Site icon Vistara News

Basavaraj Bommai: ಎರಡು ತಿಂಗಳಲ್ಲಿ 13 ಬಾರಿ ತವರು ಕ್ಷೇತ್ರಕ್ಕೆ ತೆರಳಿರುವ ಸಿಎಂ ಬಸವರಾಜ ಬೊಮ್ಮಾಯಿ: ಶಿಗ್ಗಾಂವಿಯಲ್ಲಿ ಪ್ರಬಲ ಸ್ಪರ್ಧೆ

Basavaraj bommai Frequently traveling to his constituency

#image_title

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕಳೆದ ಎರಡು ತಿಂಗಳಲ್ಲಿ ಬರೊಬ್ಬರಿ 13 ಬಾರಿ ತಮ್ಮ ಕ್ಷೇತ್ರ ಶಿಗ್ಗಾಂವಿಗೆ ಪ್ರವಾಸ ಮಾಡಿದ್ದಾರೆ. ಈ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ ಎಂಬ ಮುನ್ಸೂಚನೆಯನ್ನು ನೀಡಿದ್ದಾರೆ.

ಸ್ವಕ್ಷೇತ್ರಕ್ಕೆ ಪದೇಪದೆ ಭೇಟಿ ನೀಡುತ್ತಿರುವ ಬೊಮ್ಮಾಯಿ, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟನೆ ಮಾಡಿದ್ದಾರೆ, ಚಾಲನೆ ನೀಡಿದ್ದಾರೆ. ತಮ್ಮೆದರು ಕಾಂಗ್ರೆಸ್‌ನಿಂದ ಅಜ್ಜಂಪೀರ್ ಖಾದ್ರಿ ಸ್ಪರ್ಧೆ ನಡೆಸುತ್ತಿದ್ದರು. ಪ್ರತಿ ಬಾರಿ ಸೋಲುತ್ತಿರುವ ಖಾದ್ರಿಯನ್ನು ಬದಲಾಯಿಸಿ ವೀರಶೈವ ಲಿಂಗಾಯತ ಸಮುದಾಯದ, ಅದರಲ್ಲೂ ಪಂಚಮಸಾಲಿ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಚಿಂತನೆ ನಡೆಸಿದೆ. ಮಾಜಿ ಸಚಿವ ವಿನಯ್‌ ಕುಲಕರ್ಣಿ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಖಾದ್ರಿ ಅಭ್ಯರ್ಥಿಯಾದಾಗ ಮುಸ್ಲಿಂ ಮತಗಳು ಬಹುತೇಕ ಖಾದ್ರಿಗೆ ಲಭಿಸುತ್ತಿದ್ದವು. ವೀರಶೈವ ಲಿಂಗಾಯತ ಮತಗಳು ಬೊಮ್ಮಾಯಿ ಅವರಿಗೆ ಲಭಿಸುತ್ತಿದ್ದವು. ಪಂಚಮಸಾಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮುಸ್ಲಿಂ ಮತಗಳು ಎಂದಿನಂತೆ ಕಾಂಗ್ರೆಸ್‌ಗೇ ಲಭಿಸುತ್ತವೆ, ವೀರಶೈವ ಲಿಂಗಾಯತ ಮತಗಳು ವಿಭಜನೆಯಾಗಿ ವಿನಯ್‌ ಕುಲಕರ್ಣಿಗೆ ಲಭಿಸುವುದರಿಂದ ಪ್ರಬಲ ಸ್ಪರ್ಧೆ ಏರ್ಪಡುವ ಅಂದಾಜಿದೆ.

ಇದೇ ಕಾರಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಕ್ಷೇತ್ರದ ಬೆಂಬಲಿಗರಲ್ಲಿ 40 ಕ್ಕೂ ಹೆಚ್ಚು ಜನರಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ನೇಮಕ ಮಾಡಿದ್ದಾರೆ. ತಮ್ಮ ಕ್ಷೇತ್ರಕ್ಕೆ ಬಹುದೊಡ್ಡ ಅನುದಾನವನ್ನು ಮಂಜೂರು ಮಾಡಿದ್ದಾರೆ. ತಮ್ಮ ಜನ್ಮದಿನದಂದೂ ರಾಜ್ಯ ರಾಜಧಾನಿಯಲ್ಲಿರದೆ, ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

ಜನವರಿ 8, ಜನವರಿ 15, ಜನವರಿ 28, ಫೆಬ್ರವರಿ 19, ಫೆಬ್ರವರಿ 27, ಮಾರ್ಚ್ 2, ಮಾರ್ಚ್ 5, ಮಾರ್ಚ್ 9, ಮಾರ್ಚ್ 10, ಮಾರ್ಚ್ 12, ಮಾರ್ಚ್ 14, ಮಾರ್ಚ್ 15, ಮಾರ್ಚ್ 20ರಂದು ಸ್ವಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇನ್ನೇನು ಪಕ್ಷದಿಂಧ ಟಿಕೆಟ್‌ ಘೋಷಣೆ ಆಗಲಿದ್ದು, ಆನಂತರದಲ್ಲಿ ರಾಜ್ಯದ ವಿವಿಧೆಡೆ ಪ್ರಚಾರಕ್ಕೆ ಪ್ರವಾಸ ಮಾಡಬೇಕಾಗುತ್ತದೆ. ಸಿಎಂ ಆಗಿದ್ದವರೇ ಸೋತರು ಎನ್ನುವುದು ವೈಯಕ್ತಿಕವಾಗಿ ಹಾಗೂ ಪಕ್ಷಕ್ಕೂ ಅವಮಾನದ ವಿಚಾರ. ಟಿಕೆಟ್‌ ಘೋಷಣೆಗೂ ಮೊದಲೇ ಮೊದಲೇ ಕ್ಷೇತ್ರದಲ್ಲಿ ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಕಾಂಗ್ರೆಸ್‌ನಿಂದ ಟಿಕೆಟ್‌ ಲಭಿಸುವುದು ಅನುಮಾನ ಎಂದು ತಿಳಿಯುತ್ತಲೇ ಖಾದ್ರಿ ಅವರು ಜೆಡಿಎಸ್‌ ಅಥವಾ ಇನ್ನಾವುದೇ ಪಕ್ಷಕ್ಕೆ ತೆರಳುವ ಮುನ್ಸೂಚನೆಯು ಕಾಂಗ್ರೆಸ್‌ಗೆ ಲಭಿಸಿದೆ. ಖಾದ್ರಿ ಅವರನ್ನು ಸಮಾಧಾನಪಡಿಸಲು ಮಾಜಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರಿಗೆ ಹೊಣೆ ನೀಡಲಾಗಿದೆ.

ಇದನ್ನೂ ಓದಿ: Basavaraja Bommai : ಉರಿ ಗೌಡ, ನಂಜೇಗೌಡ ಪ್ರಕರಣದಲ್ಲಿ ಹಿನ್ನಡೆ ಆಗಿಲ್ಲ, ಶೋಧನೆಯಿಂದ ಸತ್ಯ ಹೊರಬರಲಿದೆ ಎಂದ ಬೊಮ್ಮಾಯಿ

Exit mobile version