ಹುಬ್ಬಳ್ಳಿ: ಕಾಂಗ್ರೆಸ್‌ನಲ್ಲಿ ಏನು ನಡೆಯುತ್ತಿದೆಯೋ ಅದು ಅವರ ಆಂತರಿಕ ವಿಚಾರ, ರಾಜ್ಯದಲ್ಲಿ ಏನು ನಡೆಯುತ್ತಿದೆ ಅನ್ನುವುದು ಮುಖ್ಯ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಸ್ಥಗಿತಗೊಂಡಿದೆ. ಸಿದ್ದರಾಮಯ್ಯ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತೇ ಅನ್ನುವುದು ಅವರಿಗೆ ಬಿಟ್ಟದ್ದು. ವಿರೋಧ ಪಕ್ಷದ ಆರೋಪಗಳನ್ನು ನಿಭಾಯಿಸಲು ಸಿಎಂ ಸಭೆಗಳ ಮೇಲೆ ಸಭೆ ಮಾಡ್ತಿದಾರೆ. ಒಳ್ಳೆಯ ಆಡಳಿತ ನೀಡಲಿ ಅಂತ ಜನತೆ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟಿದೆ. ಸರ್ಕಾರದಲ್ಲಿ ಖಜಾನೆ ಸಂಪೂರ್ಣ ಖಾಲಿಯಾಗಿದ್ದು, ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರಗಾಲ ಬಂದರೂ ಸರಿಯಾದ ಪರಿಹಾರ ಕೊಡುತ್ತಿಲ್ಲ. ಮುಳುಗಡೆಯಾದ ಪ್ರದೇಶಗಳಿಗೆ ಪರಿಹಾರ ಕೊಟ್ಟಿಲ್ಲ. ಒಂದು ವಿಡಿಯೋ ಕಾಲ್ ಬಿಟ್ಟರೆ ಬೇರೇನೂ ಮಾಡಿಲ್ಲ. ಸಂಕಷ್ಟದಲ್ಲಿರೋ ಜನತೆಗೆ ಸ್ಪಂದನೆ ಮಾಡದ ಸರ್ಕಾರ ರಾಜ್ಯದಲ್ಲಿದೆ. ಇಂತಹ ಸರ್ಕಾರ ಬೇಕೆ ಅನ್ನುವ ಪ್ರಶ್ನೆ ಉದ್ಭವವಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಬೆಂಬಲ ಇರುವ ಕುರಿತು ಕೇಳಿದ ಪ್ರಶ್ನೆಗೆ, ಹೈಕಮಾಂಡ್ ಶ್ರೀರಕ್ಷೆ ಎಲ್ಲಿವರೆಗೆ ಅನ್ನುವುದು ಅವರಿಗೇ ಬಿಟ್ಟ ವಿಚಾರ. ಒಂದು ವರದಿಯಲ್ಲಿ ಸಿಎಂಗೆ ರಕ್ಷೆ ಎನ್ನಲಾಗುತ್ತಿದೆ. ಮತ್ತೊಂದು ವರದಿಯಲ್ಲಿ ಪ್ರಾದೇಶಿಕ ಪಕ್ಷದ ರೀತಿಯಲ್ಲಿ ನಡೆದುಕೊಳ್ಳಲಾಗಲ್ಲ ಎನ್ನಲಾಗುತ್ತಿದೆ ಎಂದಿರುವುದಾಗಿ ಹೇಳಿದರು.
