Site icon Vistara News

BBMP Election | ಬಿಬಿಎಂಪಿ ಮೀಸಲಾತಿ ನಿಗದಿಗೆ ಮಾ. 31ರವರೆಗೆ ಅವಕಾಶ, ಎಲೆಕ್ಷನ್‌ ಚಾನ್ಸ್‌ ಮತ್ತೆ ಮುಂದೂಡಿಕೆ!

BBMP

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ (BBMP Election) ಮುಹೂರ್ತ ಮತ್ತಷ್ಟು ಮುಂದಕ್ಕೆ ಹೋಗುವುದು ಖಚಿತವಾಗಿದೆ. ಎರಡು ವರ್ಷದಿಂದ ಚುನಾವಣೆ ನಡೆಯದೆ ಖಾಲಿ ಬಿದ್ದಿರುವ ಪಾಲಿಕೆಗೆ ಇನ್ನು ವಿಧಾನಸಭಾ ಚುನಾವಣೆಯ ಬಳಿಕವೇ ಎಲೆಕ್ಷನ್‌ ನಡೆಯುವುದು ಪಕ್ಕಾ.
ಬಿಬಿಎಂಪಿ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಲು ೨೦೨೩ರ ಮಾರ್ಚ್‌ ೩೧ರವರೆಗೆ ಸುಪ್ರೀಂಕೋರ್ಟೇ ಕಾಲಾವಕಾಶ ನೀಡಿದೆ. ಈ ಹಿಂದೆ ಡಿಸೆಂಬರ್‌ ೩೧ರೊಳಗೆ ಮೀಸಲಾತಿಯನ್ನು ಅಂತಿಮಗೊಳಿಸಬೇಕು ಎಂದು ರಾಜ್ಯ ಸರಕಾರಕ್ಕೆ ಸೂಚನೆ ನೀಡಿದ್ದ ಸುಪ್ರೀಂಕೋರ್ಟ್‌ ಈಗ ಗಡುವನ್ನು ಮಾರ್ಚ್‌ ೩೧ರವರೆಗೆ ವಿಸ್ತರಣೆ ಮಾಡಿದೆ.

ನಿರಂತರ ಮುಂದೂಡಿಕೆಗಳ ಸರಮಾಲೆ
ಬಿಬಿಎಂಪಿಯ ಚುನಾಯಿತ ಆಡಳಿತ ಮುಕ್ತಾಯವಾಗಿ ಎರಡು ವರ್ಷಗಳೇ ಕಳೆದಿವೆ. ರಾಜ್ಯ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ಗಳು ನಿರಂತರವಾಗಿ ಚುನಾವಣೆ ನಡೆಸುವಂತೆ ನಿರಂತರವಾಗಿ ಗಡುವುಗಳನ್ನು ಕೊಡುತ್ತಲೇ ಬಂದಿವೆ. ಮೊದಲು ವಾರ್ಡ್‌ಗಳ ಪುನರ‍್ರಚನೆ ಮುಂದಿಟ್ಟುಕೊಂಡು ಒಂದಷ್ಟು ಕಾಲ ತಳ್ಳಿದ ಸರಕಾರ ಬಳಿಕ ಮೀಸಲಾತಿ ವಿಚಾರವನ್ನು ಮುಂದಿಟ್ಟುಕೊಂಡಿದೆ.

ಕರ್ನಾಟಕ ಹೈಕೋರ್ಟ್ ನವೆಂಬರ್ 30ರೊಳಗೆ ಮೀಸಲಾತಿ ಪಟ್ಟಿ ಪ್ರಕಟಿಸಿ ಡಿಸೆಂಬರ್ 31ರೊಳಗೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಆದೇಶ ನೀಡಿತ್ತು. ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ನೀಡುವಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಆಧರಿಸಿ ಸರ್ಕಾರ ಮೀಸಲಾತಿ ನಿಗದಿಪಡಿಸಲು ಆಯೋಗ ರಚಿಸಿತ್ತು.

ನ್ಯಾಯಮೂರ್ತಿ ಭಕ್ತವತ್ಸಲ ಆಯೋಗ ಬಿಬಿಎಂಪಿಗೆ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ವರದಿ ನೀಡಲು ಕಾಲಾವಕಾಶ ಕೋರಿತ್ತು. ಇದರಿಂದ ಬಿಬಿಎಂಪಿ ಚುನಾವಣೆ ವಿಳಂಬವಾಗುವುದನ್ನು ಅರಿತಿದ್ದ ರಾಜ್ಯ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿ, ತಕ್ಷಣ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಮನವಿ ಮಾಡಿತ್ತು.

