ಬೆಳಗಾವಿ: ಆತ್ಮಹತ್ಯೆ ಮಾಡಿಕೊಂಡಿರುವ ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ಭಕ್ತಾದಿಗಳು ಹರಿದು ಬರುತ್ತಿದ್ದು, ಮಠದ ಆವರಣದಲ್ಲೇ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಇಂದು ಬೆಳಗ್ಗೆ 11ಕ್ಕೆ ಗ್ರಾಮದಲ್ಲಿ ಬಸವಸಿದ್ಧಲಿಂಗ ಸ್ವಾಮೀಜಿ ಅಂತಿಮಯಾತ್ರೆ ನಡೆಯಲಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳದಲ್ಲಿರುವ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ನಿನ್ನೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಅಂತ್ಯಕ್ರಿಯೆಯಲ್ಲಿ ನಾಡಿನ ಪ್ರಮುಖ ಮಠಾಧೀಶರು ಭಾಗಿಯಾಗುವ ಸಾಧ್ಯತೆಯಿದೆ. ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಸಿದ್ಧಲಿಂಗ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿಯಿಂದ ಅಂತಿಮ ದರ್ಶನ ನಡೆಯಿತು.
ಮಂಗಳವಾರ ಬೆಳಗ್ಗೆ 11ಕ್ಕೆ ಗ್ರಾಮದಲ್ಲಿ ಬಸವಸಿದ್ಧಲಿಂಗ ಸ್ವಾಮೀಜಿ ಅಂತಿಮಯಾತ್ರೆ ನಡೆಯಲಿದ್ದು, ಬಳಿಕ ಮಠದಲ್ಲೇ ಲಿಂಗಾಯತ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಲಾಗಿದೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದ್ದು, 200ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ | ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ: ಸಾವಿಗೆ ಕಾರಣವಾಯಿತಾ ಹೆಣ್ಮಕ್ಕಳ ಆ ಸಂಭಾಷಣೆ?