KAS Prelims exam: ಕೆಎಎಸ್ ಪರೀಕ್ಷೆ ಮುಂದೂಡಲು ಕೆಲವರಿಂದ ಲಾಬಿ; ಆದರೆ ಮುಂದೂಡುವುದಿಲ್ಲ ಎಂದ ಸರ್ಕಾರ
ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಂಸರಾಜ್ ಭಾರದ್ವಾಜ್ ಒಬ್ಬ ರಾಜಕಾರಣಿ ಗವರ್ನರ್ ಆಗಿದ್ದರು. ಅವರು ರಾಜಕಾರಣ ಬಿಟ್ಟರೆ ಬೇರೇನು ಮಾಡಲಿಲ್ಲ. ದಿನ ಬೆಳಗಾದರೆ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಂಡಿತು. ಅವತ್ತು ರಾಜ್ಯಪಾಲರ ಭಾಷೆ, ರಾಜ್ಯಪಾಲರ ನಿರ್ಧಾರ ಇವರಿಗೆ ಬೇಕಾಗಿತ್ತು. ಈಗ ಅದೇ ಪರಿಸ್ಥಿತಿ ಇವರಿಗೆ ಬಂದಾಗ ರಾಜ್ಯಪಾಲರ ವಿರುದ್ಧ ಮಾತನಾಡುತ್ತಿದ್ದಾರೆ. ಇದು ಸಂವಿಧಾನ ಮತ್ತು ರಾಜ್ಯಾಂಗದ ಪ್ರಶ್ನೆ ಇದೆ. ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿಗಳು, ಆ ಸ್ಥಾನ ಬಹಳ ಮುಖ್ಯವಾದದ್ದು. ಅವರ ಕಾರ್ಯ ವೈಖರಿ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ ಹೇಳುವುದಕ್ಕೆ ರೀತಿ ನೀತಿ ಇದೆ. ಆ ರೀತಿ ನಡೆದುಕೊಂಡರೆ ರಾಜ್ಯ ಸರ್ಕಾರಕ್ಕೆ ಗೌರವ ಸಿಗುತ್ತದೆ. ರಾಜ್ಯಪಾಲರನ್ನು ಬೈಯುವುದರಿಂದ ಕಾಂಗ್ರೆಸ್ ಏನು ಲಾಭ ಆಗಲ್ಲ ಎಂದು ಹೇಳಿದರು.
ಅಹಿಂದ ಸಂಘಟನೆಯಿಂದ ರಾಜಭವನ ಚಲೋ ಕುರಿತ ಕೇಳಿದ ಪ್ರಶ್ನೆಗೆ ಇದೆಲ್ಲವೂ ಕಾಂಗ್ರೆಸ್ ಪ್ರೇರಿತ ಹೋರಾಟ ಎಂದರು.
ಇದನ್ನೂ ಓದಿ | Jindal Steels: ಬಿಜೆಪಿ ಸರ್ಕಾರವೇ ಜಿಂದಾಲ್ ಕಂಪನಿಗೆ ಭೂಮಿ ನೀಡಲು ತೀರ್ಮಾನಿಸಿತ್ತು: ಎಂ.ಬಿ. ಪಾಟೀಲ್
ಭರತ್ ಶಿಗ್ಗಾಂವಿಯಿಂದ ಸ್ಪರ್ಧಿಸಲ್ಲ
ಶಿಗ್ಗಾಂವಿ ಕ್ಷೇತ್ರದಿಂದ ಭರತ್ ಬೊಮ್ಮಾಯಿ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಭರತ್ ಬೊಮ್ಮಾಯಿಗೆ ಶಿಗ್ಗಾಂವಿ ಟಿಕೆಟ್ ಕೇಳಿಲ್ಲ. ಶಿಗ್ಗಾಂವಿ ಸವಣೂರು ಕ್ಷೇತ್ರದ ಜನ ಭರತ್‌ಗೆ ಟಿಕೆಟ್ ಕೊಡಲು ಒತ್ತಡ ತಂದಿಲ್ಲ. ಜೋಶಿಯವರನ್ನು ಭೇಟಿಯಾಗಲು ಶಿಗ್ಗಾಂವಿ ಕ್ಷೇತ್ರದ ಜನ ಹೋಗಿದ್ದ ಉದ್ದೇಶವೇ ಬೇರೆ. ಆದರೆ ಅದು ಬೇರೆ ರೀತಿಯ ಪ್ರಚಾರವಾಗಿದೆ. ಪಕ್ಷಕ್ಕೆ ಕೆಲಸ ಮಾಡಿದ ನಿಷ್ಠರಿಗೆ ಟಿಕೆಟ್ ಕೊಡುವಂತೆ ಕೇಳಿದ್ದಾರೆ. ಕಷ್ಟದಲ್ಲಿ ಪಕ್ಷ ಕಟ್ಟಿದವರಿಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಜೋಶಿಯವರು ಭರತ್ ಹೆಸರು ಹೇಳಿದ್ದಾರೆ. ನಾನು ನನ್ನ ಮಗನಿಗೆ ಟಿಕೇಟ್ ಕೇಳಿಲ್ಲ. ನನ್ನ ಮಗ ಸ್ಪರ್ಧೆ ಮಾಡುವ ವಿಚಾರವಿಲ್ಲ ಎಂದು ಹೇಳಿದರು.