ಬೆಂಗಳೂರು: ಏಳನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಬುಧವಾರ (ಮಾರ್ಚ್ 1)ದಿಂದ ರಾಜ್ಯಾದ್ಯಂತ ಸರ್ಕಾರಿ ನೌಕರರು ಆರಂಭಿಸಲಿರುವ ಮುಷ್ಕರ (Govt Employees Strike) ನಿಲ್ಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಇದರ ದಿಸೆಯಲ್ಲಿ ಮಂಗಳವಾರ ರಾತ್ರಿ (ಫೆಬ್ರವರಿ 28) ಸರ್ಕಾರಿ ನೌಕರರ ಸಂಘ ಪದಾಧಿಕಾರಿಗಳ ಜತೆ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದ್ದಾರೆ. ಆದರೆ, ಆಯೋಗದ ವರದಿ ಜಾರಿಗೊಳಿಸುವ ದಿಸೆಯಲ್ಲಿ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರೂ ಜಾರಿ ಆದೇಶ ಹೊರಡಿಸಲು ಸ್ವಲ್ಪ ಸಮಯ ಕೇಳಿದ್ದಾರೆ. ಆದರೆ, ನೌಕರರ ಸಂಘವು ಪಟ್ಟು ಬಿಡದ ಕಾರಣ ಔಪಚಾರಿಕವಾಗಿ ಸಭೆ ನಡೆದಂತಾಗಿದೆ.
ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಸಭೆ ನಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, “ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವ ದಿಸೆಯಲ್ಲಿ ಮೊದಲ ಬಾರಿಗೆ ನಡೆಸಿದ ಸಭೆಯಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ಆದೇಶ ಹೊರಡಿಸಲು ಒಂದಷ್ಟು ಸಮಯ ಕೇಳಿದ್ದಾರೆ. ಹಾಗಾಗಿ, ನಾವು ಸಂಘದ ಪದಾಧಿಕಾರಿಗಳ ಜತೆ ಚರ್ಚಿಸಿ ಮುಂದಿನ ತೀರ್ಮಾನ ತಿಳಿಸುತ್ತೇವೆ” ಎಂದು ಹೇಳಿದರು.
ಇದನ್ನೂ ಓದಿ: Govt Employees Strike: ವೇತನ ಆಯೋಗ ವರದಿ ಜಾರಿಯಿಂದ ರಾಜ್ಯ ಬೊಕ್ಕಸಕ್ಕೆ ಹೊರೆ ಎನ್ನುವುದು ಸುಳ್ಳು: ಷಡಾಕ್ಷರಿ
ಬೊಮ್ಮಾಯಿ ಹೇಳಿದ್ದೇನು?
ಸಭೆ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, “ನೌಕರರ ಸಂಘದ ಜತೆ ಸಕಾರಾತ್ಮಕವಾಗಿ ಸಭೆ ನಡೆದಿದ್ದು, ಹಣಕಾಸು ವಿಷಯಗಳ ಕುರಿತು ಚರ್ಚಿಸಲಾಗಿದೆ. ನಾವು ಸಮಯ ಕೇಳಿದ್ದೇವೆ. ಅವರು ಇದರ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂಬುದಾಗಿ ತಿಳಿಸಿದ್ದಾರೆ” ಎಂದು ಹೇಳಿದರು.
ರಾತ್ರಿಯೇ ನೌಕರರ ಸಂಘದ ಸಭೆ
ಬಸವರಾಜ ಬೊಮ್ಮಾಯಿ ಅವರ ಪ್ರಸ್ತಾಪದ ಕುರಿತು ಮಧ್ಯರಾತ್ರಿಯೇ ಸಭೆ ನಡೆಸಲು ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಮಾನಿಸಿದೆ. “ನಾವು ಸರ್ಕಾರದ ವಿರುದ್ಧ ಇಲ್ಲ. ಮುಖ್ಯಮಂತ್ರಿಯವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ಕಾಲಾವಕಾಶ ನೀಡುವ ಕುರಿತು ರಾತ್ರಿಯೇ ಸಭೆ ನಡೆಸುತ್ತೇವೆ. ಪದಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಬುಧವಾರ ಮುಷ್ಕರ ಕೈಬಿಡುವ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ” ಎಂದು ಷಡಾಕ್ಷರಿ ತಿಳಿಸಿದರು.