ಬೆಂಗಳೂರು: ಬೆಂಗಳೂರಿನ 198ವಾರ್ಡ್‌ಗಳನ್ನು 243ಕ್ಕೆ ಹೆಚ್ಚಿಸಿದ ಬಿಜೆಪಿ ನಡೆಯನ್ನು ಈ ಹಿಂದೆ ಟೀಕಿಸಿ ಇದು ಬಿಜೆಪಿ ಕಚೇರಿ, ʼಕೇಶವ ಕೃಪಾʼದಲ್ಲಿ ಆದ ವಿಂಗಡಣೆ ಎಂದಿದ್ದ ಕಾಂಗ್ರೆಸ್ ಇದೀಗ ಇಡೀ ಪ್ರಕ್ರಿಯೆಯನ್ನು ರದ್ದುಪಡಿಸಲು ಮುಂದಾಗಿದೆ. ಈ ವಾರ್ಡ್ ವಿಂಗಡಣೆ ಕುರಿತು ಟೀಕೆ ಮಾಡಿದ್ದ ರಾಮಲಿಂಗಾರೆಡ್ಡಿ ಅವರೇ ಈಗ ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ರಚಿಸಿರುವ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ವಾರ್ಡ್ ಮರುವಿಂಗಡಣೆ ಕುರಿತು 2022ರಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಾಮಲಿಂಗಾರೆಡ್ಡಿ, ಈ ಹಿಂದೆ ಮರುವಿಂಗಡಣೆಯನ್ನು ಪಾಲಿಕೆಯಲ್ಲಿ ಮಾಡದೇ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಮಾಡುತ್ತಿದ್ದರು. ಈ ಬಾರಿ ಪಾಲಿಕೆ ಮುಖ್ಯ ಆಯುಕ್ತರನ್ನು ಮರುವಿಂಗಡಣೆ ಸಮಿತಿ ಮುಖ್ಯಸ್ಥರನ್ನಾಗಿ ಮಾಡಿ ಉಳಿದಂತೆ ಇಬ್ಬರು ಹಿರಿಯ ಅಧಿಕಾರಿಗಳನ್ನು ಸಂಚಾಲಕರನ್ನಾಗಿ ಮಾಡಿದ್ದಾರೆ. ರೆವೆನ್ಯೂ ಕಚೇರಿಗಳಿಗೆ ವರದಿ ಬರಲೇ ಇಲ್ಲ. ಪಾಲಿಕೆಯ ಯಾವ ಅಧಿಕಾರಿಗಳ ಗಮನಕ್ಕೂ ಬರಲಿಲ್ಲ. ಈ ಮರುವಿಂಗಡಣೆ ಪ್ರಕ್ರಿಯೆ ಬಿಜೆಪಿ ಪಕ್ಷದ ಕಚೇರಿ, ಕೇಶವಕೃಪಾ, ಬಿಜೆಪಿ ಸಂಸದರು, ಶಾಸಕರ ಕಚೇರಿಯಲ್ಲಿ ಮಾಡಲಾಗಿದೆ. ಇವರು ಕೊಟ್ಟ ವರದಿಗೆ ಆಯುಕ್ತರು ಮುದ್ರೆ ಒತ್ತಿದ್ದಾರೆ ಎಂದು ಟೀಕಿಸಿದ್ದರು.
ಬಿಬಿಎಂಪಿ ಚುನಾವಣೆಗೆ ಸಿದ್ಧತೆಯನ್ನು ಕಾಂಗ್ರೆಸ್ ಈಗಾಗಲೆ ಆರಂಭಿಸಿದ್ದು, ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ 11 ಜ ನರ ಸಮಿತಿ ರಚನೆ ಮಾಡಿದೆ. ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಸಹೋದರ ಹಾಗೂ ಸಂಸದ ಡಿ.ಕೆ. ಸುರೇಶ್, ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.
