Site icon Vistara News

BJP Karnataka: ಎದೆಗಾರಿಕೆ ಇರೋ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಪಕ್ಷ ನಾಯಕನಾಗಲಿ: ಪ್ರತಾಪ್‌ ಸಿಂಹ

Basanagouda Patil Yatnal and Pratap Simha

ಮೈಸೂರು: ಬಿಜೆಪಿಯಲ್ಲಿ (BJP Karnataka) ಶೀಘ್ರವೇ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುತ್ತದೆ. ಎದೆಗಾರಿಕೆ ಇರುವ ನಾಯಕ ಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೆಸರು ಎಲ್ಲ ಕಡೆಯೂ ಕೇಳಿ ಬರುತ್ತಿದೆ. ರಾಷ್ಟ್ರೀಯತೆ, ಹಿಂದುತ್ವ ಎಲ್ಲವನ್ನೂ ಯತ್ನಾಳ್ ಗಟ್ಟಿಯಾಗಿ ಪ್ರತಿಪಾದಿಸುತ್ತಾರೆ. ಯತ್ನಾಳ್ ಅಂದರೆ ಒಂದು ಹವಾ ಇದೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದರು.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್‌ ಸಿಂಹ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಧೈರ್ಯ ಇದ್ದು, ಅವರು ಎಲ್ಲವನ್ನೂ ಸರಿಯಾಗಿ ನಿಭಾಯಿಸುತ್ತಾರೆ. ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ಅವರೇ ಸೂಕ್ತ ಅಭ್ಯರ್ಥಿ ಎಂದು ಯತ್ನಾಳ್ ಪರವಾಗಿ ಬ್ಯಾಟ್‌ ಬೀಸಿದ್ದಾರೆ.

ಇದನ್ನೂ ಓದಿ: Aadhaar Card Update : ಉಚಿತವಾಗಿ ಆಧಾರ್‌ಕಾರ್ಡ್‌ ಅಪ್‌ಡೇಟ್‌, ಗಡುವು ಮುಂದೂಡಿಕೆ

ಬ್ರಾಹ್ಮಣರನ್ನು ದಿನವೂ ಯಾಕೆ ಬಯ್ಯುತ್ತೀರಿ?

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಗ್ಗೆ ಎಂ.ಬಿ. ಪಾಟೀಲ್ ವ್ಯಂಗ್ಯ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್‌ ಸಿಂಹ, ಸಂತೋಷ್ ಬಗ್ಗೆ ಪದೇ ಪದೆ ಯಾಕೆ ಮಾತನಾಡುತ್ತೀರಿ? ಬ್ರಾಹ್ಮಣರನ್ನು ದಿನವೂ ಯಾಕೆ ಬಯ್ಯುತ್ತೀರಿ? ಯಾಕೆ ನಿಮಗೆ ಬ್ರಾಹ್ಮಣರ ಮೇಲೆ ಇಷ್ಟು ದ್ವೇಷ? ಬಸವೇಶ್ವರರು ಮೂಲದಲ್ಲಿ ಬ್ರಾಹ್ಮಣರು ಅಲ್ವ? ಬಿ.ಎಲ್. ಸಂತೋಷ್ ನಿಮಗೆ ಏನಾದರೂ ತಿವಿದಿದ್ದಾರಾ? ಎಂ.ಬಿ.ಪಾಟೀಲರೇ, ನೀವು ನಿಜವಾಗಲೂ ಲಿಂಗಾಯತರಾ? ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ್ದು ಕಾಂಗ್ರೆಸ್ ಕುತಂತ್ರ ಅಲ್ವ?
ಕಾಂಗ್ರೆಸ್ ಲಿಂಗಾಯತರಿಗೆ ಅನ್ಯಾಯ ಮಾಡಿದ್ದರೂ ನೀವು ಏಕೆ ಸುಮ್ಮನೆ ಇದ್ದೀರಿ? ಎಂದು ಪ್ರಶ್ನೆ ಮಾಡಿದರು.

