Site icon Vistara News

ರಾಜಾ ಹುಲಿ ಇರ್ಲಿ, ಯಾರೇ ಇರ್ಲಿ ಮೊದ್ಲು ರಾಜೀನಾಮೆ ಕೊಡ್ಲಿ: ಬಿಎಸ್‌ವೈ ವಿರುದ್ಧದ ಎಫ್‌ಐಆರ್‌ ಆದೇಶಕ್ಕೆ ಯತ್ನಾಳ್‌ ಪ್ರತಿಕ್ರಿಯೆ

YATNAL BSY

ಬೆಂಗಳೂರು: ಬಿಡಿಎ ಗುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಅವರ ಕುಟುಂಬದ ಹಲವರ ಮೇಲೆ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿ ನ್ಯಾಯಾಲಯ ನೀಡಿದ ಆದೇಶಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸದಾ ಬೆಂಕಿ ಕಾರುವ, ಕುತೂಹಲಕಾರಿಯಾಗಿ ಮಾತನಾಡುವ, ಅದರಲ್ಲೂ ಬಿ.ಎಸ್‌. ಯಡಿಯೂರಪ್ಪ ಅವರ ವಿಷಯ ಬಂದಾಗ ಸ್ವಲ್ಪ ಜೋರಾಗಿಯೇ ಅಬ್ಬರಿಸುವ ಯತ್ನಾಳ್‌ ಅವರು ವಿಧಾನ ಸೌಧದಲ್ಲಿ ಗುರುವಾರ ಮಾತನಾಡಿದ್ದಾರೆ. ಅವರು ಪ್ರಕರಣಕ್ಕೆ ಸಂಬಂಧಿಸಿ ಆಡಿದ ಪ್ರಮುಖ ಮಾತುಗಳಿವು.

– ಎಷ್ಟೇ ದೊಡ್ಡ ಹುಲಿ ಇದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ.
– ಈ ಹಿಂದೆ ಎಲ್ ಕೆ ಅಡ್ವಾಣಿ ಮೇಲೆ ಆರೋಪವೊಂದು ಕೇಳಿ ಬಂದಿತ್ತು. ಆಗ ಅವರು ಎಲ್ಲ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.
– ಈಗಲೂ ಆರೋಪವೊಂದು ಬಂದಿದೆ. ರಾಜಾಹುಲಿ ಇರ್ಲಿ, ಯಾರೇ ಇರ್ಲಿ ರಾಜೀನಾಮೆ ಕೊಡಲಿ.
– ಎಲ್‌.ಕೆ. ಅಡ್ವಾಣಿ, ವಾಜಪೇಯಿ ಅವರಿಗಿಂತ ಡೊಡ್ಡವ್ರಾ ಇವರು, ಎಲ್‌.ಕೆ. ಅಡ್ವಾಣಿ ಆದರ್ಶ ಪಾಲಿಸಲಿ.
– ಯಡಿಯೂರಪ್ಪ ಅವರು ಕಾನೂನಿಗೆ ತಲೆಬಾಗಿ ಬಿಜೆಪಿಯ ಕೇಂದ್ರೀಯ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿ.

ಏನಿದು ಎಫ್‌ಐಆರ್‌ ಹಾಕಲಾದ ಪ್ರಕರಣ?
ಬಿ.ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಡಿಎ ಗುತ್ತಿಗೆ ಹಂಚಿಕೆ ವೇಳೆ ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿಯಿಂದ ಕೋಟ್ಯಂತರ ರೂಪಾಯಿಗಳನ್ನು ನಗದು ಮತ್ತು ಶೆಲ್‌ ಕಂಪೆನಿಗಳ ಮೂಲಕ ಲಂಚ ಪಡೆದಿದ್ದಾರೆ. ಹೀಗಾಗಿ, ಅವರ ವಿರುದ್ಧ ವಿಶೇಷ ತನಿಖಾ ದಳದ ಮೂಲಕ ತನಿಖೆ ಮಾಡಿಸಬೇಕು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದರು. ಆದರೆ, ಈ ರೀತಿ ದೂರು ಸಲ್ಲಿಸಲು ರಾಜ್ಯಪಾಲರಿಂದ ಅಗತ್ಯ ಪೂರ್ವನುಮತಿ ಪಡೆದಿಲ್ಲ ಎಂದು ಯಡಿಯೂರಪ್ಪ ಮತ್ತು ಇತರರ ವಿರುದ್ದದ ಖಾಸಗಿ ದೂರನ್ನು ವಿಶೇಷ ನ್ಯಾಯಾಲಯ ವಜಾ ಮಾಡಿತ್ತು.

ಆಗ ಟಿ.ಜೆ. ಅಬ್ರಹಾಂ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಹೈಕೋರ್ಟ್‌ ಜನಪ್ರತಿನಿಧಿ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿತ್ತು. ಅಲ್ಲದೇ, ಯಡಿಯೂರಪ್ಪ ಮತ್ತು ಇತರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದ ಖಾಸಗಿ ದೂರನ್ನು ಮರುಪರಿಗಣಿಸಲು ಹೈಕೋರ್ಟ್‌ ಆದೇಶಿಸಿತ್ತು. ಇದೀಗ ಜನಪ್ರತಿನಿಧಿಗಳ ನ್ಯಾಯಾಲಯ ಈ ಬಗ್ಗೆ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಆದೇಶಿಸಿತ್ತು. ನವೆಂಬರ್‌ ೨ರೊಳಗೆ ವರದಿ ನೀಡುವಂತೆ ಸೂಚಿಸಿದೆ.

ಯಾರಿಗೆಲ್ಲ ಸಂಕಷ್ಟ?
ಬಿ.ಎಸ್‌. ಯಡಿಯೂರಪ್ಪ, ಪುತ್ರ ಬಿ ವೈ ವಿಜಯೇಂದ್ರ, ಶಶಿಧರ ಮರಡಿ, ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಅಳಿಯ ಸಂಜಯ್‌ ಶ್ರೀ, ಚಂದ್ರಕಾಂತ್‌ ರಾಮಲಿಂಗಂ, ಅಂದಿನ ಬಿಡಿಎ ಅಧ್ಯಕ್ಷ ಹಾಗೂ ಹಾಲಿ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌, ಐಎಎಸ್‌ ಅಧಿಕಾರಿ ಡಾ. ಜಿ.ಸಿ ಪ್ರಕಾಶ್‌, ಕೆ. ರವಿ, ಯಡಿಯೂರಪ್ಪ ಅವರ ಅಳಿಯ ವಿರೂಪಾಕ್ಷಪ್ಪ‌ ಯಮಕನಮರಡಿ ಅವರು ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದಾರೆ.

ಇದನ್ನೂ ಓದಿ | ಬಿಎಸ್‌ವೈ ಕುಟುಂಬಕ್ಕೆ ಸಂಕಷ್ಟ | ಲಂಚ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ನಡೆಸಲು ಜನಪ್ರತಿನಿಧಿ ಕೋರ್ಟ್‌ ಆದೇಶ

Exit mobile version