Site icon Vistara News

Basavaraja Bommai : ಹರಿಪ್ರಸಾದ್ ಹೇಳಿಕೆ ಡ್ಯಾಮೇಜ್ ಕಂಟ್ರೋಲ್‌ಗೆ ಸಿಂಗಪುರ ಕತೆ ಹೆಣೆದ ಡಿಕೆಶಿ ಎಂದ ಬೊಮ್ಮಾಯಿ

Basavaraja Bommai DK Shivakumar

ಬೆಂಗಳೂರು: ʻʻಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಆರಂಭದಿಂದಲೂ ಗೋಚರಿಸುತ್ತಿದೆ. ಬಿ‌.ಕೆ. ಹರಿಪ್ರಸಾದ್ ಹೇಳಿಕೆಯಿಂದ (BK Hariprasad Statement) ಸರ್ಕಾರಕ್ಕೆ ಆಗಿರುವ ಡ್ಯಾಮೇಜ್ ಕಂಟ್ರೋಲ್ (Damage Control) ಮಾಡಲು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಸಿಂಗಪುರ ಕಾರ್ಯತಂತ್ರದ ಕಥೆ (Singapore Story) ಹೇಳಿದ್ದಾರೆ. ಈ ಸರ್ಕಾರಕ್ಕೆ ಬಾಲಗ್ರಹ ಪೀಡೆ ಶುರುವಾಗಿದೆʼʼ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದ್ದಾರೆ.

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʻʻಕಾಂಗ್ರೆಸ್ ಸರ್ಕಾರದ ಮೊದಲ ದಿನದಿಂದ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಸ್ಪಷ್ಟ ಬಹುಮತ ಇದ್ದರೂ ಮುಖ್ಯಮಂತ್ರಿ ಆಯ್ಕೆ ಮಾಡಿರುವ ವಿಧಾನ, ಸೀಕ್ರೆಟ್ ಬ್ಯಾಲೆಟ್ ಬಳಕೆ ಮಾಡಿರುವುದು, ಬಹುಮತ ಇದ್ದರೂ ಇಷ್ಟು ಸರ್ಕಸ್ ಮಾಡಿದ್ದು ಎಲ್ಲವೂ ಸರಿ ಇಲ್ಲ ಅಂತ ಆರ್ಥವಾಗುತ್ತದೆʼʼ ಎಂದು ಬೊಮ್ಮಾಯಿ ಹೇಳಿದ್ದಾರೆ.

ʻʻಸಿದ್ದರಾಮಯ್ಯ ಗ್ಯಾರಂಟಿಗಳಿಗೆ ಹಣ ನೀಡಬೇಕಾಗಿರುವುದರಿಂದ ಅಭಿವೃದ್ಧಿಗೆ ಅನುದಾನ ಇಲ್ಲ ಎಂದು ಹೇಳಿದ್ದಾರೆ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಶಾಸಕರೇ ಬಹಿರಂಗವಾಗಿಯೇ ಹೇಳಿದ್ದಾರೆ. ಸಚಿವರುಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಆದರೆ, ಸಿದ್ದರಾಮಯ್ಯ ಅರ್ಧ ಸತ್ಯ ಹೇಳಿದ್ದಾರೆʼʼ ಎಂದು ನುಡಿದರು.

ಡ್ಯಾಮೇಜ್ ಕಂಟ್ರೊಲ್‌ಗೆ ಸಿಂಗಪುರ ಕತೆ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅವರ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಯಿಂದ ಆಗಿರುವ ಡ್ಯಾಮೆಜ್ ಕಂಟ್ರೋಲ್ ಮಾಡಲು ಸಿಂಗಪುರ ತಂತ್ರದ ಬಗ್ಗೆ ಹೇಳಿದ್ದಾರೆ. ಸ್ವತಃ ಡಿ.ಕೆ ಶಿವಕುಮಾರ್ ಅವರು ಮುಂದೆ ಅವರು ತಾವು ಮಾಡುವ ಕಾರ್ಯತಂತ್ರದ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಇದು ಅವರಲ್ಲಿಯೆ ಸಮಾಧಾನ ಇಲ್ಲ ಎನ್ನುವುದು ತೋರಿಸಿದ್ದಾರೆ‌. ಬಿಜೆಪಿಯ ಹೈಕಮಾಂಡ್ ಈ ಸರ್ಕಾರ ಅಸ್ಥಿರಗೊಳಿಸುವ ಬಗ್ಗೆ ಆಲೋಚಿಸಿಲ್ಲ ಎಂದು ಹೇಳಿದರು.

ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಇದೆ ಎನ್ನುವುದು ಸತ್ಯ. ಡಿ.ಕೆ ಶಿವಕುಮಾರ್ ಸರ್ಕಾರದ ಅಸ್ಥಿರತೆಯ ಬಗ್ಗೆ ಎರಡು ಬಾರಿ ಬಹಿರಂಗವಾಗಿ ಹೇಳಿಕೆ ನೀಡಿದರೂ ಸಿಎಂಗೆ ಮಾಹಿತಿ ಇಲ್ಲ ಎಂದರೆ ಇಬ್ಬರ ನಡುವೆ ಹೊಂದಾಣಿಕೆ ಇಲ್ಲ ಅಂತ ಅರ್ಥ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಜೈನ ಮುನಿ ಹತ್ಯೆಯಿಂದ ಹಿಡಿದು ನಿತ್ಯ ಕೊಲೆ ನಡೆಯುತ್ತಿವೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ನ್ಯಾಯಾಧೀಶರಿಗೆ ಅಂತಾರಾಷ್ಟ್ರೀಯ ಮಟ್ಟದ ಕೊಲೆ ಬೆದರಿಕೆ ಬರುತ್ತಿದೆ. ನ್ಯಾಯಾಧೀಶರಿಗೆ ರಕ್ಷಣೆ ಇಲ್ಲದಿದ್ದರೆ ಬೇರೆಯವರಿಗೆ ಹೇಗೆ ರಕ್ಷಣೆ ನೀಡುತ್ತಾರೆ ಎಂದು ಪ್ರಶ್ನಿಸಿದರು ಬೊಮ್ಮಾಯಿ.

ಗ್ಯಾರಂಟಿ ಜಾರಿಗೆ ಎಸ್‌ಸಿಪಿಟಿಎಸ್ಪಿ ಹಣ ಬಳಕೆ

ಈ ಸರ್ಕಾರ ಗ್ಯಾರೆಂಟಿಗಳ ಜಾರಿಗೆ ಎಸ್ಸಿಪಿ ಟಿಎಸ್ಪಿ ಹಣ ಬಳಕೆ ಮಾಡುತ್ತಿದ್ದಾರೆ. ಸುಮಾರು 13 ಸಾವಿರ ಕೋಟಿ ರೂ. ಎಸ್ಸಿಪಿ ಟಿಎಸ್ ಪಿ ಯೋಜನೆ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ವರ್ಗಾಯಿಸಿದ್ದಾರೆ. ಇದು ಸಾಮಾಜಿಕ ನ್ಯಾಯದ ವಿರುದ್ಧವಾಗಿದ್ದು, ಎಲ್ಲ ಸಮುದಾಯಗಳಿಗೂ ಅನ್ಯಾಯ ಮಾಡಿದಂತಾಗುತ್ತದೆ. ಗ್ಯಾರೆಂಟಿ ಜಾರಿ ಮಾಡುವ ನೆಪದಲ್ಲಿ ನಮ್ಮ ಸರ್ಕಾರದ ಯೋಜನೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಆಪಾದಿಸಿದ್ದಾರೆ.

ʻʻರೈತ ವಿದ್ಯಾನಿಧಿ, ಭೂ ರೈತಶಕ್ತಿ, ಭೂಸಿರಿ, ರೈತರಿಗೆ ನೀಡಿದ್ದ ಜೀವನ ಜ್ಯೋತಿ ವಿಮೆ ಯೋಜನೆ ಸೆರಿದಂತೆ ಎಲ್ಲ ಯೋಜನೆಗಳನ್ನು ನಿಲ್ಲಿಸಿದ್ದಾರೆ‌. ಕೃಷಿ ಇಲಾಖೆಯಲ್ಲಿ 4500 ಕೊಟಿ ರೂ.‌ ನೀರಾವರಿ ಇಲಾಖೆಯಲ್ಲಿ 3500 ಕೊಟಿ ರೂ. ಕಡಿತ ಮಾಡಿದ್ದಾರೆ.‌ ಈ ಸರ್ಕಾರ ಗ್ಯಾರೆಂಟಿಗಳನ್ನೂ ಸಂಪೂರ್ಣವಾಗಿ ಜಾರಿ ಮಾಡುವುದಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಮಾಡದಿರುವುದರಿಂದ ಶಾಸಕರು ಅಸಮಾದಾನಗೊಂಡಿದ್ದಾರೆ. ಹೀಗಾಗಿ ಅಸಮಾಧಾನ ಸ್ಫೋಟಗೊಳ್ಳುತ್ತಿದೆ ಎಂದು ಅವರು ಹೇಳಿದರು.

ನೈಸ್ ಅಕ್ರಮದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೈಸ್ ಅಕ್ರಮದ ಬಗ್ಗೆ ಈಗಾಗಲೇ ಸದನ ಸಮಿತಿ ನೀಡಿರುವ ವರದಿ ಆಧರಿಸಿ ಹೆಚ್ಚುವರಿ ಜಮೀನು ವಶಪಡಿಸಿಕೊಳ್ಳಬೇಕು ಅಂತ ಆಗ್ರಹಿಸಿದ್ದೇವೆ. ಅಲ್ಲದೇ ಹೆಚ್ಚಿಗೆ ಸಂಗ್ರಹಿಸಿರುವ ಟೋಲ್ ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿರುವುದಾಗಿ ತಿಳಿಸಿದರು.

ಇದನ್ನೂ ಓದಿ: CM Siddaramaiah : ಸಿಎಂಗೆ ಡಬಲ್ ಟ್ರಬಲ್‌‌ ! ಸಚಿವರ ಮೇಲೆ ಕಾಂಗ್ರೆಸ್‌ ಶಾಸಕರಿಂದಲೇ ದೂರು

Exit mobile version