ಬೆಂಗಳೂರು: ಚುನಾವಣೆಗೆ ಬಿಬಿಎಂಪಿ (BBMP Election) ಸಿದ್ಧವಾಗಿದೆ. ಎಲೆಕ್ಷನ್ ನಡೆಸುವುದಕ್ಕೆ ನಾವು ಎಲ್ಲ ಸಿದ್ಧತೆಯನ್ನು ಈಗಾಗಲೇ ಮಾಡಿಕೊಂಡಿದ್ದೆೇವೆ. ಚುನಾವಣಾ ಆಯೋಗವು ಯಾವಾಗ ಸೂಚನೆ ನೀಡಿದರೂ ನಾವು ಸಿದ್ಧರಾಗಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಡಿಸೆಂಬರ್ ಒಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ತುಷಾರ್ ಗಿರಿನಾಥ್, ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಲಾಗಿದೆ. ಅಲ್ಲದೆ, ಮತದಾರರ ಪಟ್ಟಿಯಲ್ಲಿ ಯಾವುದೇ ರೀತಿಯಾದಂತಹ ಗೊಂದಲ ಇಲ್ಲ ಎಂದು ಅವರು ತಿಳಿಸಿದರು.
ವಾರ್ಡ್ ವಿಂಗಡಣೆ ಬಗ್ಗೆ ತಕರಾರು ಮಾಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಆ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಈಗ ಇರುವುದು ಮೀಸಲಾತಿ ಪಟ್ಟಿ ವಿಚಾರಣೆ ಮಾತ್ರವಾಗಿದೆ. ಮೀಸಲಾತಿ ಪಟ್ಟಿಗೂ ನಮಗೂ ಸಂಬಂಧ ಇಲ್ಲ, ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಿದೆ ಎಂದು ತಿಳಿಸಿದ ತುಷಾರ್ ಗಿರಿನಾಥ್, ಹೀಗಾಗಿ ಎಲೆಕ್ಷನ್ ನಡೆಸಲು ನಾವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆೇವೆ. 2011ರ ಜನಗಣತಿ ಪ್ರಕಾರವೇ ಮತದಾರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಹೀಗಾಗಿ ಚುನಾವಣೆ ಸಂಬಂಧ ನಮ್ಮ ಕಡೆಯಿಂದ ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೆೇವೆ ಎಂದು ತುಷಾರ್ ಗಿರಿನಾಥ್ ಹೇಳಿದರು.
ಇದನ್ನೂ ಓದಿ | ಈ ವರ್ಷಾಂತ್ಯದೊಳಗೆ ಬಿಬಿಎಂಪಿ ಚುನಾವಣೆ ಫಿಕ್ಸ್ ; ಡಿ. 31ರೊಳಗೆ ಚುನಾವಣೆ ಮುಗಿಸಲು ಹೈಕೋರ್ಟ್ ಸೂಚನೆ
ಡಿಸೆಂಬರ್ ಒಳಗೇ ಮುಗಿಸುವ ಸಾಧ್ಯತೆ- ಪಣೀಂದ್ರ
ನ್ಯಾ. ಭಕ್ತವತ್ಸಲಂ ಸಮಿತಿ ನೀಡಿದ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಕೆಲವು ಗೊಂದಲಗಳಿವೆ. ಅದನ್ನು ಸರಿಪಡಿಸಲು ಸರ್ಕಾರ 4 ತಿಂಗಳ ಕಾಲ ಕಾಲಾವಕಾಶ ಕೇಳಿತ್ತು. ಆದರೆ, ಈ ವಾದವನ್ನು ಒಪ್ಪದ ನ್ಯಾಯಪೀಠವು, ಎರಡು ತಿಂಗಳ ಒಳಗೆ ಒಬಿಸಿ ಮೀಸಲಾತಿ ಅಂತಿಮ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಹೇಳಿದೆ. ಹೀಗಾಗಿ ಸರ್ಕಾರವು ನವೆಂಬರ್ 30ರೊಳಗೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಬೇಕಿದೆ. ಡಿಸೆಂಬರ್ 31ರೊಳಗೆ ಚುನಾವಣಾ ಪ್ರಕ್ರಿಯೆಯನ್ನೂ ಮುಗಿಸಬೇಕಿದೆ. ಒಂದು ವೇಳೆ ನಿಗದಿತ ಸಮಯಕ್ಕೆ ಚುನಾವಣೆ ನಡೆಸದಿದ್ದರೆ, ಯಾರಾದರೂ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇರುವುದರಿಂದ ಸರ್ಕಾರ ಚುನಾವಣೆ ನಡೆಸಲಿದೆ ಎಂದು ಚುನಾವಣಾ ಆಯೋಗದ ಪರ ವಕೀಲ ಪಣೀಂದ್ರ ವಿಶ್ವಾಸ ವ್ಯಕ್ತಪಡಿಸಿದರು.