ಬೆಂಗಳೂರು: ಈಗಷ್ಟೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಸರಳ ಬಹುಮತದೊಂದಿಗೆ ಗದ್ದುಗೆ ಏರಿರುವ ಕಾಂಗ್ರೆಸ್ ಸರ್ಕಾರ ಇದೀಗ ಮುಂದಿನ ಹಣಾಹಣಿಯಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆ ಮೇಲೆ ಕಣ್ಣಿಟ್ಟಿದೆ.
ಚುನಾವಣೆಯಲ್ಲಿ ಸೋಲುಂಡ ಆಘಾತದಲ್ಲಿರುವ ಬಿಜೆಪಿ ಇನ್ನೂ ಅದರಿಂದ ಹೊರಬಂದಿಲ್ಲ. ಲೋಕಸಭೆ ಸಂಸದರ ಸಭೆ ನಡೆಸಿದ್ದು, ಆಗಿಂದಾಗ್ಗೆ ಸುದ್ದಿಗೋಷ್ಠಿ ನಡೆಸುವುದನ್ನು ಹೊರತುಪಡಿಸಿ ಸಂಘಟನಾತ್ಮಕವಾಗಿ ಯಾವುದೇ ಕ್ರಿಯಾಶೀಲ ಚಟುವಟಿಕೆಗಳು ಬಿಜೆಪಿಯಲ್ಲಿ ಕಾಣುತ್ತಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಈಗಾಗಲೆ ಒಂದು ಹೆಜ್ಜೆ ಮುಂದಿದೆ. ಈಗಾಗಲೆ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ 11 ಜನರ ತಂಡವನ್ನು ರಚನೆ ಮಾಡಿದೆ.
ರಾಮಲಿಂಗಾರೆಡ್ಡಿ ಅವರು ಬೆಂಗಳೂರಿನ ಸ್ಥಳೀಯ ಆಡಳಿತದಲ್ಲಿ ಅನೇಕ ವರ್ಷಗಳಿಂದ ಹಿಡಿತ ಹೊಂದಿರುವವರು. ಬಿಜೆಪಿ ಸಚಿವರೂ ರಾಮಲಿಂಗಾರೆಡ್ಡಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಇದೀಗ ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನವನ್ನು ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್ ವಹಿಸಿಕೊಂಡಿದ್ದಾರೆ.
ಈಗಾಗಲೆ ಅಧಿಕಾರಿಗಳ ಸಭೆ, ಬಿಬಿಎಂಪಿ ಮಾಜಿ ಮೇಯರ್‌ಗಳ ಸಭೆಯನ್ನು ಶಿವಕುಮಾರ್ ನಡೆಸಿದ್ದಾರೆ. ಸೋಮವಾರ ಬೆಂಗಳೂರಿನ ಎಲ್ಲ ಪಕ್ಷದ ಶಾಸಕರ ಸಭೆಯನ್ನು ಶಿವಕುಮಾರ್ ಆಯೋಜಿಸಿದ್ದಾರೆ. ನಂತರ ಕಾಂಗ್ರೆಸ್ ಶಾಸಕರ ಸಭೆಯನ್ನು ಪ್ರತ್ಯೇಕವಾಗಿ ನಡೆಸಲಿದ್ದಾರೆ. ಇದೆಲ್ಲದರ ನಡುವೆ ಸಾರಿಗೆ ಸಚಿವರೂ ಆಗಿರುವ ರಾಮಲಿಂಗಾರೆಡ್ಡಿ ಅವರು ಮಹತ್ವದ ಸಭೆಯನ್ನು ಶನಿವಾರ ನಡೆಸಿದ್ದಾರೆ.
ಗ್ಯಾರಂಟಿಗಳ ಲಾಭ ಪಡೆಯುವುದು ಹೇಗೆ?
ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯ 11 ಜನರ ಸಮಿತಿಯು ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದೆ. ಸಭೆಯಲ್ಲಿ ಶಾಸಕ ಪೊನ್ನಣ್ಣ, ಸಚಿವ ಕೃಷ್ಣಬೈರೇಗೌಡ, ಶಾಸಕ ಪ್ರಿಯಾಕೃಷ್ಣ, ಶಾಸಕ ಎನ್.ಎ. ಹ್ಯಾರಿಸ್, ಮಾಜಿ ಮೇಯರ್ ಪದ್ಮಾವತಿ, ಮಾಜಿ ಮೇಯರ್ ಪಿ.ಆರ್. ರಮೇಶ್, ರಮೇಶ್ ಬಾಬು ಇನ್ನಿತರರು ಭಾಗಿಯಾಗಿದ್ದರು. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸಹ ಉಪಸ್ಥಿತರಿದ್ದ ಸಭೆಯಲ್ಲಿ ಬಿಬಿಎಂಪಿ ಆಡಳಿತದ ಕುರಿತು ಮಾಹಿತಿ ಪಡೆದು ಚರ್ಚಿಸಿದ್ದಾರೆ.
ಅಧಿಕಾರಿಗಳೊಂದಿಗಿನ ಸಭೆಯ ನಂತರ ನಡೆದ ಮಾತುಕತೆಯಲ್ಲಿ, ಮುಖ್ಯವಾಗಿ ಈಗಷ್ಟೆ ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳ ಲಾಭವನ್ನು ಚುನಾವಣೆಯಲ್ಲಿ ಹೇಗೆ ಪಡೆಯುವುದು ಎಂಬ ಚರ್ಚೆಯನ್ನು ಮಾಡಲಾಗಿದೆ ಎನ್ನಲಾಗಿದೆ. ಅನ್ನಭಾಗ್ಯ, ಕುಟುಂಬದ ಮುಖ್ಯಸ್ಥೆಗೆ ಮಾಸಿಕ 2 ಸಾವಿರ ರೂ., ನಿರುದ್ಯೋಗ ಭತ್ಯೆ ಯೋಜನೆಗಳಿಗಿಂತಲೂ ಉಚಿತ ವಿದ್ಯುತ್ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ.
ಬೆಂಗಳೂರು ನಾಗರಿಕರಿಗೆ ನೇರವಾಗಿ ತಟ್ಟುವ ಎರಡು ಯೋಜನೆಗಳೆಂದರೆ ಉಚಿತ ಬಸ್ ಪ್ರಯಾಣ ಹಾಗೂ ಉಚಿತ ವಿದ್ಯುತ್. ಸಾಮಾನ್ಯವಾಗಿ ಮಹಿಳೆಯೊಬ್ಬರು ಕೆಲಸದ ಸ್ಥಳಕ್ಕೆ ಪ್ರತಿನಿತ್ಯ ಬಿಎಂಟಿಸಿ ಬಸ್, ಮೆಟ್ರೊ ಅಥವಾ ಆಟೊದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರೆ ಏನಿಲ್ಲವೆಂದರೂ ಮಾಸಿಕ 1,500 ರೂ. ವೆಚ್ಚವಾಗುತ್ತದೆ. ದ್ವಿಚಕ್ರ ವಾಹನದಲ್ಲಿ ತೆರಳಿದರೂ ಒಂದು ಸಾವಿರ ರೂ.ವರೆಗೆ ತಗಲುತ್ತದೆ. ಉಚಿತ ಪ್ರಯಾಣ ಮಾಡಿರುವುದರಿಂದ ಇವರೆಲ್ಲರಿಗೆ ಅನುಕೂಲವಾಗಲಿದೆ. ದ್ವಿಚಕ್ರ ವಾಹನ ಸವಾರರು ಹಾಗೂ ಮೆಟ್ರೊ ಪ್ರಯಾಣಿಕರೂ ಅನೇಕರು ಬಿಎಂಟಿಸಿಗೆ ಆಗಮಿಸುವ ಸಾಧ್ಯತೆಯಿದೆ.
