Site icon Vistara News

ಸಂಚಾರ ದಟ್ಟಣೆ: ಬಿಬಿಎಂಪಿಯಿಂದ ಪ್ರಮುಖ ಜಂಕ್ಷನ್‌ಗಳ ಪರಿಶೀಲನೆ

bbmp officers

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ಪ್ರಮುಖ ಜಂಕ್ಷನ್​ಗಳಾದ ಗೊರಗುಂಟೆಪಾಳ್ಯ, ಹೆಚ್ಚಾಳ, ಕೆ.ಆರ್​.ಪುರ ಹಾಗೂ ಸಿಲ್ಕ್ ಬೋರ್ಡ್​​ ಜಂಕ್ಷನ್​ಗಳಲ್ಲಿ ಮಂಗಳವಾರ (ಜೂನ್‌ 28) ರಾತ್ರಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪರಿಶೀಲನೆ ನಡೆಸಿದರು.

ಮೊದಲಿಗೆ ಗೊರಗುಂಟೆ ಪಾಳ್ಯ ಜಂಕ್ಷನ್​ಗೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಗೊರಗುಂಟೆ ಪಾಳ್ಯ ಸಿಗ್ನಲ್‌ನಲ್ಲಿ ಅಧಿಕಾರಿಗಳ ವೀಕ್ಷಣೆಯ ಸಂದರ್ಭದಲ್ಲೂ ಕಿಲೋ ಮೀಟರ್​ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಗೊರಗುಂಟೆಪಾಳ್ಯದಲ್ಲಿ ಬಿಬಿಎಂಪಿ ಅಧಿಕಾರಿಗಳ ಪರಿಶೀಲನೆ

ಪರಿಶೀಲನೆ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಗೊರಗುಂಟೆ ಪಾಳ್ಯ ಭಾಗದಲ್ಲಿ ರಸ್ತೆ ಪರಿಸ್ಥಿತಿ ಸರಿಯಿಲ್ಲ. ಮುಖ್ಯಮಂತ್ರಿಗಳು ಸಹ ಈ ರಸ್ತೆಯಲ್ಲಿ ಓಡಾಡಿದ್ದಾರೆ. ಈ ರಸ್ತೆ ಸರಿಪಡಿಸಲು ಸೂಚಿಸಿದ್ದಾರೆ. ಇದೀಗ ಕೆಲಸ ಶುರುಮಾಡಲು ಚಿಂತನೆ ನಡೆದಿದೆ. ಇದೆಲ್ಲದರ ಬಗ್ಗೆ ತಾಂತ್ರಿಕ ಚರ್ಚೆ ಆಗುತ್ತಿದೆ. ಅದಷ್ಟು ಬೇಗನೆ ಇದಕ್ಕೆಲ್ಲಾ ಪರಿಹಾರ ಹುಡುಕುತ್ತೇವೆ ಎಂದರು.

ಇದನ್ನು ಓದಿ| ಬಿಬಿಎಂಪಿ ಚುನಾವಣೆ ಮುಂದೂಡಲು ʼಬಾಹ್ಯ ಬೆಂಬಲʼ ಮೊರೆ ಹೋದ ಸರ್ಕಾರ?

ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್ ಮಾತನಾಡಿ, ಇಲ್ಲಿ ಮೂರ್ನಾಲ್ಕು ಸಮಸ್ಯೆಗಳಿರುವುದು ನಮ್ಮ ಗಮನಕ್ಕೆ ಬಂದಿದೆ. ಪ್ರಮುಖವಾಗಿ ರಸ್ತೆ ಸರಿ ಇಲ್ಲದ ಕಾರಣ ಟ್ರಾಫಿಕ್ ಹೆಚ್ಚಾಗುತ್ತಿದೆ. ಜನರು ರಸ್ತೆ ದಾಟೋದಕ್ಕೆ ಯಾವುದೇ ರೀತಿಯ ವ್ಯವಸ್ಥೆ ಇಲ್ಲದ ಕಾರಣವೂ ದಟ್ಟಣೆಯಾಗುತ್ತಿದೆ. ಸದ್ಯಕ್ಕೆ ಕೆಎಸ್ಆರ್‌ಟಿಸಿ ಬಸ್‌ಗಳನ್ನು ಪೀಣ್ಯ ಡಿಪೋದಿಂದ  ಹೋಗಲು ವ್ಯವಸ್ಥೆ ಮಾಡುವ ಚಿಂತನೆ ನಡೆಸಲಾಗುತ್ತಿದೆ. ಉಳಿದಂತೆ ನಾಳೆಯಿಂದ ತ್ವರಿತವಾಗಿ ರಸ್ತೆ ರಿಪೇರಿ ಮಾಡಲಾಗುತ್ತದೆ. ಇದರ ಜತೆಗೆ ಸ್ಕೈವಾಕ್ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ಲೈಓವರ್ ವಿಚಾರವಾಗಿ ಚರ್ಚೆ ಆಗಿದೆ, ಮುಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಪರಿಶೀಲನೆ ನಡೆಸುತ್ತಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ರಾಕೇಶ್‌ ಸಿಂಗ್ ಮತ್ತಿತರರು

ಗೊರಗುಂಟೆಪಾಳ್ಯ ಜಂಕ್ಷನ್‌ ನಂತರ ಹೆಚ್ಚಾಳ, ಕೆ.ಆರ್​.ಪುರ ಹಾಗೂ ಸಿಲ್ಕ್ ಬೋರ್ಡ್​​ ಜಂಕ್ಷನ್​ಗಳಿಗೆ ತೆರಳಿ ಪರಿಶೀಲನೆ ನಡೆಸಲಾಯಿತು.

ಜಲಮಂಡಳಿ ಅಧ್ಯಕ್ಷ ಜಯರಾಮ್, ಬಿಡಿಎ ಆಯುಕ್ತ ರಾಜೇಶ್ ಗೌಡ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ, ಸಂಚಾರಿ ಪೋಲಿಸ್ ಜಂಟಿ ಆಯುಕ್ತ ರವಿಕಾಂತೇಗೌಡ, ಸ್ಮಾರ್ಟ್ ಸಿಟಿ ಹಾಗೂ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ರಾಜೇಂದ್ರ ಚೋಳನ್, ಪಾಲಿಕೆಯ ಎಲ್ಲಾ ವಲಯ, ವಿಶೇಷ ಆಯುಕ್ತರುಗಳು, ಬಿ.ಎಂ.ಆರ್.ಸಿ.ಎಲ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನು ಓದಿ| ಚಾಮರಾಜಪೇಟೆ ಈದ್ಗಾ ಮೈದಾನದ ಖಾತೆ ಯಾರಿಗೂ ಮಾಡಿಕೊಟ್ಟಿಲ್ಲ: ಬಿಬಿಎಂಪಿ ಸ್ಪಷ್ಟನೆ

Exit mobile version