ರಾಮಲಿಂಗಾರೆಡ್ಡಿ ಅವರ ಭೇಟಿ ನಂತರ ಮಾತನಾಡಿದ ಡಿ.ಕೆ. ಸುರೇಶ್, ಬಿಜೆಪಿ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ವಾರ್ಡ್ ವಿಂಗಡಣೆ ಮಾಡಿತ್ತು. ಸುಮಾರು 4 ರಿಂದ 5 ಸಾವಿರ ದೂರಿನ ಅರ್ಜಿಗಳು ಬಂದಿದ್ದವು. ಅವುಗಳನ್ನ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಹಿರಿಯ ಶಾಸಕರ ಸಲಹೆ ಪಡೆಯಲಿಲ್ಲ. ಸ್ಥಳೀಯ ಕಾರ್ಪೋರೆಟರ್‌ಗಳ ಸಲಹೆ ಪಡೆಯಲಿಲ್ಲ.
ಜಕೀಯವಾಗಿ ಅನುಕೂಲವಾಗುವತೆ ಏಕಾಏಕಿ ಅವರು ಮಾಡಿದ್ದಾರೆ. ಅವೆಲ್ಲವನ್ನೂ ಗಮನಿಸಿ ನಾವು ಚುನಾವಣೆ ಮಾಡಬೇಕು. ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಅವರು ಸಭೆ ಕರೆದಾಗ ನಮ್ಮ ಸಲಹೆ ತೆಗೆದುಕೊಂಡು ಬರುತ್ತೇವೆ. ಬೆಂಗಳೂರು ಅಭಿವೃದ್ಧಿ ಹಾಗೂ ಆಡಳಿತದ ದೃಷ್ಟಿಯಿಂದ ಉತ್ತಮವಾದ ಬಿಬಿಎಂಪಿಗೆ ರೂಪರೇಷೆ ಕೊಡುತ್ತೇನೆ ಎಂದಿದ್ದಾರೆ.
ಸಂಖ್ಯಾಶಾಸ್ತ್ರದ ವಿಂಗಡಣೆ!
ಬಿಬಿಎಂಪಿ ಆಡಳಿತಕ್ಕೆ ಪ್ರತ್ಯೇಕ ಮಸೂದೆಯನ್ನು ಸಿದ್ಧಪಡಿಸಿದ್ದ ಬಿಜೆಪಿ ಸರ್ಕಾರ, ಈ ಕುರಿತು ಸಮಗ್ರ ಚಿಂತನೆ ನಡೆಸಿ, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ವರದಿ ನೀಡುವಂತೆ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಗೆ ಬೆಂಗಳೂರಿನ ಸಿ.ವಿ. ರಾಮನ್ ನಗರದ ಬಿಜೆಪಿ ಶಾಸಕ ಎಸ್. ರಘು ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಲೆಕ್ಕದಂತೆ ವಾರ್ಡ್ಗೆ ತಲಾ 35 ಸಾವಿರದಂತೆ ಸದನ ಸಮಿತಿಯು ಭಾಗಿಸಿದಾಗ ಅದರಿಂದ 241.3 ಫಲಿತಾಂಶ ಬಂದಿತ್ತು. ಅದನ್ನು ಪೂರ್ಣ ಸಂಖ್ಯೆಯಾಗಿ 242 ವಾರ್ಡ್ ನಿಗದಿಪಡಿಸಬೇಕು ಎಂಬ ಚರ್ಚೆ ನಡೆದಿತ್ತು. ಆದರೆ ಶಾಸಕ ರಘು ಅವರಿಗೆ ಇಲ್ಲಿ ತಕರಾರಿತ್ತು. 242ನ್ನು ಸಂಖ್ಯಾಶಾಸ್ತ್ರದ ಪ್ರಕಾರ ಕೂಡಿಸಿದರೆ 8 ಬರುತ್ತದೆ (2+4+3=9). 8 ಎಂಬ ಸಂಖ್ಯೆ ನಮಗೆ ಆಗಿ ಬರುವುದಿಲ್ಲ. 9 ಉತ್ತಮ ಸಂಖ್ಯೆ. ಅದೃಷ್ಟದ ಸಂಖ್ಯೆ 9 ಬರಲಿ ಎಂದು 243 (2+4+3=9) ನಿಗದಿಪಡಿಸಲಾಯಿತು. ಈ ಮಾತನ್ನು ಸ್ವತಃ ಎಸ್. ರಘು ಮಾಧ್ಯಮಗಳ ಮುಂದೆ ತಿಳಿಸಿದ್ದರು.