ಇದರಿಂದ ಒಂದಷ್ಟು ಪ್ರಮಾಣದಲ್ಲಾದರೂ ಸಂಚಾರ ದಟ್ಟಣೆ ಕಡಿಮೆಯಾಗುವುದಾದರೆ ಸಾಮಾನ್ಯ ವಾಹನ ಸವಾರರಿಗೂ ಅನುಕೂಲವಾಗುತ್ತದೆ. ಇಂತಹ ವಿಚಾರಗಳನ್ನು ಜನರಿಗೆ ಮನದಟ್ಟು ಮಾಡಿಸಬೇಕು. ಅದಕ್ಕಿಂತಲೂ ಹೆಚ್ಚಾಗಿ ಯೋಜನೆಯು ಯಾವುದೇ ಗೊಂದಲವಿಲ್ಲದೆ ಜಾರಿ ಆಗಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಉಚಿತ ವಿದ್ಯುತ್ ಯೋಜನೆಯ ಲಾಭವನ್ನೂ ಜನರಿಗೆ ಮನವರಿಕೆ ಮಾಡಬೇಕು. ಇದೆಲ್ಲದರ ಕಾರಣಕ್ಕೆ ಜನರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಒಳ್ಳೆಯ ಅಭಿಪ್ರಾಯ ಮೂಡುತ್ತದೆ. ಉಸ್ತುವಾರಿ ಸಚಿವರಾಗಿ ಡಿ.ಕೆ. ಶಿವಕುಮಾರ್ ಅವರೇ ಇರುವುದರಿಂದ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗ ಮತಗಳೂ ಕಾಂಗ್ರೆಸ್ ಕಡೆ ವಾಲಲಿವೆ. ಇದೆಲ್ಲವನ್ನೂ ಗಮನದಲ್ಲಿರಿಸಿ ಚುನಾವಣಾ ತಂತ್ರ ರೂಪಿಸಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ರಾಮಲಿಂಗಾರೆಡ್ಡಿ ಅವರೇ ಸಾರಿಗೆ ಇಲಾಖೆಯನ್ನೂ ನಿಭಾಯಿಸುತ್ತಿರುವುದರಿಂದ ಉಚಿತ ಬಸ್ ಪ್ರಯಾಣ ಅವರ ಹೊಣೆಯೇ ಆಗಿದೆ. ಇದೇ ಕಾರಣಕ್ಕೆ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಶೇ.50 ಸೀಟುಗಳನ್ನು ಮೀಸಲು ಮಾಡಿದ್ದರೂ ಬಿಎಂಟಿಸಿಯಲ್ಲಿ ಈ ನಿರ್ಬಂಧ ಇಟ್ಟಿಲ್ಲ. ಇಡೀ ಬಸ್‌ನಲ್ಲಿ ಮಹಿಳೆಯರೇ ಪ್ರಯಾಣಿಸಿದರೂ ಉಚಿತ ಪ್ರಯಾಣ ಇರಲಿದೆ.
ಸಭೆಯ ನಂತರ ಮಾಧ್ಯಮಗಳ ಜತೆಗೆ ಮಾತನಾಡಿದ ರಾಮಲಿಂಗಾರೆಡ್ಡಿ, ನುಡಿದಂತೆ ನಡೆದಿದ್ದೇವೆ, ಅನುಷ್ಠಾನ ಕೂಡ ಆಗುತ್ತದೆ. ಮೊದಲನೆ ಅನುಷ್ಠಾನ ನಮ್ಮ ಇಲಾಖೆಯದ್ದೆ. ವಿಧಾನಸೌಧದ ಮುಂಭಾಗದಲ್ಲಿ ಜೂನ್ 11 ರಂದು ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಚಾಲನೆ ಕೊಡ್ತೀವಿ. ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣ ಇರುತ್ತದೆ.
ಯಾವ ರೀತಿ ಮಾಡಬೇಕು ಅನ್ನೊದನ್ನ ಅಧಿಕಾರಿಗಳು ಫ್ರೇಮ್ ವರ್ಕ್ ಮಾಡ್ತಿದ್ದಾರೆ. ಆಧಾರ್‌ಕಾರ್ಡ್ ತೋರಿಸಬೇಕೊ ಇಲ್ಲವೋ ಅನ್ನೊದನ್ನ ಅಧಿಕಾರಿಗಳ ಜೊತೆ ಕೂತು ಚರ್ಚೆ ಮಾಡ್ತಿದ್ದೇವೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತದೆ ಎಂದರು.
