ಬೆಂಗಳೂರು: ಚಾಮರಾಜಪೇಟೆ ಮೈದಾನ ಕುರಿತು ಸದಾ ಹೇಳಿಕೆ ಬದಲು ಮಾಡುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಗುರುವಾರವೂ ತನ್ನ ದ್ವಂದ್ವ ನಿಲುವನ್ನು ಮುಂದುವರಿಸಿದೆ. ಮೈದಾನದ ನಮ್ಮದು ಎಂಬುವುದಕ್ಕೆ ನಗರಾಭಿವೃದ್ಧಿ ಇಲಾಖೆಯ ಅಂತಿಮ ಅಧಿಸೂಚನೆಯೇ ಇದ್ದರೂ, ಈ ಕುರಿತು ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸುತ್ತೇವೆ ಎನ್ನುವ ಸರ್ಕಾರಿ ಭಾಷೆಯಲ್ಲಿ ವಿಶೇಷ ಆಯುಕ್ತ ರಾಮ್‌ಪ್ರಸಾದ್ ಮನೋಹರ್ ತಿಳಿಸಿದ್ದಾರೆ.
ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾತ್ ಬುಧವಾರ ಸುದ್ದಿಗೋಷ್ಠಿ ನಡೆಸಿದ್ದರು. ಚಾಮರಾಜಪೇಟೆ ಮೈದಾನದಲ್ಲಿ ಕುರಿ, ಮೇಕೆ ಮಾರಾಟಕ್ಕೆ ಕೆಲ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಮೈದಾನದಲ್ಲಿ ಕುರಿ, ಮೇಕೆ ಸಂತೆಯಿಂದ ಉಂಟಾಗುವ ತ್ಯಾಜ್ಯವನ್ನು ಪಾಲಿಕೆ ಸ್ವಚ್ಛಮಾಡುವುದಿಲ್ಲ. ವಿವಾದ ಕೋರ್ಟ್‌ನಲ್ಲಿರುವ ಹಿನ್ನೆಲೆಯಲ್ಲಿ ಮೈದಾನದ ವಿಚಾರದಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ. ಜುಲೈ 10 ರಂದು ಬಕ್ರೀದ್ ಹಬ್ಬದ ದಿನದಂದು ಮೈದಾನದ ಬಳಿ ಸಂಚಾರ ದಟ್ಟಣೆ ಉಂಟಾಗದಂತೆ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಬೇಕು. ರಸ್ತೆಗಳ ಮೇಲೆ ನಮಾಜ್ ಮಾಡಿ ತೊಂದರೆ ಕೊಡಬಾರದು ಎಂದು ಹೇಳಿದರು.
ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನ್ಯಾಯಾಲಯ ಅನುಮತಿ ನೀಡಿದೆ. ಹಾಗಾಗಿ ಪ್ರಾರ್ಥನೆ ಮಾಡಲು ಯಾವುದೇ ಅಡ್ಡಿಯಿಲ್ಲ. ಆದರೆ, ಸಾರ್ವಜನಿಕರು ಸಂಚಾರ ಮಾಡುವ ರಸ್ತೆಗಳ ಮೇಲೆ ಚಾಪೆ ಹಾಸಿಕೊಂಡು ನಮಾಜ್ ಮಾಡುವುದು ಸರಿಯಲ್ಲ. ಇದರಿಂದ ಟ್ರಾಫಿಕ್ ಸಮಸ್ಯೆ ಬಹಳವೇ ಆಗುತ್ತದೆ ಎಂದು ತಿಳಿಸಿದ್ದ ತುಷಾರ್ ಗಿರಿನಾಥ್, ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಫುಟ್‌ಪಾತ್‌ನಲ್ಲಿರುವ ಅಂಗಡಿಗಳ ತೆರವು ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದರು.
ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ರಾಮ್‌ಪ್ರಸಾದ್ ಮನೋಹರ್ ಗುರುವಾರ ಮಾತನಾಡಿದರು. ಮೈದಾನದ ಮಾಲೀಕತ್ವದ ಬಗ್ಗೆ ಕೇಳಿದ ಪ್ರಶ್ನೆಗೆ, ʻಮಾನ್ಯ ಮುಖ್ಯ ಆಯುಕ್ತರು ನೀಡಿದ ಮಾಹಿತಿಯ ಆಧಾರದಲ್ಲಿ ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುತ್ತದೆʼ ಎಂದು ಸರ್ಕಾರಿ ಭಾಷೆಯಲ್ಲಿ ಉತ್ತರ ನೀಡಿದರು.
ಪದೇಪದೆ ಪ್ರಶ್ನೆ ಕೇಳಿದ ನಂತರ ಪ್ರತಿಕ್ರಿಯಿಸಿ, ಸದ್ಯಕ್ಕೆ ಮೈದಾನ ನಮ್ಮದು ಎನ್ನುವುದಕ್ಕೆ ದಾಖಲೆ ನಮ್ಮ ಬಳಿ ಇದೆ. ಆದರೆ ಅನೇಕರು ತಮಗೆ ಆಸ್ತಿ ಸೇರಿದ್ದು ಎನ್ನುತ್ತಿದ್ದಾರೆ. ದಾಖಲೆಗಳೇನಿವೆ ತೆಗೆದುಕೊಂಡು ಬನ್ನಿ, ಅದರ ಆಧಾರದಲ್ಲಿ ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದ್ದೇವೆ. ಎಷ್ಟೇ ಜನರು ಆಸ್ತಿ ತಮ್ಮದೆಂದು ಹೇಳಿದರೂ ಅಂತಿಮವಾಗಿ, ಮೂಲ ಮಾಲೀಕರಿಗೇ ಸೇರುತ್ತದೆ. ಈ ಬಗ್ಗೆ ಮುಖ್ಯ ಆಯುಕ್ತರ ಹೇಳಿಕೆ ಆಧಾರದಲ್ಲಿ ತೀರ್ಮಾನ ಮಾಡುತ್ತೇವೆ. ಕಾನೂನು ತಜ್ಞರ ಸಲಹೆ ಪಡೆದು ಅದರಂತೆ ಮುಂದುವರಿಯುತ್ತೇವೆ ಎಂದು ಮತ್ತೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ರಾಮ್‌ಪ್ರಸಾದ್ ಮಾತನಾಡಿದರು.