ಸಚಿವ ದಿನೇಶ್ ಗುಂಡೂರಾವ್ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಹುಚ್ಚ ಅಂದಿದ್ದರು.‌ ಆಗ ನಿಮ್ಮೊಳಗೆ ಲಿಂಗಾಯತ ಭಾವನೆ ಜಾಗೃತ ಆಗಲಿಲ್ಲವಲ್ಲ? ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ಮಾಡಲು ಕಾಂಗ್ರೆಸ್‌ನಿಂದ ಸುಪಾರಿ ತೆಗೆದು ಕೊಂಡವರು ನೀವೇ ತಾನೇ? ಸಿದ್ದರಾಮಯ್ಯ ಅವರು ಲಿಂಗಾಯತ ಧರ್ಮ ಒಡೆಯಲು ಹೋದಾಗ ಅದರ ಸುಪಾರಿ ಪಡೆದವರು ನೀವೇ ತಾನೇ? ಈಗ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎನ್ನುವ ಮೂಲಕ ಒಕ್ಕಲಿಗರ ಮುಗಿಸಲು ಹೊರಟಿದ್ದೀರಾ? ನಿಮ್ಮ ಒಂದು ಹೇಳಿಕೆ ಪರಿಣಾಮ ಡಿ.ಕೆ.ಸುರೇಶ್ ನಿಮ್ಮ ಕೈ ಎಳೆದಿದ್ದಾರೆ. ಇನ್ನೊಂದು ಬಾರಿ ಅಂತ ಹೇಳಿಕೆ ಕೊಡಿ ಡಿ.ಕೆ. ಸುರೇಶ್ ನಿಮ್ಮ ಕೊರಳಪಟ್ಟಿ ಹಿಡಿಯುತ್ತಾರೆ. ಸಚಿವ ಎಂ.ಬಿ.‌ ಪಾಟೀಲ್ ಅವರು ಸಿದ್ದರಾಮಯ್ಯ ಛೇಲಾ ಪಡೆಯ ಅಧ್ಯಕ್ಷ ಎಂದು ಪ್ರತಾಪ್‌ ಸಿಂಹ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಓಲೈಕೆಯೇ ಎಂಬಿಪಿ ಜವಾಬ್ದಾರಿ

ಪ್ರತಾಪ್ ಸಿಂಹ ಚಿಲ್ಲರೆ ರಾಜಕಾರಣ ಬಿಡಲಿ ಎಂಬ ಎಂ‌.ಬಿ. ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಎಂ.ಬಿ. ಪಾಟೀಲ್‌ಗೆ ಈಗ ಸಿಕ್ಕಿರುವ ಖಾತೆಯಲ್ಲಿ ಬರೀ ಚಿಲ್ಲರೆ ಸಿಗುತ್ತದೆ. ಕೂತ ಕಡೆ ಕಂತೆ ಕಂತೆ ಕಾಸು ಬರುವ ಖಾತೆ ಸಿಗಲಿಲ್ಲ ಅಂತ ವಿಲವಿಲ ಒದ್ದಾಡುತ್ತಿದ್ದಾರೆ. ಎಂ.ಬಿ. ಪಾಟೀಲ್‌ಗೆ ಬರೀ ಚಿಲ್ಲರೆ, ನೋಟು ಇದರ ಬಗ್ಗೆ ಮಾತ್ರ ಚಿಂತೆ. ಸಿದ್ದರಾಮಯ್ಯ ಅವರನ್ನು ಓಲೈಕೆ ಮಾಡುವುದೇ ತಮ್ಮ ಖಾತೆ ಜವಾಬ್ದಾರಿ ಅಂತ ಎಂ.ಬಿ. ಪಾಟೀಲ್ ಅಂದುಕೊಂಡಿದ್ದಾರೆ. ಸಿದ್ದರಾಮಯ್ಯ ಬಂದೂಕಿಗೆ ಹೆಗಲು ಕೊಡೋದೆ ನಿಮ್ಮ ಕೆಲಸವೇ ಎಂ‌.ಬಿ. ಪಾಟೀಲ್? ಎಂದು ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯಗೆ ಧೈರ್ಯವಿಲ್ಲ, ಅವರಿಗೆ ಪುಕ್ಕಲತನ

