Site icon Vistara News

ಎಂದಿಗಿಂತಲೂ ಅತ್ಯಧಿಕ ಮತಗಳಿಂದ ಗೆಲ್ಲುತ್ತೇನೆ: ಬಸವರಾಜ ಹೊರಟ್ಟಿ ವಿಶ್ವಾಸ

basavaraja hoaratti

ಹುಬ್ಬಳ್ಳಿ: ಈ ಹಿಂದೆ ನನಗೂ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ಪೈಪೋಟಿ ಇರುತ್ತಿತ್ತು. ಆದರೆ ಈಗ ನಾನೇ ಬಿಜೆಪಿ ಅಭ್ಯರ್ಥಿಯಾಗಿದ್ದೇನೆ. ಹೀಗಾಗಿ ಎಂದಿಗಿಂತಲೂ ಅತ್ಯಧಿಕ ಮತಗಳಿಂದ ಗೆಲ್ಲುತ್ತೇನೆ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಆಯೋಜಿಸಿದ್ದ ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಒಮ್ಮೆ ಮಾತ್ರ ಗೆದ್ದಿದೆ, ಉಳಿದಂತೆ ಬೇರೆ ಪಕ್ಷಗಳೇ ಗೆದ್ದಿವೆ. ಸದ್ಯ ಅಖಾಡದಲ್ಲಿ ಏಳು ಜನ ಇದ್ದು, ಅವರಲ್ಲಿ ಮೂವರು ಮಾತ್ರ ಲೆಕ್ಕಕ್ಕೆ, ಉಳಿದವರಾರೋ ಗೊತ್ತಿಲ್ಲ. ನಾನು ಮಾಡಿದ ವರ್ಗಾವಣೆ ನೀತಿಯನ್ನು ದೇಶದ ಬೇರೆ ರಾಜ್ಯಗಳು ಅಳವಡಿಸಿಕೊಂಡಿವೆ. ಯಾವೊಬ್ಬ ಶಿಕ್ಷಕರಿಗೂ ನಾನು ಅನ್ಯಾಯ ಮಾಡಿಲ್ಲ. ವಿರೋಧ ಪಕ್ಷಗಳು ಏನೇ ಆರೋಪಗಳನ್ನು ಮಾಡಲಿ, ನನ್ನ ಗೆಲುವು ನಿಶ್ಚಿತ ಎಂದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ಈ ಹಿಂದೆ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಹೊರಟ್ಟಿ ವರ್ಸಸ್ ಬಿಜೆಪಿ ಎನ್ನುವ ಪರಿಸ್ಥಿತಿ ಇತ್ತು. ಆದ್ರೆ ಈಗ ಬಿಜೆಪಿ ಮತ್ತು ಹೊರಟ್ಟಿ ಪ್ಲಸ್ ಆಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಹೊರಟ್ಟಿ ಗೆಲ್ಲೋದು ಖಚಿತ. ಆದರೆ 70% ರಿಂದ 80% ಮತಗಳ ಅಂತರದಿಂದ ಗೆಲ್ಲುವ ಮೂಲಕ ದಾಖಲೆ ಮಾಡಬೇಕು. ಕಾಂಗ್ರೆಸ್ ನಾಮಕೇವಾಸ್ತೆ ಚುನಾವಣೆಗೆ ನಿಂತಿದೆ. ಕಾಂಗ್ರೆಸ್ ದ್ವಂದ್ವ ರಾಜಕಾರಣ ಮಾಡುತ್ತಾ ಬಂದಿದೆ, ಗೊಂದಲ ಮೂಡಿಸುವುದೇ ಅವರ ಕೆಲಸವಾಗಿದೆ. ಈ ಬಾರಿ ಕಾಂಗ್ರೆಸ್ ಬೇಳೆ ಬೇಯಲ್ಲ. ಬಿಜೆಪಿ ಅಭ್ಯರ್ಥಿ ಹೊರಟ್ಟಿ ಭಾರಿ ಅಂತರದಿಂದ ಗೆಲವು ಸಾಧಿಸುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ | RS Elections 2022: ನಾಲ್ಕನೇ ಸ್ಥಾನಕ್ಕೆ ಲೇಹರ್‌ ಸಿಂಗ್‌-ಕುಪೇಂದ್ರ ರೆಡ್ಡಿ ನಡುವೆ ಪೈಪೋಟಿ?

Exit mobile version