ಬೆಂಗಳೂರು: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಚಾಮರಾಜಪೇಟೆ ಈದ್ಗಾ ಮೈದಾನದ ಬಳಿಯ ರಸ್ತೆ ಸಂಪರ್ಕವನ್ನು ಕಡಿತ ಮಾಡುವುದು, ಸಿಗ್ನಲ್‌ಗಳ ಸಹಿತ ಎಲ್ಲೆಂದರಲ್ಲಿ ಚಾಪೆ ಹಾಸಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಅವಕಾಶವಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈದಾನದಲ್ಲಿ ಕುರಿ, ಮೇಕೆ ಮಾರಾಟಕ್ಕೆ ಕೆಲ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಮೈದಾನದಲ್ಲಿ ಕುರಿ, ಮೇಕೆ ಸಂತೆಯಿಂದ ಉಂಟಾಗುವ ತ್ಯಾಜ್ಯವನ್ನು ಪಾಲಿಕೆ ಸ್ವಚ್ಛಮಾಡುವುದಿಲ್ಲ. ವಿವಾದ ಕೋರ್ಟ್‌ನಲ್ಲಿರುವ ಹಿನ್ನೆಲೆಯಲ್ಲಿ ಮೈದಾನದ ವಿಚಾರದಲ್ಲಿ ಮಧ್ಯೆ ಪ್ರವೇಶಿಸಲ್ಲ. ಜುಲೈ 10 ರಂದು ಬಕ್ರೀದ್ ಹಬ್ಬದ ದಿನದಂದು ಮೈದಾನದ ಬಳಿ ಸಂಚಾರ ದಟ್ಟಣೆ ಉಂಟಾಗದಂತೆ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಬೇಕು. ರಸ್ತೆಗಳ ಮೇಲೆ ನಮಾಜ್ ಮಾಡಿ ತೊಂದರೆ ಕೊಡಬಾರದು ಎಂದು ಹೇಳಿದರು.
ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನ್ಯಾಯಾಲಯ ಅನುಮತಿ ನೀಡಿದೆ. ಹಾಗಾಗಿ ಪ್ರಾರ್ಥನೆ ಮಾಡಲು ಯಾವುದೇ ಅಡ್ಡಿಯಿಲ್ಲ. ಆದರೆ, ಸಾರ್ವಜನಿಕರು ಸಂಚಾರ ಮಾಡುವ ರಸ್ತೆಗಳ ಮೇಲೆ ಚಾಪೆ ಹಾಸಿಕೊಂಡು ನಮಾಜ್ ಮಾಡುವುದು ಸರಿಯಲ್ಲ. ಇದರಿಂದ ಟ್ರಾಫಿಕ್ ಸಮಸ್ಯೆ ಬಹಳವೇ ಆಗುತ್ತದೆ ಎಂದು ತಿಳಿಸಿದ ತುಷಾರ್ ಗಿರಿನಾಥ್, ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಫುಟ್‌ಪಾತ್‌ನಲ್ಲಿರುವ ಅಂಗಡಿಗಳ ತೆರವು ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಜುಲೈ 12ರಂದು ಚಾಮರಾಜಪೇಟೆ ಬಂದ್‌ಗಿಲ್ಲ ಅನುಮತಿ
ಸಾರ್ವಜನಿಕರ ಬಳಕೆಗೆ ಚಾಮರಾಜಪೇಟೆ ಈದ್ಗಾ ಮೈದಾನ ಮುಕ್ತ ಮಾಡಬೇಕು ಎಂದು ನಾಗರಿಕರ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳಿಂದ ಜುಲೈ 12ರಂದು ಕರೆ ನೀಡಿರುವ ಚಾಮರಾಜಪೇಟೆ ಬಂದ್‌ಗೆ ಅನುಮತಿ ಇಲ್ಲ ಎಂದು ಪೋಲಿಸ್ ಇಲಾಖೆ ತಿಳಿಸಿದೆ.
ಪ್ರತಿಭಟನಾಕಾರರು ಯಾವುದೇ ಪ್ರತಿಭಟನೆ, ಮೆರವಣಿಗೆ ಅಥವಾ ಒತ್ತಾಯಪೂರ್ವಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತಿಲ್ಲ. ಒಂದು ವೇಳೆ ಪ್ರತಿಭಟನೆ ನಡೆಸಬೇಕೆಂದರೆ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ನಿಯಮ ಮೀರಿ ಚಾಮರಾಜಪೇಟೆ ಠಾಣಾ ವ್ಯಾಪ್ತಿಯಲ್ಲಿ ಬಂದ್ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚಾಮರಾಜಪೇಟೆ ಠಾಣೆಯಿಂದ ಸಂಘಟನೆಗಳಿಗೆ ತಿಳಿವಳಿಕೆ ಪತ್ರ ರವಾನಿಸಲಾಗಿದೆ.
ಇದನ್ನೂ ಓದಿ | ಸಂಚಾರ ದಟ್ಟಣೆ ಹೆಚ್ಚಿರುವ 10 ಪ್ರದೇಶಗಳ ಗುರುತು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್