2017ರಲ್ಲಿ ರಾಜ್ಯಪತ್ರ ಪ್ರಕಟ
ಬಿಬಿಎಂಪಿ ತನ್ನ ಆಸ್ತಿಗಳ ಕುರಿತು 2017ರಲ್ಲಿ ಸಮೀಕ್ಷೆ ನಡೆಸಿ 2021ರಲ್ಲಿ ಅಂತಿಮ ಅಧಿಸೂಚನೆ ಪ್ರಕಟಿಸಿದ್ದರೂ ಮೈದಾನದ ಕುರಿತು ಅಧಿಕಾರಿಗಳು ದ್ವಂದ್ವದ ಹೇಳಿಕೆ ನೀಡುತ್ತಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
2017ರಲ್ಲಿ ತನ್ನೆಲ್ಲ ಆಸ್ತಿಗಳ ಕುರಿತು ನಗರಾಭಿವೃದ್ಧಿ ಇಲಾಖೆ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಗೂ ಮುನ್ನ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಸಾರ್ವಜನಿಕರ ಆಕ್ಷೇಪಣೆಗಳನ್ನು ಪರಿಗಣಿಸಿ, ಅದರಂತೆ 2021ರ ಜನವರಿಯಲ್ಲಿ, 299 ಆಸ್ತಿಗಳು ಬಿಬಿಎಂಪಿಯವು ಎಂಬ ಅಧಿಸೂಚನೆ ಹೊರಡಿಸಲಾಗಿದೆ. ಇದರ ಪ್ರಕಾರ ಚಾಮರಾಜಪೇಟೆಯಲ್ಲಿ 1ಮತ್ತು 2ನೇ ಮುಖ್ಯರಸ್ತೆ, 6 ಮತ್ತು 7 ನೇ ಮುಖ್ಯರಸ್ತೆ ನಡುವೆ ಮೈದಾನ ಇದೆ. ಒಟ್ಟು 9016 ಚದರ ಮೀಟರ್ ವಿಸ್ತೀರ್ಣ ಇದೆ. ಇದು ಆಟದ ಮೈದಾನವಾಗಿದ್ದು, ಮೈದಾನದೊಳಗೆ ಕಾಮಗಾರಿ ಇಲಾಖೆ ಹಾಗೂ ನಿರ್ಮಲ ಶೌಚಾಲಯ ಇದೆ ಎಂದು ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಈದ್ಗಾ ಮೈದಾನ ಎಂಬುದಾಗಲಿ, ಮೈದಾನದಲ್ಲಿರುವ ನಮಾಜ್ ಗೋಡೆಯ ವಿಚಾರವನ್ನೂ ನಮೂದಿಸಿಲ್ಲ.
ಈ ಕುರಿತು ಮಾಹಿತಿ ಪಡೆದು ಪ್ರತಿಕ್ರಿಯಿಸಿರುವ ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಎಸ್ ಭಾಸ್ಕರನ್, ಮಾಲೀಕತ್ವ ವಿಚಾರ ಇಷ್ಟು ಸ್ಪಷ್ಟವಾಗಿದ್ದರೂ ಅಧಿಕಾರಿಗಳು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಯಾವ ಒತ್ತಡಕ್ಕೆ ಹೀಗೆ ಹೇಳುತ್ತಿದ್ದಾರೆ ತಿಳಿಯಬೇಕಿದೆ. ನಮಗೆ ವೈಯಕ್ತಿಕವಾಗಿ ಯಾರ ವಿರುದ್ಧವೂ ಭಾವನೆ ಇಲ್ಲ. ನೂರಾರು ಕೋಟಿ ರೂ. ಬಿಬಿಎಂಪಿ ಆಸ್ತಿಯನ್ನು ಉಳಿಸಬೇಕು ಎಂಬುದಷ್ಟೆ ನಮ್ಮ ಉದ್ದೇಶ. ಈಗಾಗಲೆ ಮುಸಲ್ಮಾನರಿಗೆ ಪ್ರತ್ಯೇಕ ಈದ್ಗಾ ಮೈದಾನ ನೀಡಲಾಗಿದೆ. ಅದರಂತೆ ಅಲ್ಲಿರುವ ಕಟ್ಟಡವನ್ನು ನೆಲಸಮಗೊಳಿಸಿ, ಬೇಲಿ ಹಾಕಿ, ಸಾರ್ವಜನಿಕವಾಗಿ ಸಂಘಸಂಸ್ಥೆಗಳಿಗೆ ಮೈದಾನಗಳನ್ನು ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ | ಎಲ್ಲೆಂದರಲ್ಲಿ ಚಾಪೆ ಹಾಸಿ ನಮಾಜ್ ಮಾಡುವಂತಿಲ್ಲ ಎಂದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್!