ಸಚಿವರಾದ ಡಾ. ಮಹದೇವಪ್ಪ, ಎಂ.ಬಿ. ಪಾಟೀಲ್ ಇಬ್ಬರೂ ಐದು ವರ್ಷವೂ ಸಿದ್ದರಾಮಯ್ಯ ಸಿಎಂ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಧಿಕಾರ ಬಿಟ್ಟು ಕೊಡುವ ಇರಾದೆ ಇಲ್ಲ. ಸಿದ್ದರಾಮಯ್ಯ ತಮ್ಮ
ಛೇಲಾ ಪಡೆ ಮೂಲಕ ತಾವು ಪೂರ್ಣ ಅವಧಿಗೆ ಸಿಎಂ ಅಂತ ಹೇಳಿಸುತ್ತಿದ್ದಾರೆ. ಸಿದ್ದರಾಮಯ್ಯಗೆ ತಾವೇ ಪೂರ್ಣಾವಧಿ ಸಿಎಂ ಎಂದು ನೇರವಾಗಿ ಹೇಳುವ ಧೈರ್ಯವಿಲ್ಲ. ಅವರಿಗೆ ಪುಕ್ಕಲತನ. ಚುನಾವಣೆ ಗೆಲ್ಲಲು ಡಿಸಿಎಂ ಡಿ.ಕೆ. ಶಿವಕುಮಾರ್ ಪಾತ್ರ ದೊಡ್ಡದಿದೆ. ಕಾಂಗ್ರೆಸ್ ಧಾರಾಳ ಮನಸ್ಸಿನಿಂದ ಸಿದ್ದರಾಮಯ್ಯ ಅವರನ್ನು ಎರಡನೇ ಬಾರಿ ಸಿಎಂ ಮಾಡಿದೆ. ಆದರೆ, ಸಿದ್ದರಾಮಯ್ಯಗೆ ಆ ಧಾರಾಳ, ಉದಾರತನದ ಮನಸ್ಸು ಇಲ್ಲ ಎಂದು ಪ್ರತಾಪ್‌ ಸಿಂಹ ವ್ಯಂಗ್ಯ ಮಾಡಿದರು.