ಕಾಂಗ್ರೆಸ್ ಶಾಸಕರಿಗೆ ಹೊಡೆತ?
ವಾರ್ಡ್ ವಿಂಗಡಣೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಗುರಿಯಾಗಿಸಲಾಗಿದೆ ಎಂಬ ಮಾತು ಕೇಳಿಬಂದಿತ್ತು. ಮಹಿಳಾ ಮೀಸಲಾತಿಯನ್ನು ಶೇ.50 ನಿಗದಿಪಡಿಸಬೇಕು. ಅದರಂತೆ, ಒಟ್ಟು 243 ವಾರ್ಡ್‌ಗಳಲ್ಲಿ 130ನ್ನು ಮಹಿಳಾ ಮೀಸಲಾತಿ ಮಾಡಲಾಗಿತ್ತು. ಆದರೆ ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಎಲ್ಲ ಏಳೂ ವಾರ್ಡ್‌ಗಳನ್ನೂ ಮಹಿಳಾ ಮೀಸಲು ನಿಗದಿ ಮಾಡಲಾಗಿತ್ತಿ. ನಂತರದಲ್ಲಿ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಪ್ರತಿನಿಧಿಸುವ ಬಿಟಿಎಂ ಲೇಔಟ್ ಕ್ಷೇತ್ರದಲ್ಲಿರುವ ಒಂಭತ್ತು ವಾರ್ಡ್‌ಗಳ ಪೈಕಿ ಸುದ್ದಗುಂಟೆ ಪಾಳ್ಯ ವಾರ್ಡ್(ಸಾಮಾನ್ಯ) ಹೊರತುಪಡಿಸಿ ಉಳಿದೆಲ್ಲವನ್ನೂ ಮಹಿಳಾ ಮೀಸಲು ಮಾಡಲಾಗಿತ್ತು. ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಪ್ರತಿನಿಧಿಸುತ್ತಿದ್ದ, (ಈಗ ಬಿಜೆಪಿಯ ಸಿ.ಕೆ. ರಾಮಮೂರ್ತಿ ಶಾಸಕರಾಗಿದ್ದಾರೆ) ಜಯನಗರ ವಿಧಾನಸಭಾ ಕ್ಷೇತ್ರದ ಆರು ವಾರ್ಡ್‌ಗಳ ಪೈಕಿ ಜೆ.ಪಿ. ನಗರ(ಸಾಮಾನ್ಯ) ಹೊರತುಪಡಿಸಿ ಉಳಿದೆಲ್ಲವನ್ನೂ ಮಹಿಳಾ ಮೀಸಲು ಮಾಡಲಾಗಿತ್ತು. ಇದೆಲ್ಲದರಿಂದಾಗಿ ವಾರ್ಡ್ ವಿಂಗಡಣೆ ಹಾಗೂ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರ ಸಂಪೂರ್ಣ ಬದಲಾಯಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: BBMP Election: ಬಿಬಿಎಂಪಿ ಎಲೆಕ್ಷನ್‌ಗೆ ಸಿದ್ಧತೆ ಆರಂಭಿಸಿದ ಕಾಂಗ್ರೆಸ್; ಪೂರ್ವತಯಾರಿ ಸಮಿತಿ ರಚನೆ