ಹುಬ್ಬಳ್ಳಿ: ʻʻಉರಿ ಗೌಡ, ನಂಜೇಗೌಡ ಪ್ರಕರಣದಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಪ್ರಶ್ನೆಯೇ ಇಲ್ಲ. ಸತ್ಯ ಸಂಶೋಧನೆಯಾಗಿ ಸತ್ಯ ಹೊರಗೆ ಬಂದಾಗ ಜಯ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವಾರು ಐತಿಹಾಸಿಕ ಸತ್ಯಗಳನ್ನು ಮರೆಮಾಚಲಾಗಿದೆ. ಇತಿಹಾಸವನ್ನು ಭಾರತ ಹಾಗೂ ಕರ್ನಾಟಕದಲ್ಲಿ ತಿರುಚುವ ಕೆಲಸವಾಗಿದೆ. ಆ ಸಂದರ್ಭದಲ್ಲಿ ಯಾರು ಪ್ರಮುಖ ಪಾತ್ರ ವಹಿಸಿದ್ದರು ಎನ್ನುವುದು ಜಗಜ್ಜಾಹೀರಾಗಿದೆ. ಸತ್ಯವನ್ನು ಹೇಳಿದರೆ ಇವರಿಗೆ ತಡೆಯಲು ಆಗುವುದಿಲ್ಲ ಎಂದು ಹೇಳಿದರು.
ಮಂಡ್ಯದ ಮಳವಳ್ಳಿಯ ಅವಳಿ ವೀರರಾದ ಉರಿ ಗೌಡ ಮತ್ತು ನಂಜೇಗೌಡರೇ ಟಿಪ್ಪು ಸುಲ್ತಾನ್‌ನನ್ನು ಕೊಂದವರು ಎಂಬ ವಾದವನ್ನು ಬಿಜೆಪಿ ಮುಂದಿಟ್ಟಿತ್ತು. ಅದಕ್ಕೆ ಸಂಬಂಧಿಸಿ ಕೆಲವೊಂದು ದಾಖಲೆಗಳನ್ನು ಹುಡುಕಲು ಶುರು ಮಾಡಿತ್ತು. ಈ ನಡುವೆ, ಇದು ಒಕ್ಕಲಿಗರನ್ನು ಬಿಜೆಪಿ ಕಡೆಗೆ ಸೆಳೆಯುವ ರಾಜಕಾರಣ ಎಂಬ ಆಪಾದನೆಗಳು ಕೇಳಿಬಂದವು. ಅದರ ನಡುವೆ, ಸಚಿವ ಮುನಿರತ್ನ ಅವರು ಉರಿಗೌಡ, ನಂಜೇಗೌಡ ಎಂಬ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು.
ಇದೆಲ್ಲದರ ನಡುವೆ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದ ನಾಥ ಶ್ರೀಗಳು, ಇಂಥ ಗೊಂದಲಕಾರಿ ಮಾಹಿತಿಗಳನ್ನು ಯಾರೂ ನೀಡಬಾರದು ಎಂದು ಕಟ್ಟಾಜ್ಞೆ ಮಾಡಿದರು. ಅವರ ಈ ಮಾತಿನ ಬಳಿಕ ಎಲ್ಲ ನಾಯಕರು ಮೌನಕ್ಕೆ ಜಾರಿದ್ದಾರೆ. ಈ ಪ್ರಕರಣ ಒಟ್ಟಾರೆಯಾಗಿ ಬಿಜೆಪಿಗೆ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗಿತ್ತು. ಇದಕ್ಕೆ ಈಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ರಾಹುಲ್ ಭೇಟಿಯಿಂದ ಯಾವುದೇ ಪರಿಣಾಮವಿಲ್ಲ
ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡಿರುವುದರಿಂದ ಯಾವುದೇ ಪರಿಣಾಮ ಬೀರುವುದಿಲಲ್ಲ ಎಂದು ಬೊಮ್ಮಾಯಿ ತಿಳಿಸಿದರು. ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯನ್ನು ಮಾಡಿದ್ದು, ಯಾವುದೇ ಪರಿಣಾಮ ಉಂಟಾಗಿಲ್ಲ. ಸೋಮವಾರ ಅವರು ಪ್ರಕಟಿಸಿದ ಬೋಗಸ್ ಘೋಷಣೆಗಳಿಂದ ಯಾವುದೇ ಪರಿಣಾಮವಾಗುವುದಿಲ್ಲ ಎಂದರು.
ಭಾರತ್ ಜೋಡೋ ಯಾತ್ರೆಯ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ತುಂಬಾ ವ್ಯತ್ಯಾಸವಿದೆ. ಲಂಡನ್ ವಿಶ್ವವಿದ್ಯಾಲಯದಲ್ಲಿ ಅವರು ಮಾತನಾಡಿರುವುದು ದೇಶ ವಿರೋಧಿಯಾಗಿದೆ. ಇಡೀ ದೇಶ್ಯದಲ್ಲಿ ಹಾಗೂ ರಾಜ್ಯದಲ್ಲಿ ಈ ಬಗ್ಗೆ ಖಂಡನೆ ವ್ಯಕ್ತವಾಗಿದೆ. ಈಗ ಜನರ ಅವರ ಮಾತಿಗೆ ಯಾವುದೇ ಬೆಲೆಯನ್ನು ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು ಬೊಮ್ಮಾಯಿ.
