Site icon Vistara News

Bank fraud: ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ‌ ಹಗರಣ! 54 ಕೋಟಿ ರೂ. ಗುಳುಂ; ಮ್ಯಾನೇಜರ್ ಸಾವಿಂದ ಹೊರಬಂತು ಅವ್ಯವಹಾರ!

Bank fraud Scam in Urban Co operative Bank of Karwar

ಕಾರವಾರ: ಬೆಂಗಳೂರಿನ ಗುರು ರಾಘವೇಂದ್ರ ಸಹಕಾರ ಬ್ಯಾಂಕ್, ವಸಿಷ್ಠ ಸೌಹಾರ್ಧ ಬ್ಯಾಂಕ್ ಸೇರಿದಂತೆ ಹಲವಾರು ಕಡೆ ಸಹಕಾರಿ ಬ್ಯಾಂಕ್‌ಗಳ ಹಗರಣ (Bank fraud) ನಡೆದು ಗ್ರಾಹಕರು ಪರದಾಡುತ್ತಿರುವ ಹೊತ್ತಿನಲ್ಲಿಯೇ ಈಗ ಕಾರವಾರದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ‌ (Karwar Urban Co operative Bank) ಅವ್ಯವಹಾರ ನಡೆದಿದೆ ಎಂಬ ಸಂಗತಿ ಗೊತ್ತಾಗಿದೆ. ಆದರೆ, ಗ್ರಾಹಕರು ಯಾವುದೇ ರೀತಿಯಲ್ಲಿ ಭಯ ಪಡುವುದು ಬೇಡ. ನಿಮ್ಮ ಹಣ ಸುರಕ್ಷಿತವಾಗಿದೆ ಎಂದು ಆಡಳಿತ ಮಂಡಳಿ ಸ್ಪಷ್ಟೀಕರಣ ನೀಡಿದೆ.

ಬ್ಯಾಂಕ್ ಮ್ಯಾನೇಜರ್‌ನಿಂದ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಸಂಗತಿ ವರ್ಷಗಳ ಬಳಿಕ ಗೊತ್ತಾಗಿದೆ. ಅದೂ ಆ ಮ್ಯಾನೇಜರ್ ಮೃತಪಟ್ಟಿದ್ದರಿಂದ ಈ ಅವ್ಯವಹಾರ ಬೆಳಕಿಗೆ ಬಂದಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ‌ ಈ ಅವ್ಯವಹಾರ ನಡೆದಿದೆ ಎನ್ನಲಾಗಿದ್ದು, ಗುರುದಾಸ್ ಬಾಂದೇಕರ್ ಎನ್ನುವ ಮ್ಯಾನೇಜರ್ ಈ ಕೃತ್ಯ ಎಸೆಗಿದ್ದಾರೆಂದು ಗೊತ್ತಾಗಿದೆ.

54 ಕೋಟಿ ರೂಪಾಯಿ ಅವ್ಯವಹಾರ

ಸುಮಾರು 54 ಕೋಟಿ ರೂಪಾಯಿ ಅವ್ಯವಹಾರವನ್ನು ಈ ಮ್ಯಾನೇಜರ್ ಗುರುದಾಸ್ ಬಾಂದೇಕರ್ ಮಾಡಿದ್ದಾರೆನ್ನಲಾಗಿದೆ. ವರ್ಷದ ಹಿಂದೆ ಇವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಮ್ಮ ಸಂಬಂಧಿ ಹಾಗೂ ಪರಿಚಯಸ್ಥರ ಅಕೌಂಟ್‌ಗೆ ಹಣ ವರ್ಗಾವಣೆ ಮಾಡಿಕೊಂಡು ಅವ್ಯವಹಾರ ಮಾಡಿದ್ದಾರೆ ಎಂದು ಈಗ ತಿಳಿದುಬಂದಿದೆ.

ಪ್ರತಿ ವರ್ಷ ‌ಆಡಿಟ್‌ನಲ್ಲೂ ಗುರುದಾಸ್ ವ‌ಂಚನೆ ಮಾಡಿದ್ದರು. ಈಗ ಮ್ಯಾನೇಜರ್ ಮೃತಪಟ್ಟಿದ್ದರಿಂದ ಆಡಳಿತ ಮಂಡಳಿಗೆ ದೊಡ್ಡ ತಲೆನೋವಾಗಿದೆ. ಆಡಿಟ್ ಮಾಡಿಸುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಕಾರವಾರ ನಗರ ಠಾಣೆಯಲ್ಲಿ ಈ ಸಂಬಂಧ ಬ್ಯಾಂಕ್ ಆಡಳಿತ ಮಂಡಳಿ ದೂರು ನೀಡಿದೆ.

