ಮೈಸೂರು: ಈ ಕಳ್ಳರು ಅದ್ಯಾವೆಲ್ಲ ವಸ್ತುಗಳನ್ನು ಕದಿಯುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಬರೀ ಹಣ, ಒಡವೆ ದೋಚುವ ಕಾಲ ಇದಲ್ಲ. ಗುಜರಿಗೆ ಹಾಕಿದ ವಸ್ತುಗಳನ್ನೂ ಬಿಡದ ಕಳ್ಳರು ಇದ್ದಾರೆ. ಅಂಥದ್ದರಲ್ಲಿ ದುಬಾರಿ, ಬೆಲೆ ಇರುವ ವಸ್ತುಗಳನ್ನು ಬಿಟ್ಟಾರೆಯೇ?-ಇಲ್ನೋಡಿ ಇದೀಗ ಮೈಸೂರಿನ ರಿಂಗ್ ರಸ್ತೆಯಲ್ಲಿ ಪೊಲೀಸ್ ಇಲಾಖೆಯಿಂದ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾ (CCTV Camera)ಗಳ ಬ್ಯಾಟರಿ, ಯುಪಿಎಸ್ನ್ನೇ ಖತರ್ನಾಕ್ ಕಳ್ಳರು ಎಗರಿಸಿದ್ದಾರೆ (Battery Of CCTV Cameras Stolen).
ರಿಂಗ್ ರೋಡ್ನಲ್ಲಿರುವ ಪೊಲೀಸ್ ಬಡಾವಣೆ ಮತ್ತು ಚಿಕ್ಕಹಳ್ಳಿ ಸಮೀಪದ ದೊಡ್ಡ ಆಲದಮರದ ಬಳಿ, ಮೈಸೂರು ನಗರ ಪೊಲೀಸರು ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ಎರಡೂ ಕಡೆ ಸಿಸಿಟಿವಿ ಕ್ಯಾಮರಾದ ಬ್ಯಾಟರಿ ಇದ್ದ ಬಾಕ್ಸ್ ತೆರೆದು, ಬ್ಯಾಟರಿಯನ್ನು ಮತ್ತು ಯುಪಿಎಸ್ ಇನ್ವರ್ಟರ್ನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಕೇವಲ ಅರ್ಧಗಂಟೆ ಸಮಯದ ಅಂತರದಲ್ಲಿ ಎರಡೂ ಜಾಗದಲ್ಲಿ ಕಳ್ಳತನವಾಗಿದೆ. ಈ ಕಳ್ಳರು ಸಿಸಿ ಕ್ಯಾಮರಾ ಬ್ಯಾಟರಿ ಕಳವಿಗೆ ವಾಹನದಲ್ಲಿ ಬಂದಿದ್ದರು. ವಾಹನವನ್ನು ತುಂಬ ದೂರ ಅಂದರೆ ಕ್ಯಾಮರಾ ವ್ಯಾಪ್ತಿಗೆ ಸಿಗದ ಜಾಗದಲ್ಲೇ ನಿಲ್ಲಿಸಿದ್ದರು.
ಇದನ್ನೂ ಓದಿ: Uttara Kannada News : ಚಿನ್ನಾಭರಣ ಖರೀದಿ ಸೋಗಿನಲ್ಲಿ ಕಳ್ಳತನ; 3 ಚಾಲಾಕಿ ಮಹಿಳೆಯರ ಬಂಧನ
ಈ ಎರಡೂ ಜಾಗಗಳಲ್ಲಿ ಎರಡು ದಿನಗಳ ಹಿಂದಷ್ಟೇ ಮೈಸೂರು ನಗರ ಪೊಲೀಸರು ದುಬಾರಿ ಬೆಲೆಯ ಕ್ಯಾಮರಾಗಳನ್ನು ಅಳವಡಿಸಿದ್ದರು. ಆದರೆ ನಗರದ ರಿಂಗ್ ರಸ್ತೆಯಲ್ಲಿ ಒಂದು ತಿಂಗಳಿಂದಲೂ ಬೀದಿ ದೀಪ ಇಲ್ಲ. ಸಂಜೆಯಾಗುತ್ತಿದ್ದಂತೆ ಪೂರ್ತಿಯಾಗಿ ಕತ್ತಲಾವರಿಸುತ್ತಿದೆ. ಈ ಕತ್ತಲೆಯ ಲಾಭವನ್ನು ಕಳ್ಳರು ಪಡೆದಿದ್ದಾರೆ. ಅಂದಹಾಗೇ, ಮೈಸೂರು ರಿಂಗ್ ರೋಡ್ ಬೀದಿ ದೀಪ ನಿರ್ವಹಣೆಯ ಹೊಣೆ ಅಲ್ಲಿನ ಮಹಾನಗರ ಪಾಲಿಕೆಯದ್ದೇ ಆಗಿದೆ. ಆದರೆ ವಿದ್ಯುತ್ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ, ಸೆಸ್ಕಾಂನಿಂದ ಈ ಭಾಗದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಬೀದಿ ದೀಪ ಉರಿಯುತ್ತಿಲ್ಲ, ಈ ವಿಷಯ ಗೊತ್ತಿದ್ದ ಕಳ್ಳರು ಸಿಸಿಟಿವಿ ಕ್ಯಾಮರಾ ಬ್ಯಾಟರಿಯನ್ನು ಕೊಂಡೊಯ್ದಿದ್ದಾರೆ. ಕೆಟ್ಟು ನಿಂತ ಬೀದಿದೀಪ ಕಳ್ಳರಿಗೆ ದಾರಿ ತೋರಿದಂತಾಗಿದೆ. ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