Site icon Vistara News

Basavaraja Bommai : ಸರ್ಕಾರದ 6 ತಿಂಗಳ ಅಧಿವೃದ್ಧಿ ಯೋಜನೆಗಳ ವರದಿ ಕೇಳಿದ ಬೊಮ್ಮಾಯಿ

Basavaraja Bommai Jagath pratap Nadda

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಲ್ಲಿ ಬಜೆಟ್‌ನಲ್ಲಿ ಘೋಷಿಸಿರುವ ಎಷ್ಟು ಅಭಿವೃದ್ಧಿ ಯೋಜನೆಗಳನ್ನು (Development Programs) ಜಾರಿಗೊಳಿಸಿದೆ ಎಂದು ಮಾಹಿತಿ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಸವಾಲು ಹಾಕಿದ್ದಾರೆ. ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಬಂದು ಆರು ತಿಂಗಳಾಯಿತು. ಈ ಸರ್ಕಾರದ ಬಗ್ಗೆ ಜನರು ಭ್ರಮ ನಿರಸನಗೊಂಡಿದ್ದಾರೆ‌. ಇವರು ಪದೇ ಪದೇ ಗ್ಯಾರೆಂಟಿಗಳ ಬಗ್ಗೆ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ‌. ವಾಸ್ತವದಲ್ಲಿ ಜನರಿಗೆ ಗ್ಯಾರೆಂಟಿ ಯೋಜನೆಗಳು ತಲುಪುತ್ತಿಲ್ಲ ಎಂದು ಹೇಳಿದರು.

ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಹತ್ತು ಕೆಜಿ ಅಕ್ಕಿ ಕೊಡುವ ಬದಲು ಕೇಂದ್ರ ಸರ್ಕಾರ ನೀಡುವ ಐದು ಕೆಜಿ ಅಕ್ಕಿಯನ್ನೂ ಕೊಡುತ್ತಿಲ್ಲ. ಅದರ ಹೊರತಾಗಿ ಕಾಳ ಸಂತೆಯಲ್ಲಿ ಮುಕ್ತವಾಗಿ ಮಾರಾಟ ಮಾಡುತ್ತಿದ್ದಾರೆ. ಅದನ್ನು ತಡೆಯಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಸರ್ಕಾರ ಶಾಮೀಲಾಗಿದೆ ಅಂತ ಅನುಮಾನ ಬರುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ʻʻಗೃಹ ಲಕ್ಷ್ಮೀ ಸಮೀಕ್ಷೆ ಮಾಡಿದರೆ ಮೊದಲ ತಿಂಗಳು ಕೇವಲ ಶೇ 35% ರಷ್ಟು ಜನರಿಗೆ ಬಂದಿದೆ. ನಂತರದ ಕಂತುಗಳು ಸರಿಯಾಗಿ ಬಂದಿಲ್ಲ. ಗೃಹ ಲಕ್ಷ್ಮೀಯರ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ವಿದ್ಯುತ್ ವಿಚಾರದಲ್ಲಂತೂ ಸರ್ಕಾರ ರೈತರಿಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ.‌ ಸಿಎಂ ಸಿದ್ದರಾಮಯ್ಯ ಅವರು ಐದು ಗಂಟೆ ನಿರಂತರ ವಿದ್ಯುತ್ ಕೊಡುವುದಾಗಿ ಹೇಳಿದ್ದಾರೆ. ಆದರೆ, ರೈತರಿಗೆ ಕೇವಲ 3 ಗಂಟೆ ಮಾತ್ರ‌ ವಿದ್ಯುತ್ ಸಿಗುತ್ತಿದೆ. ಆದರೆ, ರಾಜ್ಯ ಕಾಂಗ್ರೆಸ್ ನಾಯಕರು ಸುಮ್ಮನೆ ತೆಲಂಗಾಣಕ್ಕೆ ಹೋಗಿ ಗ್ಯಾರೆಂಟಿಗಳ ಬಗ್ಗೆ ಪ್ರಚಾರ ಪಡೆಯುತ್ತಿದ್ದಾರೆ‌ʼʼ ಎಂದು ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಸಾಲದ ಪ್ರಮಾಣ ಹೆಚ್ಚಾಗಿದೆ ಎಂದ ಬೊಮ್ಮಾಯಿ

