ್ತು. ರಾಜ್ಯದ ಕೆಲವು ಕಡೆ ಬಿಸಿಯೂಟ ತಯಾರಿ ವೇಳೆ ನಡೆದ ನಿರ್ಲಕ್ಷ್ಯದಿಂದಾಗಿ ಆಹಾರ ಕೆಟ್ಟು ಮಕ್ಕಳು ಅಸ್ವಸ್ಥರಾದ ಘಟನೆಗಳು ನಡೆದಿದ್ದವು. ಇದರ ಮೇಲೆ ನಿಗಾ ಇಡುವುದಕ್ಕಾಗಿ ಹಲವು ಸೂಕ್ಷ್ಮ ಸಂಗತಿಯನ್ನು ಪಟ್ಟಿ ಮಾಡಿ ಕೆಲವು (education news) ನಿರ್ಬಂಧಗಳನ್ನು ಹೇರಲಾಗಿದೆ. ಅದರಲ್ಲಿ ಒಂದು ಬಿಸಿಯೂಟ ಸಿಬ್ಬಂದಿ ಕೈಗಳಿಗೆ ಬಳೆ ಹಾಕಬಾರದು ಎನ್ನುವುದು ಕೂಡಾ ಒಂದು. ಇದೀಗ ಹಿಂದು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಶಾಲಾ ಶಿಕ್ಷಣ ಇಲಾಖೆಯ ಸುತ್ತೋಲೆಯಲ್ಲಿ ಏನಿದೆ?

ಶಿಕ್ಷಣ ಇಲಾಖೆಯ ಪಿಎಂ ಪೋಷಣ್‌ (ಮಧ್ಯಾಹ್ನದ ಉಪಾಹಾರ ಯೋಜನೆ) ನಿರ್ದೇಶಕರ ಕಚೇರಿ ಹೊರಡಿಸಿರುವ ಆದೇಶದಲ್ಲಿ, ಮಧ್ಯಾಹ್ನದ ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆ ಜಾರಿಯಲ್ಲಿರುವ ಶಾಲೆಗಳಲ್ಲಿ ಎಸ್‌ಡಿಎಂಸಿ ಸದಸ್ಯರಲ್ಲಿ ಒಬ್ಬರು ಪ್ರತಿದಿನ ಶಾಲೆಗೆ ಆಗಮಿಸಿ ಅಡುಗೆ ಕೋಣೆ ಮತ್ತು ದಾಸ್ತಾನು ಕೊಠಡಿಗೆ ಭೇಟಿ ನೀಡಿ ಸ್ವಚ್ಛತೆ ಪಾಲನೆ ಮಾಡಿರುವ ಬಗ್ಗೆ ಮತ್ತು ಆಹಾರ ಸುರಕ್ಷತೆಯ ಬಗ್ಗೆ ಪರಿಶೀಲಿಸಬೇಕು. ಆಯಾ ದಿನದಂದು ಸಿದ್ಧಪಡಿಸಿದ ಆಹಾರದ ಗುಣಮಟ್ಟವನ್ನು ಮಕ್ಕಳಿಗೆ ವಿತರಿಸುವ ಪೂರ್ವದಲ್ಲಿ ಪರೀಕ್ಷಿಸಬೇಕು ಎಂದು ಸೂಚಿಸಲಾಗಿದೆ.

ಆಹಾರ ಸುರಕ್ಷತೆಗೆ ಇಲಾಖೆ ಹೊರಡಿಸಿದ ಆದೇಶ

ಬಿಸಿಯೂಟ ಅಡುಗೆ ತಯಾರಿ ವಿಷಯದಲ್ಲಿ 9 ನಿರ್ದೇಶನಗಳು

ಅದರ ಜತೆಗೆ ಕೆಲವೊಂದು 9 ನಿರ್ಬಂಧ ಸಹಿತ ನಿರ್ದೇಶನಗಳನ್ನು ನೀಡಲಾಗಿದೆ

  1. ಕೈ ಮತ್ತು ಕಾಲುಗಳನ್ನು ಸಾಬೂನಿನಿಂದ ತೊಳೆದು ಸ್ವಚ್ಛಗೊಳಿಸುವುದು.
  2. ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಮತ್ತು ಧೂಳುರಹಿತ ವಾತಾವರಣ ಕಾಪಾಡುವುದು.
  3. ಪಾತ್ರೆ ಮತ್ತು ಪರಿಕರಗಳನ್ನು ಶುದ್ಧ ನೀರಿನಲ್ಲಿ ಸ್ವಚ್ಛಗೊಳಿಸುವುದು.
  4. ಗೋಡೆ, ಕಿಟಕಿಗಳಲ್ಲಿ ಹಲ್ಲಿ, ಜೇಡ, ಜಿರಳೆ, ನೊಣಗಳು ಇಲ್ಲದಂತೆ ನೋಡಿಕೊಳ್ಳುವುದು.
  5. ಆಹಾರ ಧಾನ್ಯಗಳಲ್ಲಿ ಕ್ರಿಮಿ ಕೀಟಗಳು ಇಲ್ಲದಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.
  6. ಅಡುಗೆ ಸಿಬ್ಬಂದಿ ಏಪ್ರಾನ್‌, ತಲೆಗವಸು ಮತ್ತು ಕೈಗವಸುಗಳನ್ನು ಧರಿಸಿರುವುದು, ಕೈಗಳಲ್ಲಿ ಬಳೆ ತೊಟ್ಟಿರಬಾರದು.
  7. ಸಿದ್ಧಪಡಿಸಿದ ಆಹಾರದ ಪಾತ್ರೆಗಳನ್ನು ಸುರಕ್ಷಿತವಾಗಿ ಮುಚ್ಚಿಡುವುದು.
  8. ಹಸಿ ಸೊಪ್ಪು ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆದಿರುವುದು.
  9. ಸಿದ್ಧಪಡಿಸಿದ ಆಹಾರವನ್ನು ವಿತರಿಸುವ ಪೂರ್ವ ಶುಚಿ ರುಚಿ ಪರೀಕ್ಷಿಸಿ ಅಭಿಪ್ರಾಯ ದಾಖಲಿಸುವುದು.
ಬಳೆ ತೊಡಬಾರದು ಎಂಬ ಸೂಚನೆ ಇರುವ ನಿರ್ದೇಶನ

ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥರಾದ ಘಟನೆಯನ್ನು ಆಧರಿಸಿ ಈ ನಿರ್ದೇಶನಗಳನ್ನು ನೀಡಲಾಗಿದೆ. ಆದರೆ, ಈ ಆದೇಶದ ಆರನೇ ಅಂಶ ಹಿಂದು ಸಂಘಟನೆಗಳನ್ನು ಕೆರಳಿಸಿದೆ.

ಹಿಂದು ಸಂಘಟನೆಗಳು ಹೇಳುವುದೇನು?

ಬಿಸಿಯೂಟ ಸಿಬ್ಬಂದಿ ಬಳೆ ಹಾಕಬಾರದು ಎನ್ನುವುದು ವೈಯಕ್ತಿಕ ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಳ್ಳುವ ಕ್ರಮ ಎನ್ನುವುದು ಹಿಂದು ಮಹಿಳೆಯರ ಆಕ್ರೋಶ. ರಾಜ್ಯದಲ್ಲಿ 55 ಸಾವಿರ ಅಡುಗೆ ಸಿಬ್ಬಂದಿ ಇದ್ದು ಬಹುತೇಕ ಮಂದಿ ಕುಂಕುಮ ಬಳೆ ಹಾಕುವವರೇ. ಇಲಾಖೆಯ ಈ ಆದೇಶ ಈಗ ವೈಯಕ್ತಿಕ ಧಾರ್ಮಿಕ ಸ್ವಾತಂತ್ರ್ಯ ಕಿತ್ತು ಕೊಳ್ಳುವಂತಿದೆ ಎಂದು ಸಂಘಟನೆಗಳು ಹೇಳುತ್ತಿವೆ.

ಒಂದು ವೇಳೆ ಮಕ್ಕಳ ಮೇಲೆ ನಿಜವಾದ ಕಾಳಜಿ ಇದ್ದರೆ ಈ ನಿಯಮವನ್ನ ಹಿಂದೆಯೇ ಮಾಡಬೇಕಿತ್ತು ಎನ್ನುವ ಮಹಿಳಾ ಸಂಘಟನೆಗಳು, ಕೋಟ್ಯಂತರ ತಾಯಂದಿರು ಮನೆಯಲ್ಲಿ ಕೈಗೆ ಬಳೆ ತೊಡದೇ ಅಡುಗೆ ಮಾಡ್ತಾರಾ.. ಅದರಿಂದ ಎಲ್ಲಾದರೂ ಯಾರಿಗಾದರೂ ತೊಂದರೆ ಆಗಿದೆಯಾ? ಈಗ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಸಮಸ್ಯೆ ಶುರುವಾಗಿದ್ದಾ ಎಂದು ಪ್ರಶ್ನಿಸುವ ಮಹಿಳೆಯರು, ಉದ್ದೇಶ ಪೂರ್ವಕವಾಗಿ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದ ಎಲ್ಲಾದರೂ ಬಳೆಯಿಂದಾಗಿ ಅಡುಗೆ ಮಾಡುವಾಗ ಸಮಸ್ಯೆ ಆಗಿದೆಯಾ ಎಂದು ಪ್ರಶ್ನಿಸಿರುವ ಮಹಿಳೆಯರು, ರಾಜ್ಯದ ಕೆಲವೊಂದು ಭಾಗಗಳಲ್ಲಿ ಮಹಿಳೆಯರು ಕೈತುಂಬ ಬಳೆಯನ್ನು ತೊಡುವ ಸಂಪ್ರದಾಯವೇ ಇದೆ. ಇದನ್ನು ಹೇಗೆ ತಡೆಯುತ್ತಾರೆ ಎಂದು ಕೇಳಿದ್ದಾರೆ.

ಶಿಕ್ಷಣ ಸಚಿವರಿಗೆ ಈ ವಿಷಯವೇ ಗೊತ್ತಿಲ್ವಾ?

ಈ ನಡುವೆ ಈ ಬಳೆ ನಿರ್ಬಂಧದ ಆದೇಶದ ಬಗ್ಗೆ ತನಗಿನ್ನೂ ಗಮನಕ್ಕೆ ಬಂದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಕೆಲವೊಂದು ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಿರಬಹುದು ಎಂದು ಅವರು ಹೇಳಿದ್ದು, ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Gruha lakshmi Scheme : ನೀವು/ನಿಮ್ಮ ಗಂಡ ಆದಾಯ ತೆರಿಗೆ ಕಟ್ತೀರಾ? ಹಾಗಿದ್ದರೂ ನಿಮಗೆ 2,000 ರೂ. ಸಿಗುತ್ತಾ?

Exit mobile version