ಚಿಕ್ಕೋಡಿ: ನನ್ನನ್ನು ಏನಾದರೂ ಮಾಡಿ ಎಂದು ಯಾರ ಕಾಲಿಗೂ ಬಿದ್ದಿಲ್ಲ. ನಾನು ಕಾಲಿಗೆ ಬಿದ್ದಿದ್ದು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮಾತ್ರ. ನಾವು ಗೂಟ ಇಟ್ಟರೆ ವಾಪಸ್ ಸುಧಾರಿಸಿಕೊಳ್ಳಲು ಆಗುವುದಿಲ್ಲ. ಯತ್ನಾಳ ನಾಯಕನಲ್ಲವೆಂದು ಬೆಳಗಾವಿ, ವಿಜಯಪುರದ ಬಿಜೆಪಿ ನಾಯಕರಿಂದ ನಮ್ಮವರು ಹೇಳಿಸಲಿ ನೋಡೋಣ. ಹಾಗೇ ಹೇಳಿದರೆ ಹೇಳಿದವರೇ ಆರಿಸಿ ಬರುವುದಿಲ್ಲ ಎಂದ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದರು.
ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿಗಾಗಿ ಹುಕ್ಕೇರಿಯಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಮಂತ್ರಿ ಆಕಾಂಕ್ಷಿಯೆಂದು ಯಾರೂ ಬರೆಯಬೇಡಿ. ನನಗೆ ಮಂತ್ರಿ ಸ್ಥಾನ ಬೇಡ. ನಾನು ೨ಎ ಮೀಸಲಾತಿ ಕೊಡಿಸಿಯೇ ಕೊಡಿಸುತ್ತೇನೆ ಎಂದು ಗುಡುಗಿದರು.
ಅರುಣ್ ಸಿಂಗ್ ವಿರುದ್ಧ ಆಕ್ರೋಶ
ನಾವು ಇಲ್ಲಿ ಟಿಕೆಟ್ ಹಂಚಲು ಬಂದಿಲ್ಲ. ನಮ್ಮ ಸಮಾಜದ ೨ ಎ ಮೀಸಲಾತಿಗಾಗಿ ಬಂದಿದ್ದೇವೆ. ನಾನು ಕೋರ್ ಕಮಿಟಿ ಸದಸ್ಯನಾಗಿ ಇಲ್ಲಿ ಬಂದಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ಗೆ ಟಾಂಗ್ ಕೊಟ್ಟ ಶಾಸಕ ಯತ್ನಾಳ, ಅರಭಾವಿ ಕಾರ್ಯಕ್ರಮ ಆಗುವ ಮೊದಲು ಹೇಗೆ ಬೇಕೊ ಹಾಗೆ ನಮಸ್ಕಾರ ಮಾಡುತ್ತಿದ್ದವರು, ಆ ಕಾರ್ಯಕ್ರಮದ ಬಳಿಕ ನೀಟಾಗಿ ನಮಸ್ಕಾರ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ವೇದಿಕೆಯ ಮೇಲೆ ನಮಸ್ಕಾರ ಮಾಡುವ ಭಂಗಿ ತೋರಿಸಿದರು.
ಇದನ್ನೂ ಓದಿ | ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹುಕ್ಕೇರಿಯಲ್ಲಿ ಬೃಹತ್ ರ‍್ಯಾಲಿಗೆ ಚಾಲನೆ
ಬಿಎಸ್‌ವೈ ಮೇಲೆ ಕಿಡಿ
ಅಪ್ಪ-ಮಗನ ಬಳಿ ಬಟ್ಟೆ ಹಾವಿದ್ದರೆ, ನನ್ನ ಬಳಿ ನಿಜವಾದ ಹಾವಿದೆ. ನಮ್ಮ ತಂಟೆಗೆ ಬಂದ್ರೆ ನಿಜವಾದ ಹಾವು ಬಿಡಬೇಕಾಗುತ್ತೆ. ನಾನು ಯಾರ ಬಳಿ ಹೋಗಿ ಕೋರ್ ಕಮಿಟಿ ಅಧ್ಯಕ್ಷನ ಮಾಡಿ, ಸದಸ್ಯನ ಮಾಡಿ ಎಂದು ಕೇಳಿಕೊಂಡಿಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಪುತ್ರ ಬಿ.ವೈ. ವಿಜಯೇಂದ್ರ ಅವರ ಹೆಸರು ಹೇಳದೆ ಕಿಡಿಕಾರಿದರು.
ವಿಜಯಪುರದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಸನಗೌಡನ ಪರ ಇರುವವರಿಗೆ ಯಾವುದೂ ಸೀಟ್ ಬರಬಾರದು ಎಂದು ಹಣ ಹಂಚಿಕೆ ಮಾಡಲಾಗುತ್ತಿದೆ. ಇದಕ್ಕೆ ಬೆಂಗಳೂರಿನಿಂದ ಹಣ ಬರುತ್ತಿದೆ. ಮುಧೋಳದ ಸಕ್ಕರೆ ಕಾರ್ಖಾನೆ ನಡೆಸುವವ ಒಬ್ಬ ರೊಕ್ಕ ಕಳಸಾತಾನ ಎಂದು ಆರೋಪ ಮಾಡಿದರು.
