Site icon Vistara News

Basavaraja Rayareddi : ಕುಮಾರಸ್ವಾಮಿ ನನ್ನ ಪಕ್ಕ ನಿಲ್ಲಲೂ ಹೆದರ್ತಿದ್ದ ಎಂಬ ರಾಯರೆಡ್ಡಿ ಹೇಳಿಕೆಗೆ ಜೆಡಿಎಸ್‌ ಆಕ್ಷೇಪ

HD Kumaraswamy Rayareddi

ಕೊಪ್ಪಳ: ಎಲ್‌ಕೆ ಆಡ್ವಾಣಿ (LK Advani) ಬಿಜೆಪಿ ಕಟ್ಟಿ ಸತ್ತ, ನರೇಂದ್ರ ಮೋದಿ (Narendra Modi) ಪ್ರಧಾನಿ ಆಗಿಬಿಟ್ಟ, ನನ್ನ ಎದುರು ನಿಲ್ಲಲು ಹೆದರುತ್ತಿದ್ದ ಕುಮಾಸ್ವಾಮಿ (HD Kumaraswami) ಸಿಎಂ ಆಗ್ಬಿಟ್ಟ. ಎಲ್ಲವೂ ಹಣೆಬರಹ: ಹೀಗೆ ನಾಲಗೆ ಹರಿಬಿಡುತ್ತಲೇ ಅಸಹಾಯಕವಾಗಿ ಆ ಮಾತನಾಡಿದ್ದಾರೆ ಕಾಂಗ್ರೆಸ್‌ ಶಾಸಕ ಬಸವರಾಜ ರಾಯರೆಡ್ಡಿ (Basavaraja Rayareddi).

ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕರ ಸಭೆಯಲ್ಲಿ ನೀವು ಯಾವಾಗ ಮಂತ್ರಿ ಆಗೋದು ಎಂಬ ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ʻನೀವು ದುಃಖಪಡುವ ಅಗತ್ಯವಿಲ್ಲ. ಒಮ್ಮೊಮ್ಮೆ ಮಂತ್ರಿ ಆಗೋದಕ್ಕೆ ಆಗುವುದಿಲ್ಲ. ಅದಕ್ಕೆ ಹಣೆಬರಹ ಬೇಕುʼʼ ಎಂದು ಹೇಳಿದ್ದಾರೆ.

ಹೀಗೆ ಮಾತನಾಡುವ ಹಂತದಲ್ಲಿ ತಮಗಿಂತ ಕೆಳಹಂತದಲ್ಲಿದ್ದವರೆಲ್ಲ ಈಗ ಮೇಲೆ ಹೋಗಿದ್ದಾರೆ. ಎಲ್ಲದಕ್ಕೂ ಅದೃಷ್ಟ ಬೇಕು ಎಂದಿದ್ದಾರೆ. ಇದರ ಮೂಲಕ ಈ ಬಾರಿಯೂ ಮಂತ್ರಿಯಾಗಲು ಅವಕಾಶ ಸಿಗದ ನೋವು ಹಂಚಿಕೊಂಡಿದ್ದಾರೆ. ʻʻನನ್ನ ಹಿಂದೆ ಓಡಾಡಿದವರೆಲ್ಲಾ ಮಂತ್ರಿ ಆಗಿದ್ದಾರೆ. ಅವರ ಅಪ್ಪಂದಿರ ಜತೆ ನಾನು ಕೆಲಸ ಮಾಡಿದವನು. ಇವರು, ಈಗ ನಮ್ಮ ಮುಂದೆ ಧಿಮಾಕು ಮಾಡ್ಕೊಂಡು ಓಡುತ್ತಿದ್ದಾರೆʼʼ ಎಂದು ನೋವು ಹಂಚಿಕೊಂಡರು.