ಉಚಿತ ಬಸ್ ಪ್ರಯಾಣದಿಂದ ಮೆಟ್ರೊಗೆ ಹೊಡೆತ ಬೀಳುತ್ತದೆಯೇ ಎಂಬ ಕುರಿತು ಪ್ರತಿಕ್ರಿಯಿಸಿ, ಎಷ್ಟು ಜನ ಪ್ರಯಾಣ ಮಾಡ್ತಾರೆ ಅನ್ನೋದನ್ನ ಸರ್ಕಾರಕ್ಕೆ ಲೆಕ್ಕ ಕೊಡ್ತೀವಿ. ನಮಗೆ ಯಾವುದೇ ನಷ್ಟ ಆಗಲ್ಲ. ಸರ್ಕಾರ ಎಲ್ಲವನ್ನೂ ಭರಿಸುತ್ತದೆ. ಮೆಟ್ರೋಗೆ ಎಷ್ಟು ಜನ ಪ್ರಯಾಣಿಕರು ಕಡಿಮೆ ಆಗ್ತಾರೆ, ನಮಗೆ ಎಷ್ಟು ಜನ ಹೆಚ್ಚಾಗ್ತಾರೆ ಅನ್ನೊದು ಗೊತ್ತಾಗುತ್ತದೆ. ಇನ್ನೊಂದು ತಿಂಗಳಷ್ಟರಲ್ಲಿ ಒಂದು ಅಂದಾಜು ಸಿಗುತ್ತದೆ. ಆ ನಂತರ ನಾವು ಚರ್ಚೆ ಮಾಡ್ತೀವಿ.
ಬಿಬಿಎಂಪಿಯನ್ಮು ಸ್ಪಷ್ಟ ಬಹುಮತದಿಂದ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಕಾಂಗ್ರೆಸ್ ಇದ್ದಾಗಲೇ ನಗರಕ್ಕೆ ಅತಿ ಹೆಚ್ಚು ಅನುದಾನ ಕೊಟ್ಟಿರೋದು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಬೆಂಗಳೂರಿಗೆ ಗಮನ ಹರಿಸುತ್ತಾರೆ ಅನ್ನೋದು ಜನತೆಗೆ ಗೊತ್ತಿದೆ. ಜನರಿಗೂ ಆ ವಿಶ್ವಾಸವಿದೆ, ಕರ್ನಾಟಕದ ಆದಾಯದಲ್ಲಿ 60% ಹಣ ಬೆಂಗಳೂರಿನಿಂದಲೇ ಬರುತ್ತದೆ. ಬೆಂಗಳೂರು ಮೂಲಭೂತ ಅಭಿವೃದ್ಧಿಯಾದ್ರೆ ರಾಜ್ಯದ ಅಭಿವೃದ್ಧಿ ಕೂಡ ಸಾಧ್ಯ ಎಂದರು.
ಉಚುತ ವಿದ್ಯುತ್ ಕುರಿತು ಪ್ರತಿಕ್ರಿಯಿಸಿ, 200 ಯೂನಿಟ್ ಫ್ರೀ ಅಂತ ಹೇಳಿದ್ದೇವೆ. ಕೆಲವರು 50 ಯೂನಿಟ್ ಬಳಕೆ ಮಾಡ್ತಾರೆ, ಎಷ್ಟು ಯೂನಿಟ್ ಉಪಯೋಗಿಸುತ್ತಾರೋ ಅಷ್ಟು ಯೂನಿಟ್ ಉಚಿತವಾಗಿ ನೀಡ್ತಿವಿ. ಕಡಿಮೆ ಬಳಸುವವರಿಗೆ 200 ಯೂನಿಟ್ ನೀಡಿದ್ರೆ ಕರೆಂಟ್ ವೇಸ್ಟ್ ಆಗಲ್ವಾ? ಮಾತನಾಡೋರು ಮಾತನಾಡಲಿ ಅದರಿಂದ ಏನೂ ಉಪಯೋಗವಿಲ್ಲ ಎಂದು ಪ್ರತಿಪಕ್ಷ ಬಿಜೆಪಿ ಕುರಿತು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಮೊಗಸಾಲೆ ಅಂಕಣ : ಮುಂಬರುವ ಚುನಾವಣೆ ಗೆಲ್ಲಲು ಕಾಂಗ್ರೆಸ್ ಸರ್ಕಾರದಿಂದ ‘ಗ್ಯಾರಂಟಿ’ಗಳ ಚಲಾವಣೆ!