ಆದರೆ, ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡುವುದೂ ಮುಖ್ಯವಾಗಿರುವುದರಿಂದ ಅದಕ್ಕೆ ಅವಕಾಶ ಕೊಡಬೇಕು ಎಂಬ ವಾದವನ್ನು ಸರಕಾರ ಮುಂದಿಟ್ಟಿದೆ. ಸುಪ್ರೀಂಕೋರ್ಟ್‌ ಕೂಡಾ ಈ ಅಭಿಪ್ರಾಯವನ್ನು ಸರಿ ಎಂದಿದೆ. ನ್ಯಾಯಮೂರ್ತಿ ಅಬ್ದುಲ್ ನಜೀರ್ ಹಾಗೂ ನ್ಯಾಯಮೂರ್ತಿ ಹಿಮಾ ಕೊಹ್ಲಿಯವರಿದ್ದ ಸುಪ್ರೀಂಕೋರ್ಟ್‌ ಪೀಠ ಮಾರ್ಚ್ 31 ರೊಳಗೆ ಮೀಸಲಾತಿ ವರದಿ ಸಲ್ಲಿಸುವಂತೆ ಸರ್ಕಾರ ಹಾಗೂ ಆಯೋಗಕ್ಕೆ ಸೂಚಿಸಿದೆ.

ಅಂದರೆ, ಮಾರ್ಚ್‌ ೩೧ಕ್ಕೆ ಮೀಸಲಾತಿ ವರದಿ ಸಲ್ಲಿಸಬೇಕು, ಬಳಿಕ ಮೀಸಲಾತಿ ಹಂಚಿಕೆ, ಬಳಿಕ ಆಕ್ಷೇಪಣೆ ಪಡೆದು ಮುಂದಡಿ ಇಡಬೇಕಾಗುತ್ತದೆ. ಅಷ್ಟರಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗುವುದು ಖಚಿತ. ಹೀಗಾಗಿ ಆ ಹಂತದಲ್ಲಿ ಬಿಬಿಎಂಪಿ ಚುನಾವಣೆ ಘೋಷಣೆಯಾಗುವುದು ಕಷ್ಟ ಸಾಧ್ಯ. ಹೊಸ ಸರಕಾರ ರಚನೆಯಾದ ಬಳಿಕವೇ ಮುಂದಿನ ತೀರ್ಮಾನ ತೆಗೆದುಕೊಳ್ಳುವುದು ಬಹುತೇಕ ಖಚಿತ.

ಸುಪ್ರೀಂಕೋರ್ಟ್‌ನ ತೀರ್ಮಾನದಿಂದ ಹೇಗಾದರೂ ಮಾಡಿ ಬಿಬಿಎಂಪಿ ಚುನಾವಣೆಯನ್ನು ಮುಂದೂಡಬೇಕು ಎಂದು ಪ್ರಯತ್ನ ಮಾಡುತ್ತಿದ್ದ ಆಡಳಿತ ಮತ್ತು ಪ್ರತಿಪಕ್ಷಗಳಿಗೆ ನೆಮ್ಮದಿಯಾಗಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಸ್ಪರ್ಧೆಗಾಗಿ ಸಿದ್ಧತೆ ನಡೆಸುತ್ತಿದ್ದ ಟಿಕೆಟ್‌ ಆಕಾಂಕ್ಷಿಗಳಿಗೆ ಮಾತ್ರ ಭಾರಿ ಹಿನ್ನಡೆಯಾಗಿದೆ. ವಿಧಾನಸಭೆ ಮತ್ತು ಬಿಬಿಎಂಪಿ ಚುನಾವಣೆ ಏಕಕಾಲದಲ್ಲಿ ನಡೆಯುವ ಸಾಧ್ಯತೆಯೂ ಈಗ ಕ್ಷೀಣವಾಗಿದೆ.

ಇದನ್ನೂ ಓದಿ | BBMP Election | ಬಿಬಿಎಂಪಿ ಚುನಾವಣೆಗೆ ಮತ್ತೆ ಮೂರು ತಿಂಗಳು ಕಾಲಾವಕಾಶ ಕೋರಿದ ಸರ್ಕಾರ: ಮನಸೇ ಇಲ್ಲ?

Exit mobile version