ಬ್ಯಾಂಕ್‌ ದಿವಾಳಿ ಆಗಿಲ್ಲವೆಂದ ಆಡಳಿತ ಮಂಡಳಿ

ಈ ನಡುವೆ ಅವ್ಯವಹಾರದ ಸುದ್ದಿ ಎಲ್ಲೆಡೆ ಹರಡಿದ್ದರಿಂದ ಗ್ರಾಹಕರು ಆತಂಕಗೊಂಡಿದ್ದಾರೆ. ಬ್ಯಾಂಕ್ ದಿವಾಳಿಯಾಗಿದೆ ಎಂದು ತಮ್ಮ ಖಾತೆಯಲ್ಲಿಟ್ಟಿದ್ದ ಹಣವನ್ನು ವಾಪಸ್ ಪಡೆಯಬೇಕು ಎಂದು ಗ್ರಾಹಕರು ಮುಗಿಬಿದ್ದಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಆಡಳಿತ ಮಂಡಳಿಯು, ಗ್ರಾಹಕರ ಹಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದೆ.

ಗುರು ರಾಘವೇಂದ್ರ, ವಸಿಷ್ಠ ಸಹಕಾರ ಬ್ಯಾಂಕ್‌ಗಳ ಹಗರಣ ಎಸ್‌ಐಟಿ ಹೆಗಲಿಗೆ; ಶೀಘ್ರ ಕ್ರಮವೆಂದ ಡಿಕೆಶಿ

ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್, ವಸಿಷ್ಠ ಸೌಹಾರ್ಧ ಬ್ಯಾಂಕ್ ಹಗರಣದ (Bank fraud) ತನಿಖೆ ಹೊಣೆಯನ್ನು ಎಸ್‌ಐಟಿಗೆ (SIT Investigation) ವಹಿಸುವಂತೆ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಬಳಿ ಚರ್ಚೆ ನಡೆಸುತ್ತೇನೆ ಎಂದು ಕಳೆದ ಏಪ್ರಿಲ್‌ 25ರಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಭರವಸೆ ನೀಡಿದ್ದರು. ಗುರು ರಾಘವೇಂದ್ರ ಸಹಕಾರ ಬ್ಯಾಂಕ್, ವಸಿಷ್ಠ ಸೌಹಾರ್ಧ ಬ್ಯಾಂಕ್ ಠೇವಣಿದಾರರು ಗುರುವಾರ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿ ಮನವಿ ಮಾಡಿದ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಈ ಭರವಸೆ ನೀಡಿದ್ದರು.

ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬೆಂಗಳೂರಿಗೆ ಪ್ರಿಯಾಂಕಾ ಗಾಂಧಿ (Priyanka Gandhi) ಆಗಮಿಸಿದ್ದ ವೇಳೆ ಅವರನ್ನು ಭೇಟಿ ಮಾಡಿದ್ದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್, ವಸಿಷ್ಠ ಸೌಹಾರ್ಧ ಬ್ಯಾಂಕ್ ಠೇವಣಿದಾರರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಈ ಬ್ಯಾಂಕ್‌ಗಳಲ್ಲಿ ಲಕ್ಷಾಂತರ ರೂಪಾಯಿಯನ್ನು ಹೂಡಿಕೆ ಮಾಡಿದ್ದೇವೆ. ಈಗ ಹಗರಣದಿಂದಾಗಿ ನಮಗೆ ನಯಾ ಪೈಸೆ ಸಿಗುತ್ತಿಲ್ಲ. ಇದರಿಂದ ಜೀವನ ನಡೆಸುವುದು ಕಷ್ಟವಾಗಿದೆ. ಕಷ್ಟಪಟ್ಟು ನಾವು ದುಡಿದಿದ್ದ ಹಣವನ್ನೆಲ್ಲ ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿಟ್ಟಿದ್ದೇವೆ. ಇದರಿಂದ ನಮಗೆ ತೀವ್ರ ಸಮಸ್ಯೆಯಾಗುತ್ತಿದೆ. ಈವರೆಗೆ ಯಾವ ಸರ್ಕಾರಗಳೂ ಈ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ನಮಗೆ ದಿಕ್ಕೇ ತೋಚದಂತಾಗಿದೆ. ಹೀಗಾಗಿ ಕೂಡಲೇ ಕ್ರಮವಹಿಸುವಂತೆ ಮನವಿ ಮಾಡಿದ್ದರು. ‌

