ಬೆಂಗಳೂರು: ಪ್ರತಿಷ್ಠಿತ ಶೋಭಾ ಲಿಮಿಟೆಡ್ ಕಂಪನಿಯ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಖರೀದಿಸಿದವರಿಗೆ ಆತಂಕ ಎದುರಾಗಿದೆ. ಶೋಭಾ ಲಿಮಿಟೆಡ್ ಕಂಪನಿಯು ನಕಲಿ ನಿರಾಕ್ಷೇಪಣಾ ಪ್ರಮಾಣಪತ್ರ (NOC) ನೀಡಿದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP) ಸಮುಚ್ಚಯ ನಿರ್ಮಾಣದ ನಕ್ಷೆ ಮಂಜೂರಾತಿ ಹಾಗೂ ಸ್ವಾಧೀನ ಪ್ರಮಾಣಪತ್ರವನ್ನು (OC) ರದ್ದುಗೊಳಿಸಿದೆ.
“ಬೆಂಗಳೂರಿನ ಥಣಿಸಂದ್ರ ಮೇನ್ ರೋಡ್‌ನಲ್ಲಿ ಶೋಭಾ ಸಿಟಿ ಅಪಾರ್ಟ್‌ಮೆಂಟ್ಸ್ ಎಂಬ ವಸತಿ ಸಮುಚ್ಚಯ ನಿರ್ಮಿಸಿದ್ದು, ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿಶಾಮಕ ದಳದ ನಕಲಿ ಎನ್‌ಒಸಿ ದಾಖಲೆಗಳನ್ನು ನೀಡಿದ ಕಾರಣಕ್ಕಾಗಿ ಬಿಬಿಎಂಪಿಯು ನಕ್ಷೆ ಮಂಜೂರಾತಿ ಹಾಗೂ ಸ್ವಾಧೀನ ಪ್ರಮಾಣಪತ್ರವನ್ನು ರದ್ದುಗೊಳಿಸಲಾಗಿದೆ” ಎಂದು ಬಿಬಿಎಂಪಿ ಆದೇಶದಲ್ಲಿ ತಿಳಿಸಲಾಗಿದೆ. ನಕಲಿ ದಾಖಲೆ ಕುರಿತು ದೂರು ದಾಖಲಾದ ಹಿನ್ನೆಲೆಯಲ್ಲಿ ಬಿಬಿಎಂಪಿ ತನಿಖೆ ನಡೆಸಿ ಕ್ರಮ ತೆಗೆದುಕೊಂಡಿದೆ.
ಕಟ್ಟಡದ ನಕ್ಷೆಗೆ ಬಿಬಿಎಂಪಿಯು 2013ರ ಜೂನ್ 4ರಂದು ಮಂಜೂರಾತಿ ನೀಡಿತ್ತು. ಹಾಗೆಯೇ, ಸ್ವಾಧೀನ ಪ್ರಮಾಣಪತ್ರವನ್ನು 2016ರ ಜೂನ್ 21 ಹಾಗೂ 2020ರ ಜನವರಿ 24ರಂದು ನೀಡಲಾಗಿತ್ತು. ಈಗ ಇವುಗಳನ್ನು ರದ್ದುಗೊಳಿಸಿದ ಕಾರಣ ನಿವಾಸಿಗಳಿಗೆ ಆತಂಕ ಎದುರಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ಎರಡು ಬೆಡ್‌ರೂಮ್ ಇರುವ ಫ್ಲ್ಯಾಟ್‌ಗೆ 90 ಲಕ್ಷ ರೂ.ನಿಂದ 1.30 ಕೋಟಿ ರೂ. ಇದೆ.
ಇದನ್ನೂ ಓದಿ | Lokayukta Raid | 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ; ಬಿಬಿಎಂಪಿ ಅಧಿಕಾರಿ ಸೇರಿ ಮೂವರು ಲೋಕಾಯುಕ್ತ ಬಲೆಗೆ