ಬೆಂಗಳೂರು: ʻʻಈ ಅನಿಷ್ಟ ಸರ್ಕಾರದ ವಿರುದ್ಧ ಹೋರಾಟ (Fight against Congress government) ಅವಶ್ಯಕತೆ ಇದೆ. ಹಾಗಾಗಿ ಜೆಡಿಎಸ್ ಜೊತೆ ಮೈತ್ರಿ (BJP-JDS Alliance) ಅನಿವಾರ್ಯʼʼ ಎಂದು ಮಾಜಿ ಮುಖ್ಯಮಮತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಬಲವಾಗಿ ಸಮರ್ಥಿಸಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಎರಡೂ ವಿರೋಧ ಪಕ್ಷಗಳು ಒಂದಾಗಬೇಕು ಎಂಬ ನಿರೀಕ್ಷೆ ಇದೆ. ಮುಂದಿನ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಬೇಕಿದೆ. ಎರಡೂ ಪಕ್ಷದ ವರಿಷ್ಠರು ಸೇರಿ ತೀರ್ಮಾನ ಮಾಡಲಿದ್ದಾರೆ ಎಂದರು.
ʻʻಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಅಸಹಾಯಕವಾಗಿವೆ. ಈ ಕಾರಣದಿಂದಲೇ ಮೈತ್ರಿ ಮಾಡಿಕೊಳ್ಳುತ್ತಿವೆʼʼ ಎಂಬ ಕಾಂಗ್ರೆಸ್ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು,ʻʻಈಗ INDIA ಒಕ್ಕೂಟ ಸಿದ್ಧವಾಗಿದೆ. ಒಬ್ಬರಿಗೊಬ್ಬರು ಆಗದ ಮಮತಾ ಬ್ಯಾನರ್ಜಿ, ಸಿಪಿಐ, ಸಿಪಿಎಂ, ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ಎಲ್ಲರೂ ಒಟ್ಟಾಗಿದ್ದಾರೆ. ಎಲ್ಲ ವಿರೋಧ ಪಕ್ಷಗಳು ಒಟ್ಟಾಗಿವೆ, ಹಾಗಾದರೆ ಅವು ಅಸಹಾಯಕರಾ? ರಾಜಕಾರಣದ ಇತಿಹಾಸದಲ್ಲಿ ಅನೇಕ ಬದಲಾವಣೆ ಆಗಿದೆʼʼ ಎಂದು ಹೇಳಿದರು ಬಸವರಾಜ ಬೊಮ್ಮಾಯಿ.
ಬೊಮ್ಮಾಯಿಯವರು ಆರಂಭದಿಂದಲೂ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜತೆಯಾಗಿ ಹೋರಾಟ ಮಾಡಿದಾಗ, ಜಂಟಿ ಸುದ್ದಿಗೋಷ್ಠಿ ನಡೆಸಿದಾಗ ಬೊಮ್ಮಾಯಿಯವರೇ ಮುಂಚೂಣಿಯಲ್ಲಿದ್ದರು. ಆಗಲೇ ನಾವು ಕಾಂಗ್ರೆಸ್ ವಿರುದ್ಧ ಜಂಟಿ ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂಬ ಸಂದೇಶವನ್ನು ನೀಡಿದ್ದರು. ಈಗ ಅದು ಲೋಕಸಭಾ ಚುನಾವಣೆಯವರೆಗೂ ಬಂದು ನಿಂತಿದೆ.
ಸಿದ್ದರಾಮಯ್ಯ- ಆಡ್ವಾಣಿ ಭೇಟಿ ನಿಜವಾ?
ಸಿಎಂ ಸಿದ್ದರಾಮಯ್ಯ ಅಡ್ವಾಣಿ ಅವರನ್ನು ಭೇಟಿ ಆಗಿದ್ದರು ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಸಿದ್ದರಾಮಯ್ಯನವರೇ ಉತ್ತರ ನೀಡಿದ್ದಾರೆ. ನಾಯಕರ ಭೇಟಿ ಮಾಡಿದರೆ ಸಿದ್ಧಾಂತ ಬದಲಾಗುವುದಿಲ್ಲ ಹೇಳಿದ್ದಾರೆ. ಅದರ ಅರ್ಥ ಏನು ಎಂದು ಪ್ರಶ್ನಿಸಿದರು.
ʻʻಇಂದಿನಿಂದ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುವುದಿಲ್ಲ ಅಂತ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ. ಸರ್ಕಾರ ತನ್ನ ಮಾತಿಗೆ ಎಷ್ಟು ಗಟ್ಟಿಯಾಗಿ ನಿಲ್ಲುತ್ತಾರೆ ಎಂದು ನೋಡೊಣʼʼ ಎಂದರು ಬಸವರಾಜ ಬೊಮ್ಮಾಯಿ. ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜ್ಯದ ಜನರ ಹಿತರಕ್ಷಣೆಗೆ ಮುಂದಾಗಿಲ್ಲ. ಅದು ತಮಿಳುನಾಡಿನ ಸ್ಟಾಲಿನ್ ಸರ್ಕಾರದ ಹಿತರಕ್ಷಣೆಯಲ್ಲಿ ಬ್ಯುಸಿಯಾಗಿದೆ ಎಂದು ಅವರು ಹಿಂದೆ ಆರೋಪಿಸಿದ್ದರು. ಬಿಜೆಪಿ ನಿಯೋಗವನ್ನು ಕರೆದುಕೊಂಡು ಅವರು ಕೆ.ಆರ್.ಎಸ್‌ನಲ್ಲಿ ಸಮೀಕ್ಷೆಯನ್ನೂ ನಡೆಸಿದ್ದರು.
ಸಚಿವ ಡಿ. ಸುಧಾಕರ್ ಮೇಲೆ ಆಗಿರುವ ಎಫ್‌ಐಆರ್ ವಿಚಾರದಲ್ಲಿ ಸಮಗ್ರ ತನಿಖೆ ಆಗಬೇಕು ಎಂದು ಹೇಳಿದರು.
ಇದನ್ನೂ ಓದಿ: BS Yediyurappa : ಕೊನೆಗೂ ಬಿಜೆಪಿ ರೈತ ಹೋರಾಟಕ್ಕೆ ಅನಿವಾರ್ಯವಾದ ಬಿಎಸ್‌ವೈ; ಬಿ.ಎಲ್. ಸಂತೋಷ್ ಪ್ಲ್ಯಾನ್ ಉಲ್ಟಾ!