ಉಡುಪಿ: ಸಾಲಿಗ್ರಾಮದ ಚಿತ್ರಪಾಡಿಯ ನರ್ತಕಿ ಬಾರ್‌ನಲ್ಲಿ ಕುಡಿದ ಮತ್ತಿನಲ್ಲಿದ್ದ ದುಷ್ಕರ್ಮಿಗಳು ಅನವಶ್ಯಕವಾಗಿ ಗಲಾಟೆ (Bar Clash) ಮಾಡಿದ್ದು, ಬಾರ್ ಮಾಲೀಕನನ್ನು ಕೆಳಕ್ಕೆ ಕೆಡವಿ ಕಾಲಿನಿಂದ ಒದ್ದು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಸೈನ್ಯದಲ್ಲಿದ್ದಾತ ತನ್ನ ಸ್ನೇಹಿತರಿಗಾಗಿ ಬಾರ್‌ನಲ್ಲಿ ಪಾರ್ಟಿಯನ್ನು ಆಯೋಜಿಸಿದ್ದ ಎನ್ನಲಾಗಿದೆ. ಪಾರ್ಟಿ ಬಳಿಕ ಅನವಶ್ಯಕವಾಗಿ ನಡೆದ ಗಲಾಟೆಯಲ್ಲಿ ಬಾರ್ ಮಾಲೀಕನ ಜತೆ ವಾಗ್ವಾದ ನಡೆದಿದೆ. ಮಾತಿನ ಚಕಮಕಿ ನಡೆದು, ವಿಷಯ ತಾರಕಕ್ಕೇರಿ ಬಾರ್ ಮಾಲೀಕನ ಮೇಲೆ ದುಷ್ಕರ್ಮಿಗಳು ಕೈ ಹಾಕಿದ್ದಾರೆ. ಕೊನೆಗೆ ಹೊಡೆದು ಕೆಳಕ್ಕೆ ಉರುಳಿಸಿದ್ದಾರೆ. ಅವರನ್ನು ತುಳಿದು ಥಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಗಲಾಟೆಗೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಿದ್ದಾರೆ. ರೋಹಿತ್, ರಂಜಿತ್, ಸಚಿನ್, ಶಶಾಂಕ್, ವಿಘ್ನೇಶ್ ಬಂಧಿತ ಆರೋಪಿಗಳಾಗಿದ್ದಾರೆ. ಆದರೆ, ಪ್ರಕರಣದ ಪ್ರಮುಖ ಆರೋಪಿಗಳೆನ್ನಲಾದ ಇಬ್ಬರನ್ನು ಪ್ರಕರಣದಿಂದ ಹೊರಗಿಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: kodi mutt swamiji: ಪಕ್ಷಗಳು ಒಡೆದರೂ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ: ಕೋಡಿಮಠ ಶ್ರೀ ಭವಿಷ್ಯ
ಈ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪ್ರಭಾವಿ ರಾಜಕಾರಣಿಯ ಕೃಪಾಕಟಾಕ್ಷವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಹಲ್ಲೆ ಮಾಡಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.