ಈ ದೇಶದ ಪ್ರಧಾನಿಯೇ ಹೇಳ್ತಾರೆ ನಾನು ಒಬ್ಬ ಪ್ರಧಾನ ಸೇವಕ ಅಂತ. ನಾನೂ ಸಹ ಸೇವಕನೇ. ನಾನೊಬ್ಬ ಭೂತದ ರೀತಿಯಲ್ಲಿ ಕಾಡುತ್ತಿದ್ದೇನೆ ಎಂದು ಹೇಳಿದ ಯತ್ನಾಳ್ ಇದೇ ವೇಳೆ, ಮಾಜಿ ಸಚಿವ ದಿ. ಉಮೇಶ್ ಕತ್ತಿ ಅವರನ್ನು ನೆನೆದರು. “ಯತ್ನಾಳ ನೀವು ಮುಖ್ಯಮಂತ್ರಿ ಆಗಿ, ನನಗೆ ಆ ಟೆನ್ಷನ್ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ. ನೀನು ಮುಖ್ಯಮಂತ್ರಿ ಆಗು ಎಂದಿದ್ದರು” ಎಂದು ನೆನೆದರು.
ಈ ಸಮಾವೇಶ ಬಗ್ಗೆ ಸಿಎಂಗೆ ಮೆಸೇಜ್ ಹೋಗಲಿದೆ
ಇಂದು ಈ ಸಮಾವೇಶದ ಬಗ್ಗೆ ಎಸ್‌ಪಿಯಿಂದ ಮುಖ್ಯಂತ್ರಿಗಳಿಗೆ ಮೆಸೇಜ್ ಹೋಗಲಿದೆ. ಎಷ್ಟು ಜನ ಸೇರಿದ್ದರು? ಯತ್ನಾಳ ಏನು ಮಾತಾಡಿದರು? ಅವನನ್ನು ತೆಗೆಯಲಿಕ್ಕೆ ಏನು ಮಾಡಬೇಕು? ಈ ಎಲ್ಲ ಮಾಹಿತಿಗಳು ಮುಖ್ಯಮಂತ್ರಿಗೆ ಹೋಗುತ್ತದೆ ಎಂದು ಯತ್ನಾಳ ತಿಳಿಸಿದರು.
ಯಾರ ಕಾಲಿಗೂ ಬೀಳದವರು ಮೊನ್ನೆ ನಮ್ಮ ಸ್ವಾಮೀಜಿ ಕಾಲಿಗೆ ಬಿದ್ದಿದ್ದಾರೆ. ಅವರು ಯಾರ ಕಾಲಿಗೂ ಬಿದ್ದಿಲ್ಲವೆಂದು ನನಗೆ ಒಬ್ಬರು ಹೇಳಿದ್ದರು. ಆದರೆ, ಅವರು ಕಾಲಿಗೆ ಬೀಳಲೇಬೇಕು, ನಮ್ಮ ಸಮುದಾಯದವರು ಯಮಕನಮರಡಿಯಲ್ಲಿ ೪೦ ಸಾವಿರ ಜನ ಇದ್ದೇವೆ ಎಂದು ಶಾಸಕ ಸತೀಶ್ ಜಾರಕಿಹೊಳಿಗೆ ಯತ್ನಾಳ್ ಕಾಲೆಳೆದರು.
ಇದನ್ನೂ ಓದಿ | ಪಂಚಮಸಾಲಿ POLITICS | ಹುಕ್ಕೇರಿಯಲ್ಲಿ ಎ.ಬಿ. ಪಾಟೀಲ್ ಗೆಲ್ಲಿಸಿ ಎಂದ ಕಾಶಪ್ಪನವರ ಮಾತಿಗೆ ಸಿಟ್ಟಿಗೆದ್ದ ಕತ್ತಿ ಪುತ್ರ
ನಿಮ್ಮ ಸರ್ಕಾರವೇ ಇದೆ ಮಾಡಿಸಿ- ಲಕ್ಷ್ಮೀ ಹೆಬ್ಬಾಳಕರ್ ಮನವಿ
ಈಗ ರಾಜ್ಯ ಸರ್ಕಾರ ಪಂಚಮಸಾಲಿಗೆ ೨ಎ ಮೀಸಲಾತಿ ಘೋಷಣೆ ಮಾಡಲು ಸಚಿವ ಸಂಪುಟದ ನಿರ್ಧಾರವನ್ನು ತೆಗೆದುಕೊಳ್ಳಲಿ. ರಾಜ್ಯಪಾಲರ ಬಳಿ ಹೋಗಿ ಅಂಗೀಕಾರ ಮಾಡಿಸಿಕೊಳ್ಳಬೇಕು. ಅದು ಶಾಸನವಾಗಬೇಕು, ರಾಷ್ಟ್ರಪತಿಗಳ ಅಂಕಿತವಾದ ಮೇಲೆ ನಮಗೆ ೨ಎ ಸಿಗಲಿದೆ. ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದೆ. ರಾಜ್ಯದಲ್ಲೂ ನಿಮ್ಮದೇ ಸರ್ಕಾರ ಇದೆ. ನಮಗೆ ೨ ಎ ಮೀಸಲಾತಿ ನೀಡಲು ಸಹಕರಿಸಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ವೇದಿಕೆಯ ಮೇಲಿದ್ದ ಶಾಸಕ ಅರವಿಂದ ಬೆಲ್ಲದ ಅವರಿಗೆ ಮನವಿ ಮಾಡಿದರು.