ಬೆಂಗಳೂರು: ಚಾರಿತ್ರಿಕ ಇತಿಹಾಸ ಹೊಂದಿರುವ ಬಸವನಗುಡಿ ಕ್ಷೇತ್ರದಲ್ಲಿ ಬಿಜೆಪಿಯ ಪಕ್ಷದ ರವಿ ಸುಬ್ರಹ್ಮಣ್ಯ (L A Ravi Subramanya)ಅವರು ಗೆಲುವು ಸಾಧಿಸಿದ್ದಾರೆ. ಅವರ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಯುಬಿ ವೆಂಕಟೇಶ್ ವಿರುದ್ಧ ಜಯ ಸಾಧಿಸಿದರು. 2018ರಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್ನ ಬಾಗೇಗೌಡರ ವಿರುದ್ಧ ಬಿಜೆಪಿಯ ರವಿ ಸುಬ್ರಹ್ಮಣ್ಯ 37,884 ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.
1952ರಲ್ಲಿ ರಚನೆಯಾದ ಈ ಕ್ಷೇತ್ರವನ್ನು ಬ್ರಾಹ್ಮಣರು ಪ್ರಾಬಲ್ಯ ಹೊಂದಿರುವ ಕ್ಷೇತ್ರ ಎಂದು ಕರೆಯುತ್ತಾರೆ. ಇದುವರೆಗೆ ಒಂಭತ್ತು ಬಾರಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಶಾಸಕರಾಗಿ ಆಯ್ಕೆಯಾಗಿರುವುದೇ ಅದಕ್ಕೆ ಉತ್ತಮ ಉದಾಹರಣೆ. ಆದರೆ, 1972ರಲ್ಲಿ ಇಲ್ಲಿ ಕಾಂಗ್ರೆಸ್ನ ಅಮೀರ್ ರಹಮತುಲ್ಲಾ ಅವರು ಗೆಲ್ಲುವ ಮೂಲಕ ಮುಸ್ಲಿಮರೊಬ್ಬರು ಛಾಪು ಮೂಡಿಸಿದ್ದರು. ಈ ಕ್ಷೇತ್ರದಲ್ಲಿ ವ್ಯಕ್ತಿಗತ ಮತಗಳೇ ನಿರ್ಣಾಯಕ. ಇಲ್ಲಿ ಅಭ್ಯರ್ಥಿಗಾಗಿ ಮತವನ್ನು ಹಾಕುತ್ತಾರೆ.
ಇದನ್ನೂ ಓದಿ : Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಕಾಗೇರಿ, ಕೆ.ಸುಧಾಕರ್ಗೆ ಸೋಲು
ದೊಡ್ಡ ಗಣಪತಿ ದೇವಸ್ಥಾನ, ಬ್ಯೂಗಲ್ ರಾಕ್ ಪಾರ್ಕ್, ಅದಕ್ಕೆ ಹೊಂದಿಕೊಂಡಂತೆ ಬಿಎಂಎಸ್ ಕಾಲೇಜು, ಡಿವಿಜಿ ರಸ್ತೆ, ಗಾಂಧಿ ಬಜಾರ್, ಠಾಗೂರ್ ಸರ್ಕಲ್, ಬಸವನಗುಡಿ ಕ್ಲಬ್, ನ್ಯಾಷನಲ್ ಕಾಲೇಜು, ರಾಮಕೃಷ್ಣ ಆಶ್ರಮಗಳೆಲ್ಲ ಸೇರಿ ಬಸವನಗುಡಿ ಕ್ಷೇತ್ರಕ್ಕೆ ಕಳೆ ತಂದಿದೆ.