ʻʻರಾಜ್ಯ ಸರಕಾರ ಬಜೆಟ್ ನಲ್ಲಿ ಘೊಷಣೆ ಮಾಡಿರುವ ಎಷ್ಟು ಯೋಜನೆಗಳ ಅನುಷ್ಠಾನ ಮಾಡಿದ್ದೀರಿ, ಈ ಬಗ್ಗೆ ಸದನದಲ್ಲಿ ಸ್ಪಷ್ಟವಾದ ಮಾಹಿತಿ ನೀಡಬೇಕು. ಕರ್ನಾಟಕದ ಆರ್ಥಿಕವಾಗಿ ಸಬಲವಾಗಿರುವ ರಾಜ್ಯ, ಆದರೆ, ಯಾವುದೇ ಯೋಜನೆಗಳನ್ನು ಜಾರಿಗೆ ತರದ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ನಾವು ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ತಂದಿದ್ದು ಅದರ ಲಾಭ ಪಡೆದು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಪಿ, ಟಿಎಸ್ ಪಿ ಯೋಜನೆಗಳ 11 ಸಾವಿರ ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ. ರಾಜ್ಯದ ಸಾಲದ ಪ್ರಮಾಣ ಹೆಚ್ಚಾಗಿದೆ.‌ ರಿಸರ್ವ್ ಬ್ಯಾಂಕ್ ಸಾಲದ ಸುಳಿಗೆ ಸಿಲುಕಿರುವ ರಾಜಸ್ತಾನ, ಪಂಜಾಬ್ ಸೇರಿದಂತೆ ಮೂರು ರಾಜ್ಯಗಳಿಗೆ ಎಚ್ಚರಿಕೆ ಕೊಟ್ಟಿದೆ. ನಮ್ಮ ರಾಜ್ಯವನ್ನು ಆ ಪರಿಸ್ಥಿತಿಗೆ ತೆಗೆದುಕೊಂಡು ಹೋಗಬೇಡಿʼʼ ಎಂದು ಸಲಹೆ ನೀಡಿದರು.

ವರ್ಗಾವಣೆ ದಂಧೆ ನಿರಂತರ, ಎಲ್ಲದಕ್ಕೂ ವಸೂಲಿ

ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲ ಹಂತದಲ್ಲೂ ನಡೆಯುತ್ತಿದೆ. ಸಣ್ಣ ಪುಟ್ಟ ಕೆಲಸ ಮಾಡಿಕೊಡುವಲ್ಲಿಯೂ ವಸೂಲಿ ನಡೆಯುತ್ತಿದೆ. ವರ್ಗಾವಣೆ ನಿರಂತರವಾಗಿ ನಡೆಯುತ್ತಿದೆ. ನಮ್ಮ ಮೇಲೆ 40% ಆರೋಪ ಮಾಡಿದ್ದರು. ಈಗ 50% ಕಮಿಷನ್ ನೇರವಾಗಿಯೇ ಭ್ರಷ್ಟಾಚಾರ ನಡೆಯುತ್ತಿದೆ. ಕಮಿಷನ್ ಆರೋಪದ ಬಗ್ಗೆ ತನಿಖೆ ನಡೆಸಲು ಸರ್ಕಾರ ಆಯೋಗ‌ ರಚನೆ ಮಾಡಿದೆ. ಆ ಆಯೋಗ ಪ್ರಾಮಾಣಿಕವಾಗಿ ಎಲ್ಲ ಪ್ರಕರಣಗಳ ತನಿಖೆ ನಡೆಸಲಿ ಎಂದು ಹೇಳಿದರು.

ಒಂದು ಸಾವಿರ ರೂ. ಪರಿಹಾರ ರೈತರಿಗೆ ಅವಮಾನ

ʻʻಬರ ನಿರ್ವಹಣೆ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರಿಗೆ ಬರ ಪರಿಹಾರಕ್ಕೆ ಒಂದು ಸಾವಿರ ರೂ. ನೀಡುತ್ತೇನೆ ಎನ್ನುವುದು ನಾಚಿಕೆಗೇಡು. ಇದು ರೈತರಿಗೆ ಮಾಡುವ ಅವಮಾನ. ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ನಾವು‌ ಮೊದಲು‌ ಪರಿಹಾರ ನೀಡಿ ನಂತರ ಕೇಂದ್ರದ ಅನುದಾನ ಪಡೆದಿದ್ದೆವು. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ. ರಾಜ್ಯ ಸರ್ಕಾರದ ಎನ್ ಡಿ ಆರ್ ಎಫ್ ನಿಧಿಯಲ್ಲಿ ಎಷ್ಟು ಹಣ ಇದೆ ಅದನ್ನು ಮೊದಲು ರೈತರಿಗೆ ನೀಡಲಿ. ಅದನ್ನು ಬಿಟ್ಟು ಅನಗತ್ಯವಾಗಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ನಾವು ಕೊಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆ 4000 ರೂಗಳನ್ನು ನಿಲ್ಲಿಸಲಾಗಿದೆ. ರೈತರಿಗೆ ಡಿಸೇಲ್ ಸಬ್ಸಿಡಿ ಕೊಡುವುದನ್ನು ನಿಲ್ಲಿಸಲಾಗಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡಿರುವುದನ್ನು ನಿಲ್ಲಿಸಲಾಗಿದೆ. ರೈತರು ಸಂಕಷ್ಟದಲ್ಲಿದ್ದಾಗ ಸರ್ಕಾರ ನೆರವಿಗೆ ಬರಬೇಕು. ಇಲ್ಲದಿದ್ದರೆ ಅದು ಜೀವಂತ ಸರ್ಕಾರ ಅನಿಸುವುದಿಲ್ಲʼʼ ಎಂದರು.

ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಅಶೋಕ್ ಸಮರ್ಥರು

ಪ್ರತಿಪಕ್ಷದ ನಾಯಕರಾಗಿ ಆರ್. ಅಶೋಕ್ ಅವರ ಆಯ್ಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಶೋಕ್ ಅವರು ಏಳು ಬಾರಿ ಶಾಸಕರಾಗಿ ಗೃಹ, ಆರೋಗ್ಯ, ಸಾರಿಗೆ ಕಂದಾಯ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಡಿಸಿಎಂ ಆಗಿ‌ ಕೆಲಸ ಮಾಡಿದ್ದಾರೆ. ಅವರು ಸಮರ್ಥರಿದ್ದಾರೆ. ಈ ಸದನದಲ್ಲಿ ಅವರ ಸಾಮರ್ಥ್ಯ ತೋರಿಸುತ್ತಾರೆ.
ಪಕ್ಷದಲ್ಲಿ ಯಾವುದೇ ಆಂತರಿಕ ಸಮಸ್ಯೆ ಇಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಅನೇಕ ಬಾರಿ ಯಡಿಯೂರಪ್ಪ ಅವರ ಬಗ್ಗೆ ಮಾತನಾಡಿದ್ದಾರೆ‌. ಸರ್ಕಾರದ ಸ್ವಜನಪಕ್ಷ ಪಾತದ ವಿರುದ್ದ ಅವರೂ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಸದನದಲ್ಲಿ ಜೆಡಿಎಸ್ -ಬಿಜೆಪಿ ಜಂಟಿಯಾಗಿ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ ಎಂದರು.

ಬಿಜೆಪಿ ಯಾವುದೇ ಆಪರೇಷನ್ ಮಾಡುತ್ತಿಲ್ಲ

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬರುವ ಮುನ್ನವೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಆಪರೇಷನ್ ಕಮಲದ ಕುರಿತು ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಅವರು, ಆಪರೇಷನ್ ಆರಂಭ ಮಾಡಿರುವುದೇ ಕಾಂಗ್ರೆಸ್. ಮಹಾರಾಷ್ಟ್ರ ದಲ್ಲಿ ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರ ಉಳಿಸಲು ಕರ್ನಾಟಕಕ್ಕೆ ಇದೇ ಡಿಸಿಎಂ ಮಹಾರಾಷ್ಟ್ರ ಶಾಸಕರನ್ನು ಕರೆದುಕೊಂಡು ಬಂದಿದ್ದರು. ಈಗ ಸುಮ್ಮನೇ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಿಂದ ಆಯ್ಕೆಯಾದ 48 ಗಂಟೆಯಲ್ಲಿ ಅವರ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಅಂದರೆ ಅವರ ಪಕ್ಷ ಎಷ್ಟು ಗಟ್ಟಿಯಾಗಿದೆ ಅಂತ ಅನಿಸುತ್ತದೆ ಎಂದರು.

ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ, ಸಂಸತ್ತಿಗೆ ಸ್ಪರ್ಧೆ ಇಲ್ಲ

ಲೋಕಸಭೆ ಚುನಾವಣೆಯಲ್ಲಿ ಎಂಪಿ ಸ್ಥಾನಕ್ಕೆ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಾಜ್ಯದಲ್ಲಿಯೇ ರಾಜಕಾರಣ ಮಾಡಲು ಇಚ್ಚೆ ಪಡುತ್ತೇನೆ. ರಾಷ್ಟ್ರ ರಾಜಕಾರಣಕ್ಕೆ ಹೋಗುವ ಬಗ್ಗೆ ಯಾವುದೇ ಅಲೋಚನೆ ಇಲ್ಲ. ರಾಜ್ಯ ರಾಜಕಾರಣದಲ್ಲಿದ್ದುಕೊಂಡೆ ಜನರ ಸೇವೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಮುಂದಿನ ವಾರ ಬೆಳಗಾವಿ ಅಧಿವೇಶನಕ್ಕೆ ಹೋಗುತ್ತೇನೆ

ಆರು ವಾರಗಳ ಹಿಂದೆ ನಮಗೆ ಓಪನ್ ಹಾರ್ಟ್ ಸರ್ಜರಿ ಆಗಿದೆ.‌ ಈಗ ನನ್ನ ಆರೋಗ್ಯ ಸುಧಾರಿಸಿದೆ. ಸಾರ್ವಜನಿಕರ ಭೇಟಿ ಕೂಡ ಮಾಡುತ್ತಿದ್ದೇನೆ. ವೈದ್ಯರ ಸಲಹೆ ಮೇರೆಗೆ ಬೆಳಗಾವಿ ಅಧಿವೇಶನದ ಮೊದಲ ವಾರ ಹಾಜರಾಗುತ್ತಿಲ್ಲ. ಎರಡನೇ ವಾರ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Exit mobile version