ಬದುಕಿರುವ ಆಡ್ವಾಣಿ ಸತ್ತಿದ್ದಾರೆ ಎಂದ ರಾಯರೆಡ್ಡಿ

ಯಾವುದಕ್ಕೂ ಅದೃಷ್ಟ ಬೇಕು ಎಂಬುದನ್ನು ಮಾತನಾಡುತ್ತಾ ಮಾತಿನ ಭರದಲ್ಲಿ ರಾಯರೆಡ್ಡಿ ಅವರು, ಎಲ್‌.ಕೆ ಆಡ್ವಾಣಿ ಬಿಜೆಪಿ ಕಟ್ಟಿ ಕಟ್ಟಿ ಸತ್ತ, ನರೇಂದ್ರ ಮೋದಿ ಪ್ರಧಾನಿ ಆಗಿಬಿಟ್ಟ ಎಂದು ಹೇಳಿದರು. ನಿಜವೆಂದರೆ ಎಲ್‌ಕೆ ಆಡ್ವಾಣಿ ಅವರು ಈಗಲೂ ಬದುಕಿದ್ದಾರೆ. 1927ರಲ್ಲಿ ಜನಿಸಿದ ಎಲ್‌.ಕೆ. ಆಡ್ವಾಣಿ ಅವರಿಗೆ ಈಗ 95 ವರ್ಷ. ಅವರ ಆರೋಗ್ಯ ವಯೋಸಹಜವಾಗಿ ಸ್ವಲ್ಪ ಕ್ಷೀಣವಾಗಿದೆ ಅಷ್ಟೆ.

ಕುಮಾರಸ್ವಾಮಿ ನನ್ನ ಪಕ್ಕ ನಿಲ್ಲಲೂ ಹೆದರುತ್ತಿದ್ದ!

ನಾನು ದೇವೆಗೌಡರ ಕ್ಯಾಬಿನೆಟ್‌ನಲ್ಲಿ ಮಿನಿಸ್ಟರ್‌ ಆಗಿದ್ದೋನು. ಈ ಕುಮಾರಸ್ವಾಮಿ ಆಗ ನನ್ನ ಪಕ್ಕ ನಿಲ್ಲೋದಕ್ಕೂ ಹೆದರುತ್ತಿದ್ದ. ಏನ್ ಮಾಡೊದು ಅವನ ಹಣೆ ಬರಹದಲ್ಲಿ ಬರೆದಿತ್ತು, ಮುಖ್ಯಮಂತ್ರಿ ಆಗಿಬಿಟ್ಟ ಎಂದು ರಾಯರೆಡ್ಡಿ ಹೇಳಿದರು.

ನಾನು ಎಸ್‌.ಆರ್‌. ಬೊಮ್ಮಾಯಿ ಅವರ ಜತೆ ಕೆಲಸ ಮಾಡಿದವನು ನಾನು. ನಾನು ಶಾಸಕ, ಸಂಸದನಾಗಿದ್ದೆ. ಬೊಮ್ಮಾಯಿಯವರು ಸಿಎಂ ಆದರು. ಒಮ್ಮೊಮ್ಮೆ ಹೀಗೆ ಆಗುತ್ತೆ. ನನ್ನ ಮುಂದೆ ಅಡ್ಡಾಡುತ್ತಿದ್ದವರು ಈಗ ಅಧಿಕಾರದಲ್ಲಿದ್ದಾರೆ. ಜನತಾ ದಳದಲ್ಲಿದ್ದ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದು ಮುಖ್ಯಮಂತ್ರಿಯೇ ಆದರು. ಎಲ್ಲವೂ ಮನುಷ್ಯನ ಅದೃಷ್ಟ ಎಂದರು ರಾಯರೆಡ್ಡಿ.