ಉಚಿತ ಯೋಜನೆಗಳು ಗಂಡನ ದರೋಡೆ ಮಾಡಿ ಪತ್ನಿಗೆ ಕೊಟ್ಟಂತಾಗಿದೆ

ವಿದ್ಯುತ್ ದರವನ್ನು ಯದ್ವಾತದ್ವಾ ಏರಿಕೆ ಮಾಡಲಾಗಿದೆ. ಜನರಿಗೆ ಕರೆಂಟ್ ಶಾಕ್ ಹೊಡೆದಿದೆ. ಕೈಗಾರಿಕಾ ಉದ್ಯಮಿಗಳು ಕರ್ನಾಟಕ ಬಂದ್‌ಗೆ ಕರೆ ಮಾಡಿವೆ. ಕೈಗಾರಿಕೆಗಳಿಗೆ ಬರೆ ಹಾಕುವ ಕೆಲಸ ನಡೆಯುತ್ತಿದೆ. 200 ಯುನಿಟ್ ಫ್ರೀ ಅಂತ ಹೇಳಿದ್ದೀರಿ. ನಿಮ್ಮ ಮನೆಯಲ್ಲಿ ಎಷ್ಟು ವಿದ್ಯುತ್ ಖರ್ಚಾಗುತ್ತದೆ ಎಂಬ ಅರಿವು ನಿಮಗೆ ಇಲ್ಲವೇ?
ನಿಮ್ಮದು ದೋಖಾ ಸರ್ಕಾರ ಅಲ್ಲವೇ? ನಿಮ್ಮ ಮನೆಯಲ್ಲೇ ಎಷ್ಟು ವಿದ್ಯುತ್ ಖರ್ಚಾಗುತ್ತದೆ ಎಂಬುದು ನಿಮಗೆ ಗೊತ್ತಿರಲಿಲ್ವ? ರಾಜ್ಯದ ಜನರು ಕೈಗಾರಿಕೋದ್ಯಮಿಗಳು ಕರೆ ಕೊಟ್ಟ ಕರ್ನಾಟಕ ಬಂದ್‌ಗೆ ಕೈ ಜೋಡಿಸಿ. ಉಚಿತ ಯೋಜನೆಗಳು ಒಂಥರ ಗಂಡನ ದರೋಡೆ ಮಾಡಿ, ಪತ್ನಿಗೆ ಕೊಟ್ಟಂತಾಗಿದೆ. ಗಂಡನ ಜೇಬಿಗೆ ಕತ್ತರಿ ಹಾಕಿ ಪತ್ನಿಗೆ ಕೊಡುವುದರಲ್ಲಿ ಏನೂ ಅರ್ಥ ಇದೆ ಹೇಳಿ? ಎಂದು ಪ್ರತಾಪ್‌ ಸಿಂಹ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: KRS Dam: ಖಾಲಿಯಾಗಿದೆ ಕೆಆರ್‌ಎಸ್‌! ಕುಡಿಯಲು ನೀರು ಸಿಗುವುದು ಇನ್ನೆಷ್ಟು ದಿನ? ಮಳೆ ಬಾರದೇ ಇದ್ದರೆ ಏನ್‌ ಕಥೆ!

ಅಕ್ಕಿ ಸತ್ಯಕ್ಕೆ ಪ್ರತಾಪ್‌ ಸಿಂಹ ಧನ್ಯವಾದ

ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ಬಿಜೆಪಿ ಒತ್ತಡ ತರಲಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್‌ ಸಿಂಹ, 5 ಕೆಜಿ ಅಕ್ಕಿ ಕೊಡುವುದು ಕೇಂದ್ರ ಸರ್ಕಾರ ಅಂತ ಪ್ರಥಮ ಬಾರಿಗೆ ಸತ್ಯ ಹೇಳಿದ್ದಕ್ಕೆ ಧನ್ಯವಾದ. ಮೋದಿ ಅವರ ಐದು ಕೆಜಿಗೆ 10 ಕೆಜಿ ಸೇರಿಸಿ ಕೊಡಬೇಕು ನೀವು. ಓಪನ್ ಮಾರ್ಕೆಟ್ ನಲ್ಲಿ ಅಕ್ಕಿ ಖರೀದಿ ಮಾಡಿ.
ಅಕ್ಕಿ ಖರೀದಿ ಆಗದಿದ್ದರೆ ಗಂಡನ ಅಕೌಂಟ್‌ಗೆ ಅಕ್ಕಿಯ ಹಣ ಹಾಕಿ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಎಲ್ಲ ಕಡೆ ಚುನಾವಣೆ ಇದೆ. ಅಲ್ಲೂ ನೀವು ಫ್ರೀ ಅಕ್ಕಿ ಘೋಷಣೆ ಮಾಡಿದರೆ ಅಕ್ಕಿ ಕೋಡೋಕೆ ಆಗುತ್ತಾ? ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ಅಷ್ಟು ಪ್ರಮಾಣದ ಅಕ್ಕಿ ಕೊಡೋಕೆ ಆಗಿದ್ದರೆ ನಾವೇ ಕೊಡುತ್ತಿದ್ದೆವು. ಮುಂಗಾರು ಕೈ ಕೊಟ್ಟಿದೆ. ಬರ ಬಂದರೆ, ಜಲ ಪ್ರಳಯವಾದರೆ ಅಂತ ಕಡೆ ಅಕ್ಕಿ ಕೊಡಬೇಕಾದರೆ ಕೇಂದ್ರ ಏನು ಮಾಡಬೇಕು? ಎಂದು ಪ್ರಶ್ನೆ ಮಾಡಿದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version