ಎಸ್‌ಐಟಿ ತನಿಖೆಯ ಭರವಸೆ ನೀಡಿದ್ದ ಪ್ರಿಯಾಂಕಾ ಗಾಂಧಿ

ಠೇವಣಿದಾರರ ಮನವಿ ಸ್ವೀಕಾರ ಮಾಡಿದ್ದ ಪ್ರಿಯಾಂಕಾ ಗಾಂದಿ, ರಾಜ್ಯ ಸರ್ಕಾರದಿಂದ ಎಸ್‌ಐಟಿ ತನಿಖೆ ನಡೆಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಈಗ ಠೇವಣಿದಾರರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ತಮಗೆ ಸಾಕಷ್ಟು ಅನ್ಯಾಯ ಆಗಿದೆ. ಕೋಟಿ ಕೋಟಿ ಕಳೆದುಕೊಂಡಿದ್ದೇವೆ. ನ್ಯಾಯ ಕೇಳೋಕೆ ಹೋದರೆ ಯಾವುದೇ ಪರಿಹಾರ ಇಲ್ಲ. ಮೂರು ವರ್ಷದಿಂದ ಒಂದು ದೂರು ಕೂಡ ದಾಖಲಾಗಿಲ್ಲ. ಕಾಂಗ್ರೆಸ್‌ ಮುಖಂಡ ಶಂಕರ್ ಗುಹಾ ಅವರು ಬಂದ ಮೇಲೆ ದೂರು ದಾಖಲಾಗಿದೆ ಎಂದು ಅಳಲು ತೋಡಿಕೊಂಡಿದ್ದರು.

ಸಿಎಂಗೆ ಪತ್ರ ಬರೆಯಲು ಮುಂದಾದ ಡಿ.ಕೆ. ಶಿವಕುಮಾರ್

ಮನವಿ ಸ್ವೀಕರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಈ ಸಂಬಂಧ ಮಾತನಾಡುತ್ತೇನೆ. ಶೀಘ್ರವೇ ಎಸ್‌ಐಟಿ ರಚನೆ ಮಾಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಕೂಡಲೇ ಈ ಸಂಬಂಧ ಸಿಎಂಗೆ ಪತ್ರವನ್ನು ಸಿದ್ಧಪಡಿಸಲು ಸಿಬ್ಬಂದಿಗೆ ಸೂಚನೆ ನೀಡಿದ್ದರು.

ಗುರು ರಾಘವೇಂದ್ರ ಬ್ಯಾಂಕ್ ಹಗರಣದ​ ಹಿನ್ನೆಲೆ

ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಬಡ್ಡಿದರದ ಆಮಿಷವೊಡ್ಡಿ ಜನರಿಂದ ಠೇವಣಿ ಪಡೆದು ವಂಚಿಸಿದ ಆರೋಪ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಮೇಲಿದೆ. ಹೆಚ್ಚಿನ ಬಡ್ಡಿ ಆಸೆಗೆ ಸಾವಿರಾರು ಗ್ರಾಹಕರು ಈ ಸಂಸ್ಥೆಯಲ್ಲಿ ನೂರಾರು ಕೋಟಿ ರೂ. ಠೇವಣಿ ಇಟ್ಟಿದ್ದರು. ಆದರೆ ಬ್ಯಾಂಕ್​​ ಸುಳ್ಳು ಸಾಲಗಾರರ ಖಾತೆ ತೆರೆದು ಈ ಹಣವನ್ನು ಲಾಂಡರಿಂಗ್​ ಮಾಡಿದೆ.

ಇದನ್ನೂ ಓದಿ: Couples Fight: ಗಂಡ-ಹೆಂಡಿರ ಜಗಳ ಪೊಲೀಸ್ ಸ್ಟೇಷನ್ ಗ್ಲಾಸ್ ಪೀಸ್ ಪೀಸ್ ಆಗುವ ತನಕ!

ಫೆಬ್ರವರಿ 2022 ರಲ್ಲಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಅಧಿಕಾರಿಯೊಬ್ಬರನ್ನು ಮನಿ ಲಾಂಡರಿಂಗ್ ಆರೋಪದ ಮೇಲೆ ಇಡಿ ಬಂಧಿಸಿತು. ಈವರೆಗೆ ಸಂಸ್ಥೆಯ ಅಧ್ಯಕ್ಷ ಸೇರಿ 4 ಮಂದಿಯನ್ನು ಬಂಧಿಸಲಾಗಿದೆ. ಬ್ಯಾಂಕ್‌​ನಿಂದ ವಂಚನೆಗೆ ಒಳಗಾದವರಲ್ಲಿ ಹಿರಿಯ ನಾಗರಿಕರೇ ಹೆಚ್ಚಿನವರಾಗಿದ್ದಾರೆ. ಹಿರಿಯ ನಾಗರಿಕರು ತಮ್ಮ ಉಳಿತಾಯ ಹಾಗೂ ನಿವೃತ್ತಿ ವೇತನದ ಹಣವನ್ನು ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನಲ್ಲಿ ಠೇವಣಿ ಇಟ್ಟಿದ್ದರು.

ಗುರು ರಾಘವೇಂದ್ರ ಬ್ಯಾಂಕ್‌ ಹಾಗೂ ಗುರು ಸಾರ್ವಭೌಮ ಬ್ಯಾಂಕ್‌ನಲ್ಲಿ 1,500 ಕೋಟಿ ರೂ. ಅಕ್ರಮ, ವಸಿಷ್ಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ 450 ರಿಂದ 500 ಕೋಟಿ ವಂಚನೆ ನಡೆದಿರುವ ಆರೋಪವಿದೆ.

Exit mobile version