ಮಾರ್ಚ್ 25ರಂದು ರಾಜ್ಯಕ್ಕೆ ಮೋದಿ ಭೇಟಿ
ಮಾರ್ಚ್ 25ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಗೂ ಮಾರ್ಚ್ 24 ಮತ್ತು 26ರಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಾಂಗ್ರೆಸ್‌ನದ್ದು ಬೋಗಸ್ ಟ್ರ್ಯಾಕ್ ರೆಕಾರ್ಡ್
ʻʻಕಾಂಗ್ರೆಸ್ ಬೇರೆ ಬೇರೆ ರಾಜ್ಯಗಳಲ್ಲಿ ಹಲವಾರು ಆಶ್ವಾಸನೆಗಳನ್ನು ನೀಡಿದ್ದು, ಇಂದಿಗೂ ಈಡೇರಿಸಿಲ್ಲ. ಇದು ಅವರ ಟ್ರ್ಯಾಕ್ ರೆಕಾರ್ಡ್. ರಾಜಸ್ಥಾನ, ಛತ್ತೀಸ್ ಗಡದಲ್ಲಿ ಘೋಷಣೆ ಮಾಡಿದ್ದನ್ನು ಅವರು ಈಡೇರಿಸಿಲ್ಲ ಎಂದರು. ಛತ್ತೀಸ್ ಗಡದಲ್ಲಿ ಪ್ರತಿ ಮನೆಗೆ ಒಂದು ಸಾವಿರ ರೂ ನೀಡುವುದಾಗಿ ಹೇಳಿದ್ದರು. ನಾಲ್ಕು ವರ್ಷ ನೀಡಿದೆ, ಕೊನೆ ವರ್ಷ ಕೊಡಲು ಓಡಾಡಿದರು. ಈ ರೀತಿ ಜನರನ್ನು ಯಾಮಾರಿಸುತ್ತಾರೆ. ಅದು ಗ್ಯಾರಂಟಿ ಕಾರ್ಡ್ ಅಲ್ಲ, ಬರೀ ವಿಸಿಟಿಂಗ್ ಕಾರ್ಡ್ʼʼ ಎಂದರು.
ಇದ್ದಲು ಮಸಿಗೆ ಬುದ್ಧಿ ಹೇಳಿದಂತೆ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ ಹಾಗೂ ರೀಡೂ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭ್ರಷ್ಟಾಚಾರದ ಆರೋಪವಿದೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆಂದರೆ ಇದ್ದಲು ಮಸಿಗೆ ಬುದ್ಧಿ ಹೇಳಿದಂತೆ ಎಂದರು. ಕಾಂಗ್ರೆಸ್ ದೇಶದಲ್ಲಿ ಎಲ್ಲಾ ಕಡೆ ಪತನವಾಗಿದೆ, ರಾಜ್ಯದಲ್ಲೂ ಅಧ:ಪತನಕ್ಕೆ ಸಿದ್ಧವಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಸಿದ್ದರಾಮಯ್ಯ ಅವರ ಸರ್ಕಾರದ 59 ಭ್ರಷ್ಟಾಚಾರ ಪ್ರಕರಣ ಗಳ ಬಗ್ಗೆ ನ್ಯಾಯಾಂಗ ತನಿಖೆಯನ್ನು ನಡೆಸಲು ಕಾನೂನು ತಜ್ಞರೊಂದಿಗೆ ಚರ್ಚಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ತೀರ್ಮಾನವಾಗುತ್ತದೆ ಎಂದರು. 59 ಪ್ರಕರಣಗಳಲ್ಲಿ ಕೆಲವನ್ನು ವಹಿಸಲಾಗಿದೆ. ಬಾಕಿ ಇರುವುದನ್ನು ವಹಿಸಲಾಗುವುದು ಎಂದರು.
ಚಿಂಚನಸೂರು ನಿರ್ಗಮನದಿಂದ ಪರಿಣಾಮವಿಲ್ಲ
ʻʻಬಾಬು ರಾವ್ ಚಿಂಚನಸೂರ ಅವರು ಕಾಂಗ್ರೆಸ್ ನಲ್ಲಿದ್ದವರು, ವಾಪಸ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಆ ಕ್ಷೇತ್ರದಲ್ಲಿ ನಮ ಸಂಘಟನೆ ಉತ್ತಮವಾಗಿದೆ. ಗುರುಮಠಕಲ್ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : Karnataka Elections : ಹೆಂಡ್ತಿ, ಮಗನ ಜತೆ ಕೇಳಿ ಹೇಳ್ತೇನೆ; ಕೋಲಾರದ ಜನರಿಗೆ ಸಿದ್ದರಾಮಯ್ಯ ಸಮಾಧಾನ!