ರಾಯರೆಡ್ಡಿ ಹೇಳಿಕೆ ಜೆಡಿಎಸ್‌ ಮುಖಂಡರ ಆಕ್ಷೇಪ

ʻʻಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಈ ಹಿಂದೆ ನನ್ನ ನೋಡಿದರೆ ಹೆದರಿ ನಿಲ್ಲುತ್ತಿದ್ದʼʼ ಎಂಬ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆಗೆ ಕೊಪ್ಪಳ ಜಿಲ್ಲೆಯ ಜೆಡಿಎಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯಲಬುರ್ಗಾ ಜೆಡಿಎಸ್ ಮುಖಂಡ ಮಲ್ಲನಗೌಡ ಕೋನನಗೌಡ್ರ ಅವರು ಸುದ್ದಿಗೋಷ್ಠಿ ನಡೆಸಿ, ʻʻಬಸವರಾಜ ರಾಯರಡ್ಡಿ ಬಾಯಿ, ಮನಸ್ಥಿತಿ ಸ್ಥಿಮಿತದಲ್ಲಿಲ್ಲ. ಹೀಗೆ ಮಾತನಾಡುವುದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಕುಮಾರಸ್ವಾಮಿ ಅವರ ಬಗ್ಗೆ ಅವ, ಇವ ಎಂದು ಮಾತನಾಡುವುದು ಸರಿಯಲ್ಲ. ಎರಡು ಬಾರಿ ಸಿಎಂ ಆಗಿ ಅಭಿವೃದ್ಧಿ ಕೆಲಸ ಮಾಡಿರೋದು ಎಚ್.ಡಿ. ಕುಮಾರಸ್ವಾಮಿ. ನಿನಗೆ ಧೈರ್ಯವಿದ್ದರೆ ರಾಹುಲ್ ಗಾಂಧಿಗೆ ಏಕ ವಚನದಲ್ಲಿ ಮಾತನಾಡು ನೋಡೋಣʼʼ ಎಂದಿದ್ದಾರೆ.

ʻʻಹೇಳಿಕೆಯನ್ನು ಹಿಂಪಡೆದು ಕ್ಷಮೆ ಕೇಳದಿದ್ದರೆ ರಾಯರಡ್ಡಿ ಕ್ಷೇತ್ರಕ್ಕೆ ಬಂದಾಗ ನಾವು ಕಪ್ಪು ಮಸಿ ಬಳಿಯುತ್ತೇವೆʼʼ ಎಂದು ಹೇಳಿದ ಯಲಬುರ್ಗಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಮಲ್ಲನಗೌಡ ಕೋನನಗೌಡ ಅವರು, ರಾಯರೆಡ್ಡಿಗೆ ಇಷ್ಟು ಸ್ಥಾನ ಮಾನ ಸಿಕ್ಕಿರೋದೆ ಜನತಾ ಪರಿವಾರದಿಂದ ಎಂದರು.

ಇದನ್ನೂ ಓದಿ : HD Kumaraswamy : ಆಲ್ಕೋಹಾಲು, ಹಾಲಿನ ಮೂಲಕವೂ ಸರ್ಕಾರದಿಂದ ಹಣ ವಸೂಲಿ; ಕುಮಾರಸ್ವಾಮಿ ವ್ಯಂಗ್ಯ

ಕೊಪ್ಪಳ: ಎಲ್‌ಕೆ ಆಡ್ವಾಣಿ (LK Advani) ಬಿಜೆಪಿ ಕಟ್ಟಿ ಸತ್ತ, ನರೇಂದ್ರ ಮೋದಿ (Narendra Modi) ಪ್ರಧಾನಿ ಆಗಿಬಿಟ್ಟ, ನನ್ನ ಎದುರು ನಿಲ್ಲಲು ಹೆದರುತ್ತಿದ್ದ ಕುಮಾಸ್ವಾಮಿ (HD Kumaraswamy) ಸಿಎಂ ಆಗ್ಬಿಟ್ಟ. ಎಲ್ಲವೂ ಹಣೆಬರಹ: ಹೀಗೆ ನಾಲಗೆ ಹರಿಬಿಡುತ್ತಲೇ ಅಸಹಾಯಕವಾಗಿ ಆ ಮಾತನಾಡಿದ್ದಾರೆ ಕಾಂಗ್ರೆಸ್‌ ಶಾಸಕ ಬಸವರಾಜ ರಾಯರೆಡ್ಡಿ (Basavaraja Rayareddi).

Exit mobile version